Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಪುರದ ಪುಣ್ಯವೆ ಪುರುಷರೂಪಿಂದೆ ಪೋದಂತೆ~ರೋಹಿತ್ ಚಕ್ರತೀರ್ಥ 

ಡಾ. ಎಂ.ಎಂ. ಕಲಬುರ್ಗಿಯವರು ಹಂಪಿ ವಿವಿಯ ಕುಲಪತಿಗಳಾಗಿದ್ದ ಸಮಯ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಹೊಸಪೇಟೆಯ ಮೇಲಿಂದ ಬೇರಾವುದೋ ಊರಿಗೆ ಪ್ರಯಾಣ ಮಾಡುತ್ತಿದ್ದಾರೆಂಬ ಸುದ್ದಿ ಸಿಕ್ಕಿತು. ಅವರನ್ನು ನಮ್ಮ ವಿಶ್ವವಿದ್ಯಾಲಯಕ್ಕೂ ಕರೆಸಿ ಮಾತಾಡಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಭಾವಿಸಿದ ಕಲಬುರ್ಗಿ, ತನ್ನ ಕಿರಿಯ ಸಹೋದ್ಯೋಗಿಗಳನ್ನು ಕರೆದು, ಬನ್ನಂಜೆಯವರನ್ನು ಕರೆಸುವುದಕ್ಕೆ ಏರ್ಪಾಟು ಮಾಡಿಸಿದರು. ಆಗ ಹಂಪಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎ.ವಿ. ನಾವಡ, ಬನ್ನಂಜೆಯವರನ್ನು ಕಂಡು ಮಾತಾಡಿಸಿ ಮನವೊಲಿಸಿ ವಿಶ್ವವಿದ್ಯಾಲಯಕ್ಕೆ ಕರೆತಂದರು. ಬನ್ನಂಜೆ ಅಂದು ವಿದ್ವತ್ಸಮೂಹವನ್ನು ಎದುರಿಗೆ ಕೂರಿಸಿಕೊಂಡು ಒಂದು ತಾಸು ಅತ್ಯದ್ಭುತವಾದ ಉಪನ್ಯಾಸ ನಡೆಸಿಕೊಟ್ಟರು.

ಅದರ ಮರುದಿನವೇ ವಿಶ್ವವಿದ್ಯಾಲಯದಲ್ಲಿ ಒಂದಷ್ಟು ಹಳಸುಗಾಳಿಯ ಹಬೆಯೆದ್ದಿತು. ಕುಲಪತಿಗಳು ಯಾವುದೋ ಮಾಧ್ವಮಠದ ಕಚ್ಛೆಪಂಚೆ ಪಂಡಿತರನ್ನೆಲ್ಲ ಕರೆಸಿ ವೇದಿಕೆ ಹತ್ತಿಸಿ ವಿಶ್ವವಿದ್ಯಾಲಯದ ಘನತೆ ಹದಗೆಡಿಸುತ್ತಿದ್ದಾರೆಂದೂ ಅವರ ಮೇಲೆ ಮೇಲಿನವರಿಗೆ ದೂರು ಕೊಡಬೇಕೆಂದೂ ಒಂದಷ್ಟು ಚರ್ಚೆಗಳು ವಿಶ್ವವಿದ್ಯಾಲಯದ ಹಜಾರದಲ್ಲಿ ನಡೆಯತೊಡಗಿದವು. ಇಷ್ಟೆಲ್ಲ ವಿವಾದಕ್ಕೆ ಕಾರಣವಾಗುವಂಥ ಯಾವ ವಿಷಯವನ್ನು ಬನ್ನಂಜೆ ಮಾತಾಡಿದ್ದರು ಎನ್ನುತ್ತೀರಾ? ಅವರು ಕೊಟ್ಟದ್ದು ಬೇಂದ್ರೆಯವರ “ನಾಕುತಂತಿ”ಯ ಮೇಲೆ ಉದ್ಭೋದಕ ಉಪನ್ಯಾಸ!ದುರಂತ ನೋಡಿ. ನಮ್ಮಲ್ಲಿ ಜ್ಞಾನಾಧಿಕಾರ ಕೇಂದ್ರಗಳಾದ ಶಾಲೆ-ಕಾಲೇಜು-ಉನ್ನತ ಅಧ್ಯಯನ ಸಂಸ್ಥೆಗಳು, ಸರಕಾರೀ ಅಕಾಡೆಮಿ/ಪ್ರಾಧಿಕಾರಗಳು, ಪತ್ರಿಕೆ-ಟಿವಿಯಂಥ ಮಾಧ್ಯಮ ವೇದಿಕೆಗಳು ಎಲ್ಲವೂ ಐವತ್ತು ವರ್ಷಗಳಿಗೂ ಹೆಚ್ಚುಕಾಲ ಆಳಲ್ಪಟ್ಟಿದ್ದು ಎಡಸಿದ್ಧಾಂತಿಗಳಿಂದಲೇ. ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲ ಮಡೆಯರು, ಮಂಕರು, ಅಜ್ಞಾನಿಗಳು ಎಂದೇ ಹಣೆಪಟ್ಟಿ ಹಚ್ಚಿಕೊಂಡು ಬರಲಾಯಿತು.

