ಉಡುಪಿ: ಮಹಿಳೆಯರು ಯಾವುದೇ ಕ್ಷೇತ್ರಕ್ಕೂ ಸೈ ಎನ್ನುವುದು ಮತ್ತೆ ಸಾಬೀತಾಗಿದೆ. , ಉಡುಪಿಯ ಗೃಹಿಣಿ ರೇಣುಕಾ ಗೋಪಾಲಕೃಷ್ಣ ವಿಭಿನ್ನ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ಹಿನ್ನೆಲೆಯಲ್ಲಿ ರೇಣುಕಾ ಗೋಪಾಲಕೃಷ್ಣ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದರು. 170 ಸೂರ್ಯ ನಮಸ್ಕಾರವನ್ನು ಕೇವಲ 17.48 ನಿಮಿಷದಲ್ಲಿ ಮಾಡಿ ಸಾಧಿಸಿದ್ದಾರೆ.ಬಾಲ್ಯದಿಂದ ಯೋಗಾಭ್ಯಾಸದ ಮೇಲೆ ರೇಣುಕಾ ಅವರಿಗೆ ಆಸಕ್ತಿ. ನಿರಂತರ ಕಠಿಣ ಅಭ್ಯಾಸ ಮಾಡಿ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಯೋಗಾಭ್ಯಾಸದ ನಡುವೆ ಎಲ್ಲು ವಿರಮಿಸದೆ, ನಿಧಾನವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸದೆ ಅತಿ ವೇಗವಾಗಿ ಬರೋಬ್ಬರಿ 170 ಬಾರಿ ಸೂರ್ಯ ನಮಸ್ಕಾರ ಮಾಡಿದ್ದಾರೆ. ರೇಣುಕಾ ಅವರಿಗೆ ಪೊಲೀಸ್ ಸಿಬ್ಬಂದಿಯಾಗಿರುವ ಪತಿ ಗೋಪಾಲಕೃಷ್ಣ ಸದಾ ಬೆಂಬಲವಾಗಿ ನಿಂತಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಜೊತೆಗೆ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಕೂಡಾ ರೇಣುಕಾ ಹೆಸರಲ್ಲಿದೆ. ಇದೀಗ ಸಂಸ್ಥೆ ಪ್ರಾಥಮಿಕ ಪ್ರಮಾಣ ಪತ್ರವನ್ನು ಸ್ಥಳದಲ್ಲೇ ನೀಡಿ ಗೌರವಿಸಿದೆ. ಮುಂದಿನ ತಿಂಗಳು ದಾಖಲೆ ಪತ್ರದ ಜೊತೆಗೆ ಪದಕ ದೊರೆಯಲಿದೆ.