ಅಭಿನಯ ಚತುರ ಹಾಸ್ಯ ನಾಟಕಕಾರ ಪೆರಡೂರು ಪ್ರಭಾಕರ ಕಲ್ಯಾಣಿ 

“ಪುನರಪಿ ಜನನಂ ಪುನರಪಿ ಮರಣಂ” ಎನ್ನುವ ವೇದ ವಾಕ್ಯದಂತೆ ಜನನವು ಮರಣವು ಯಾವುದು ಮನುಜನ ನಿರ್ಣಯವಾಗುದಿಲ್ಲ, ಅದು ವಿಧಿ ನಿರ್ಣಯವಾಗುತ್ತದೆ. ತನ್ನ ಪ್ರಯತ್ನದಿಂದ  ತಾನೇ ಎತ್ತರಕ್ಕೆ ಏರುತ್ತಾರೆ. ಕಲಾ ಪ್ರಕಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಂತ ಹಂತವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ. ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತಿದೆ. ಆದರೆ ಪ್ರತಿಭೆಯನ್ನು ತೋರ್ಪಡಿಸುವುದು ಕಲೆಯಾಗಿದೆ. ಕಲಾ ಪ್ರಕಾರದಲ್ಲಿ ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ, ಮುಂತಾದ ಜಾನಪದ ಕಲೆಯು ಎಲ್ಲರಲ್ಲೂ ಇರುತ್ತದೆ. 
ಆದರೆ ಅದಕ್ಕೆ ಸೂಕ್ತವಾದ ವೇದಿಕೆಯನ್ನು ನಾವು ಹುಡುಕಿಕೊಳ್ಳಬೇಕು. ಇದರಿಂದ ತಮ್ಮ ನಿಲುವನ್ನು ಹಾಗು ಗುರಿಯನ್ನು ನಾವು ಕಾಣುತ್ತೇವೆ. ತಮ್ಮ ತಂದೆಯ ಹಾದಿಯನ್ನು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರ ಮಾತನ್ನು ಪಾಲಿಸುವ ಭಾಗ್ಯ ಹಾಗು  ಸಾಧ್ಯವಾದನ್ನು ಮಾಡಿ ತೋರಿಸಿದವರು ನಮ್ಮ ಪೆರ್ಡೂರು ಪ್ರಭಾಕರ ಕಲ್ಯಾಣಿಯವರು.
ಬಾಲ್ಯ ಮತ್ತು ವಿದ್ಯಾಭ್ಯಾಸ​: ಮೂಲತಃ ತಮಿಳು ನಾಡಿನ ಮದುರೈ ಮೀನಾಕ್ಷಿ ದೇವಸ್ಥಾನದ ಮುಕ್ತೇಶ್ವರರಾಗಿ ಸೇವೆ ಸಲ್ಲಿಸಿದ ಈ  ಕಲ್ಯಾಣಿ ಮನೆತನದ ಬ್ರಾಹ್ಮಣ ಕುಟುಂಬದವರು ಕರ್ನಾಟಕಕ್ಕೆ ವಲಸೆ ಬಂದು ಈಗಿನ ಪೊಡವಿ ಗೊಡೆಯ ನಾಡದ ಉಡುಪಿ ಜಿಲ್ಲೆಯ ಹಾಗು ತಾಲೂಕಿನ ಪೆರ್ಡೂರಿನ ಅನಂತ ಪದ್ಮನಾಭ ದೇಗುಲದ ಪುಣ್ಯ ಭೂಮಿಯಲ್ಲಿ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ದಿವಂಗತ ಪಿ. ರಾಮಕೃಷ್ಣ ಕಲ್ಯಾಣಿ ಮತ್ತು ವರದಾ ಕಲ್ಯಾಣಿಯವರ ಗರ್ಭಸಂಜಾತರಾಗಿ  21-02-1960ರಲ್ಲಿ ಜನಿಸಿದರು. 
ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಪೆರ್ಡೂರು ಶಾಲೆಯಲ್ಲಿ ಹಾಗು ಪದವಿ ಪೂರ್ವ ಶಿಕ್ಷಣವನ್ನು ಹಿರಿಯಡ್ಕ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. ನಂತರ 1980ರಲ್ಲಿ ವಿಜಯ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ತನ್ನ ಅತಿ ಚಿಕ್ಕ 11ನೇ ವಯಸ್ಸಿನಲ್ಲಿ “ಪುನರ್ಜನ್ಮ” ನಾಟಕದ ಲಕ್ಷ್ಮಯ್ಯನ ಪಾತ್ರದಲ್ಲಿ 1971ರಲ್ಲಿ ಪ್ರಥಮ ರಂಗಪ್ರವೇಶಿಸಿದರು. ಪ್ರಥಮ ಪ್ರದರ್ಶನದಲ್ಲೇ ಪ್ರಥಮ ಸ್ಥಾನ ಪಡೆದರು.
“ಪುನರ್ಜನ್ಮ” ನಾಟಕದ ಸಾರಾಂಶ ಹೀಗಿದೆ. ಜೀವನದಲ್ಲಿ ಒಮ್ಮೆ ಒಬ್ಬ ತನ್ನ ಜೀವನದಲ್ಲಿ ಬೇಡವಾದ ಅನಗತ್ಯ ಕೆಲಸಗಳನ್ನು ಮಾಡುತ್ತಾ ಪಾಪದ ಕೊಡ ತುಂಬುತ್ತಾ ಅವನ ಜೀವನದ ಕೊನೆಯ ಕ್ಷಣ ಮುಗಿಯುತ್ತದೆ. ಎಂದು ಶೈಮಿನಿ ಅಧಿಕಾರಿ ಯಮಧರ್ಮರಾಯ ತನ್ನ ಆಪ್ತ ಚಿತ್ರಗುಪ್ತನಿಗೆ ಹೇಳಿ ಪಿ. ಎಂ ಲಕ್ಷ್ಮಯ್ಯನನ್ನು ಕೂಡಲೇ ನರಕಕ್ಕೆ ಎಳೆದು ಕೊಂಡು ಬನ್ನಿ ಎಂದು ಆಜ್ಞೆಯನ್ನು ಯಮ ಹೊರಡಿಸುತ್ತಾನೆ. ನಂತರ ಲಕ್ಷ್ಮಯ್ಯ ಎಷ್ಟು ಯಮನಲ್ಲಿ ಬೇಡಿದರು ಕೇಳದ ಅವನ ಪಾಪದ ಕೂಪಕ್ಕೆ ತಳ್ಳುತ್ತಾನೆ.
ಹಾಗು ಘನಘೋರ ನರಕ ಪ್ರಾಪ್ತಿಯಾಗಿ ಪಿ.ಎಂ ಲಕ್ಷ್ಮಯ್ಯನಿಗೆ ಪ್ರಾಪ್ತಿಯಾಗುತ್ತದೆ. ಶೈಮಿನಿಯಲ್ಲಿ ಎಲ್ಲ ತರದ ಶಿಕ್ಷೆಯನ್ನು ಅನುಭವಿಸಿ ಕೊನೆಗೆ ನಾನು ಪಿ. ಎಂ. ಲಕ್ಷ್ಮಯ್ಯ ಅಲ್ಲ ನನ್ನ ಹೆಸರು ಆರ್. ಎಂ.  ಲಕ್ಷ್ಮಯ್ಯ  ಎಂದು ಪೇಳಿದಾಗ ಈತನ ಪಾಪದ ಕೊಡ ತುಂಬಲಿಲ್ಲ. ಇವನನ್ನು ಕೂಡಲೇ ಮೃತ್ಯುಲೋಕಕ್ಕೆ ಕಳುಹಿಸಿ “ಪುನರ್ಜನ್ಮ” ನೀಡಿ ಎಂದು ಶೈಮಿನಿ ಅಧಿಕಾರಿ ಯಮಧರ್ಮರಾಯ ವರವನ್ನು ಕೊಡುತ್ತಾನೆ.
 

