“ಅಹಂ” ಭಾವದ ತೊರೆ~ಜಯಶ್ರೀ ನಾಯಕ್

ಸ್ವಾಮಿ ವಿವೇಕಾನಂದರು ಹೇಳುತ್ತಾರೆ “ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮ ಗ್ರಂಥವನ್ನು ಓದದೆ, ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು” ಅಂದರೆ ನಿರಹಂಕಾರಿ ಆದ ಮನುಷ್ಯನಲ್ಲಿ ಅಂತಹ ಅದ್ಭುತವಾದ ಶಕ್ತಿಯಿದೆ.

ಇಂದಿನ ಜನತೆ ಈ ನಿರಹಂಕಾರ ಭಾವವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದೇ ಖೇದದ ಸಂಗತಿ. “ನಾನು” ಎನ್ನುವ ಭಾವ ಅತಿಯಾಗಿ ಬೆಳೆದು ಮನೆ,ಮನ, ದೇಹ, ಜೀವನ ಎಲ್ಲವನ್ನೂ ಅವರೇ ಸ್ವತಃ ಹಾಳುಗೆಡುವುತ್ತಾ ಇದ್ದಾರೆ. ಎಲ್ಲಾ ಹಾಳಾದ ನಂತರ ಅದಕ್ಕೆ ಬೇರೆಯವರನ್ನು ದೂಷಿಸುವುದು ಒಂದು ತರಹದ ಶೋಕಿ ಆಗಿದೆ. ಬೇರೆಯವರನ್ನು ದೂಷಿಸುವ ಬದಲಾಗಿ ತನ್ನ ಅಹಂಕಾರವನ್ನು ತ್ಯಜಿಸಿ, ತನ್ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಡರೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವ ಪ್ರಮೇಯವೇ ಬರುವುದಿಲ್ಲ.

ನಾವು ಇನ್ನೊಬ್ಬರಿಗೆ ಬೊಟ್ಟು ಮಾಡಿ ತೋರಿಸುವಾಗ ಉಳಿದ ಬೆರಳುಗಳು ನಮ್ಮನ್ನೇ ತೋರಿಸುತ್ತಾ ಇರುತ್ತವೆ ಎನ್ನುವುದನ್ನು ನಾವು ಮರೆಯಬಾರದು. ಅಹಂಕಾರ ಎನ್ನುವುದು ಮೊತ್ತಮೊದಲನೆಯದಾಗಿ ನೆನಪಾಗುವ ಹೆಸರೇ ಹಿಟ್ಲರ್ನದದು, ತಾನೇ ಮೇಲು, ತಾನೇ ಸರ್ವಾಧಿಕಾರಿ ಎನ್ನುವ ಭಾವದಿಂದ ಪ್ರತಿಯೊಬ್ಬರಿಗೂ ಹಿಂಸೆ, ಶಿಕ್ಷೆ ನೀಡಿದ. ತನ್ನ ಆಟದ ಕೈಗೊಂಬೆಗಳನ್ನಾಗಿ ಮಾಡಿಕೊಂಡು ತನಗೆ ಇಷ್ಟ ಬಂದಂತೆ ತನ್ನ ಪ್ರಜೆಗಳನ್ನು ಕುಣಿಸಿದ. ಅವನ ಹೆಸರು ಈಗ ಕೂಡ ಎಲ್ಲರ ನೆನಪಲ್ಲಿ ಇದೆ.

ಆದರೆ ಒಳ್ಳೆಯ ರೀತಿಯಿಂದಲ್ಲ ಕುಖ್ಯಾತಿಯಾಗಿ. ಆದರೆ ಹಿಟ್ಲರ್ ಹೇಗೆ ಮರಣವನ್ನಪ್ಪಿದ ಅನ್ನುವ ಸಂಗತಿ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಆತ ಆತ್ಮಹತ್ಯೆ ಮಾಡಿಕೊಂಡು ತನ್ನ ಸಾವನ್ನು ತಾನೇ ಆಹ್ವಾನಿಸಿದ್ದ, ಹಾಗಾದರೆ ಎಲ್ಲಿ ಹೋಯಿತು ಅವನ ದರ್ಪ, ದೌರ್ಜನ್ಯ, ದೌಲತ್ತು, ಅಹಂಕಾರ ಎಲ್ಲಾ ಕ್ಷಣಾರ್ಧದಲ್ಲಿ ನಾಶವಾಗಿ ಹೋಗಿತ್ತು. ಇಂತಹ ಪ್ರಯೋಜನವಿಲ್ಲದ ಅರೆಕ್ಷಣ ಆನಂದವನ್ನು ಕೊಡುವ, ಜೀವನವನ್ನೇ ಅಧೋಗತಿಗೆ ಕೊಂಡೊಯ್ಯುವ ಅಹಂಭಾವ ನಮಗೆ ಬೇಕೆ? ಎನ್ನುವಂಥದ್ದು ಚಿಂತನೆ ಮಾಡುವ ವಿಚಾರ.

