Janardhan Kodavoor/ Team KaravaliXpress
24.6 C
Udupi
Thursday, September 29, 2022
Sathyanatha Stores Brahmavara

ಕೆ ಎಲ್ ಕುಂಡಂತಾಯರಿಗೆ ಪಿ.ಆರ್.ಸಿ.ಐ.ಮಾಧ್ಯಮ ಜಾಣ ಪುರಸ್ಕಾರ

ದೇವಾಲಯಗಳ ಪೂರ್ವ ಇತಿಹಾಸ ನಾಗಾರಾಧನೆ, ಭೂತಾರಾಧನೆಗಳ ಬಗ್ಗೆ ಯಾರಾದರೂ ಸಂಭಾಷಣೆ ನಡೆಸುತ್ತಿದ್ದರೆ ಅಲ್ಲಿ ಯಾರ ಮಾತಲ್ಲಾದರೂ ಶ್ರೀಯುತ ಕುಂಡಂತಾಯರ ಹೆಸರು ಬಾರದಿರದು. ಕಾರಣ – ಅಷ್ಟೊಂದು ಈ ವಿಷಯಗಳ ಬಗ್ಗೆ ಕೃಷಿ ಮಾಡಿದ ನಮ್ಮ ಉಡುಪಿಯ ಒಬ್ಬ ಮಹಾ ತಪಸ್ವಿ ಇವರು.  ಕೆ ಎಲ್ ಕುಂಡಂತಾಯರ ಪೂರ್ಣ ಹೆಸರು ಕುಂಜೂರು ಲಕ್ಷ್ಮೀ ನಾರಾಯಣ ಕುಂಡಂತಾಯರು. ಎಲ್ಲೂರು ಗ್ರಾಮದ ಕುಂಜೂರು ಇವರ ಊರು. ಮತ್ತು ಎಲ್ಲೂರು ಸೀಮೆಯ ಪವಿತ್ರಪಾಣಿ ಮನೆತನದ ಪ್ರತಿನಿಧಿ ಇವರು.

ನಮಗೆ ನಮ್ಮ ಮಣ್ಣಿನ ಮಹತ್ವದ ಬಗ್ಗೆ ತಿಳಿಯಬೇಕಾದರೆ ಇವರ ಕೃತಿಗಳ ಮೇಲೆ ಒಮ್ಮೆ ದೃಷ್ಟಿ ಹಾಯಿಸಿದರೆ ಸಾಕು. ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚರಣೆ, ನಡೆನುಡಿ, ಆಚಾರ-ವಿಚಾರಗಳ ಬಗ್ಗೆ ಬಲ್ಲವರಿಂದ ಕಲೆಹಾಕಿ ದಾಖಲೀಕರಣಗೈದ ಇವರ ಎಲ್ಲಾ ಲೇಖನ, ಪುಸ್ತಕಗಳು ಮುಂದಿನ ತಲೆಮಾರಿಗೆ ಕೂಡಿಟ್ಟ ಮಾಡಿಟ್ಟ ಒಂದು ಬಹುದೊಡ್ಡ ಆಸ್ತಿ.

ಇವರು ಸಾಂಸ್ಕೃತಿಕ ಅಧ್ಯಯನವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಕನ್ನಡದಲ್ಲಿ “ಎಂ.ಎ. ” ಮಾಡಿದವರು. ಹಾಗಾಗಿ ಪ್ರತಿಯೊಂದು ವಿಷಯಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿ ತಾಳೆ ಹಿಡಿದು ಅವನ್ನೆಲ್ಲ ತನ್ನ ಅನುಭವಕ್ಕೆ ತೆಗೆದುಕೊಂಡು ಬರೆದಿಡುತ್ತಿದ್ದ ಇವರ ಕೃತಿ – ಕೃಷಿ-ಕಾರ್ಯ ಅಸಾಧಾರಣವಾದುದು. ಪತ್ರಕರ್ತನಾಗಿ ಪ್ರಸಿದ್ಧ ಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕನಾಗಿ ದುಡಿದು ಅನುಭವದಿಂದ ಸಂಪಾದಿಸಿದ ತನ್ನೊಳಗಿನ ಸಂಗ್ರಹ ಯೋಗ್ಯ ಅಪಾರ ಜ್ಞಾನವನ್ನು ಸಾರ್ವಜನಿಕ ವಾಗಿ ಹಂಚಿದ್ದಾರೆ.
ಶ್ರೀ ಕ್ಷೇತ್ರ ಕಟೀಲಿನ ಮುಖ ಪತ್ರಿಕೆ ಯಕ್ಷ ಪ್ರಭಾ ದ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರ ಚಿಂತನ ಮಂಥನದ ವಿಷಯಗಳು, ಆಕಾಶವಾಣಿ ದೂರವಾಣಿ ಸ್ಥಳೀಯ ವಾಹಿನಿಗಳಲ್ಲೂ ಪ್ರಸಾರಗೊಳ್ಳುತ್ತಿವೆ.
 
