ಡಾ. ವಿರೂಪಾಕ್ಷ ದೇವರ ಮನೆಯವರ ಥ್ಯಾಂಕ್ಯೂ ಟೀಚರ್ ಪುಸ್ತಕ ಲೋಕಾರ್ಪಣೆ

ಉಡುಪಿ: ಎಂ ಜಿ ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಖ್ಯಾತ ಲೇಖಕ ಹಾಗೂ ಮನೋ ವೈದ್ಯ ಡಾ. ವಿರೂಪಾಕ್ಷ ದೇವರ ಮನೆಯವರ ಥ್ಯಾಂಕ್ಯೂ ಟೀಚರ್ ಪುಸ್ತಕ ಲೋಕಾರ್ಪಣೆಗೊಂಡಿತು.

ಜಿಲ್ಲಾಧಿಕಾರಿ ಜಿ.ಜಗದೀಶ್ ರವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು, ಮಕ್ಕಳಿಗೆ ಯಾವ ವಿಷಯದ ಬಗ್ಗೆ ಅತೀವ ಆಸಕ್ತಿ ಇದೆ ಅಂತಹ ಪುಸ್ತಕಗಳನ್ನು ಅವರಿಗೆ ನೀಡಬೇಕು. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವುದರ ಮೂಲಕ ಅವರು ಸಮಯವನ್ನು ಸಕಾರಾತ್ಮಕವಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ. ಗುರುಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಚಿಂತಿಸಿ ಕಾರ್ಯಪ್ರ‍ವೃತ್ತರಾದರೆ ಯಶಸ್ವಿ ಶಿಕ್ಷಕ ರಾಗು ತ್ತಾರೆ. ಹಾಗೇಯೆ ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಶಿಕ್ಷಕರ ಸಹಾಯವನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.ಹರೆಯದ ಅರಿವು ಎಂಬ ವಿಚಾರದ ಕುರಿತು ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಉಪನ್ಯಾಸ ನೀಡಿದರು. ಪ್ರಾಥಮಿಕ ಹಂತದಲ್ಲೇ ಮಕ್ಕಳ ಮನೋವೈದ್ಯಕೀಯ ಬದಲಾವಣೆಗಳನ್ನು ಗಮನಿಸಿ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಮತ್ತೊಬ್ಬರೊಂದಿಗೆ ಹೋಲಿಕೆ ಮಾಡದೇ ಅವರಿಗೆ ಬೆಳೆಯಲು ಸ್ವಾತಂತ್ರ್ಯವನ್ನು ನೀಡಬೇಕು. ಅವರಲ್ಲಿ ಇರುವ ನ್ಯೂನತೆಗಳನ್ನು ಒಪ್ಪಿಕೊಂಡು ಸಕಾರಾತ್ಮಕ ಭಾವನೆಯ ಬೆಳವಣಿಗೆಗೆ ಪ್ರಯತ್ನ ಪಡಬೇಕು ಎಂದು ಡಾ. ಪಿ.ವಿ. ಭಂಡಾರಿ ಹೇಳಿದರು.ನಾವು ಶಿಕ್ಷಕರು ಬದಲಾಗೋಣ ಎಂಬ ವಿಚಾರದ ಬಗ್ಗೆ ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್, ಮಾತನಾಡಿದರು. ಶಿಕ್ಷಕರು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು. ನಾವು ಬದಲಾದರೆ ನಮ್ಮಲ್ಲಿರುವ ತಪ್ಪು ಗ್ರಹಿಕೆಗಳು ಕೂಡ ನಶಿಸಿ ಅದರಿಂದ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದು ಎಂದರು.

ಹಿರಿಯ ಉಪನ್ಯಾಸಕ ಅಶೋಕ್ ಕಾಮತ್ ರಿಫ್ಲೆಕ್ಟಿವ್ ಟೀಚರ್ ಎಂಬುದರ ಕುರಿತು ಮಾತನಾಡಿದರು. ಪಾಸ್ ಮತ್ತು ಫೈಲ್ ಎಂಬ ಎರಡು ಮಾನದಂಡಗಳಿಂದ ಮಕ್ಕಳ ಸಾಮರ್ಥ್ಯವನ್ನು ಅಳೆಯಲು ಆಗುವುದಿಲ್ಲ. ಅಂಕಗಳನ್ನು ಆಧರಿಸಿ ವಿದ್ಯಾರ್ಥಿಗಳ ಭವಿಷ್ಯ ಇದೇ ರೀತಿ ಇರುತ್ತದೆ ಎಂದು ಊಹಿಸುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗನುಗುಣವಾಗಿ ವೇದಿಕೆಯನ್ನು ಕಲ್ಪಿಸಿದರೆ ಅದರಿಂದ ಅದ್ಭುತವೇ ಸೃಷ್ಟಿಯಾಗುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ತರಗತಿಯ ಕೋಣೆಯಲ್ಲಿ ಶಿಕ್ಷಕರು ಎಂಬ ವಿಚಾರದ ಬಗ್ಗೆ ಮಾತನಾಡಿದರು. ಮಕ್ಕಳ ಸಮಸ್ಯೆಗಳನ್ನು ಮಾತ್ರ ನಾವು ಪಟ್ಟಿ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಸಮಸ್ಯೆಗಳ ಹಿಂದಿರುವ ಕಾರಣಗಳನ್ನು ಕೂಡ ಅರಿಯುವ ಮೂಲಕ ಪ್ರತಿ ಸಮಸ್ಯೆಯನ್ನೂ ಯೋಗ್ಯ ರೀತಿಯಲ್ಲಿ ಸರಿಪಡಿಸುವಲ್ಲಿ ಶಿಕ್ಷಕರು ಪಾತ್ರವಹಿಸಬೇಕು ಎಂದರು.

ಇನ್ನು ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಇದು ಅತ್ಯಂತ ಸಂತಸ ತಂದ ಪುಸ್ತಕ ಎಂದರು. ಈ ಸಂದರ್ಭ ಮಕ್ಕಳ ಮನಸ್ಸಿನಲ್ಲಿ ಶಿಕ್ಷಕರ ಕುರಿತ ಭಾವನೆಗೆ ಸಂಬಂಧಿಸಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿಯವರ ಶುಭ ಸಂದೇಶವನ್ನೂ ಬಿತ್ತರಿಸಲಾಯ್ತು.

ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು ನಾಲ್ಕು ಮಂದಿ ಮಕ್ಕಳು ಶ್ರೇಷ್ಠ ಶಿಕ್ಷಕರಾದ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಸಾವಿತ್ರಿ ಭಾಯಿ ಫುಲೆ ಹಾಗೂ ಶಿವರಾಮ ಕಾರಂತ ಇವರುಗಳ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದು.

ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿ, ಡಾ. ವೀಣಾ ವಿರೂಪಾಕ್ಷ ವಂದಿಸಿದರು. ಶಿಕ್ಷಕಿ ಸ್ವಪ್ನಾ ಸತೀಶ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply