ಹೆಬ್ರಿ ತಾಲೂಕು 2ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಆಯ್ಕೆ

ಈಗ ಹೆಬ್ರಿ ತಾಲ್ಲೂಕಿನಲ್ಲಿ ಇರುವ, ಮೊದಲು ಕಾರ್ಕಳ ತಾಲೂಕಿನಲ್ಲಿದ್ದ, ಸೋಮೇಶ್ವರವೆಂಬ ರಮಣೀಯ ಸುಂದರ ಪ್ರಕೃತಿಯ ಮಡಿಲಲ್ಲಿರುವ ಸಣ್ಣ ಹಳ್ಳಿಯಲ್ಲಿ ಸೋಮೇಶ್ವರ ಮಂಜುನಾಥ ಭಕ್ತ ಹಾಗೂ ಸುಗಂಧಾ ಭಕ್ತ ದಂಪತಿಯ ಮಗಳಾಗಿ, ಓರ್ವ ಸಹೋದರ ಹಾಗೂ ಮೂವರು ಸಹೋದರಿಯರ ನಡುವೆ ಹುಟ್ಟಿದವರು ಶ್ರೀಮತಿ ಸಂಧ್ಯಾ ಶೆಣೈ, ಉಡುಪಿ.

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೋಮೇಶ್ವರದ ಪ್ರಾಥಮಿಕ ಶಾಲೆ ಹಾಗೂ ಹೆಬ್ರಿಯ ಭುಜಂಗ ಬಲ್ಲಾಳ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣವನ್ನು ಆಗುಂಬೆಯ ವೇಣುಗೋಪಾಲ ಸ್ವಾಮಿ ಪ್ರೌಢಶಾಲೆ ಯಲ್ಲಿಯೂ ಹಾಗೂ ಮುಂದಿನ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ‌ ಸಂಸ್ಥೆಯ ಮುಖಾಂತ ರವೂ ಪೂರೈಸಿರುತ್ತಾರೆ.

ಮಲೆನಾಡ ತಪ್ಪಲಿನ ಸೋಮೇಶ್ವರದಲ್ಲಿ ಹುಟ್ಟಿ ಬೆಳೆದ ಇವರು, ತಮ್ಮ ಬಾಲ್ಯವನ್ನು ಅತ್ಯಂತ ಸಂಭ್ರಮದಿಂದ ಸುಂದರ ವಾತಾವರಣದಲ್ಲಿ ಕಳೆದವರು. ಇವರಿಗೆ ತಮ್ಮ ತವರೂರ ಬಗ್ಗೆ ಅಪಾರ ಅಭಿಮಾನ ಹಾಗೂ ಪ್ರೀತಿ. ಹಾಗಾಗಿ ಬಾಲ್ಯದ ಮಧುರ ಕ್ಷಣಗಳನ್ನು ಆಗಾಗ ನೆನಪಿಸಿಕೊಂಡು, ಸಮಾನ ಮನಸ್ಕರೊಂದಿಗೆ ಹಂಚಿ ಕೊಳ್ಳುತ್ತಾ ಸಂತೋಷ ಪಡುವುದು ಇವರ ಹವ್ಯಾಸ. ಬಾಲ್ಯದಿಂದಲೂ ಪ್ರತಿಯೊಂದು ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿದ್ದ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸದಾ ತಮ್ಮನ್ನು ತೊಡಗಿಸಿಕೊಂಡವರು.

ಇವರ ತಾಯಿ ಒಳ್ಳೆಯ ಓದುಗರಾಗಿದ್ದು, ತಾವು ಓದಿದ ಪುಸ್ತಕಗಳ ಬಗ್ಗೆ ಸಮಾನ ಮನಸ್ಕರೊಡನೆಯೂ ಮಕ್ಕಳೊಡನೆಯೂ ವಿಮರ್ಶೆ, ಚರ್ಚೆ ಮಾಡುವ ಅಭ್ಯಾಸವನ್ನು‌ಹೊಂದಿದ್ದರು. ಅವರು ಮಕ್ಕಳಿಗೆ ಓದಲು ಸದಾ ಉತ್ತೇಜನ ನೀಡುತ್ತಾ ಇದ್ದುದರಿಂದ, ಇವರಿಗೂ ಬಾಲ್ಯದಿಂದಲೂ ಅನೇಕ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆದಿತ್ತು. ಹಾಗೆಯೇ ತಮ್ಮ ಶಾಲಾ ದಿನಗಳಲ್ಲಿಯೇ ಸಣ್ಣ ಪುಟ್ಟ ಲೇಖನಗಳನ್ನು ಬರೆಯುವುದು, ಭಾಷಣಗಳನ್ನು ಮಾಡುವುದು ಇಂಥಾದ್ದರಲ್ಲೆಲ್ಲ ಉತ್ಸಾಹಿಯಾಗಿ ಭಾಗವಹಿಸುತ್ತಿದ್ದರು. ನಾಟಕ ನೃತ್ಯ ಮುಂತಾದ ಎಲ್ಲ ಕಾರ್ಯ ಕ್ರಮಗಳಲ್ಲೂ ಇವರ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು.

ಮುಂದಿನ ದಿನಗಳಲ್ಲಿ ಉಡುಪಿಯ ಶ್ರೀಯುತ ವಿಠಲದಾಸ ಶೆಣೈಯವರನ್ನು ಮದುವೆಯಾದ ಇವರು, ವೈವಾಹಿಕ‌ ಜೀವನದ ಪ್ರಾರಂಭಿಕ ಹಂತದಲ್ಲಿ ಮುಂಬೈ ಶಹರದಲ್ಲಿ ಜೀವನ ಮಾಡಿದ್ದರೂ, ಆ ಮೇಲಿನ ತಮ್ಮ ಜೀವನವನ್ನು ಉಡುಪಿಯ ಸಾಂಸ್ಕೃತಿಕ ನಗರದಲ್ಲಿಯೇ ಕಳೆಯುತ್ತಿದ್ದಾರೆ. ಮಗಳು ಶ್ವೇತಾ, ಅಳಿಯ ಅಜೇಯ, ಮೊಮ್ಮಗ ಆಶ್ವೀಜ, ಮಗ ಸಾತ್ವಿಕ ಹಾಗೂ ಸೊಸೆ ಬಿಯಾಂಕ ಇವರೊಂದಿಗಿನ ಸುಖೀ ಸಂಸಾರ ಇವರದ್ದು.

ಪ್ರಾರಂಭಿಕ ಹಂತದಲ್ಲಿ ಸೌಂದರ್ಯ ತಜ್ಞೆಯಾಗಿ ಕೆಲಸ ಮಾಡುತ್ತಾ ಇದ್ದ ಇವರು, ಉತ್ತಮ ಸೌಂದರ್ಯತಜ್ಞೆ ಎಂದು ಹೆಸರು ಪಡೆದಿದ್ದರು. ವ್ಯಕ್ತಿಗಳೊಳಗಿನ ಸುಪ್ತ ಪ್ರತಿಭೆಗಳನ್ನು ಹೊರಗೆಳೆಯುವ ಉದ್ದೇಶದಿಂದ ಆರಂಭ ಗೊಂಡ ನಡುಮನೆ ಸಾಹಿತ್ಯ ಸಂವಾದ ವೇದಿಕೆ ಹಾಗೂ ಸುಹಾಸಂ ಸಂಘಟನೆಯ ವೇದಿಕೆ, ಇವೆರಡನ್ನೂ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು, ತಮ್ಮಲ್ಲಿ ಇದ್ದಂತಹ ಹಾಸ್ಯಪ್ರಜ್ಞೆಯನ್ನೂ, ನಗಿಸುವ ಕಲೆಯನ್ನು ಬೆಳಕಿಗೆ ತಂದು, ಈಗ ಎಲ್ಲೆಡೆ ಜನಪ್ರಿಯ ಹಾಸ್ಯ ಭಾಷಣಕಾರ್ತಿಯಾಗಿ ಪ್ರಸಿದ್ಧಿಗೆ ಬಂದಿರುತ್ತಾರೆ.

ಇವರಿಗೆ ಅನೇಕ ಸಾಹಿತ್ಯ ಸಮ್ಮೇಳನಗಳ ಹಾಸ್ಯಗೋಷ್ಠಿಗಳಲ್ಲಿ ಪಾಲ್ಗೊಂಡ ಅನುಭವವಿದೆ. ಗಡಿನಾಡು ಕಾಸರಗೋಡಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿಯೂ, ಎಡನೀರು ಮಠದ ಸ್ವಾಮೀಜಿಗಳ ಚಾತುರ್ಮಾಸ ಸಂದರ್ಭದಲ್ಲಿಯೂ ಇವರು ಭಾಗವಹಿಸಿದ್ದಾರೆ.