ತಮ್ಮ ಸಿದ್ಧಾಂತಕ್ಕೊಗ್ಗದ ಎಲ್ಲವೂ ತಪ್ಪೆಂದೇ ನಿರ್ಣಯ ಹೊರಡಿಸುತ್ತಿದ್ದ ಎಡ-ಬಿಡಂಗಿ ವಿದ್ವಾಂಸರೊಂದಷ್ಟು ಜನ, ಕಚ್ಛೆ-ಪಂಚೆಯ ಮಂದಿಯನ್ನು, ಜುಟ್ಟು ಬಿಟ್ಟವರನ್ನು, ಜನಿವಾರ ತೊಟ್ಟವರನ್ನು ಸೀಮಿತ ದೃಷ್ಟಿಕೋನದ ಕೂಪಮಂಡೂಕಗಳು ಎಂದು ಬ್ರ್ಯಾಂಡ್ ಮಾಡಿದರು! ದುರಂತವೆಂದರೆ ಬರೋಬ್ಬರಿ 30 ಸಂಸ್ಕೃತ ಕೃತಿಗಳನ್ನು ಬರೆದ, ಐವತ್ತಕ್ಕೂ ಹೆಚ್ಚು ಸಂಸ್ಕೃತ ಕೃತಿಗಳನ್ನು ತಿಳಿಗನ್ನಡಕ್ಕೆ ಅನುವಾದ ಮಾಡಿದ, 70ಕ್ಕೂ ಹೆಚ್ಚು ಮೂಲ ಕನ್ನಡ ಕೃತಿಗಳನ್ನು ರಚಿಸಿದ ಬನ್ನಂಜೆ ಎಡಸಿದ್ಧಾಂತಿಗಳಿಗಾಗಲೀ ಸರಕಾರಗಳಿಗಾಗಲೀ ಯಾವತ್ತೂ ಸಾಹಿತಿ ಎಂದು ಕಾಣಲೇ ಇಲ್ಲ! ಸಂಸ್ಕೃತ ವಾಙ್ಮಯದ ಮೇರುಶಿಖರದಂತಿದ್ದ ಅವರಿಗೆ ವ್ಯಾಸ, ಸರಸ್ವತಿಯರ ಹೆಸರಿನ ಯಾವೊಂದು ರಾಷ್ಟ್ರೀಯ ಪುರಸ್ಕಾರವೂ ಬರಲಿಲ್ಲ. ಕನ್ನಡದ ಪಂಪ, ರತ್ನ ಪ್ರಶಸ್ತಿಗಳಿಗೂ ಅವರು ಅಸ್ಪೃಶ್ಯರಾಗಿಯೇ ಉಳಿದರು.ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುವ ಸರಕಾರೀ ಅನ್ಯಾಯಗಳಿಗೆ ಬನ್ನಂಜೆಯವರೂ ಬಲಿಪಶುವಾಗಬೇಕಾಯಿತು. ಸರಕಾರದ ನಿರ್ಣಾಯಕ ಸ್ಥಾನದಲ್ಲಿ ಕೂತವರಿಗೆ ಗುಣಗ್ರಾಹಿತ್ವವಿದ್ದಿದ್ದರೆ ಬನ್ನಂಜೆಯವರಿಗೆ ಕನಿಷ್ಠ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಎಂದೋ ಬರಬೇಕಿತ್ತು. ಆದರೆ ಸಾಲು ಸಾಲು ಅಪಾತ್ರರಿಗೆಲ್ಲ ಆ ಗೌರವ ದಕ್ಕಿದ ಮೇಲೆ ಬನ್ನಂಜೆಯವರಿಗೆ ಬರದಿದ್ದುದು ಒಳ್ಳೆಯದೇ ಆಯಿತು ಎಂದು ನಾವು ನಿಟ್ಟುಸಿರುಬಿಡಬೇಕಷ್ಟೆ!

ಬನ್ನಂಜೆ ಗೋವಿಂದಾಚಾರ್ಯರು ಹುಟ್ಟಿದ್ದು 1936ರ ಆಗಸ್ಟ್ 3ರಂದು, ಪೊಡವಿಗೊಡೆಯನ ನಾಡು ಉಡುಪಿಯಲ್ಲಿ. ತಂದೆ ತರ್ಕಕೇಸರಿ ಪಡುಮನ್ನೂರು ನಾರಾಯಣಾಚಾರ್ಯರು. ಮಠದ ಸ್ವಾಮಿಗಳಿಗೆ ಪಾಠ ಹೇಳುತ್ತಿದ್ದ ಪ್ರಕಾಂಡ ಪಂಡಿತರು. ಬಾಲಕ ಗೋವಿಂದನಿಗೆ ಪ್ರಥಮಪಾಠಗಳೆಲ್ಲ ನಡೆದುದು ಮನೆಯಲ್ಲೇ, ಪಿತೃಮುಖೇನ. ಹಾಗಾಗಿ ಸಂಸ್ಕೃತದ ಅಡಿಪಾಯ ಎಳವೆಯಲ್ಲೇ ಗಟ್ಟಿಯಾಯಿತು. ಆದರೇನಂತೆ, ಸಂಸ್ಕೃತ ಕಾಲೇಜಿನಲ್ಲಿ ಪದವಿ ಪಡೆದು, ಶಿಕ್ಷಕನೋ ಪ್ರಾಧ್ಯಾಪಕನೋ ಆಗಿ ಜೀವನವ್ಯವಸಾಯ ಮಾಡಬೇಕೆಂದು ಬಯಸಿದವನಿಗೆ ಪ್ರಥಮಚುಂಬನಂ ದಂತಭಗ್ನಂ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ನಪಾಸಿನ ಗೌರವ! ಛಲಬಿಡದೆ ಮತ್ತೆ ಪರೀಕ್ಷಿಸಿದರೆ ಎರಡನೇ ವರ್ಷದಲ್ಲಿ ಇತಿಹಾಸ ಪುನರಾವರ್ತನ! ಮಠದ ವಿದ್ವಾಂಸರ ಮಗನಾಗಿ ಇಂಥ ಅಪಮಾನವನ್ನು, ಅದೂ ಕಾರ್ಯಕ್ಷೇತ್ರ ಉಡುಪಿಯಲ್ಲೇ ಅನುಭವಿಸುತ್ತ ಬದುಕುವುದು ಹೇಗೆ? ಪೇಚಾಟ, ಸಂಕಟ, ದುಃಖ. ಅದೊಂದು ದಿನ, ಹತಾಶೆಯಿಂದ ಮಡುಗಟ್ಟಿದ್ದ ಮನಸ್ಸು ಯೋಚಿಸಿತು: ಮಠದ ಮಾಣಿಗಳಿಗೆ ಪಾಠ ಮಾಡುವ ಸಂಸ್ಕೃತ ಶಿಕ್ಷಕನಾಗುವುದಕ್ಕಿಂತ ಶಿಕ್ಷಕರಿಗೇ ಪಾಠ ಮಾಡುವ ಗುರುವಿನ ಸ್ಥಾನಕ್ಕೇರಬೇಕು! ಯೋಚನೆ ನಿರ್ಧಾರವಾಯಿತು, ನಿರ್ಧಾರ ಸಂಕಲ್ಪವಾಯಿತು.

