ಉಡುಪಿ: ನಲವತ್ತು ನಿಮಿಷ 28 ಸೆಕೆಂಡ್ ನಲ್ಲಿ 245 ಯೋಗಾಸನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ಭಾನುವಾರ ಕೃಷ್ಣಮಠ ರಾಜಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ತನುಶ್ರಿ ನ ಯೋಗಾಸನ ಕ್ಲಿಷ್ಟಕರ ಭಂಗಿಯನ್ನು ಪ್ರದರ್ಶಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯದ ಮುಖ್ಯಸ್ಥ ಮನೀಶ್ ಬಿಶ್ನೋಯ್ ಉಪಸ್ಥಿತಿಯಲ್ಲಿ ಈ ಪ್ರದರ್ಶನ ನಡೆಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಇಲ್ಲಿವರೆಗೆ ಎರಡು ಸಾವಿರ ದಾಖಲೆ ನೋಡಿದ್ದೇನೆ. ತನುಶ್ರಿ ಈ ದಾಖಲೆ ಅದ್ಬುತ ಎಂದು ಬಣ್ಣಿಸಿದ್ದಾರೆ. ತನುಶ್ರೀ ಅವರ ಈ ದಾಖಲೆ ಮುಂದೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಿಲ್ಲ. ಇದು ನೂರು ದಾಖಲೆಗೆ ಸಮವಾಗಿದೆ ಎಂದು ಶ್ಲಾಘಿಸಿದರು.
ಈಗಾಗಲೆ ಹಲವು ದಾಖಲೆಗಳ ಯೋಗ ಪ್ರದರ್ಶನ ಮಾಡಿರುವ ತನುಶ್ರೀ ಕಿರಿಯ ವಯಸ್ಸಿನಲ್ಲಿಯೇ ವಿಶಿಷ್ಟ ಯೋಗ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಾವರ ಪಿತ್ರೋಡಿ ಉದಯ್ ಕುಮಾರ್ ಮತ್ತು ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ ಉಡುಪಿಯ ಸೇಂಟ್ ಸಿಸಿಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ.
75 ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಗುರುಗಳಾದ ಶ್ರೀ ರಾಮಕೃಷ್ಣ ಕೊಡಂಚ, ಯೋಗ ಗುರು ಶ್ರೀ ನರೇಂದ್ರ ಕಾಮತ್, ಹಾಗೂ ಡಾll ಶೋಭಿತ್ ಶೆಟ್ಟಿ ಪರೀಕ ಇವರ ಮಾರ್ಗದರ್ಶನದಲ್ಲಿ ಭಾನುವಾರದಂದು ಶ್ರೀಕೃಷ್ಣ ಮಠದ ನರಹರಿತೀರ್ಥ ವೇದಿಕೆ ರಾಜಾಂಗಣದಲ್ಲಿ ಆಯೋಜಿಸಲಾದ ಯೋಗಾಸನದಲ್ಲಿ 6 ವಿಶ್ವ ದಾಖಲೆಗಳ ಸರದಾರಿಣಿ, ನಾಟ್ಯಮಯೂರಿ ಬಿರುದಾಂಕಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗರತ್ನ “ತನುಶ್ರೀ ಪಿತ್ರೋಡಿ” ಇವರು 43 ನಿಮಿಷದಲ್ಲಿ 245 ಯೋಗಾಸನದ ಆಸನಗಳನ್ನು ಹಾಕುವ ಮೂಲಕ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” 7ನೇ ವಿಶ್ವದಾಖಲೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ತನುಶ್ರೀ ಪಿತ್ರೋಡಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಆಶೀರ್ವಚಿಸಿದರು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ನಗರ ಸಭೆಯ ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ, ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್, ರಾಜ್ಯ ಕಾರ್ಯ ಕಾರಣಿ ಸದಸ್ಯರಾದ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.