ಶ್ರೀ ರಾಜ್ ಕುಮಾರ್ ಬಹರೈನ್, ಅಂಬಲಪಾಡಿ ಹುಟ್ಟೂರ ಸನ್ಮಾನ “ರಾಜಾಭಿನಂದನೆ”

ಈ ಬಾರಿಯ ಪ್ರತಿಷ್ಠಿತ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತ ಶ್ರೀ ರಾಜ್ ಕುಮಾರ್ ಬಹರೈನ್, ಅಂಬಲಪಾಡಿಯವರಿಗೆ ಹುಟ್ಟೂರ ಸನ್ಮಾನ “ರಾಜಾಭಿನಂದನಾ” ಕಾರ್ಯಕ್ರಮ ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಿತು. ಉಡುಪಿ ಜಿಲ್ಲೆಯ ಅಂಬಲಪಾಡಿ ನಿವಾಸಿ ದಿ| ಭಾಸ್ಕರ್ ಪಾಲನ್ ಮತ್ತು ಶ್ರೀಮತಿ ಸುಂದರಿ ಪೂಜಾರ್ತಿಯವರ ಜೇಷ್ಠ ಪುತ್ರರಾಗಿ, ಸಮಾಜ ಸೇವೆ ಹಾಗೂ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಅರಬ್ ರಾಷ್ಟçದಲ್ಲಿ ಪಸರಿಸಲು ಅಹರ್ನಿಶಿಯಾಗಿ ತೊಡಗಿಸಿಕೊಂಡು ಅನಿವಾಸಿ ಭಾರತೀಯ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದು ಹುಟ್ಟೂರಿಗೆ ಮಾತ್ರವಲ್ಲದೇ ಸಮಸ್ತ ಕನ್ನಡಿಗರಿಗೆ ಹೆಮ್ಮೆ ತಂದಿದೆ ಎಂದು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ರಾಜಾಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನದ ಸಮಯದಲ್ಲಿ ಹೇಳಿದರು.

 

ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್‌ರವರು ಮಾತನಾಡುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ‘ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ; ಸಂಘಟನೆಯಿ0ದ ಬಲಯುತರಾಗಿರಿ; ಎಂಬ ಉದಾತ್ತ ಸಂದೇಶಕ್ಕೆ ಅನುಗುಣವಾಗಿ ಬಹರೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ನಡೆಸುವ ಜೊತೆಗೆ ಕನ್ನಡ ಕಲಿಕೆ ತರಗತಿಯನ್ನು ಪ್ರಾರಂಭಿಸಿದ ಮತ್ತು ಅರಬ್ ರಾಷ್ಟçದಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸರಕಾರದಿಂದ ಅನುದಾನವನ್ನು ಮಂಜೂರು ಮಾಡಿಸಿಸುವಲ್ಲಿ ಯಶಸ್ವಿಯಾದ ರಾಜ್‌ಕುಮಾರ್‌ರವರಿಗೆ ಅರ್ಹವಾಗಿಯೇ ಈ ಬಾರಿಯ ಪ್ರಶಸ್ತಿ ಲಭಿಸಿದೆ ಎಂದರು.

 

ಮಾಜಿ ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್‌ಸರ್‌ರವರು ಅಭಿನಂದನಾ ನುಡಿಯಲ್ಲಿ ರಾಜ್‌ಕುಮಾರ್‌ರವರು ಕನ್ನಡ ಚಿತ್ರ ರಂಗದ ಮಿನುಗು ತಾರೆಯರಾದ ಕೀರ್ತಿಶೇಷ ಡಾ| ಪುನೀತ್ ರಾಜ್ ಕುಮಾರ್ ಹಾಗೂ ಡಾ| ಶಿವರಾಜ್ ಕುಮಾರ್ ಇವರನ್ನು ಬಹರೈನ್‌ಗೆ ಕರೆಸಿರುವುದು ಹಾಗೂ ಕೀರ್ತಿಶೇಷ ಡಾ| ಪುನೀತ್ ರಾಜ್ ಕುಮಾರ್‌ರವರ ಸವಿನೆನಪಿಗಾಗಿ ‘ಪುನೀತ್ ಗಾನ ನಮನ’ ಕಾರ್ಯಕ್ರಮವನ್ನು ಆಯೋಜಿಸಿ ರುವುದು ತಮ್ಮ ಕನ್ನಡಾಭಿಮಾನ ಮತ್ತು ಕನ್ನಡ ನಾಡಿನ ಜೊತೆಗಿರುವ ಸುಮಧುರ ಭಾಂದವ್ಯಕ್ಕೆ ಸಾಕ್ಷಿ ಯಾಗಿದೆ. ಜೊತೆಗೆ ನಮ್ಮಂತಹ ಹಲವಾರು ಕಲಾವಿದರನ್ನು ಬಹರೈನ್‌ಗೆ ಕರೆಸಿ ವಿಶೇಷವಾಗಿ ಪ್ರೋತ್ಸಾಹಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದೀರಿ ಎಂದರು.

