ಹಟ್ಟಿಯಂಗಡಿಯಲ್ಲಿ ದಿ| ಹೆಚ್. ರಾಮಚಂದ್ರ ಭಟ್ಟರ ಸ್ಮಾರಕಕ್ಕೆ ಶಿಲಾನ್ಯಾಸ

ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಹಟ್ಟಿಯಂಗಡಿಯ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಅಭಿವೃದ್ಧಿಯ ರೂವಾರಿ ದಿ| ಹೆಚ್. ರಾಮಚಂದ್ರ ಭಟ್ಟರ ಸ್ಮಾರಕಕ್ಕೆ ಎಪ್ರಿಲ್ ೧೭ರಂದು ಹಟ್ಟಿಯಂಗಡಿಯಲ್ಲಿ ರಮಾದೇವಿ ರಾಮಚಂದ್ರ ಭಟ್ಟರು ಶಿಲಾನ್ಯಾಸ ನೆರವೇರಿಸಿದರು.
ಸಾಗರದ ಮಾಜಿ ಶಾಸಕರಾದ ಎಲ್. ಟಿ. ತಿಮ್ಮಪ್ಪ ಹೆಗ್ಡೆ ಅವರು ಮಾತನಾಡಿ, ಶ್ರೀ ಸಿದ್ಧಿವಿನಾಯಕನನ್ನು ನಂಬಿ ಬಂದ ಭಕ್ತರ ಉದ್ಧಾರಕ್ಕಾಗಿ ಪ್ರಾರ್ಥಿಸಿ, ಅಪರಿಮಿತ ಪರಿಶ್ರಮವನ್ನು ಧಾರೆಯೆರೆದು ಹಟ್ಟಿಯಂಗಡಿಯ ಕ್ಷೇತ್ರದ ಕೀರ್ತಿಯನ್ನು ದೇಶದಾದ್ಯಂತ ಪಸರಿಸಿದ ಮಹಾನ್ ಚೇತನ ದಿ| ಹೆಚ್. ರಾಮಚಂದ್ರ ಭಟ್ಟರು ಸಾರ್ವಕಾಲಿಕ ಆದರ್ಶಪ್ರಾಯರು. 
ಅವರ ಸ್ಮಾರಕ  ನಿರ್ಮಾಣಗೊಳ್ಳುತ್ತಿರುವುದು ಪ್ರಶಂಸನೀಯ ಎಂದರು. ಉದ್ಯಮಿ ಗಂಗೊಳ್ಳಿ ಗಣೇಶ್ ಕಾಮತ್ ಅವರು ಮಾತನಾಡಿ, ಸರ್ವರ ಹಿತವನ್ನು ಬಯಸಿ ಹಟ್ಟಿಯಂಗಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಜನಮನದಲ್ಲಿ ನೆಲೆಸಿರುವ ದಿ| ಹೆಚ್. ರಾಮಚಂದ್ರ ಭಟ್ಟರ ಸ್ಮಾರಕ ಎಲ್ಲರಿಗೂ ಪ್ರೇರಣಾದಾಯಕವಾಗಲಿ ಎಂದು ಆಶಿಸಿದರು.
ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಹೆಚ್. ಬಾಲಚಂದ್ರ ಭಟ್ ಸ್ವಾಗತಿಸಿ, ದಿ| ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಸ್ಮಾರಕದ ರೂಪುರೇಷೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಎಂ.ಎಸ್. ಮಹಾಬಲೇಶ್ವರ ಭಟ್, ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ್ ಕುಮಾರ್.
ಕುಂದಾಪುರ ಭಂಡಾರ್‌ಕರ‍್ಸ್ ಕಾಲೇಜಿನ ಪ್ರಾಂಶುಪಾಲರಾದ  ನಾರಾಯಣ ಶೆಟ್ಟಿ, ಉದ್ಯಮಿಗಳಾದ ದೇವದಾಸ್ ಕಾಮತ್, ಕಟ್ಟೆ ಗೋಪಾಲಕೃಷ್ಣ ರಾವ್, ಸನತ್ ರೈ, ಹಟ್ಟಿಯಂಗಡಿ ಗ್ರಾ.ಪಂ. ಅಧ್ಯಕ್ಷರಾದ ಅಮೃತಾ ಭಂಡಾರಿ, ದೇವಳದ ಪ್ರಮುಖರಾದ ನೇತ್ರಾವತಿ ಭಟ್, ವೀಣಾ ರಶ್ಮೀ  ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply