ಬೆಂಕಿಯಿಂದ ಎದ್ದು ಬಂದ ಕಪ್ಪು  ವಜ್ರ ಒಪ್ರಾ ವಿನಫ್ರೆ

ಆಕೆಯ ಬದುಕು ನಮಗೆ ಕೊಟ್ಟ ಸ್ಫೂರ್ತಿಯನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ! ಸಾವಿರಾರು ಸಂಕಷ್ಟಗಳ ನಡುವೆ ಕೂಡ ಆಕೆ ತನ್ನ ಬದುಕನ್ನು ಕಟ್ಟಿಕೊಂಡ ರೀತಿ, ಜಗತ್ತಿನ ಅತ್ಯಂತ ಜನಪ್ರಿಯ ಟಿವಿ ಶೋವನ್ನು 25 ವರ್ಷಗಳ ಕಾಲ ನಿರೂಪಿಸಿದ ರೀತಿ, ಇಂದು ತನ್ನದೇ ಟಿವಿ, ರೇಡಿಯೋ ಕೇಂದ್ರಗಳನ್ನು ಮುನ್ನಡೆಸುವ  ರೀತಿ… ಇವೆಲ್ಲವೂ ಅದ್ಭುತವೇ ಆಗಿದೆ!

ಒಪ್ರಾ ಅಮೆರಿಕಾದ ಒಂದು ನೀಗ್ರೋ ಕುಟುಂಬದಲ್ಲಿ ಜನಿಸಿದವರು. ಅಮೆರಿಕಾದಲ್ಲಿ ಇಂದಿಗೂ ನೀಗ್ರೋಗಳು ವರ್ಣ ತಾರತಮ್ಯದ ಬಲಿ ಪಶುಗಳೆ ಆಗಿದ್ದಾರೆ. ಸಾಲದ್ದಕ್ಕೆ ತೀವ್ರವಾದ ಬಡತನ ಮತ್ತು ಹಸಿವು. ಅದನ್ನಾದರೂ ತದೆದು ಕೊಳ್ಳಬಹುದೋ ಏನೋ! ಆದರೆ ಒಂಬತ್ತು ವರ್ಷ ಪ್ರಾಯದಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಸಾಲು ಸಾಲು ಲೈಂಗಿಕ ಅತ್ಯಾಚಾರಗಳು ನಡೆದವು!  ಅತ್ಯಾಚಾರ ಮಾಡಿದವರು ಆಕೆಯ ಸಂಬಂಧಿಕರು, ಅಂಕಲ್ ಮತ್ತು ತಾಯಿಯ ಗೆಳೆಯರು. ಈ ಯಾತನೆ ಸತತವಾಗಿ ಐದು ವರ್ಷಗಳ ಕಾಲ ಮುಂದುವರೆಯಿತು.
ಅಮ್ಮನ ಬಳಿ ಹೇಳಿದರೆ ಅಮ್ಮ ನಕ್ಕು ಬಿಡುತ್ತಿದ್ದರು! ಆಗೆಲ್ಲ ಅವಳ ಅಜ್ಜಿಯೇ ಮೊಮ್ಮಗಳ ನೆರವಿಗೆ ಬರುತ್ತಿದ್ದರು. 14 ನೆಯ ವರ್ಷಕ್ಕೆ ಒಪ್ರಾ ಪ್ರೆಗ್ನೆಂಟ್ ಆಗಿ ಮಗುವಿಗೆ ಜನ್ಮ ಕೊಟ್ಟರು. ಆದರೆ ಮಗು ಸತ್ತು ಹುಟ್ಟಿತ್ತು. ಈ ನೋವು ಗಳನ್ನು ಮರೆಯಲು ಪ್ರಯತ್ನ ಪಡುತ್ತಾ ಒಪ್ರಾ ತನ್ನ ಕಾಲೇಜು ವಿದ್ಯಾಭ್ಯಾಸವನ್ನು ಮತ್ತೆ ಮುಂದು ವರೆಸಿದರು. ಕಾಲೇಜಿನಲ್ಲಿ ಭಾಷಣ ಮತ್ತು ಚರ್ಚೆಗಳಲ್ಲಿ ಉತ್ಸಾಹದಲ್ಲಿ  ಭಾಗವಹಿಸಿದರು. ಆದರೆ ಹಸಿವು ಮತ್ತು ಹೊಟ್ಟೆ ಪಾಡಿ ಗಾಗಿ ಆಕೆ  ಏನಾದರೂ ಮಾಡಲೇಬೇಕಿತ್ತು. ರೇಡಿಯೋ ಶೋ ಒಂದರಲ್ಲಿ ಭಾಗವಹಿಸುತ್ತಾ ಒಂದಿಷ್ಟು ಅನುಭವ ಮತ್ತು  ಸಂಪಾದನೆಯನ್ನು  ಮಾಡಿದರು.  ಟಿವಿಯಲ್ಲಿ ಶೋ ಕೊಡಬೇಕು ಅಂತ ಆಸೆ ಏನೋ ಇತ್ತು. ಆದರೆ ಕಪ್ಪು ಚರ್ಮದ  ಹುಡುಗಿಗೆ ಟಿವಿ ಪ್ರವೇಶ ಆಗಿನ ಕಾಲದಲ್ಲಿ  ಅಷ್ಟು ಸುಲಭ ಆಗಿರಲಿಲ್ಲ.
1976-81ರ ಅವಧಿಯಲ್ಲಿ  ಒಂದು ಸಣ್ಣ ಟಿವಿ ಶೋವನ್ನು  ಆಂಕರ್ ಮಾಡುವ ಅವಕಾಶ ದೊರೆಯಿತು. ಆ ಶೋದ ಹೆಸರು ‘ಪೀಪಲ್ ಆರ್ ಟಾಕಿಂಗ್ ಫಾರ್’. ಅದೂ ಯಾರೂ ಟಿವಿ ನೋಡದ ಬೆಳಗ್ಗಿನ ಹೊತ್ತಲ್ಲಿ! ಆದರೆ ಒಪ್ರಾ ಬಹಳ ಬುದ್ಧಿವಂತೆ. ಸುಲಲಿತವಾದ ಮತ್ತು ಸರಳವಾದ ಇಂಗ್ಲಿಷ್, ಅದ್ಭುತವಾದ ನಿರೂಪಣೆ, ಸ್ಫೂರ್ತಿ ತುಂಬುವ ಸಂವಹನ, ಜನರೊಂದಿಗೆ ನೇರವಾದ ಸಂಪರ್ಕ…ಇವುಗಳಿಂದ ಆಕೆಯ ಶೋಗಳು ಬಹು ಬೇಗ ಜನಪ್ರಿಯವಾದವು. ಜನರ ಪ್ರೀತಿ ಅವರಿಗೆ ಧಾರೆಯಾಗಿ ದೊರೆಯಿತು.

