Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

 ಬಂದು ಹೋಗುವ “ಗಣಪತಿ”~ಆರಾಧನೆಯ ಪೂರ್ವಾಪರ:- ಕೆ.ಎಲ್.ಕುಂಡಂತಾಯ

​​ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ ಅಥವಾ ಆಹ್ವಾನಿಸಿ , ಆವಾಹಿಸಿ , ಪೂಜಿಸಿ ವಿಸರ್ಜಿಸುವ  ದೇವರುಗಳಲ್ಲಿ “ಗಣಪತಿ” ಒಬ್ಬ . ಋತುಮಾನಕ್ಕೆ ಅನುಗುಣವಾಗಿ ನಿರ್ದಿಷ್ಟ ದಿನಗಳಲ್ಲಿ‌ ಬಂದು ಹೋಗುವ ಈ ದೇವರುಗಳ ಆರಾಧನಾ ವಿಧಾನವು ಎಷ್ಟು ವೈಭವದಿಂದ ನಡೆದರೂ ತಾತ್ಕಾಲಿಕ ಕಲ್ಪನೆ ಮತ್ತು ಅನುಸಂಧಾನ ಆಧರಿತವಾಗಿರುವುದು ಗಮನಾರ್ಹ. ವರ್ಷಪೂರ್ತಿ ಬೇರೆಬೇರೆ ಸಂದರ್ಭಗಳಲ್ಲಿ ಇಂತಹ ದೇವರುಗಳ ಆಗಮನವಾಗುತ್ತಿರುತ್ತದೆ. ಶ್ರದ್ದೆಯ ಆರಾಧನೆ ನಡೆದು ಆ ದೇವರುಗಳನ್ನು ಬೀಳ್ಕೊಡ ಲಾಗುತ್ತದೆ​.  ಜನಪದರ ಆಟಿಯ‌ಅಜ್ಜಿ , ಸೋಣದ ಬಲೀಂದ್ರನತಾಯಿ , ಹೊಸ್ತಿಲಿನ ದೇವರು, ತೆನೆಕಟ್ಟುವ ಆಚರಣೆ , ತುಳುವರ ಪರ್ಬದ ಬಲೀಂದ್ರ , ಕೆಡ್ಡಸದ ಭೂಮಿತಾಯಿ , ಬಿಸುಕಣಿ ಹಾಗೂ ಶಿಷ್ಟದ ಗೌರಿ – ಗಣೇಶ, ನವರಾತ್ರಿಯ ಶಕ್ತಿಪೂಜೆ ದೀಪಾವಳಿಯ ಬಲೀಂದ್ರ  ಮುಂತಾದ ದೇವರುಗಳು ತಾತ್ಕಾಲಿಕವಾಗಿ ನೆಲೆಗೊಂಡು , ಪೂಜೆಗೊಂಡು ನಿರ್ಗಮಿಸುವಂತವರು. ಈ ಸ್ಥಿರವಲ್ಲದ ಉಪಾಸನೆಗೆ ಮಣ್ಣಿನಮೂರ್ತಿ‌, ಕಲಶ ,ದೀಪ , ಸ್ವಸ್ತಿಕೆ(ಸುತ್ತೆ) ಮುಂತಾದ ಸಂಕೇತಗಳು  ಮಾಧ್ಯಮಗಳಾಗುತ್ತವೆ. 