ಜಗಲಿ ಹಾರದವನ ಗಗನಗಮನ! ಯಾಕಾಗಬಾರದು? ಹೊಳೆಹಾರದ ಹನುಮಂತ ಸಾಗರವನ್ನೇ ದಾಟಲಿಲ್ಲವೇ? ಹನುಮದ್ವಿಕಾಸಕ್ಕೊಂದು ನಾಂದಿಯಾಯಿತು. ಹುಡುಗ ತುಪ್ಪದ ದೀಪಹಚ್ಚಿದ; ಗ್ರಂಥಗಳ ಕಟ್ಟುಬಿಚ್ಚಿದ; ಸ್ವಾಧ್ಯಾಯಕ್ಕಿಳಿದ. ಮೂರುವರ್ಷ ಪರ್ಯಂತ ದಿನದ ಇಪ್ಪತ್ತಕ್ಕೂ ಹೆಚ್ಚು ತಾಸುಗಳನ್ನು ಅಧ್ಯಯನವೊಂದರಲ್ಲೇ ಕಳೆದ. ಕರಗಿದ ಎಣ್ಣೆ, ಬತ್ತಿಗಳು ಬೆಳಕಾಗಿ ಸಾರ್ಥಕ್ಯ ಕಂಡವು.

ಆ ಮೂರು ವರ್ಷಗಳನ್ನು ಕಳೆದು ಹೊರಬಂದ ಹುಡುಗ, ಕತ್ತಲ ತತ್ತಿಯನ್ನೊಡೆದು ಹೊರಬಂದ ಬೆಳಕಿನ ಮಗು. ದ್ವಿಜ. ಕಣ್ಣುಗಳಲ್ಲಿ ಅಸಾಧಾರಣ ಕಾಂತಿ. ನಾಲಗೆಯಲ್ಲಿ ವಾಗ್ದೇವಿ. ಮಾತಿನಲ್ಲಿ ಚಿಂತನೆಯ ಹೊಳಹು. ಆಲಿಸಿದವರಿಗೆ ರೋಮಾಂಚನ. ಬರೆದ ಸಾಲುಗಳೆಲ್ಲ ವೇದದ ಋಕ್ಕುಗಳಂತೆ, ಮಂತ್ರಗಳಂತೆ. ಅಪ್ಪನ ಕರ್ಮಠ ಸಾಂಪ್ರದಾಯಿಕತೆಗೆ ಆಘಾತ ಕೊಡಬೇಕೆಂದು ಬೀದಿಯಲ್ಲಿ ನಿಂತು ಸಿಗರೇಟೆಳೆಯುವ ದಿನಗಳೆಲ್ಲ ಕಳೆದಿದ್ದವು. ಮೈಮನಗಳಲ್ಲಿ ಒಡಮೂಡಿದ್ದ ಪಕ್ವತೆ.

ಅಣ್ಣ ರಾಮಾಚಾರ್ಯರು “ಸುದರ್ಶನ” ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಆ ಪತ್ರಿಕೆಯಲ್ಲಿ ತಮ್ಮ ಗೋವಿಂದ ಆಗೀಗ ಒಂದೊಂದು ಬರಹಗಳನ್ನು ಪ್ರಕಟಿಸತೊಡಗಿದ. ಬೀಳಬೇಕಿದ್ದ ಕಣ್ಣುಗಳಿಗದು ಬಿತ್ತು. ಉದಯವಾಣಿಯಲ್ಲೊಂದು ಕೆಲಸ ನಿಕ್ಕಿಯಾಯಿತು. ಮೊದಮೊದಲು ಸಾಧಾರಣ ಪತ್ರಕರ್ತನ ಹುದ್ದೆ. ನಂತರ ಸ್ವಸಾಮಥ್ರ್ಯ, ಪಾಂಡಿತ್ಯಗಳಿಂದ ಏರಿದ ಈ ಯುವಕ ಒಂದೊಂದೇ ಮೆಟ್ಟಿಲು. “ಕಿಷ್ಕಿಂಧಾಕಾಂಡ” ಅಂಕಣ ಜನಪ್ರಿಯವಾಯಿತು. ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಜವಾಬ್ದಾರಿ ಹೆಗಲೇರಿತು. ಅದನ್ನು ಸಮರ್ಥವಾಗಿ ನಿರ್ವಹಿಸಿದರು, ನಿಭಾಯಿಸಿದರು, ಹೊಸತೊಂದು ಹೊಳಪು ಕೊಟ್ಟರು ಬನ್ನಂಜೆ – ಒಂದೆರಡಲ್ಲ; ಮೂವತ್ತು ವರ್ಷ! ಆ ಮೂರು ದಶಕಗಳುದ್ದಕ್ಕೆ ಬನ್ನಂಜೆಯವರು ಬರೆದು ಪ್ರಕಟಿಸಿದ ಪುಸ್ತಕ ವಿಮರ್ಶೆಗಳೇ ಬರೋಬ್ಬರಿ 750ರಷ್ಟು! ಅದರ ಹತ್ತರಲ್ಲೊಂದಷ್ಟನ್ನೂ ಬರೆಯದ, ಓದದ, ಸಾಧಿಸದ ಪಂಡಿತ ಪುತ್ರರೆಲ್ಲ ಕವಿ, ಸಾಹಿತಿ, ವಿಮರ್ಶಕರ ಬಿರುದುಬಾವಲಿ ಧರಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಠಳಾಯಿಸಿಬಿಟ್ಟರು!