ಈ ಜನಪ್ರಿಯತೆಯ  ಹಿನ್ನೆಲೆಯಿಂದ ಅವರದ್ದೇ ಟಿವಿ ಶೋ 1986ರಲ್ಲೀ ಅಮೇರಿಕನ್ ಟಿವಿಯಲ್ಲಿ  ಆರಂಭ ವಾಯಿತು. ‘ಒಪ್ರಾ ವಿನಫ್ರೆ ಶೋ’ ಎಂದೇ ಆ ಶೋ ಹೆಸರು ಪಡೆಯಿತು.   ಅಮೇರಿಕನ್ ಟಿವಿಯಲ್ಲಿ ನಿತ್ಯವೂ ಪ್ರಸಾರ ಆಗುತ್ತಿದ್ದ ಈ ಶೋ ಮೊದಲ ವರ್ಷವೇ 10 ಮಿಲಿಯನ್ ಪ್ರೇಕ್ಷಕರನ್ನು ತಲುಪಿತು! 120 ಟಿವಿ ಚಾನ್ನೆಲ್ಗಳು ಆ ಶೋವನ್ನು ನೇರ ಪ್ರಸಾರ ಮಾಡಿದವು! ಅಮೆರಿಕಾದ ಹೊರಗಿನ ರಾಷ್ಟ್ರಗಳು ಕೂಡ ಈ ಶೋವನ್ನು ಪ್ರಸಾರ ಮಾಡಿದವು. ಮೊದಲ ವರ್ಷ ಮುಗಿದಾಗ ಆ ಶೋ 125 ಮಿಲಿಯನ್ ಅಮೇರಿಕನ್ ಡಾಲರ್ ಸಂಪಾದನೆ ಮಾಡಿತು! ಈ ಟಿವಿ ಶೋದ ಮೂಲಕ ಒಪ್ರಾ ಅಮೆರಿಕಾದ ಮನೆ ಮಾತಾದರು!

