ರವಿ ಕಟಪಾಡಿಯ ಸಮಾಜ ಸೇವೆಗೆ ಸಂದ ‘ಮೂಲತ್ವ ವಿಶ್ವ ಪ್ರಶಸ್ತಿ”

ಉಡುಪಿಯ ವಿಶಿಷ್ಟ ಸಮಾಜ ಸೇವಕ ರವಿ ಕಟಪಾಡಿಯವರು ಮಂಗಳೂರಿನ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನೀಡುವ ಆರನೇ ಮೂಲತ್ವ ವಿಶ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಶೇಷ ವೇಷಗಳನ್ನು ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗುತ್ತಿದ್ದ ಇವರಿಗೆ ಇದೀಗ ಈ ವಿಶ್ವ ಪ್ರಶಸ್ತಿ ಒಲಿದಿದೆ.ಸ್ವತಃ ರವಿ ಅವರೆ ಬಡವರು, ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ.ಆದರೂ ಮತ್ತಿತರ ಬಡವರಿಗೆ ಸ್ಪಂದಿಸುವ ಮನಸ್ಸು ಇವರದ್ದು. ಹಸುಗೂಸೊಂದು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ಮರುಗಿದ ರವಿ ಅವರು ಸಹಾಯಕ್ಕೆ ಮುಂದಾದರು. ಅದರ ನಂತರ ಕಳೆದ ಆರು ವರ್ಷಗಳಿಂದ ಅಷ್ಟಮಿ ಸಂದರ್ಭ ವಿಭಿನ್ನ ವೇಷ ಧರಿಸಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.ಈಗಾಗಲೇ 28 ಮಕ್ಕಳ ಚಿಕಿತ್ಸೆಗೆ ಒಟ್ಟು 54.5 ಲಕ್ಷ ರೂ. ನೀಡಿದ್ದಾರೆ. 

ಮೂಲತ್ವ ಫೌಂಡೇಶನ್‌ನ ಧ್ಯೇಯ ವಾಕ್ಯದಂತೆ ಕಾರ್ಯ ಮಾಡುತ್ತಿರುವ ರವಿ ಕಟಪಾಡಿ ಅವರನ್ನು ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಪ್ರಕಾಶ್ ಮೂಲತ್ವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಪ್ರಶಸ್ತಿ ಪ್ರದಾನ ಸಮಾರಂಭ ನ.29ರಂದು ಬೆಳಗ್ಗೆ 10.45ಕ್ಕೆ ನಗರದ ಶಾರದಾ ವಿದ್ಯಾಲಯದಲ್ಲಿ ನಡೆಯಲಿದ್ದು, ಪ್ರಶಸ್ತಿ 50,001 ರೂ. ನಗದನ್ನು ಹೊಂದಿದೆ.

ಚಿತ್ರ : ವಾಮನ್ ಪಡುಕೆರೆ 
 
 
 
 
 
 
 
 
 

Leave a Reply