ಬನ್ನಂಜೆಯವರು ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿ ಪ್ರಕಟಿಸಿದ್ದು ಬಾಣಭಟ್ಟನ ಕಾದಂಬರಿಯ ಕನ್ನಡರೂಪ. ಕೆಲವೆಡೆ ಎರಡೆರಡೆ ಶಬ್ದಗಳಷ್ಟು ಸಂಕ್ಷಿಪ್ತ. ಇನ್ನು ಕೆಲವೆಡೆ ಆರೇಳು ಸಾಲಿಗೂ ಪೂರ್ಣವಿರಾಮ ಸಿಕ್ಕದಷ್ಟು ದೀರ್ಘ. ಕನ್ನಡದ ಬಾಣನೆಂಬಷ್ಟು ಪ್ರಗಲ್ಭತೆ, ವಾಕ್ಯಸೌಂದರ್ಯ, ನಿರಾಡಂಭರ ಸರಳತೆ, ಅನುಪಮ ಅರ್ಥ ವಿನ್ಯಾಸ. ಬಿಡಿಸಿದಷ್ಟು ತೆರೆದುಕೊಳ್ಳುವ ಅರ್ಥ – ಉಪನಿಷತ್ತುಗಳ ಮಾತಿನಂತೆ. “ಕಾದಂಬರಿ” ವಿದ್ವಜ್ಜನರ ಪ್ರಶಂಸೆಗೆ ಭಾಜನವಾಯಿತು. ಅಲ್ಲಿಂದ ಮುಂದಕ್ಕೆ ಬನ್ನಂಜೆ ತಿರುಗಿನೋಡಿದ್ದೇ ಇಲ್ಲ.

ಸಂಸ್ಕøತದ ಹಲವು ನಾಟಕ-ಕಾವ್ಯಕೃತಿಗಳು ಕನ್ನಡಕ್ಕೆ, ಈ ನೆಲಸಂಸ್ಕೃತಿಯದೇ ಕೃತಿಗಳೋ ಎಂಬಷ್ಟು ಸಹಜ ಗುಣ ಮೈವೆತ್ತು ಅನುವಾದಗೊಂಡವು. ಕಾಳಿದಾಸನ ಅಭಿಜ್ಞಾನಶಾಕುಂತಲ – ನೆನಪಾದಳು ಶಕುಂತಲೆ, ಭವ ಭೂತಿಯ ಉತ್ತರರಾಮಚರಿತ – ಮತ್ತೆ ರಾಮನ ಕತೆ, ಶೂದ್ರಕನ ಮೃಚ್ಛಕಟಿಕ – ಆವೆಯ ಮಣ್ಣಿನ ಆಟದ ಬಂಡಿ, ದಂಡಿಯ ದಶಕುಮಾರ ಚರಿತ – ಹತ್ತು ಮಕ್ಕಳ ಕತೆ,

ಭಗವದ್ಗೀತೆ – ಭಗವಂತನ ನಲ್ನುಡಿ, ವಿಷ್ಣುಸಹಸ್ರನಾಮ – ದೇವರ ಸಾವಿರ ಹೆಸರಿನ ಹಾಡು… ಶೀರ್ಷಿಕೆಯಲ್ಲೇ ಇಂಥ ಜೀವಂತಿಕೆ! ಒಳಗಿನ ಹೂರಣ ಕೇಳಬೇಕೆ! ಸಂಸ್ಕೃತದ ಕಾವ್ಯ-ನಾಟಕಗಳೆಲ್ಲವೂ ಹಳೆಗನ್ನಡದ, ಬಹುತೇಕ ರಂಗಪ್ರಯೋಗಕ್ಕೊಗ್ಗದ ಮಾದರಿಯಲ್ಲಿ ಬರುತ್ತಿದ್ದಾಗ ಬನ್ನಂಜೆಯವರ ಅನುವಾದಗಳು, ಕತ್ತಲೆ ಕವಿದ ನೆಲಮಾಳಿಗೆಗೆ ಬೆಳಕಿನ ಕಿಂಡಿ ಹೊದೆಸಿದಂತಾಯಿತು. “ಮಣ್ಣಿನ ಬಂಡಿ” ನಾಟಕದ ಸೂತ್ರಧಾರನ ಬಾಯಲ್ಲಿ ಅವರು ಕುಂದಗನ್ನಡವನ್ನೂ ಆಡಿಸಿದ್ದಾರೆಂಬುದು ವಿಶೇಷ.

ವೇದದೃಷ್ಟಾರರಿಗೆಂತೋ ಅಂತೆಯೇ ಬನ್ನಂಜೆಯವರಿಗೆ ಪದಗಳ ಬಗ್ಗೆ ಪ್ರೀತಿ. ಒಂದೊಂದು ಪದವನ್ನೂ ಅವರು ಸಾಗರದಲ್ಲಿ ಮುಳುಗಿ ಎತ್ತಿತಂದ ಮುತ್ತಿನ ಕಾಳಜಿಯಿಂದ ಬಿಡಿಸಿ ಅದರ ಅರ್ಥವಿಸ್ತಾರಗಳನ್ನು ಓದುಗರ, ಕೇಳುಗರ ಮುಂದೆ ಹರಡುತ್ತಿದ್ದರು. “ಎಲ್ಲ ಸಂಖ್ಯೆಗಳೂ ರಾಮಾನುಜನ್ ಗೆಳೆಯರಾಗಿದ್ದವು” ಎಂಬ ಮಾತಿದೆ.

