ಉಡುಪಿ: ಕಡಲತಡಿಯ ಭಾರ್ಗವ ಡಾ. ಕೋಟ ಶಿವರಾಮ ಕಾರಂತ ಅವರ ಜನ್ಮದಿನದಂದು ಕೋಟತಟ್ಟು ಗ್ರಾ.ಪಂ. ಹಾಗೂ ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ನೀಡುತ್ತಿರುವ ಪ್ರತಿಷ್ಠಿತ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಮೊದಲ ಬಾರಿಗೆ ಪ್ರಶಸ್ತಿ ಪುರಸ್ಕೃತರ ಊರಿನಲ್ಲಿಯೇ ಪ್ರದಾನಿಸಲಾಯಿತು.
2020ನೇ ಸಾಲಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಮೈಸೂರಿನ ಪ್ರಮತಿ ಸ್ಕೂಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನಿಸಿ ಗೌರವಿಸಲಾಯಿತು. ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶಸ್ತಿ
ಪ್ರದಾನಿಸಿದರು.

ಕಳೆದ 15ವರ್ಷಗಳಿಂದ ಪ್ರತೀ ವರ್ಷ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕಾರಂತರ ಹುಟ್ಟೂರು ಕೋಟದಲ್ಲಿಯೇ ಗಣ್ಯರಿಗೆ ಪ್ರದಾನಿಸಲಾಗುತ್ತಿದೆ. ಆದರೆ ಈ ಬಾರಿ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಊರಿಗೆ ತೆರಳಿ ಅಲ್ಲಿ ಸರಳ ಕಾರ್ಯಕ್ರಮ ನಡೆಸಿ, ರಜತ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.