ಮನುಷ್ಯ ಚಿಂತಿಸುತ್ತಾನೆ, ಹೊರುವ ಚಿಂತನೆಯನ್ನು ನಡೆಸುವುದೇ ಇಲ್ಲ. ಚಿಂತೆ ಮಾಡುವ ಬದಲು, ತನ್ನ ಅಮೂಲ್ಯ ಸಮಯವನ್ನು ಚಿಂತನೆಗೆ ನೀಡಿದ್ದರೆ ತನ್ನನ್ನು ತಾನು ಹಲವಾರು ಅನಾಹುತಗಳಿಂದ ಪಾರು ಮಾಡಿಕೊಳ್ಳಬಹುದು. ಆದರೆ ಈಗಿನ ಜನರ ಮನಸ್ಸು ಹುಚ್ಚುಕೋಡಿಯಂತಾಗಿದೆ. ಲಗಾಮಿಲ್ಲದ ಕುದುರೆ ಯಂತಾಗಿದೆ. ಅದಕ್ಕೆ ಲಗಾಮು ಜಡಿದು ನಿಯಂತ್ರಣದಲ್ಲಿರಿಸಿದರೆ ಜೀವನ ಸುಗಮ. ಇಲ್ಲದಿದ್ದರೆ ಬಹಳ ದುಸ್ತರ.  ಈ ಕ್ರೋಧ ಎಂದರೆ ಅಹಂಕಾರದಿಂದ ಬರುವ ಒಂದು ಭಾವನೆ.

ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ

” ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸಮ್ಮತಿ ವಿಭಮಃ ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯಿ ” ಸ್ಮೃತಿಯಲ್ಲಿ ಭ್ರಮೆಯುಂಟಾಗುತ್ತದೆ.

ಬುದ್ಧಿ ಅರ್ಥಾತ್ ಜ್ಞಾನ ಶಕ್ತಿಯು ನಾಶವಾಗಿ ಹೋಗುತ್ತದೆ ಮತ್ತು ಬುದ್ಧಿ ನಾಶ ಆಗುವುದರಿಂದ ಆತ ತನ್ನ ಸ್ಥಿತಿಯಿಂದ ಜಾರಿ ಬೀಳುತ್ತಾನೆ. ಹಾಗಾದರೆ ಕ್ರೋಧ ಅಥವಾ ಕೋಪ ಮಾಡಿಕೊಳ್ಳುವುದು ಎಲ್ಲಾ ಸಮಯ ಗಳಲ್ಲೂ ತಪ್ಪೇ?

ಅನ್ಯಾಯವಾಗುತ್ತಿರುವಾಗ ಕೂಡ ಸೆಟೆದು ನಿಲ್ಲದಿದ್ದರೆ ಜನರು ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾರೆ. “ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ” ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದಕ್ಕೆ ಸ್ವಾಭಿಮಾನ ಎಂದು ಕರೆಯುತ್ತಾರೆ‌. ಅನ್ಯಾಯ ಆಗುತ್ತಿರುವಾಗ ಕೂಡ ಸುಮ್ಮನಿದ್ದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ.‌ ಇನ್ನೊಬ್ಬರ ಮುಂದೆ ಸೆಟೆದು ನಿಲ್ಲುವಾಗ ನಿಮ್ಮ ಮನಃಶಾಂತಿ ಹಾಳಾಗದಂತೆ ನೋಡಿಕೊಳ್ಳುವುದೇ ಸ್ವಾಭಿಮಾನ.

ಇಲ್ಲ ನಿಮ್ಮ ಮನಃಶಾಂತಿ ಹಾಳಾಗಿದೆ ಎಂದರೆ ಅಲ್ಲಿ ಅಹಂಕಾರ ಪ್ರವೇಶಿಸುತ್ತಿದೆ ಎಂದರ್ಥ. ಕಾಮ, ಕ್ರೋಧ, ಮದ, ಮೋಹ,ಲೋಭ, ಮತ್ಸರ ಎಂಬ ಆರು ವೈರಿಗಳು ನಿಮ್ಮ ಮನ ಪ್ರವೇಶಿಸದೇ ಮಾಡುವುದು ನಿಮ್ಮ ಕೈಯಲ್ಲೇ ಇದೆ. ಎಲ್ಲರೂ ಸ್ವಾಭಿಮಾನಿಗಳಾಗಿರಿ, ಆದರೆ ಸ್ವಾಭಿಮಾನ ಅಹಂಕಾರಕ್ಕೆ ಎಡೆಮಾಡಿಕೊಡದಿರಲಿ.

ಈ ಯುಗಾದಿಯ ಶುಭ ಸಂದರ್ಭದಲ್ಲಿ ಪ್ಲವನಾಮ ಸಂವತ್ಸರದ ಆರಂಭದಲ್ಲಿ “ಅಹಂ ಭಾವವನ್ನು ತೊರೆಯಿರಿ ಹಾಗೂ ಸ್ನೇಹ, ಪ್ರೀತಿ, ನಂಬಿಕೆ, ವಿಶ್ವಾಸ, ಗೌರವ ಎನ್ನುವ ಎಲ್ಲಾ ರೀತಿಯ ಒಳ್ಳೆಯ ಭಾವನೆಗಳನ್ನು ಮನಸ್ಸಿಗೆ ಆಹ್ವಾನಿಸಿರಿ”. 

 

 
 
 
 
 
 
 
 
 
 
 

Leave a Reply