ಅದನ್ನೇ ಶಬ್ದಲೋಕಕ್ಕೆ ಅನ್ವಯಿಸುವುದಾದರೆ ಎಲ್ಲ ಶಬ್ದಗಳೂ ಬನ್ನಂಜೆಯವರ ಜ್ಞಾತಿಗಳೇ ಆಗಿದ್ದವೆನ್ನಬಹುದು. ಅವರ ಉಪನ್ಯಾಸ ಹಳಿಯ ಮೇಲೋಡಿದ ರೈಲಿನಂತಲ್ಲ; ಮೃಗಯಾವಿನೋದಕ್ಕಾಗಿ ಹೊರಟ ರಾಜನ ಸವಾರಿಯಂತೆ. ಅವರು ಸಾಹಿತ್ಯದ ಗೊಂಡಾರಣ್ಯವನ್ನು ಹೊಗುತ್ತಾರೆ; ಅಲ್ಲಿ ಅವರಿಗೆ ಬೃಹದ್ವøಕ್ಷಗಳು, ಗಿಡಬಳ್ಳಿ ಪೊದೆಹೊದರುಗಳು, ನೀರಿನ ಝರಿ-ತೊರೆ-ನದಿಗಳು, ಬಯಲು, ಗುಡ್ಡ-ದಿಬ್ಬ-ಕಣಿವೆಗಳು ಎಲ್ಲವೂ ಸಿಗುತ್ತವೆ.

ಅವನ್ನೆಲ್ಲ ಇದೇ ಮೊದಲ ಬಾರಿಗೆ ಕಾಣುತ್ತಿದ್ದೇನೋ ಎಂಬಂತೆ ಅಚ್ಚರಿಯ ಕಣ್ಣುಗಳಿಂದ ನೋಡುತ್ತ, ತೋರಿಸುತ್ತ, ವಿವರಿಸುತ್ತ ಅವರು ಆ ಎಲ್ಲ ಹೊಕ್ಕುಬರೆ ದಾರಿಗಳಲ್ಲಿ ಹೋಗಿಬಂದು ಹೊಸದೊಂದು ಜಗತ್ತನ್ನೇ ಸೃಷ್ಟಿಸುತ್ತಾರೆ. ಬೇಟೆಯೆಂಬುದು ಕೇವಲ ನೆಪವಾಗಿ, ಅಥವಾ ಕೆಲವೊಮ್ಮೆ ನಗಣ್ಯವಾಗಿ, ಈ ವಿಹಾರ-ಸಂಚಾರಗಳೇ ಮುಖ್ಯಭೂಮಿಕೆಯನ್ನು ಆವರಿಸಿಕೊಳ್ಳುತ್ತವೆ.

ಅವರ ಮಾತುಗಳಲ್ಲಿ ಮಾಧ್ವಮತ-ಮಠಗಳ ವಿಚಾರಗಳೆಂತೋ ಹಾಗೆಯೇ ಸರ್ ಜಾನ್ ವುಡ್‍ರಾಫ್, ಫ್ರಿತ್ಸೋ ಕಾಪ್ರಾ, ಅಲೆಕ್ಸಿಸ್ ಕ್ಯಾರಲ್‍ರಂಥ ವಿದೇಶೀ ವಿದ್ವಾಂಸರೂ ಲೀಲಾಜಾಲವಾಗಿ ಬಂದುಹೋಗುತ್ತಿದ್ದರೆಂಬುದು ವಿಶೇಷ. ಜಯತಿ ಪರಾಶರ ಸೂನುಃ ಸತ್ಯವತೀಹೃದಯನಂದನೋ ವ್ಯಾಸಃ | ಯಸ್ಯಾsಸ್ಯಕಮಲಗಲಿತಂ ವಾಙ್ಮಯಮ್ ಅಮೃತಂ ಜಗತ್ಪಿಬತಿ ||

ಎಂದು ವ್ಯಾಸರನ್ನು ಸ್ಮರಿಸಿಕೊಂಡು ಅವರು ಪ್ರಾರಂಭಿಸುತ್ತಿದ್ದ ಆ ಪ್ರತಿ ಪ್ರವಚನದಲ್ಲೂ ಆಯ್ದು ಜೋಳಿಗೆಗಿಳಿಸಿ ಕೊಳ್ಳುವ ಹತ್ತಾರು ಸಂಗತಿಗಳು ಇದ್ದೇ ಇರುತ್ತಿದ್ದವು. ಅಂಥ ಸುಮಾರು 30,000 ಗಂಟೆಗಳಷ್ಟು ಉಪನ್ಯಾಸ ವನ್ನು ಅವರು ಜಗತ್ತಿನ ಕಿವಿಗಳಿಗೆ ಇಳಿಸಿಹೋಗಿದ್ದಾರೆಂಬುದು ಗಿನ್ನೆಸ್ ಪುಸ್ತಕದಲ್ಲಿ ಸೇರಬೇಕಿರುವ ದಾಖಲೆಯೂ ಹೌದು.

ಬನ್ನಂಜೆ ಅಧ್ಯಯನದ ವಿಷಯದಲ್ಲಿ ಕರ್ಮಠದಲ್ಲಿ ಕರ್ಮಠರು; ಆದರೆ ಕಂಡುಂಡದ್ದನ್ನು ಅರ್ಥೈಸಿಕೊಂಡು ಜಗತ್ತಿಗೆ ಕೊಡುವುದರಲ್ಲಿ ಆಧುನಿಕರಲ್ಲಿ ಆಧುನಿಕರು. ಮನಸ್ಸಿಗೆ ಬಂದದ್ದನ್ನೆಲ್ಲ ಅಥವಾ ಆ ಕ್ಷಣಕ್ಕೆ ಲಹರಿ ಯಿದ್ದುದನ್ನೆಲ್ಲ ಫಿಲಾಸಫಿ ಎಂಬ ಹೆಸರಿನಲ್ಲಿ ಶ್ರೋತೃಗಳಿಗೆ ದಾಟಿಸುವ ಆಧುನಿಕ ಗುರುಗಳಿಗಿಂತ ಬನ್ನಂಜೆ ಭಿನ್ನ. ಅವರು ಅದೇನೇ ಮಾತಾಡಲಿ, ಅದಕ್ಕೊಂದು ಶಾಸ್ತ್ರದ ಹಿನ್ನೆಲೆ, ಪುರಾವೆ, ಪೂರಕದಾಖಲೆಗಳು ಇದ್ದೇ ಇರುತ್ತಿದ್ದವು.