 ಗೌರಿ – ಗಣೇಶರಿಗೆ ಮಣ್ಣಿನ ಮೂರ್ತಿಯಲ್ಲಿ ಪೂಜೆ. ಗಣೇಶನ ಎಷ್ಟೇ ಭೀಮಗಾತ್ರದ ಪ್ರತಿಮೆಯನ್ನಾದರೂ ಮಣ್ಣಿನಲ್ಲೆ ರಚಿಸುವುದು ,ಪೂಜೆಯ ಬಳಿಕ ನೀರಿನಲ್ಲಿ ವಿಸರ್ಜಿಸುವುದು. ನವರಾತ್ರಿಯ ಸಂದರ್ಭ  ಕಲಶದಲ್ಲಿ ಆವಾಹನೆ – ಪೂಜೆ , ಸ್ವಸ್ತಿಕೆಯಲ್ಲಿ ಆರಾಧನೆ ಮತ್ತು ಶಾರದೆಯ ಮಣ್ಣಿನ ಮೂರ್ತಿಯ ಪೂಜೆ – ವಿಸರ್ಜನೆ ಇತ್ಯಾದಿ ವಿಶಿಷ್ಟ ವಿಧಾನದಲ್ಲಿ ಉಪಾಸನೆಗಳು  ನಡೆದು ಬಂದಿದೆ .  ಪೊಲಿ (ಸಮೃದ್ಧಿ)ಯನ್ನು ತೆನೆಯ ರೂಪದಲ್ಲಿ ಮನೆ ತುಂಬಿಸಿಕೊಳ್ಳುವ ಆಚರಣೆ,  ಬಲೀಂದ್ರನನ್ನು ದೀಪದಲ್ಲಿ – ಬೆಳೆಯ ಸಮೃದ್ಧಿ ಯಲ್ಲಿ ಕಾಣುವುದು , ಮನೆಯಂಗಳದಲ್ಲಿ ಬೂದಿಯಲ್ಲಿ ಬರೆಯುವ ರಂಗವಲ್ಲಿ ಹಾಗೂ ಅದರಲ್ಲಿರಿಸುವ ಮಂಗಳ ದ್ರವ್ಯಗಳಲ್ಲಿ ಕೆಡ್ಡಸದ ಆಚರಣೆಯ  ಭೂಮಿತಾಯಿಯನ್ನು ಪೂಜಿಸುವುದು , ಮಂಗಳದ್ರವ್ಯಗಳೊಳಗೊಂಡ  ‘ವಿಷುಕಣಿ’ಯಲ್ಲಿ ಯುಗಾದಿಯ ಅಥವಾ ಹೊಸ ವರ್ಷದ ಭವಿಷ್ಯದ ದೇವರನ್ನು ಗುರುತಿಸುವುದು  ಮುಂತಾದ  ಕ್ರಮಗಳೆಲ್ಲ ತಾತ್ಕಾಲಿಕ ನೆಲೆಯಲ್ಲಿ ನೆರವೇರುತ್ತಿವೆ . ಅಂದರೆ ಈ ಸಂದರ್ಭಗಳಲ್ಲಿ ಪೂಜೆಗೊಳ್ಳುವ ನಂಬಿಕೆಗಳೆಲ್ಲ ಬಂದುಹೋಗುವ ಶ್ರದ್ಧೆಗಳಾಗಿವೆ .ಅಂತೆಯೇ ನಮ್ಮ ಗಣಪತಿ  ಬಂದು ಹೋಗುವ ದೇವರುಗಳಲ್ಲಿ ಒಬ್ಬ .

ತಾಯಿ ಗೌರಿಯೊಂದಿಗೆ ಪ್ರತಿವರ್ಷ ಆಗಮಿಸಿ ಪೂಜೆಗೊಂಡು ನಿರ್ಗಮಿಸುವ ಗಣಪನ ಆರಾಧನೆಯಲ್ಲಿ ತಾಯಿ ಗೌರಿಗೂ ಪ್ರಾಧಾನ್ಯ ವಿದೆ .ಮೊದಲು “ಗೌರಿ ತೃತೀಯ , ಬಳಿಕ ಗಣೇಶ ಚತುರ್ಥಿ” ಇದರಿಂದ ಆದಿಪೂಜಿತನಾದರೂ ಮೊದಲು ತಾಯಿಗೆ ಪೂಜೆ​. ಇಂದಿನ ಆಡಂಬರದ ವೈಭವೋಪೇತ ಗಣಪತಿ, ದುರ್ಗೆಯರ, ಬಲೀಂದ್ರನ ಉಪಾಸನಾ ವಿಧಾನಗಳ ಬಹು ವಿಸ್ತ್ರತ ಅಲಂಕಾರದ ಮರೆಯಲ್ಲಿ ಜನಸಾಮನ್ಯರ ಚಿಂತನೆಗೆ ಆಧಾರಗಳು ದೊರೆಯುತ್ತವೆ.

