ಯಾವುದು ಅವಶ್ಯಕತೆ ಇದೆಯೋ ಅದನ್ನು ನೀಡುವುದೇ ದೇವರಿಗೆ ನೀಡುವ ನಿಜವಾದ ಕಪ್ಪ~ವಿಶ್ವಪ್ರಿಯ ತೀರ್ಥ ಶ್ರೀಪಾದರು 

ಉಡುಪಿ: ಒಬ್ಬ ಅಧ್ಯಾಪಕನಾಗಿ ರಕ್ಷಕನಾಗಿ, ಕೃಷಿಕ, ಕಲಾವಿದನಾಗಿ ಸಮಾಜದಲ್ಲಿ ಯಾವ ರೀತಿ ಇರಬೇಕು ಎನ್ನುವುದಕ್ಕೆ ಮುರಲಿ ಕಡೆಕಾರ್ ಸಾಕ್ಷಿಯಾಗಿದ್ದಾರೆ ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ​ಶ್ರೀಪಾದರು ನುಡಿದರು. ಅವರು ಶನಿವಾರ ನಿಟ್ಟೂರು ಪ್ರೌಢಶಾಲೆಯಲ್ಲಿ ಸುಧೀರ್ಘ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಮುರಲಿ ಕಡೆಕಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.  
  

ಮನುಷ್ಯನಾಗಿ ಹುಟ್ಟಿದ ಮೇಲೆ ​ನಮ್ಮೊಡೆಯ  ಭಗವಂತನಿಗೆ ಕಪ್ಪ ಕೊಡಬೇಕಾದುದು ನಮ್ಮ ಕರ್ತವ್ಯ.​ ಸಮಾಜದಲ್ಲಿ ಯಾರಿಗೆ, ಯಾವಾಗ, ಯಾವ ಸಮಯದಲ್ಲಿ ಎಷ್ಟು , ಯಾವುದು ಅವಶ್ಯಕತೆ ಇದೆಯೋ ಅದನ್ನು ನೀಡುವುದೇ ದೇವರಿಗೆ ನೀಡುವ ನಿಜವಾದ ಕಪ್ಪ. ಈ ನಿಟ್ಟಿನಲ್ಲಿ ಮುರಲಿ ಕಡೆಕಾ​ರ​​ರಂತೆ  ಸಮಾಜದಲ್ಲಿ ನಾವು ಇನ್ನೊಬರಿಗೆ ಭಾರವಾಗಿ ಬದುಕದೇ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿಟ್ಟೂರು ಎಜುಕೇಶನಲ್ ಸೊಸೈಟಿಯಅಧ್ಯಕ್ಷ,  ಶಾಸಕ ಕೆ. ರಘುಪತಿ ಭಟ್ ಅವರು, ಮುರಲಿ ಕಡೆಕಾರು ಅವರು ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಿ, ಜನಬಲದ ​ಶ್ರೀಮಂತಿಕೆಯನ್ನು ಪಡೆದು ಜನಮನ್ನಣೆ ಗಳಿಸಿದ್ದಾರೆ. ನಾವು ಹಾಕಿಕೊಂಡಿರುವ ಯಕ್ಷ ಶಿಕ್ಷಣದಿಂದ ಮಕ್ಕಳ ಪ್ರಬುದ್ಧತೆ ವೃದ್ಧಿಯಾಗಿದೆ. ನಮ್ಮ ನಿಟ್ಟೂರು ಸಂಸ್ಥೆಯ ಏಳಿಗೆಗೆ ಕಡೆಕಾರ್ ಸಲಹೆ, ಮಾರ್ಗದರ್ಶನ ನಿವೃತ್ತಿಯ ಬಳಿಕವೂ ಮುಂದುವರಿಯಲಿದೆ ಎಂದರು.
ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಹಿರಿಯ ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕಕ್ಕುಂಜೆ ನಾಗಾನಂದ ಮಾತನಾಡಿದರು.
ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಅವರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ನಿಟ್ಟೂರು ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ, ಕಾರ್ಯದರ್ಶಿ ಪ್ರದೀಪ್ ಜೋಗಿ ಉಪಸ್ಥಿತರಿದ್ದರು.​ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಗಂಗಾಧರ್ ರಾವ್ ಸ್ವಾಗತಿಸಿದರು. ಎಚ್.ಎನ್. ಶೃಂಗೇಶ್ವರ್ ಕಾರ‌್ಯಕ್ರಮ ನಿರೂಪಿಸಿದರು. ​ ​ಎಸ್.ವಿ. ಭಟ್ ವಂದಿಸಿದರು.​
 
 
 
 
 
 
 
 
 
 
 

Leave a Reply