ಏನಿದೆ ಆ ಟಿವಿ ಶೋದಲ್ಲಿ?  ಪ್ರತೀ ಶೋದಲ್ಲಿ ಒಬ್ಬರು  ಸೆಲೆಬ್ರಿಟಿ ಗೆಸ್ಟ್  ಆಗಿ ಬರುತ್ತಾರೆ.  ಎದುರು ಅಂದಾಜು ನೂರು ಜನರು ಕುಳಿತಿರುತ್ತಾರೆ. ಅವರು ತಮ್ಮ ಜೀವನದ ನೋವು ಮತ್ತು ನಲಿವುಗಳನ್ನು ಮುಕ್ತವಾಗಿ  ಶೇರ್ ಮಾಡುತ್ತಾರೆ. ಅವರಿಗೆ ಒಪ್ರಾ ಕೌನ್ಸೆಲಿಂಗ್ ರೂಪದಲ್ಲಿ ಪರಿಹಾರ ಹೇಳುತ್ತಾರೆ. ಅಪಾರವಾದ ಜೀವನಾನುಭವ, ವಿಕಸನದ ಮಾತುಗಳು, ಸಾಂತ್ವನದ ನುಡಿಗಳು ಇವುಗಳ ಮೂಲಕ ಒಪ್ರಾ ಇಡೀ ಶೋದಲ್ಲಿ ಭಾವನೆಗಳನ್ನು ತಟ್ಟಿ ಆತ್ಮವಿಶ್ವಾಸ ತುಂಬುತ್ತಾರೆ. ಆಕೆ ಬಳಸುವ ಕಥೆಗಳು, ಕೋಟೇಶನಗಳು ತುಂಬಾ ರೋಚಕವಾಗಿ ಮೂಡಿಬರುತ್ತವೆ. ತನ್ನ ಭಾವನಾತ್ಮಕವಾದ  ನಿರೂಪಣೆಯಿಂದ ಆಕೆ ಇಡೀ ಶೋವನ್ನು ನಾಟಕೀಕರಣ ಮಾಡುತ್ತಾರೆ. ಅದರಿಂದಾಗಿ ಜನಪ್ರಿಯತೆಯ ಉತ್ತಂಗ ತಲುಪಿದ ಈ ಶೋ 25  ವರ್ಷ ನಿರಂತರವಾಗಿ  ನಡೆದುಕೊಂಡು ಬಂದಿತು. ಒಪ್ರಾ ಈ ಶೋದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದರು.

2011ರ ಹೊತ್ತಿಗೆ ಜನಪ್ರಿಯತೆಯ ತುತ್ತ ತುದಿಗೆ ಶೋ ತಲುಪಿತು. ಅಮೆರಿಕಾದ 212 ಚಾನೆಲ್ಲುಗಳು ಅವರ ಶೋ ನೇರಪ್ರಸಾರ ಮಾಡುತ್ತಿದ್ದವು. 100 ದೇಶಗಳಲ್ಲಿ ಅದು ಪ್ರಸಾರ ಆಗಿತ್ತಿತ್ತು. ಪ್ರತೀ ದಿನ ಆಕೆಯ ಟಿವಿ ಶೋವನ್ನು 13.1ಮಿಲಿಯನ್ ವೀಕ್ಷಕರು ವೀಕ್ಷಣೆ ಮಾಡುತ್ತಿದ್ದರು. ಇದೆಲ್ಲವೂ ಜಾಗತಿಕ ದಾಖಲೆ ಎಂದೇ ಹೇಳಬಹುದು. ಅವರು ಮಲ್ಟಿ ಬಿಲ್ಲಿಯನರ್ ಆಗಿದ್ದರು! ಸಿಎನ್ಎನ್ ಆಕೆಯನ್ನು ‘ಜಗತ್ತಿನ ಶಕ್ತಿಶಾಲಿ ಮಹಿಳೆ’  ಎಂದು ಕರೆಯಿತು. ‘ಹಾಲ್ ಆಫ್ ಫೇಮ್’ ಗೌರವವು  ಆಕೆಗೆ ದೊರೆಯಿತು. ಅದೇ ಹಂತದಲ್ಲಿ ಅವರು ತಮ್ಮ ಟಿವಿ ಶೋವನ್ನು ನಿಲ್ಲಿಸಿಬಿಟ್ಟರು! ಅಷ್ಟು ಹೊತ್ತಿಗೆ ಆಕೆಯ ಸಂಪಾದನೆ 250 ಕೋಟಿ ಅಮೇರಿಕನ್ ಡಾಲರ್ ಆಗಿತ್ತು.

ನಂತರ ಅವರು What I know for sure ಎಂಬ ಜನಪ್ರಿಯ ಪುಸ್ತಕವನ್ನು ಬರೆದರು. ತಮ್ಮದೇ ಹೆಸರಿನ ಟಿವಿ ಪ್ರೊಡಕ್ಷನ್ ಕಂಪೆನಿ ಆರಂಭ ಮಾಡಿದರು. ಸಿನೆಮಾದಲ್ಲಿ ಅಭಿನಯ ಮಾಡಿದರು. ಸಿನೆಮಾ ನಿರ್ಮಾಣ ಮಾಡಿದರು. Oprah  Winfrey Network ಎಂಬ ಅವರ ಕಂಪೆನಿ ಅಮೆರಿಕಾದ ಅತ್ಯಂತ ಜನಪ್ರಿಯ ಕಂಪೆನಿಗಳಲ್ಲಿ ಒಂದಾಗಿದೆ. 2018ರಲ್ಲೀ ಅವರು 5 ಲಕ್ಷ ಅಮೇರಿಕನ್ ಡಾಲರ್ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ದಾನ ಮಾಡಿದ್ದಾರೆ.
ಒಪ್ರಾ ವಿನಫ್ರೆ ಬದುಕು ನಿಜವಾದ ಯಶೋಗಾಥೆ​… ​ ಏನಂತೀರಿ?
 
 
 
 
 
 
 
 
 
 
 

Leave a Reply