 ಸರಳ – ಸುಂದರ ಜನಪದೀಯ ಅನುಸಂಧಾನವು ಅಲ್ಲೆ ನಿಚ್ಚಳವಾಗಿರುತ್ತವೆ.​ ಏಕೆಂದರೆ ಜನಪದರ ಮನಸ್ಸುಗಳು ಕಲ್ಪಸಿದ ,ಆ ಆಲೋಚನೆಗಳನ್ನೆ ಮೂರ್ತಸ್ವರೂಪಕ್ಕೆ ಇಳಿಸಿದ ಪೂಜಾವಿಧಾನ – ಪ್ರತೀಕಗಳ ಚಿಂತನೆಗಳು ಸುಪ್ತವಾಗಿ ಗಮನ ಸೆಳೆಯುತ್ತಿ ರುತ್ತವೆ​. ​ಸಹಜ ,ಮುಗ್ಧ ಚಿಂತನೆಯಿಂದ  ವೈದಿಕದ ವೈಭವೋಪೇತ ಸೃಷ್ಟಿಯವರೆಗೆ ;  ಬೇಟೆ ಸಂಸ್ಕೃತಿಯಿಂದ ಆರಂಭಿಸಿ ಆಧುನಿಕ ಜೀವನ ಶೈಲಿಯ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ  ಮಹಾಗಣಪತಿಯ ಸ್ವೀಕಾರ ಮತ್ತು ಪೂಜಾವಿಧಾನಗಳಿಗೆ ರೋಚಕ ಇತಿಹಾಸವಿದೆ. ವಿಶ್ವದಾದ್ಯಂತ ಮಾನ್ಯತೆ ಇದೆ​. ಒಂದು ಸಂಸ್ಕೃತಿಯ ಸಂಕೇತವಾಗಿ​, ಒಬ್ಬ ಗಣವಾಗಿ , ಬ್ರಹ್ಮಣಸ್ಪತಿ ಯಾಗಿ ,ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹಿಸಲಸಾಧ್ಯ .ಆಸ್ತಿಕ ,ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ ದೇವರು ಗಣಪತಿ .ಜಾತಿ – ಮತ – ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಬರ ಮೂರ್ತಿಯಾಗಿ ಬೆಳೆದದ್ದು ,​ ​ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು ಮಾತ್ರ ಸತ್ಯ .
       
ವಿಘ್ನ ವಿಡ್ಡೂರಗಳು​: ಮಾನವ ಬಯಸಿದ್ದೆಲ್ಲ ನಿರಾಯಾಸವಾಗಿ ಪ್ರಾಪ್ತಿಯಾಗಬೇಕು ,ಜೀವನ ಸುಂದರ ಹಾಗೂ ನಿರಾಳವಾಗಬೇಕು ಬದುಕಿನ ನಿರಂತರತೆಗೆ ಭಂಗ ಬರಬಾರದು , ನಿರ್ವಿಘ್ನವಾಗಿ ಬಾಳಬೇಕು ಎಂದು ಬಯಸಿದಾಗ ಸಹಜವಾಗಿ ವಿಘ್ನಗಳು ಬರುತ್ತವೆ ಆಗ ಆತಂಕಕ್ಕೊಳಗಾಗುತ್ತೇವೆ.  ಕಾರ್ಯಾರಂಭಗಳಿಗೆ ವಿಘ್ನ – ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿದಿರಬೇಕು . ವಿಘ್ನನಿವಾರಕ ದೇವರೊಬ್ಬನ ಚಿಂತನೆ ಬಂದಿರಬಹುದು .ಈ ತಲ್ಲಣ ,ಗೊಂದಲಗಳ ನಿವೃತ್ತಿಗಾಗಿ ವಿಘ್ನನಿವಾರಕ ದೇವರೊಬ್ಬ ಸಾಕಾರಗೊಂಡಿರಬೇಕು . ನಮ್ಮ ವಿಶಾಲ ಮನೋಭಾವದ ಆಧ್ಯಾತ್ಮಿಕ ಬದುಕು , ಸಾಂಸ್ಕೃತಿಕ ವೈಚಾರಿಕ ವೈಶಾಲ್ಯತೆಯಲ್ಲಿ ಗಜಮುಖನಾದರೂ ಸುಮುಖನಾಗಿ ಆದಿಪೂಜಿತನು ಪ್ರಥಮ ಪೂಜೆಗೊಳ್ಳುತ್ತಾನೆ .​ ಅಮೂರ್ತವಾದರೂ ಮೂರ್ತ ಚಿಂತನೆ ,ಅಲೌಕಿಕದ ಲೌಕಿಕ ದರ್ಶನ , ಪ್ರತಿಕೃತಿ ಆರಾಧನೆಗಳೆಲ್ಲ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದಾಗಲೂ ನಮ್ಮ ಗಣಪ ಹಲವು ಸ್ಥಿತ್ಯಂತರ – ರೂಪಾಂತರಗಳಿಗೆ ಒಳಗಾದರೂ ಬೆಳೆದದ್ದು ಭವ್ಯವಾಗಿ .ಸಂಸ್ಕೃತಿಯ ಮೂಲದಲ್ಲೆ ಇದ್ದ ಅಥವಾ ಆವಿರ್ಭವಿಸಿದ ಒಂದು ಚಿಂತನೆ ಇದಾದುರಿಂದ ಇದರ ಪರಿಣಾಮ ಇಷ್ಟು ತೀವ್ರವಾಗಿದೆ. ಗಾಢವಾಗಿ ಬೇರೂರಿದೆ. 