 ಹೀಗೆ ತಮ್ಮ ತಂದೆಯವರ ಮಾತಿನಂತೆ  “ನೀವು ಯಾವುದೇ ಕೆಲಸ ಮಾಡಿದರು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕು ನಾಟಕ ಎಂದರೆ ಕಲ್ಯಾಣಿ ಕುಂಟುಂಬ, ಕಲ್ಯಾಣಿ ಕುಟುಂಬವೆಂದರೇ  ನಾಟಕ.” ಎಂದು ತನ್ನ ತಂದೆ ಮತ್ತು ದೊಡ್ಡಪ್ಪ ಎ. ಪಿ. ಕಲ್ಯಾಣಿಯವರ ಪ್ರೇರಣೆಯಿಂದ ರಂಗಭೂಮಿಯ ಪ್ರಭುದ್ದ  ಕಲಾವಿದನಾಗಿ ಹೊರ ಹೊಮ್ಮಿದ್ದರು ನಮ್ಮ  ಶ್ರೀಯುತ ಪೆರ್ಡೂರು ಪ್ರಭಾಕರ ಕಲ್ಯಾಣಿಯವರು.

ಕಲಾವಿದನಾಗಿ ನಾಡಿನಾದ್ಯಂತ ಸಂಚರಿಸಿ ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಜಿಲ್ಲಾ ಮಟ್ಟದ, ಹಾಗು ರಾಜ್ಯ ಮಟ್ಟದ ನಾಟಕ ಸ್ವರ್ಧೆಯಲ್ಲಿ ಅಭಿನಯಿಸಿ, ನಿರ್ದೇಶಿಸಿ, ಹಲವಾರು ಪ್ರಶಸ್ತಿಯನ್ನು ಇವರ ಮುಡಿಗೆ ಏರಿದೆ. ಹಾಗೆಯೇ ಸಮಾನ ವಯಸ್ಕರ ಗೆಳೆಯರನ್ನು ಒಡಗೂಡಿಕೊಂಡು ಸುಮಾರು 32 ವರುಷದ ಹಿಂದೆ “ಕೂಡ್ದಿ ಕಲಾವಿದರ್” ಹವ್ಯಾಸಿ ಕಲಾಸಂಘ ಸ್ಥಾಪಿಸಿ ಅಧ್ಯಕ್ಷರಾಗಿದ್ದರು.

ಅಲ್ಲದೇ ರಾಜ್ಯ ನಾಟಕ ಅಕಾಡಮಿಯ ಜಿಲ್ಲಾ ಸಂಚಾಲನಾ ಸಮಿತಿಯ ಸದಸ್ಯರಾಗಿ, ಮಂಗಳೂರಿನ ತುಳು ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾಗಿ ಅನುಭವ ಹೊಂದಿದ್ದಾರೆ. 400ಕ್ಕೂ ಹೆಚ್ಚು ಕನ್ನಡ, ತುಳು, ನಾಟಕ ಗಳಲ್ಲಿ,125 ನಾಟಕದಲ್ಲಿ ಹಾಸ್ಯ ಕಲಾವಿದರಾಗಿ ಅಭಿನಯಿಸಿದ ಕೀರ್ತಿ ಕಲ್ಯಾಣಿಯವರಿಗಿದೆ .
 
 ಇವರ ನಾಟಕಗಳು  ಪುನರ್ಜನ್ಮ, ಎಚ್ಚಮ್ಮ ನಾಯಕ, ಗುಡುಗು ಹೇಳಿದ್ದೇನು?, ಕುರುಡು ಕಾಂಚಾಣ, ಗೋಣಶಂಕರ, ಬಿಚ್ಚುಗತ್ತಿ, ಗಾರ್ಧಬಯೋಗ, ಬೇಲಿ ಮತ್ತು ಹೊಲ, ಕಲ್ಯಾಣಿ ನನ್ನ ಹೆಂಡತಿ, ಬ್ರಹ್ಮ, ಆಹುತಿ, ಭಾವಬಾಮೈದನ,ಸಮಯಕ್ಕೆ ಒಂದು ಸುಳ್ಳು, ಮೃತ್ಯು ಸಿಂಹಾಸನ, ಕಲಿ ಕಂಠೀರವ ಮುಂತಾದ ಕನ್ನಡ ನಾಟಕ, ಎರುಮೈಂದೆ, ಪೊದು ನಿಶ್ಚಯ, ಕಾಲ ಕೂಡ್ದು  ಬನ್ನಗ, ಕೋಟಿ ಚೆನ್ನಯ, ಸೇನೆರ್ ಸೇರಾಯೆರ್, ಮಂಡೆಬೆಚ್ಚ ಆಪುಂಡು, ದಿಕ್ಕ್ ತತ್ತಿಬೊಕ್ಕ,   ಮುಂತಾದ ತುಳು ನಾಟಕಗಳು ಇವರಿಗೆ ಕೀರ್ತಿತಂದ ಪಾತ್ರಗಳಾಗಿವೆ. 
 
ಆಕಾಶವಾಣಿ ಕಲಾವಿದರಾಗಿ, ತುಷಾರ ಮಾಸ ಪತ್ರಿಕೆಯ ಕಥಾ ಸಂಚಿಕೆಯಲ್ಲಿ ರೂಪದರ್ಶಿ, ದೂರದರ್ಶನ ಚಂದನದಲ್ಲಿ ಕೋಣ ಕೋದಂಡ ನಾಟಕ ನಿರ್ದೇಶನ, ಹಳ್ಳಿಮನೆ ಚಿತ್ತ ,  ನೂರೊಂದು ಬಾಗಿಲು,  ಮಹಾನದಿ, ಅಮ್ಮನ ಕನಸು,  ಕನ್ನಡ  ಟೆಲಿಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ದೇವಪೂಂಜ ಪ್ರತಾಪ, ಕಂಚಿಲ್ದ ಬಾಲೆ, ಪೆಟ್ ಕಮ್ಮಿ, ತುಳು ಟೆಲಿಚಿತ್ರದಲ್ಲಿ ಅಭಿನಯಿಸಿದ್ದಾರೆ.
ಯಕ್ಷಗಾನದಲ್ಲಿ ಶ್ರೀಯುತರು ಪೆರ್ಡೂರು ಕ್ಷೇತ್ರ ಮಹಾತ್ಮೆ, ಲವಕುಶ ಕಾಳಗ, ಸಹದೇವ ದಿಗ್ವಿಜಯ, ಕವಿರತ್ನ ಕಾಳಿದಾಸ, ಮುಂತಾದ ಯಕ್ಷಕಲೆಯಲ್ಲೂ ಸಹ ತನ್ನ ನಟನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಶ್ರೀಯುತರಿಗೆ ಗಡಿನಾಡ ಉತ್ಸವದಲ್ಲಿ ಸುವರ್ಣ ಕರ್ನಾಟಕ ಕನ್ನಡಿಗ ಪ್ರಶಸ್ತಿ, ಜಿಲ್ಲಾ ಹಾಗು ರಾಜ್ಯ ನಾಟಕ ಸ್ವರ್ಧೆಯಲ್ಲಿ ಉತ್ತಮ ನಟ ಪ್ರಶಸ್ತಿ, ಉತ್ತಮ ನಿರ್ದೇಶಕ ಪ್ರಶಸ್ತಿ, ಶಿರೂರು ಮಠದ ಸ್ವಾಮಿಗಳಿಂದ ಗೌರವ ಸನ್ಮಾನ, ಶೃಂಗೇರಿ ಮಲೆನಾಡ್ ಉತ್ಸವದಲ್ಲಿ ಸ್ವಾಮಿಗಳಿಂದ ಗೌರವಾರ್ಪಣೆ.
ದಾರವಾಡ ತನ್ನ ಅಭಿನಯ ಭಾರತಿ (ರೀ) ರಾಷ್ಟ್ರಿಯ ನಾಟಕೋತ್ಸವದಲ್ಲಿ ನಿರ್ದೇಶಕ ಸನ್ಮಾನ, ಕಾರ್ಕಳದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ತಶೀಲ್ದಾರರಿಂದ ಸನ್ಮಾನ, ಪೆರ್ಡೂರು ಜೇಸೀಸ್ ವತಿಯಿಂದ ಸಾಧನ ಶ್ರೀ ಪ್ರಶಸ್ತಿ, ಸ್ವೀಕಾರ್ ಸಾಂಸ್ಕೃತಿಕ ಕೂಟ ಕಂಕನಾಡಿ ಮಂಗಳೂರಿನ  ವತಿಯಿಂದ ಸ್ವೀಕಾರ್ ಗೌರವಾರ್ಪಣೆ, ಗದಗದಲ್ಲಿ ನಡೆದ ಗಾನ ಗಂಧರ್ವ ಕಲಾ ಟ್ರಸ್ಟ್  ವತಿಯಿಂದ  ಶ್ರೀಗುರು ಪುಟ್ಟ ರಾಜ್ಯ ಪ್ರತಿಭಾ ಪುರಸ್ಕಾರ ನಾಟ್ಯಶ್ರೀ-  2008 ಗೌರವ ಪ್ರಶಸ್ತಿ​. 
 

ಕಿನ್ನಿಗೋಳಿಯಲ್ಲಿ ನಡೆದ ರಾಜ್ಯ ಮಟ್ಟದ ಬಯ್ಯ ಮಲ್ಲಿಗೆ ತುಳು ನಾಟಕ ಸ್ವರ್ಧೆಯಲ್ಲಿ ಸರಣಿಯ ಉತ್ತಮ ನಟ ಪ್ರಶಸ್ತಿ, ತಂಡದ ಸಂಘಟನೆಗಾಗಿ ದಂಡಕೇರಿಯವರಿಂದ ಒಂದು ಪವನ್ ಬಂಗಾರದ ಪದಕವನ್ನು ಕಲ್ಯಾಣಿಯವರು ಪಡೆದಿರುತ್ತಾರೆ. ವಿಜಯ ಬ್ಯಾಂಕಿನ ಕನ್ನಡ ಸಂಘದ ವತಿಯಿಂದ  ವಿಜಯಶ್ರೀ ಪ್ರಶಸ್ತಿ-2012, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2008, ಶ್ರವಣಬೆಳಗೊಳದಲ್ಲಿ ನಡೆದ  2015ನೇ ಸಾಲಿನ 81ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ   2018ನೇ ಸಾಲಿನ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿಯು ಸಹ ಲಭಿಸಿದೆ.

