ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಮ್​​

ಹೋಗಿ ಬಿಟ್ರಲ್ಲಾ ಆಚಾರ್ರೆ….ಇನ್ನೆಲ್ಲಿ ಹುಡುಕಲಿ ನಿಮ್ಮಂಥಾ ಅಮೋಘ ರತ್ನಗಳನ್ನು …​ ​ ಓ ..ವಾಙ್ಮಯ ವಾರಿಧಿಯೇ …ನಮೋ ..ನಮೋ .. 

ಇದೊಂದು ಅಪೂರ್ವ ದೃಶ್ಯ​. ​ ಶನಿವಾರ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ವೈಕುಂಠ ಸಮಾರಾಧನೆಯು ಅವರ ಉಡುಪಿಯ ​ಅಂಬಲಪಾಡಿ ​ಮನೆಯಲ್ಲಿ ನಡೆದಿತ್ತು. ಅಲ್ಲಿಗೆ ಆಚಾರ್ಯರ ಸಹಪಾಠಿ​,​ ಸ್ವಯಮ್ ಮಹಾವಿದ್ವಾಂಸರಾಗಿರುವ ಡಾ ಕೆ ಹರಿದಾಸ ಉಪಾಧ್ಯಾಯರು ತನ್ನ ಪುತ್ರ ಶ್ರೀಕಾಂತ ರೊಂದಿಗೆ ಆಗಮಿಸಿದ್ದರು.
 
 ಬನ್ನಂಜೆಯವರ ಭಾವಚಿತ್ರವನ್ಬು ದಿಟ್ಟಿಸುತ್ತಾ …ಅಯ್ಯೋ ಹೋಯ್ತು ಹೋಯ್ತು.. ಕಳಕೊಂಡ್ವಿ , ..ಅಮೂಲ್ಯ ರತ್ನವನ್ನು …ಅವ್ರು ನನ್ನ ಸಹಪಾಠಿ ಅಂತೆಲ್ಲ ಹೇಳಿಕೊಂಡು ದುಃಖದಿಂದ ಚಡಪಡಿಸಿದ ಭಾವುಕ ದೃಶ್ಯ​. 

ಡಾ .ಕೆ ಹರಿದಾಸ ಉಪಾಧ್ಯಾಯರು ಪ್ರಾಯಃ ಇಂದು ನಮ್ಮೊಡನಿರುವ ಅತೀ ಹಿರಿಯ ದ್ವೈತ ವೇದಾಂತದ ಮಹಾ ವಿದ್ವಾಂಸರು. 92 ವರ್ಷ ಪ್ರಾಯದಲ್ಲೂ ಅವರ ಅದ್ಭುತ ಸ್ಮರಣ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ.
ಉಡುಪಿ ಮಠಗಳ ನಾಲ್ಕು ತಲೆಮಾರಿನ ಯತಿಗಳನ್ನು ಕಂಡ, ಮಾತ್ರವಲ್ಲ ಒಡನಾಟವನ್ನು ಹೊಂದಿದ್ದ ಅಪರೂಪದ ವಿದ್ವಾಂಸರು. ಉಡುಪಿಯ ಪ್ರತಿಷ್ಠಿತ ಸಂಸ್ಕೃತ ಮಹಾವಿದ್ಯಾಲಯದಲ್ಲಿ ವೇದಾಂತ ಪ್ರಾಧ್ಯಾಪಕರಾಗಿ ಕಾಲೇಜಿನ ಪ್ರಾಚಾರ್ಯರಾಗಿ ಬಹಳ ಅವಧಿಗೆ ಸೇವೆ ಸಲ್ಲಿಸಿದವರು. 
 
ಶ್ರೀ ಕೃಷ್ಣ ಮಠದ ಆಸ್ಥಾನ ವಿದ್ವಾಂಸರು.‌ ವಿದ್ವತ್ತಿಗಾಗಿ ರಾಷ್ಟ್ರಪ್ರಶಸ್ತಿಯಿಂದ ಪುರಸ್ಕೃತರಾದವರು.‌ ಬನ್ನಂಜೆ ಯವರು ಮತ್ತು ತಾವು ಅದಮಾರು ಮಠದ ಕೀರ್ತಿಶೇಷ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಬಳಿ ಶ್ರೀ ಮನ್ನ್ಯಾಯಸುಧಾ ಪಾಠ ಕೇಳಿದ ಕ್ಷಣಗಳನ್ನು ನೆನಪಿಸಿಕೊಂಡು ಗದ್ಗದಿತರಾದರು ​. 

ಹಿರಿಯ ವಿದ್ವತ್ ಶ್ರೇಷ್ಠರಾದ ಹರಿದಾಸ ಉಪಾಧ್ಯಾಯರು ಇನ್ನೂ ​​ಬಹುಕಾಲ ಆರೋಗ್ಯದಿಂದ ನಮ್ಮೊಡನಿರ ಲೆಂದು ಶ್ರೀ ಕೃಷ್ಣ ಮುಖ್ಯಪ್ರಾಣರಲ್ಲಿ ​ಸಜ್ಜನರ ಪ್ರಾರ್ಥನೆ​​​​.
 
 
 
 
 
 
 
 
 
 
 

Leave a Reply