ಪಣಂಬೂರಿನಲ್ಲಿ ಸಚಿವರಿಂದ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ

ಮಂಗಳೂರು: ಪೊಲೀಸ್ ವಸತಿ ಯೋಜನೆ 2020ರ ಅಡಿಯಲ್ಲಿ ಮಂಗಳೂರು ನಗರ ಪೊಲೀಸ್ ಸಿಬ್ಬಂದಿಗಾಗಿ ಪಣಂಬೂರಿನಲ್ಲಿ ರೂ.21.57 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಪೊಲೀಸ್ ವಸತಿ ಗೃಹಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು.

ಇದೇ ಸಮಯದಲ್ಲಿ 10 ಮಂದಿ ಪೊಲೀಸರಿಗೆ ಸಚಿವರು ವಸತಿ ಗೃಹಗಳ ಕೀಲಿಕೈಯನ್ನು ಹಸ್ತಾಂತರ ಮಾಡಿದರು. 20 ತಿಂಗಳುಗಳಲ್ಲಿ ನಿರ್ಮಿಸಲಾದ ಈ ವಸತಿ ಸಮುಚ್ಛಯದಲ್ಲಿ 122 ವಸತಿ ಗೃಹಗಳಿದ್ದು, ಹಿರಿತನದ ಆಧಾರದಲ್ಲಿ ಅವುಗಳನ್ನು ಪೋಲಿಸರಿಗೆ ಹಂಚಲಾಗಿದೆ.

ಈ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಗೃಹ ಸಚಿವರು, ರಾಜ್ಯದಲ್ಲಿ ಪ್ರಸ್ತುತ ಶೇ.51 ಪೊಲೀಸ್ ಸಿಬ್ಬಂದಿಗೆ ವಸತಿ ಗೃಹಗಳ ಸೌಲಭ್ಯವಿದ್ದುಶೇ.75 ಸಿಬ್ಬಂದಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸುವುದು ಸರಕಾರದ ಮುಂದಿನ ಗುರಿಯಾಗಿದೆ ಎಂದರು.

`ಪೊಲೀಸ್ ಗೃಹ 2025′ ಯೋಜನೆಗೆ ಮುಖ್ಯಮಂತ್ರಿಗಳು ಈಗಾಗಲೇ ಅನುಮೋದಿಸಿದ್ದಾರೆ. ಇದರ ಅಡಿಯಲ್ಲಿ 2025ರ ಕೊನೆಯೊಳಗೆ 11,000ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಮಂಗಳೂರು ಮುಂದಿನ ಭವಿಷ್ಯದ ನಗರವಾಗಿರುವ ಹಿನ್ನೆಲೆ ಇಲ್ಲಿನ ಪೊಲೀಸ್ ವ್ಯವಸ್ಥೆಯನ್ನು ಬಲ ಪಡಿಸಿವುದು ಅಗತ್ಯ. ಹಾಗೆ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಗಾಗಿ ಹೊಸ ಯೋಜನೆ ರೂಪಿಸಲಾಗುತ್ತಿದೆ. ಬಂದರು, ವಿಮಾನ ನಿಲ್ದಾಣ, ಮೀನುಗಾರಿಕಾ ಬಂದರು, ಕೇರಳ ಗಡಿ ಮೊದಲಾದ ಅಂಶಗಳನ್ನು ಗಮನದಲ್ಲಿರಿಸಿ ಕರಾವಳಿ ಪೊಲೀಸ್ ಪಡೆಯನ್ನು ಬಲಗೊಳಿಸಲಾಗುವುದು. ಇನ್ನು ಗಸ್ತಿಗಾಗಿ ಹೈಸ್ಪೀಡ್ ಬೋಟುಗಳನ್ನೂ ಒದಗಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

Leave a Reply