ತಾಲ್ಲೂಕು ಜಿಲ್ಲೆ ಮಾತ್ರವಲ್ಲದೆ ಅಖಿಲ ಕರ್ನಾಟಕ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಹಾಸ್ಯಗೋಷ್ಠಿಗಳಲ್ಲಿ ಪಾಲ್ಗೊಂಡ ಅನುಭವ ಇವರದಾಗಿದೆ. ನಮ್ಮ ಜಿಲ್ಲೆ, ನಮ್ಮ ರಾಜ್ಯದ ಎಲ್ಲ ಊರುಗಳಲ್ಲಿ ಮಾತ್ರವಲ್ಲದೆ, ಗೋವಾ ಮುಂಬೈ ಹೈದ್ರಾಬಾದ್ ಚೆನ್ನೈ ಮುಂತಾದ ಕಡೆಗಳಲ್ಲೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಂಥ ಅನುಭವ ಇವರದಾಗಿದೆ. ಇಷ್ಟು ಮಾತ್ರವಲ್ಲದೇ ಹೊರದೇಶಗಳಾದ ದುಬೈ, ಅಬುಧಾಬಿಗಳಲ್ಲೂ ಕನ್ನಡ ಹಾಗೂ ಕೊಂಕಣಿ ಸಂಘಟನೆಗಳಲ್ಲಿ ಇವರ ಕೆಲವು ಕಾರ್ಯಕ್ರಮಗಳು ನಡೆದದ್ದು ಹೆಮ್ಮೆಯ ವಿಚಾರ.

ಸಿಕ್ಕ ಅವಕಾಶಗಳಿಗೆ ಸೂಕ್ತ ನ್ಯಾಯವನ್ನು ಒದಗಿಸುತ್ತಾ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ, ದೇಶ ವಿದೇಶ ಗಳಲ್ಲೂ ತಮ್ಮ ಮಾತಿನ ವರಸೆಯನ್ನು ಪರಿಚಯಿಸುತ್ತಾ ಸುಮಾರು ಹದಿನೈದು ವರ್ಷಗಳಲ್ಲಿ ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡುತ್ತಾ, ಹಲವಾರು ಸಂಘ ಸಂಸ್ಥೆಗಳಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ವಿಶೇಷವಾಗಿ ಹಾಸ್ಯರಸದರಸಿ, ಸಾಧನಶೀಲ ಮಹಿಳೆ, ಹಾಸ್ಯರತ್ನ, ಬಸವ ಹಾಸ್ಯ ಪ್ರಶಸ್ತಿ, ಕೊಂಕಣಿ ಹಾಸ್ಯರತ್ನ ಮುಂತಾದ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಕೊಂಕಣಿ ಮಾತನಾಡುವ ಮಹಿಳೆಯರಲ್ಲಿ ಇಷ್ಟರವರೆಗೆ ಪ್ರಪಂಚದ ಏಕೈಕ ಮಹಿಳಾ ಹಾಸ್ಯ ಭಾಷಣಕಾರರು ಎನ್ನುವ ಹೆಗ್ಗಳಿಕೆಯೂ ಇವರದಾಗಿದೆ .

ಕೇವಲ ವೇದಿಕೆಗಳಲ್ಲಿ ಅಲ್ಲದೆ, ಅನೇಕ ಆಕಾಶವಾಣಿಗಳಲ್ಲೂ, ಎಫ್ ಎಮ್ ಕೇಂದ್ರಗಳಲ್ಲೂ ಕಾರ್ಯಕ್ರಮಗಳನ್ನು ಕೊಟ್ಟ ಅನುಭವವೂ ಇವರಿಗಿದೆ. ಹಿಂದೆ ಉದಯ ಟಿವಿ ವಾಹಿನಿಯಲ್ಲಿ ನಡೆಯುತ್ತಿದ್ದ, ನಗೆ ಸಕತ್ ಸವಾಲ್ ಎನ್ನುವ ಸ್ಪರ್ಧೆಯ ವಿಜೇತರು ಕೂಡ ಆಗಿದ್ದಾರೆ. ಒಂದು ಚಲನಚಿತ್ರದಲ್ಲಿಯೂ ಅಭಿನಯಿಸಿರುವ ಇವರು ಚಿತ್ರರಂಗದ ಅನುಭವವನ್ನೂ ಪಡೆದಿರುತ್ತಾರೆ.

ತಮ್ಮ ವೃತ್ತಿಜೀವನದ ಮಾರ್ಗದರ್ಶಕರಾದ ಪುಸ್ತಕ ಪರಿವ್ರಾಜಕ ಕುಗೋ ಅವರನ್ನು ತಮ್ಮ ಗುರುಗಳೆಂದೇ ಕರೆಯುತ್ತಾ ಕುಗೋರವರ ಧ್ಯೇಯವಾಕ್ಯ ಎಲ್ಲರನ್ನೂ ಪ್ರೀತಿಸು, ಎಲ್ಲವನ್ನೂ ಕ್ಷಮಿಸು ಎನ್ನುವುದನ್ನು ಅಕ್ಷರಶಃ ಪಾಲಿಸುತ್ತಾ, ತಮ್ಮ ಪ್ರೀತಿಪೂರ್ವಕ ಸರಳ ನಡವಳಿಕೆಯಿಂದ, ಎಲ್ಲರ ಪ್ರೀತಿಯನ್ನು ಪಡೆಯುತ್ತಾ ತಮ್ಮ ಹಾಸ್ಯ ಮಿಶ್ರಿತ ಭಾಷಣಗಳಿಂದ ಎಲ್ಲರ ಮನಸ್ಸಿನಲ್ಲೂ ಸ್ಥಾನವನ್ನು ಪಡೆದುಕೊಂಡು ಯಶಸ್ವಿಯಾಗಿ ತಮ್ಮ ಹಾಸ್ಯ ಭಾಷಣದ ಪಯಣವನ್ನು ಮುನ್ನಡೆಸಿಕೊಂಡು ಸಾಗುತ್ತಿದ್ದಾರೆ.‌

ಹಬ್ಬ ಹರಿದಿನಗಳ ಸಾರ್ವಜನಿಕ ಕಾರ್ಯಕ್ರಮಗಳು, ರೋಟರಿ ಲಯನ್ಸ್ ಸಂಘಟನೆಗಳು ಹಾಗೂ ಅನೇಕ ಮಹಿಳಾ ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಪ್ರಮುಖ ಭಾಷಣಕಾರರಾಗಿ, ನಿರಂತರವಾಗಿ ಪಾಲ್ಗೊಳ್ಳುವ ಇವರ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿವೆ. ಉಡುಪಿಯ ರಥಬೀದಿ ಗೆಳೆಯರು, ತುಳುಕೂಟ, ರಂಗಭೂಮಿ, ಸುಹಾಸಂ, ನಡುಮನೆ, ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಇಂಥ ಅನೇಕ ಪ್ರತಿಷ್ಠಿತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಸುಹಾಸಂ ಹಾಗೂ ವಿಶ್ವ ಸಂಸ್ಕೃತಿ ಪ್ರತಿಷ್ಠಾನದಲ್ಲಿ‌ ಇವರು ಉಪಾಧ್ಯಕ್ಷೆಯೂ ಆಗಿರುತ್ತಾರೆ.

ಇತ್ತೀಚೆಗೆ ತಮ್ಮ ಷಷ್ಟ್ಯಬ್ದಿ ಯನ್ನು ಪೂರೈಸಿದ ಸಂದರ್ಭದಲ್ಲಿ ಇವರ ಹುಟ್ಟು ಹಬ್ಬದ ಅಭಿನಂದನಾ ಕಾರ್ಯಕ್ರ ಮವನ್ನು ಬೇರೆ ಬೇರೆ ಸಂಘಟನೆಗಳು ಸೇರಿ ಎಂಜಿಎಂ ಕಾಲೇಜಿನ ಆವರಣದಲ್ಲಿ ವಿಜ್ರಂಭಣೆಯಿಂದ ಆಚರಿಸಿದ್ದು, ಇವರ ಮೇಲೆ ಜನರಿಗಿರುವ ಅಭಿಮಾನ ತುಂಬಿದ‌ ಪ್ರೀತಿಗೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ಅವರು ಮುಸ್ಸಂಜೆಯಲ್ಲೊಂದು ಮುಂಜಾವು ಎಂಬ ತಮ್ಮ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು.

ಇವರ ಯಶಸ್ಸಿಗೆ ಮುಖ್ಯ ಕಾರಣ ನಿಂತ ನೀರಾಗದೆ ಏನಾದರೂ ಮಾಡುತ್ತಲೇ ಇರಬೇಕು, ಸದಾ ಕ್ರಿಯಾ ಶೀಲರಾಗಿ ಇರಬೇಕು ಎನ್ನುವ ತುಡಿತ ಹಾಗೂ ಅದನ್ನು ಸಾಧಿಸುವ ಹಠವೇ ಆಗಿದೆ. ಇಂಥ ನಮ್ಮೂರ ತವರು ಮನೆಯ ಹೆಮ್ಮೆಯ ಹುಡುಗಿ, ಉಡುಪಿಯ ಸೊಸೆ, ನಮ್ಮೆಲ್ಲರ ಪ್ರೀತಿಯ ಸಂಧ್ಯಾ ಶೆಣೈ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಆಯ್ಕೆಯಾಗಿದ್ದಾರೆ ಎಂದು ಕ.ಸಾ.ಪ ಉಡುಪಿ ​ಜಿಲ್ಲಾಧ್ಯಕ್ಷ ​ನೀಲಾವರ ಸುರೇಂದ್ರ ಅಡಿಗ ಪ್ರಕಟಣೆ ​ಯಲ್ಲಿ ತಿಳಿಸಿರುತ್ತಾರೆ.  ​

 

 
 
 
 
 
 
 
 
 
 
 

Leave a Reply