ಹಾಂ…ಇವರು ಒಳ್ಳೆಯ ಯಕ್ಷಗಾನ ವೇಷಧಾರಿಯೂ ಹೌದು. ಯಕ್ಷಲೋಕದ ಹಲವು ಹಿರಿಯ ರೊಡನೆ ಇವರು ದುಡಿದಿದ್ದು ಎಲ್ಲೂರಿನಲ್ಲಿ ಪ್ರಥಮ ಬಾರಿಗೆ ದೀವಟಿಗೆ ಬೆಳಕಿನ ಯಕ್ಷಗಾನ ಬಯಲಾಟವನ್ನು ಆಯೋಜಿಸಿದ್ದುದು ಹೆಮ್ಮೆಯ ವಿಷಯ.  ಜೊತೆಗೆ ಯಕ್ಷಗಾನ ಕಮ್ಮಟಗಳ, ತಾಳಮದ್ದಲೆ ಸಪ್ತಾಹಗಳ ಬಗ್ಗೆ ಹೀಗೆ ಅವಲೋಕನ, ವಿಮರ್ಶೆ, ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆಗಳು ಇವರಿಂದ ಅರಳುತ್ತ ಹರಡುತ್ತ ಜನಪ್ರಿಯತೆಯನ್ನು ಗಳಿಸಿದೆ.

ಸಂಶೋಧನಾ ಮಹೋಪಾಧ್ಯಾಯ ಪ್ರಶಸ್ತಿ, ಕುಂಜೂರ ಕುವರ , ಸೀತಾ ನದಿ ಪ್ರಶಸ್ತಿ, ವಿದ್ಯಾ ರತ್ನ, ಜಾನಪದ ಪ್ರಶಸ್ತಿ, ಜಾನಪದ ಭೂಷಣ,  ಕೃ ಷ್ಣಾನುಗ್ರಹ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ ಸನ್ಮಾನಗಳು ಇವರ ಮುಡಿಯ ಮುಂಡಾಸಿನಲ್ಲಿ ಕುಣಿಯುತ್ತಿರುವ ಹೊಳೆವ ಮಣಿಗಳು.
2019 ರಲ್ಲಿ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿದ್ದುದು ಇವರ ಸಾಹಿತ್ಯ ಕೃಷಿಗೆ ದೊರೆತ ಗೌರವ. ಧರ್ಮನೇಮ, ಅಣಿ ಅರದಲ, ಸಿರಿಸಿಂಗಾರ, ದೇವಾಲಯ ಪರಿಚಯ ಪುಸ್ತಕಗಳು, ಕೈಪಿಡಿಗಳು, ಯಕ್ಷಾಂಗನೆ ಅಭಿನಂದನಾ ಗ್ರಂಥ, ದೇವಾಲಯ ಪೂರ್ವೋತ್ತರ, ವ್ಯಕ್ತಿ ಪರಿಚಯ, ಸ್ಮರಣ ಸಂಚಿಕೆಗಳು ಹೀಗೆ ಅದೆಷ್ಟೋ ಬರವಣಿಗೆಗಳು ಇವರ ಕೈಯಲ್ಲಿ ಅರಳಿದ ಅತ್ಯದ್ಭುತ ಪದಗುಚ್ಚಗಳು. ದೈವ ಪಾಡ್ಡನ, ಡಕ್ಕೆ ಬಲಿ, ಪಂಚವಾದ್ಯ, ಕೊರಗ ಸಮಾಜದ ವೃತ್ತಿ ಬದುಕು, ನಾಗಾರಾಧನೆಯ ತಾತ್ವಿಕ ನೆಲೆಗಳ ಬಗ್ಗೆ ಬರೆದ ನೂರಾರು ಲೇಖನಗಳು ಇವರ ಜೀವನ ಸಾಧನೆಗೆ ಹಿಡಿದ ಕೈಗನ್ನಡಿ. 
 
ಇವರ ಪ್ರತಿಯೊಂದು ಲೇಖನಗಳ ಒಕ್ಕಣೆಗಳ ಶಬ್ಧಗಳ ಸಾಲುಗಳು ನವಿಲುಗರಿಯಲ್ಲಿ ಮೊಗ ತೀಡಿ ದಂತೆ ಓದುಗರ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ. ಅಂತಹ ಅಕ್ಷರಗಳ ಒಡತಿ ಶಾರದೆಯನ್ನು ತನ್ನೊಡಲೊಳಗೆ ಹುದುಗಿಸಿಟ್ಟುಕೊಂಡಿರುವ ಶಬ್ಧ ಮಾಂತ್ರಿಕ ನಮ್ಮ ನಾಡಿನ ಸಾಹಿತ್ಯ ಸಂಸ್ಕೃತಿಯ ಕುವರ ಶ್ರೀ ಕೆ. ಎಲ್. ಕುಂಡಂತಾಯರಿಗೆ PRC I ಉಡುಪಿ- ಮಣಿಪಾಲ ಘಟಕ ವಿಶ್ವ ಸಂವಹನಕಾರರ ದಿನಾಚರಣೆಯ ಅಂಗವಾಗಿ  ಮಾಧ್ಯಮ ಜಾಣ ಪುರಸ್ಕಾರ ವನ್ನು ನೀಡಿ ಗೌರವಿಸುತ್ತಿದೆ. ~ ರಾಜೇಶ್ ಭಟ್ ಪಣಿಯಾಡಿ .
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!