 

ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ಧನ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ವಿ.ಬಿ. ವಿಜಯ ಬಲ್ಲಾಳ್ ಮಾತನಾಡಿ ಅಂಬಲಪಾಡಿಯ ಹೆಸರನ್ನು ವಿದೇಶದಲ್ಲಿ ತನ್ನ ಸಾಧನೆಯ ಮೂಲಕ ಪಸರಿಸಿ ನಮ್ಮೂರಿನ ಗೌರವ ಹೆಚ್ಚಿಸಿದ್ದಾರೆ. ಎಂದು ತಿಳಿಸಿ ಶ್ರೀ ದೇವರು ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ನೀಡಿ ಕರುಣಿಸಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಶಾಸಕರಾದ ಶ್ರೀ. ಕೆ. ರಘುಪತಿ ಭಟ್‌ರವರು ಕೊಡುಗೈ ದಾನಿಯಾಗಿರುವ ರಾಜ್‌ಕುಮಾರ್‌ರವರು ಬಹರೈನ್‌ನಲ್ಲಿ ಮಾಡಿದ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಲಭಿಸಿದ್ದರೂ ಈ ಬಾರಿ ಸರಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿರುವದರಿಂದ ಅವರ ಸೇವಾ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಲಿದೆ ಎಂದರು.

 

ಸಮಾರಂಭದಲ್ಲಿ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಉದ್ಯಮಿ ಶ್ರೀ ಪುರುಷೋತ್ತಮ ಶೆಟ್ಟಿ, ಖ್ಯಾತ ಚಲನಚಿತ್ರ ನಟ ಶ್ರೀ ದೇವದಾಸ್ ಕಾಪಿಕಾಡ್, ಶ್ರೀ ಉದಯ್ ಕುಮಾರ್ ಶೆಟ್ಟಿ ಕಿದಿಯೂರು, ಶ್ರೀ ಯಶ್‌ಪಾಲ್ ಸುವರ್ಣ, ಶ್ರೀ ಮಟ್ಟಾರ್ ರತ್ನಾಕರ್ ಹೆಗ್ಡೆ,ನಮ್ಮ ಕುಡ್ಲ ವಾಹಿನಿಯ ಶ್ರೀ ಲೀಲಾಕ್ಷ ಕರ್ಕೇರ, ನ್ಯೂ ಸಿಟಿ ಆಸ್ಪತ್ರೆಯ ಡಾ. ರಮೇಶ್ ನಾಯ್ಕ್, ಶ್ರೀ ಮುರುಳಿ ಕಡೆಕಾರ್, ಬಹರೈನ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

 

ರಾಜ್‌ಕುಮಾರ್ ಅಂಬಲಪಾಡಿಯವರ ಬಹರೈನ್‌ನ ಅಭಿಮಾನಿಗಳು ಹಾಗೂ ರಾಜಾಭಿನಂದನಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸಭೆಯ ನಂತರ ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ನೃತ್ಯವಳಿಗಳು ಮತ್ತು ಬಲೆತೆಲಿಪಾಲೆ ಖ್ಯಾತಿಯ ಪ್ರಸಂಶಾ ಕಾಪು ತಂಡದಿoದ ತುಳು ಹಾಸ್ಯ ಹಾಗೂ ಚಂದ್ರಕಾoತ್‌ರವರ ಸಂಗೀತದೊoದಿಗೆ ಮನೋರಂಜನ ಕಾರ್ಯಕ್ರಮ ನಡೆಯಿತು. ರೇಡಿಯೋ ಮಿರ್ಚಿ ಖ್ಯಾತಿಯ ಆರ್.ಜೆ ಪ್ರಸನ್ನ ಇವರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 

Leave a Reply