ಅಸಂಗತ ,ಅಸಂಬದ್ದ ಪ್ರತಿಮಾಲಕ್ಷಣ , ಧಾರಣೆ – ವಾಹನಗಳಲ್ಲೂ ವೈರುಧ್ಯ , ಆಯುಧಗಳಲ್ಲೂ ಏನೋ ಒಂದು ಮೂಲದ ನೆನಪು, ಪ್ರತ್ಯಕ್ಷ ವಿರೋಧ – ಪರಸ್ಪರ ವಿರೋಧದ ಗಣಪನ ಭವ್ಯ ಬಿಂಬದಲ್ಲಿ‌ ಪರಿಪೂರ್ಣತೆಯನ್ನು ,ಸುಮುಖತೆಯನ್ನು​, ಪ್ರಕೃತಿ – ವಿಕೃತಿಗಳನ್ನು ದಿವ್ಯಸಾನ್ನಿಧ್ಯವನ್ನು ಗುರುತಿಸಿರುವುದು ಅಚ್ಚರಿಯ ಸಂಗತಿ ​.  ಹೊಟ್ಟೆಗೆ ಬಿಗಿದುಕೊಂಡದ್ದು ಸರ್ಪ . ವಾಹನವಾಗಿ ಇಲಿ . ಇಲಿಯನ್ನು ಕಂಡ ಸರ್ಪ ಬೆನ್ನಟ್ಟಿ ಬೇಟೆಯಾಡುವುದು ಲೋಕರೂಢಿ. ಆದರೆ ಅಸಂಬದ್ಧ ಎನಿಸಿದರೂ ಈ ವಿನಾಯಕನ ಪ್ರತಿಮೆಯಲ್ಲಿ ಜಾತಿವೈರಗಳೇ ಇಲ್ಲ .ಅಸಂಗತಗಳೇ ಸುಸಂಗತಗಳಾಗುವ ಪರಿಷ್ಕಾರ ಗಣಪತಿಯ ಬಿಂಬದಲ್ಲಿ ಸ್ಪಷ್ಟ.

