ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿಶೇಷ ಗೌರವ ಭೌತಶಾಸ್ತ್ರ ಉಪನ್ಯಾಸಕರಾಗಿ ಖಗೋಳಶಾಸ್ತ್ರಜ್ಞ ಡಾ. ಎ.ಪಿ ಭಟ್ ನೇಮಕ

ಖ್ಯಾತ ಖಗೋಳಶಾಸ್ತ್ರಜ್ಞ ಡಾ. ಎ.ಪಿ ಭಟ್ – ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿಶೇಷ ಗೌರವ ಭೌತಶಾಸ್ತ್ರ ಉಪನ್ಯಾಸಕರಾಗಿ ನೇಮಕ – ಅದಮಾರು ಶ್ರೀ

ಪಡುಬಿದ್ರಿ: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಭೌತಶಾಸ್ತ್ರ ವಿಶೇಷ ಗೌರವ ಉಪನ್ಯಾಸಕರಾಗಿ ಪೂರ್ಣಪ್ರಜ್ಞ ಪದವಿ ಕಾಲೇಜು ಉಡುಪಿಯ ನಿವೃತ್ತ ಪ್ರಾಂಶು ಪಾಲರೂ, ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಖ್ಯಾತ ಖಗೋಳಶಾಸ್ತ್ರಜ್ಞರಾದ ಡಾ.ಎ.ಪಿ.ಭಟ್ ರವರನ್ನು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಹಾಗೂ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೇಮಕ ಮಾಡಿದ್ದಾರೆ.

ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಖಗೋಳ ವೀಕ್ಷಣೆಯ ಬಗ್ಗೆ ಅರಿವು ಮೂಡಿಸಿರುವ ಇವರು ಅನೇಕ ರಾಷ್ಟ್ರ ಮಟ್ಟದ ವಿಚಾರಸಂಕಿರಣಗಳಲ್ಲಿ ವಿಶೇಷ ಪ್ರಬಂಧ ಮಂಡನೆ, ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ. ಅಲ್ಲದೆ ಯಾವುದೇ ವಿಶಿಷ್ಟ ವಿದ್ಯಮಾನಗಳಿರಲಿ ಅವುಗಳನ್ನು ಗುರುತಿಸಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಖಗೋಳ ಮಾಹಿತಿ ನೀಡುವಲ್ಲಿ ಡಾ. ಎ.ಪಿ.ಭಟ್ ರವರ ಪಾತ್ರ ಮಹತ್ವದ್ದು.

ರಾಜ್ಯದ ಪ್ರಮುಖ ಖಗೋಳ ಶಾಸ್ತ್ರಜ್ಞರಲ್ಲಿ ಡಾ. ಎ.ಪಿ ಭಟ್ ರವರು ಸುಪ್ರಸಿದ್ಧರು. ಖಗೋಳ ವಿಜ್ಞಾನದ ಕುರಿತಾದ ಇವರ ಹಲವಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟ ವಾಗಿವೆ. ಭೌತಶಾಸ್ತ್ರ ವನ್ನು ಸರಳ ರೀತಿಯಲ್ಲಿ ಭೋದಿಸುವ ಇವರ ಉಪನ್ಯಾಸ ವಿದ್ಯಾರ್ಥಿಗಳನ್ನು ಅಯಸ್ಕಾಂತೀಯ ಶಕ್ತಿಯಂತೆ ಆಕರ್ಷಿಸುತ್ತದೆ.

ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಡಾ.ಎ.ಪಿ ಭಟ್ ರವರನ್ನು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಭೌತಶಾಸ್ತ್ರ ವಿಶೇಷ ಗೌರವ ಉಪನ್ಯಾಸಕರಾಗಿ ನೇಮಕ ಮಾಡಿರುವುದಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಸಾಧನೆ ಮಾಡುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply