ರಾಷ್ಟ್ರೀಯ ನವಜಾತ ಶಿಶುತಜ್ಞರ ವೇದಿಕೆ ಅಧ್ಯಕ್ಷರಾಗಿ ಡಾ. ರಂಜನ್ ಕುಮಾರ ಪೇಜಾವರ

ಭಾರತದ ಪ್ರತಿಷ್ಠಿತ ನವಜಾತ ಶಿಶುತಜ್ಞರ ವೇದಿಕೆ –  (ನ್ಯಾಷನಲ್ ನ್ಯೂನಟಾಲೋಜಿ ಫೋರಮ್) ನ  ಈ ವರ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಂಗಳೂರು ಮೂಲದ ಡಾ. ರಂಜನ್ ಕುಮಾರ ಪೇಜಾವರ  ಚುನಾಯಿತರಾಗಿರುತ್ತಾರೆ. ಇವರು ಕಳೆದ 35 ವರ್ಷಗಳಿಂದ ಶಿಶುತಜ್ಞ (ವಿಶೇಷತವಾಗಿ ನವಜಾತ ಶಿಶುತಜ್ಞ) ರಾಗಿ ಸೇವೆಸಲ್ಲಿಸುತ್ತಿದ್ದಾರೆ. ವಿಶ್ವದಾದ್ಯಂತ 8000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ಈ ವೇದಿಕೆಯ 40 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಓರ್ವ  ದಕ್ಷಿಣ ಭಾರತದ ಪ್ರತಿನಿಧಿ ಈ ಸ್ಥಾನ ಅಲಂಕರಿಸುತ್ತಿದ್ದಾರೆ.

ಮಂಗಳೂರಿನ ಪೇಜಾವರ ಕುಟುಂಬದ ದಿವಂಗತ ಮೀರಾ ಹಾಗು ವಸಂತ ರಾವ್ ಅವರ ಪುತ್ರ ಡಾ. ರಂಜನ್​ಪ್ರಾಥಮಿಕ ಅಭ್ಯಾಸವನ್ನು ಸಂತ ಅಲೋಶಿಯಸ್ , ವೈದ್ಯಕೀಯ ಪದವಿಯನ್ನು ಬೆಂಗಳೂರಿನ ಸಂತ ಜೋನ್ಸ್ ಮೆಡಿಕಲ್ ಕಾಲೇಜು , ಪದವಿಪೂರ್ವ ತಜ್ಞತೆಯನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಪಡೆದಿದ್ದರು. ಮುಂದೆ ಲಂಡನ್ ನಲ್ಲಿ ಪ್ರತಿಷ್ಠಿತ ಎಫ್. ಆರ್. ಸಿ ಯಸ್. ನಲ್ಲಿ ನವಜಾತ ಶಿಶುತಜ್ಞತೆಯ ವಿಶೇಷ ಪದವಿಯನ್ನು ಗಳಿಸಿದ್ದರು.

ಜಿಂಬಾಬ್ವೆ , ಲಂಡನ್, ಮತ್ತು ಸೌದಿಯ ರಿಯಾದ್ ನಲ್ಲಿ ಸೇವೆ ಸಲ್ಲಿಸಿದ ನಂತರ ಕಳೆದ 30 ವರುಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ನವಜಾತ ಶಿಶುಪಾಲನೆಗೆ ಸ್ವತಂತ್ರ ಘಟಕವನ್ನು ಸ್ಥಾಪಿಸಿದವರಲ್ಲಿ ಪ್ರಥಮರು. ಪ್ರಸ್ತುತ ಪೀಪಲ್ ಟ್ರೀ ಮೀನಾಕ್ಷಿ ಆಸ್ಪತ್ರೆಯ ನವಜಾತ ಶಿಶುಪಾಲನೆ ಘಟಕದ ಮುಖ್ಯಸ್ಥರಾಗಿದ್ದಾರೆ.

ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿರಂತರ ಸಂಶೋಧನಾ ನಿರತರಾಗಿರುವುದರ ಜೊತೆ ದೇಶ – ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಇದನ್ನು ಪ್ರತಿಪಾದಿಸುತ್ತಿದ್ದಾರೆ. ಭಾರತೀಯ ಶಿಶುತಜ್ಞ ಸಂಘದ ನವಜಾತ ಶಿಶುತಜ್ಞರ ಘಟಕದ ಅಧ್ಯಕ್ಷರಾಗಿ, ‘ಸಾಥ್-ಸಾಥ್” ಅರಿವು ಪ್ರಚಾರದ ರಾಷ್ಟ್ರೀಯ ಸಂಯೋಜಕನಾಗಿ, ‘ಪೆರಿನಟಾಲಜಿ’ ತ್ರೈಮಾಸಿಕ ಪತ್ರಕೆಯ ಮುಖ್ಯ ಸಂಪಾದಕನಾಗಿ, ಫೆಡರೇಷನ್ ಆಫ್ ಏಷ್ಯಾ ಓಷಿಯಾನಿಯಾ ಪೆರಿನೆಟಲ್ ಸೊಸೈಟೀಸ್ಅಂನ್ ಅಧ್ಯಕ್ಷರಾಗಿ, (ಪ್ರಸ್ತುತ ಸಲಹೆಗಾರನಾಗಿ) ಪೆರಿನೆಟಲ್ ಮೆಡಿಸಿನ್ ನ ಜಾಗತಿಕ ಒಕ್ಕೂಟದ ಶಿಕ್ಷಣ ಸಮಿತಿಯ ಸದಸ್ಯರಾಗಿ ಬೆಂಗಳೂರಿನ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಗೌರವ ನವಜಾತ ಶಿಶುತಜ್ಞ ಪ್ರಾದ್ಯಾಪಕರಾಗಿ ಈ ಹಿಂದೆ ಸೇವೆಸಲ್ಲಿದ್ದಾರೆ. 

ಸಮಯಕ್ಕೆ ಮುನ್ನ ಜನಿಸುವ  ಶಿಶುವಿನ  ಉಳಿಯುವಿಕೆಗೆ ಸದಾ ಕಾಳಜಿ ವಹಿಸುತ್ತಿರುವ  ಡಾ. ರಂಜನ್ ರವರ  250ಕ್ಕೂ ಮಿಕ್ಕಿದ  ಲೇಖನಗಳು ಜಾಗತಿಕ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜೊತೆ  ತಮ್ಮ ಅನನ್ಯವಾದ ವೈದ್ಯಕೀಯ  ಆವಿಷ್ಕಾರಗಳಿಗೆ 2015ರ ಸಿ ಏನ್ ಏನ್ -ಐ ಬಿ ಎಂ ಪ್ರಶಸ್ತಿ ಮತ್ತು 2016 ಇ ಟಿ ಟೆಲಿಕಾಂ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

 
 
 
 
 
 
 
 
 
 
 

Leave a Reply