ಮಾನವ ದೇಹ ,ಆನೆಯ ತಲೆ ಇದು‌ ಒಂದು ರೀತಿಯ ಅಸಂಭವ . ಇಂತಹ ಬೇರೆ ದೇವರುಗಳೂ ನಮ್ಮಲ್ಲಿದ್ದಾರೆ .ಬೇಟೆ ಸಂಸ್ಕೃತಿ ಯ ಪ್ರತೀಕವಾಗಿ ಆನೆ ಎನ್ನುತ್ತಾ ಆದಿಮದ ಕಲ್ಪನೆಯಿಂದ ಗಜಾನನ ರೂಪವನ್ನು ಸಮರ್ಥಿಸಿದರೆ ಆತ ಬೇಟೆಯಿಂದ ಕೃಷಿ ಸಂಸ್ಕೃತಿಯವರೆಗೂ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಾನೆ. ಜನಪದರೊಂದಿಗೆ ಸ್ಥಾನ ಪಡೆಯುತ್ತಾನೆ .ಮಕ್ಕಳಿಂದ ವೃದ್ಧರವರೆಗೆ ಹೇಗೆ ತನ್ನ ಛಾಪನ್ನು ಒತ್ತಿ ಪ್ರಿಯನಾಗುತ್ತಾನೆಯೋ ಅಂತೆಯೇ ಸಮಷ್ಟಿಯಲ್ಲಿ ಅದ್ಭುತ ಜನಪ್ರಿಯತೆವುಳ್ಳ ದೇವರಾಗುತ್ತಾನೆ . ಈ ಮಂಗಳಮೂರ್ತಿಯ ಪೂಜೆಯ ಅಥವಾ ಉಪಾಸನಾ ಅವಧಿಯಲ್ಲಿ ಆತ್ಮೀಯನಾಗುತ್ತಾ ಗಾಢವಾಗಿ ನಮ್ಮನ್ನು ಅಂದರೆ ಆರಾಧ ಕರನ್ನು ಆವರಿಸುತ್ತಾನೆ .ಈಗ ಹೇಳಿ ,ಈ ಮೂರ್ತಿ ನಿರ್ಣಯದಲ್ಲಿ ಅಸಂಗತವಿದೆಯೇ ?

ಎಂತಹ ದುಷ್ಟ ಮರ್ದನದಲ್ಲೂ ಬಳಸಬಹುದಾದ  ಪ್ರಖರವಾದ ಆಯುಧ‌‌  ಧರಿಸಿದ್ದರೂ ಗಣಪತಿ ಮೂರ್ತಿ ಪರಿಪೂರ್ಣವಾಗ ಬೇಕಿದ್ದರೆ ಒಂದು ಕೈಯಲ್ಲಿ ಮೋದಕ ಇರಲೇ ಬೇಕು .ಇಲ್ಲಿಯೂ ಆಯುಧ – ಆಹಾರದ ಸಾಂಗತ್ಯ ಅಚ್ಚರಿ ಮೂಡಿಸುವಂತಹದ್ದೆ​. ಗಾಣಪತೇಯರು ,ಆಧ್ಯಾತ್ಮಿಕ ಚಿಂತಕರು​, ವೈದಿಕ ವಿದ್ವಾಂಸರು ಗಣಪನನ್ನು ಪ್ರಣವ ಸ್ವರೂಪನೆಂದೇ ಕೊಂಡಾಡಿದರು​. ಮಣ್ಣಿನಿಂದ ತೊಡಗಿ ಬಾನೆತ್ತರಕ್ಕೆ ಹರಡಿಕೊಳ್ಳಬಲ್ಲ ವಿಸ್ತೃತ ವ್ಯಾಖ್ಯಾನ ನೀಡುತ್ತಾ ವಿರಾಟ್ ಗಣಪನನ್ನು ನಮ್ಮ ಮುಂದಿರಿಸಿದರು. ಹೀಗೆ ಗಣಪತಿ ಬಹುಪ್ರೀತ , ಬಹುಮಾನ್ಯ .ಕಿವಿ , ಹೊಟ್ಟೆಗಳ ವೈಶಾಲ್ಯದಲ್ಲಿ ಪ್ರಪಂಚ ವಿಶಾಲತೆಯನ್ನು ಪ್ರಕಟಿಸುತ್ತಾ ಈ ಕಾಲದ ದ್ವಂದ್ವ ಹಾಗೂ ವಿರೋಧಾಭಾಸದ ಪ್ರಾಪಂಚಿಕ ವ್ಯವಹಾರಗಳಿಗೆ ಉತ್ತರ ನೀಡುತ್ತಾನೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!