ಇದನ್ನೇ ಬನ್ನಂಜೆಯವರ ಅಹಂಕಾರ, ಧಾರ್ಷ್ಟ್ಯ ಎಂದೆಲ್ಲ ಅರ್ಥೈಸಿದವರೂ ಇದ್ದಾರೆ. ಆದರೆ ಪಾಂಡಿತ್ಯ ಮತ್ತು ಅಪಾರ ಅಧ್ಯಯನದ ಬಲದಿಂದ ಬರುವ ಈ ಜ್ಞಾನದ ಧಾಡಸಿತನ (ಅಡಾಸಿಟಿ) ಬನ್ನಂಜೆಯವರಿಗೆ ಜನ್ಮಜಾತ. ಒಂದು ಉದಾಹರಣೆ: 1958ರಲ್ಲಿ ಅವರಿಗೆ 22ರ ಹರೆಯ. ಆನಂದತೀರ್ಥರು (ಅರ್ಥಾತ್ ಆಚಾರ್ಯ ಮಧ್ವರು) ಬರೆದ ತಂತ್ರಸಾರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ಟೀಕೆ-ಟಿಪ್ಪಣಿ-ತಾತ್ಪರ್ಯಗಳನ್ನು ಕೊಡುವ ದೊಡ್ಡ ಹೊಣೆಗಾರಿಕೆಯನ್ನು ಬನ್ನಂಜೆ ಏಕಮೇವರಾಗಿ ತನ್ನ ಕೃಶ ಹೆಗಲುಗಳ ಮೇಲೆ ಹೊತ್ತರು.

ಕೃತಿಯನ್ನು ಪೂರ್ಣಗೊಳಿಸಿ ಪೇಜಾವರ ಶ್ರೀ ವಿಶ್ವೇಶತೀರ್ಥರ ಅವಗಾಹನೆಗಿಟ್ಟು ಮುನ್ನುಡಿ ಬಯಸಿದರು. ಆಗ ವಿಶ್ವೇಶತೀರ್ಥರು ತಮ್ಮ ಮುನ್ನುಡಿಯಲ್ಲಿ “ಉಪಾಸನೆಯ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಆಚಾರ್ಯ ಮಧ್ವರ ದೃಷ್ಟಿಗೆ ವಿರುದ್ಧವಾದ ಒಂದು ವಿಚಾರವನ್ನು ಬನ್ನಂಜೆ ಸಮ್ಮತಿಸಿದ್ದಾರೆ” ಎಂದು ಬರೆದುಬಿಟ್ಟರು.

ಆದರೆ ಬನ್ನಂಜೆ, ಮತ್ತೆ ಮಧ್ವರ ಬೇರೊಂದು ಕೃತಿಯಲ್ಲಿ ಬಂದಿರುವ ಅಂಶವನ್ನು ಮುಂದಿಟ್ಟುಕೊಂಡು ತಾನು ಬರೆದಿರುವುದಕ್ಕೆ ಶಾಸ್ತ್ರಸಮ್ಮತಿ ಇದೆ ಎಂದು ಅದೇ ಕೃತಿಯಲ್ಲಿ ಉತ್ತರರೂಪದ ಟಿಪ್ಪಣಿ ಕೊಟ್ಟರು! 22ರ ಎಳವೆಯಲ್ಲೇ ಅವರ ಅಧ್ಯಯನದ ಆಳ-ವಿಸ್ತಾರಗಳು ಹೇಗಿದ್ದವೆಂದರೆ ತಂತ್ರಸಾರ ಕೃತಿಗೆ ಬನ್ನಂಜೆ ಪೀಠಿಕೆ ಯಾಗಿ 45 ಪುಟಗಳಷ್ಟಾಗುವ ದೀರ್ಘ, ಘನಿಷ್ಠ ಪ್ರಸ್ತಾವನೆಯನ್ನೂ ಬರೆದಿದ್ದಾರೆ.

ಹೀಗೆ ತನ್ನ ಪ್ರತಿ ಮಾತಿಗೂ ತನ್ನ ಅಧ್ಯಯನದ ಸಂಗತಿಗಳ ಒಳಗಿಂದಲೇ ಪುರಾವೆಗಳನ್ನು ಹುಡುಕುವ ಬಗೆ ಇದೆಯಲ್ಲ, ಅದು, ಅತ್ಯಂತ ಶುದ್ಧ ಭಾರತೀಯ ಚಿಂತನಕ್ರಮವೇ ಆಗಿದೆ. ಬನ್ನಂಜೆ ಆ ಕಾಲಕ್ಕೇ ಆಧುನಿಕ ರಾಗಿದ್ದರೆಂಬುದಕ್ಕೆ ಇನ್ನೊಂದು ದೃಷ್ಟಾಂತವೂ ನಮಗೆ ಅವರ ಯೌವನದ ದಿನಗಳಲ್ಲೇ ಸಿಗುತ್ತದೆ. 1950ರ ದಶಕ. ಪಾವಂಜೆ ಗುರುರಾಜರಾಯರ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ ಆ ಕಾಲದಲ್ಲಿ ಭಜನೆ, ಸ್ತೋತ್ರ, ಮಂತ್ರಗಳ ಕೃತಿಗಳನ್ನು ಅಚ್ಚುಹಾಕಿ ಮಾರಾಟ ಮಾಡುತ್ತಿತ್ತು.