ಪ್ರಸ್ತುತ ಶ್ರೀಯುತರ ಕಲ್ಯಾಣಿಯವರನ್ನು ನಾಟಕ ಪುಸ್ತಕಗಳ ಸರದಾರ ಎಂದು ಕರೆಯುವರು. ಇವರಲ್ಲಿ ಸುಮಾರು 207 ಮುದ್ರಿತ ತುಳು ನಾಟಕಗಳ ಪುಸ್ತಕ ಹಾಗು 15ಕ್ಕೂ ಹೆಚ್ಚು ಕೈಬರಹ ತುಳು ನಾಟಕ ಪುಸ್ತಕ 100ಕ್ಕೂ ಹೆಚ್ಚು ಮುದ್ರಿತ ಕನ್ನಡ ನಾಟಕ ಪ್ರತಿಗಳು ಇವರ ಹತ್ತಿರ ಪುಸ್ತಕಗಳ ಭಂಡಾರ ಇದೆ. ಹೀಗೆ ತನ್ನ ಮನೆತನದ ಹೆಸರು “ಕಲ್ಯಾಣಿ” ಈಗ ಪ್ರಿಂಟಿಂಗ್ ಪ್ರೆಸ್ ಆಗಿ ಅತಿ ಕಡಿಮೆ ವೆಚ್ಚದಲ್ಲಿ ಸುಮಾರು ಲಗ್ನ ಪತ್ರಿಕೆಯನ್ನು ಹಾಗು ಯಕ್ಷಗಾನದ ಪತ್ರಿಕೆಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಈ ಪ್ರಿಂಟಿಂಗ್ ಪ್ರೆಸ್ ಯನ್ನು ಇವರ ಸಂಬಂಧಿಕರಾದ ಶ್ರೀಯುತ ಸಂತೋಷ ಕಲ್ಯಾಣಿಯವರು ನಡೆಸುತ್ತಿದ್ದಾರೆ.  

 
ಹಾಗೆಯೇ ಯಾರಲ್ಲಿ ಮುದ್ರಿತ ತುಳು, ಕನ್ನಡ ಹಾಗು ಕೈ ಬರಹಗಳ ನಾಟಕ ಪ್ರತಿಗಳಿದ್ದರೆ ತಮಗೆ ತಿಳಿಸಿ ಎಂದು ಶ್ರೀಯುತರು (ತಮ್ಮ ದೂರವಾಣಿ ಸಂಖ್ಯೆ  9945491572 ಗೆ ಕರೆ ಮಾಡಿ ತಿಳಿಸಿ  ) ಎಂದು  ಮನವಿ ಮಾಡಿಕೊಂಡಿದ್ದಾರೆ.  ಪ್ರಸ್ತುತ ತಮ್ಮ ಇಳಿ ವಯಸ್ಸಿನಲ್ಲಿ ಪೆರ್ಡೂರಿನಲ್ಲಿ ಮಡದಿಯಾದ  ಕೆ. ಏನ್. ಶೈಲಜಾರ ಪಾಣಿಗ್ರಹಣ ಮಾಡಿ ಕುಲದೀಪಕನಾದ ಪಿ. ಸುಹಾಸ್ ರೊಡಗೂಡಿ ಲವಲವಿಕೆಯಿಂದ ನಿವೃತ್ತ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಮುಂದಿನ ಜೀವನ ಸುಖಮಯವಾಗಿ ಇರಲಿ ಎಂದು ನನ್ನ ಆರಾಧ್ಯ ದೇವರಾದ ಚಾರ ಮಹಿಷಮರ್ದಿನಿ ಅಮ್ಮನವರ ಮತ್ತು ಪೊಡವಿಗೊಡೆಯ ಅನಂತಪದ್ಮನಾಭ  ಹಾಗು ಕಲಾ ಸರಸ್ವತಿ ಅನುಗ್ರಹ ಇರಲಿ ಎಂದು ಹಾರೈಸೋಣ.
​​
~ ​ಚಾರ ಪ್ರದೀಪ ಹೆಬ್ಬಾರ್
 
 
 
 
 
 
 
 
 

Leave a Reply