ಗುರುವಿನಿಂದ ಶಿಷ್ಯನಿಗೆ ದೀಕ್ಷೆಮುಖೇನವಷ್ಟೇ ಹೋಗಬೇಕಾದ ಮಂತ್ರಗಳೆಲ್ಲ ಹೀಗೆ ಪುಸ್ತಕಗಳಲ್ಲಿ ಪ್ರಕಟವಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಅಪಾತ್ರರ ಕೈಗಳಿಗೆಲ್ಲ ಹೋಗಿ ಮೈಲಿಗೆಯಾಯಿತು ಎಂದು ಯಾರೋ ಗುಲ್ಲೆಬ್ಬಿಸಿ ದರಂತೆ. ಆಗ ಪ್ರಕಾಶಕರ ಪರವಾಗಿ ನಿಂತು ಗಟ್ಟಿದನಿ ಎತ್ತಿದವರು ಇಬ್ಬರು – ಅದೇ ಪೇಜಾವರ ಶ್ರೀಗಳು ಮತ್ತು ಬನ್ನಂಜೆ! ವಿಶ್ವೇಶತೀರ್ಥರ ಜೊತೆ ಬನ್ನಂಜೆಯವರದು ಪ್ರೀತಿ-ಹುಸಿಕೋಪಗಳ ಸಂಬಂಧ. ವಿಶ್ವೇಶರ ವಿದ್ಯಾ ಗುರುಗಳಾದ ವಿದ್ಯಾಮಾನ್ಯರೇ ಬನ್ನಂಜೆಯವರಿಗೂ ಗುರುಗಳಾಗಿ ಒದಗಿಬಂದವರು (ಇನ್ನೊಬ್ಬ ಗುರುಗಳು ವಿದ್ಯಾಸಮುದ್ರತೀರ್ಥರು).

ಹಾಗಾಗಿ ವಿಶ್ವೇಶತೀರ್ಥರ ಜೊತೆ ಬನ್ನಂಜೆಯವರಿಗೆ ಶಾಸ್ತ್ರಚರ್ಚೆ, ವಾದ-ಸಂವಾದಗಳನ್ನು ಮಾಡುವ ಸ್ವಾತಂತ್ರ್ಯ ಮತ್ತು ಸಲಿಗೆ ಪ್ರಾರಂಭದಿಂದಲೇ ಇತ್ತು. ಅವರಿಬ್ಬರ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾ ಯಗಳು ಮೂಡುತ್ತಿದ್ದರೂ ಅವೆಲ್ಲವೂ ಆಯಾ ಚರ್ಚೆಗಳ ಶಾಸ್ತ್ರವಿಷಯಗಳಿಗಷ್ಟೇ ಸೀಮಿತವಾಗಿದ್ದವೇ ಹೊರತು ವೈಯಕ್ತಿಕ ನೆಲೆಗೆ ಎಂದೂ ಇಳಿದದ್ದೇ ಇಲ್ಲ. ಬನ್ನಂಜೆಯವರು ಅದೆಷ್ಟೋ ಸಲ ತನ್ನ ಸ್ವಚ್ಛಂದ ಮನೋವೃತ್ತಿ ಯಿಂದಾಗಿ ಸಾಂಪ್ರದಾಯಿಕ ಕಣ್ಣುಗಳನ್ನು ಕೆಂಪಗಾಗಿಸಿದ್ದಿದೆ; ಅನ್ಯಥಾ ಅಪಾರ್ಥಕ್ಕೆ ಎಡೆಮಾಡಿಕೊಟ್ಟದ್ದೂ ಇದೆ.

ಬನ್ನಂಜೆಯವರ ಯಾವುದೋ ಮಾತನ್ನು ಹಿನ್ನೆಲೆ-ಮುನ್ನೆಲೆಗಳಿಂದ ಪ್ರತ್ಯೇಕಿಸಿ ಅನ್ಯಾರ್ಥ/ಅಪಾರ್ಥಗಳು ಬರುವಂತೆ ಎಡಿಟ್ ಮಾಡಿ ಕೆಲವು ಕಿಡಿಗೇಡಿಗಳು ಜಾಲತಾಣಗಳಲ್ಲಿ ಹಂಚಿಕೊಂಡು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೃತ್ಯವೆಸಗಿದ್ದೂ ಇದೆ. ಅಂಥ ವಿಚಾರಗಳಿಗೆಲ್ಲ ಬನ್ನಂಜೆಯವರು ಹೇಳುತ್ತಿದ್ದ ಮಾತೊಂದೆ: “ಬನ್ನಂಜೆ ಇನ್ನೂ ಬದುಕಿದ್ದೇನಲ್ಲ? ಭಿನ್ನಾಭಿಪ್ರಾಯ ಇರುವವರು ಎದುರೆದುರು ಬಂದು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ.

ಯಾರೋ ಎಲ್ಲೋ ಕಲ್ಲೆಸೆದರೆಂದು ನಾನೇಕೆ ಪ್ರತಿಕ್ರಿಯೆ ಕೊಡುತ್ತಕೂಡಲಿ?” ಸತ್ಯನಿಷ್ಠುರತೆಯ ವಿಷಯಕ್ಕೆ ಬಂದರೆ ಬನ್ನಂಜೆಯವರಿಗೆ ಸ್ವಸಮುದಾಯದೊಳಗೇ ವಿರೋಧಿಗಳು ಹೆಚ್ಚಿದ್ದರೆಂಬುದು ಹೊರಗಿನ ವಿರೋಧಿಗಳಿಗೆ ಗೊತ್ತಿಲ್ಲದಿರಬಹುದು! ವಿದ್ವದ್ವಲಯಕ್ಕೆ ಬನ್ನಂಜೆಯವರು ಕೊಟ್ಟ ಅಮೂಲ್ಯ ರತ್ನಗಳೆಂದರೆ ಹೃಷೀಕೇಶತೀರ್ಥರ ಕೈಬರಹದಲ್ಲಿದ್ದ ಸರ್ವಮೂಲಗ್ರಂಥಗಳನ್ನು ತಪ್ಪಿಗೆ ಎಡೆಯಿಲ್ಲದಂತೆ ಟೀಕೆ-ಟಿಪ್ಪಣಿಯ ಜೊತೆಗೆ ಮುದ್ರಿಸಿದ್ದು. ಆಚಾರ್ಯ ಮಧ್ವರ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಉದ್ಗ್ರಂಥಕ್ಕೆ ಅಷ್ಟೇ ಬಲಯುತವಾದ ವ್ಯಾಖ್ಯಾನ ಗಳನ್ನು ಬರೆದದ್ದು.

ಉಪನಿಷತ್ತುಗಳಿಗೆ ಭಾಷ್ಯ, ಪುರುಷಸೂಕ್ತ, ಶ್ರೀಸೂಕ್ತದಂಥ ಹಲವು ವೈದಿಕ ಸಾಹಿತ್ಯಗಳಿಗೆ ವಿದ್ವತ್ಪೂರ್ಣ ವಿವರಣೆ, ಮಧ್ವಾಚಾರ್ಯರ ಬಹುತೇಕ ಎಲ್ಲ ಕೃತಿಗಳಿಗೂ ವಿವರಣೆ, ಟಿಪ್ಪಣಿ, ಅನುವಾದ, ಮಧ್ವರ ಜೀವನ-ಸಾಧನೆಗಳ ಕುರಿತು ಕೃತಿ, ಹರಿದಾಸ ಸಾಹಿತ್ಯದ ಬಗ್ಗೆ ಹಲವು ಚಿಕ್ಕ-ದೊಡ್ಡ ಗ್ರಂಥಗಳು, ಆರ್ಷಸಾಹಿತ್ಯದ ಹಿನ್ನೆಲೆಯಲ್ಲಿ ಪುರಂದರದಾಸರ ಸಾಹಿತ್ಯದ ವಿವೇಚನೆ.. ಇವಿಷ್ಟೇ ಅಲ್ಲದೆ ಭಾರತೀಯ ಕಾಮಶಾಸ್ತ್ರದ ಕುರಿತು ಕೂಡ ಕೃತಿಗಳನ್ನು ಬರೆದು ಉಪಕರಿಸಿದವರು ಬನ್ನಂಜೆ ಗೋವಿಂದಾಚಾರ್ಯರು.

ಸ್ವಯಂ ಕವಿಹೃದಯದ ಬನ್ನಂಜೆಯವರು ಪಲಿಮಾರು ಮಠದ ರಘುವಲ್ಲಭ ತೀರ್ಥರು (ಕಾವ್ಯನಾಮ ಕುಮುದಾತನಯ) ಮತ್ತು ಕೂರಾಡಿ ಸೀತಾರಾಮ ಅಡಿಗರ ಜೊತೆಗೂಡಿ ಮುಕ್ಕಣ್ಣದರ್ಶನ ಎಂಬ ಕವನ ಸಂಕಲನವನ್ನು ತನ್ನ ಹದಿಹರೆಯದ ಬಿಸಿರಕ್ತದ ದಿನಗಳಲ್ಲೇ ತಂದದ್ದುಂಟು (ಆಗವರಿಗೆ 25). ಬೇಂದ್ರೆ, ಪಾವೆಂ, ಕುಶಿ ಹರಿದಾಸ ಭಟ್ಟ, ಕಾರಂತ, ಅಮೃತ ಸೋಮೇಶ್ವರ ಮೊದಲಾದವರೆಲ್ಲ ಬನ್ನಂಜೆಯವರ ಸ್ನೇಹವಲಯದಲ್ಲಿದ್ದವರು.

ಎಷ್ಟೊಂದು ತನ್ಮಯತೆಯಿಂದ ಬನ್ನಂಜೆಯವರು ಶಾಸ್ತ್ರಾಧ್ಯಯನ, ಪಾಠ-ಪ್ರವಚನ, ಶಾಸ್ತ್ರಗ್ರಂಥ ರಚನ-ಪ್ರಕಟನಗಳಲ್ಲಿ ತೊಡಗಿಕೊಳ್ಳುತ್ತಿದ್ದರೋ ಅಷ್ಟೇ ಶ್ರದ್ಧೆಯಿಂದ ಉಡುಪಿಯ ತಿಂಗಳೆಯಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬಂದರೆಂಬುದು ಬಹುಶಃ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಧ್ವ ಮತಾನುಯಾಯಿ ಬನ್ನಂಜೆಯವರು ತಮ್ಮ “ವೇದಗಳ ಸಂದೇಶ” ಎಂಬ ಬೃಹತ್ ಸಾಹಿತ್ಯದಲ್ಲಿ ಮಧ್ವರ ಟೀಕೆಯ ಜೊತೆಗೇ ಶಂಕರ ಮತ್ತು ರಾಮಾನುಜರ ಟೀಕೆಯನ್ನೂ ಮುಂದಿಟ್ಟುಕೊಂಡು ವೇದಗಳ ಅರ್ಥಜಿಜ್ಞಾಸೆ ನಡೆಸಿದ್ದಾರೆ; ಜೊತೆಗೆ ಜಿ.ವಿ. ಅಯ್ಯರರು ಆಚಾರ್ಯತ್ರಯರ ಮೇಲೆ ನಿರ್ಮಿಸಿದ ಮೂರು ಸಂಸ್ಕøತ ಸಿನೆಮ ಗಳಿಗೂ ಸಂಭಾಷಣೆ ಬರೆದಿದ್ದಾರೆ – ಎಂಬುದೂ ಬಹಳ ಮಂದಿಗೆ ತಿಳಿದಿಲ್ಲದ ಸತ್ಯ.

ಒಂದು ವರ್ಷದ ಅಂತರದಲ್ಲಿ ಉಡುಪಿ ಶ್ರೀ ವಿಶ್ವೇಶ ತೀರ್ಥರನ್ನು, ಸಾಹಿತಿ ಸಜ್ಜನ ಕಲಾವಿದ ಉದ್ಯಾವರ ಮಾಧವಾಚಾರ್ಯರನ್ನು ಮತ್ತು ಇದೀಗ ವಿದ್ಯಾವಾಚಸ್ಪತಿ ಸವ್ಯಸಾಚಿ ಬಹುಶ್ರುತ ವಿದ್ವನ್ಮಣಿ ಬನ್ನಂಜೆ ಗೋವಿಂದಾಚಾರ್ಯರನ್ನು ಕಳೆದುಕೊಂಡಿದೆ. ಇಂಥ ಘಟಾನುಘಟಿಗಳ ಅಗಲಿಕೆ, ಒಂದು ಬಗೆಯಲ್ಲಿ ಪುರದ ಪುಣ್ಯವೆ ಪುರುಷರೂಪದಿಂದ ಹೋದಂತಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!