ಬೈಕಾಡಿ ಹುಡುಗ ಅಂತಾರಾಷ್ಟ್ರೀಯ ಖ್ಯಾತಿಯ ಅರಿವಳಿಕೆ ತಜ್ಞ

ಉಡುಪಿ ಜಿಲ್ಲೆಯ ಬೈಕಾಡಿಯಂಥ ಗ್ರಾಮೀಣ ಭಾಗದ ಹುಡುಗನೊಬ್ಬ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಕಳೆದ ಹಲವು ವರ್ಷಗಳಿಂದ ಲಂಡನ್ ನಗರನಿವಾಸಿಯಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಅರಿವಳಿಕೆ ತಜ್ಞನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಮಾತ್ರವಲ್ಲದೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆ.

 
 ಡಾ ರವಿಶಂಕರ ರಾವ್ ಬೈಕಾಡಿ ಕಳೆದ ೧೬ ವರ್ಷಗಳಿಂದ ಲಂಡನ್ ನಗರದಲ್ಲಿನ ಜಗತ್ತಿನ ಪ್ರಪ್ರಥಮ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವೆಂದು ಪ್ರಖ್ಯಾತವಾಗಿರುವ ದ ರಾಯಲ್ ಮಾರ್ಸ್ಡನ್ ಆಸ್ಪತ್ರೆಯ ಅರಿವಳಿಕೆ ವಿಭಾಗದಲ್ಲಿ ಪರಿಣತ ವಿಶೇಷ ಸಲಹಾಕಾರರೆಂಬ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಗಂಭೀರ ಸ್ವರೂಪದ ಕ್ಯಾನ್ಸರ್ ಶಸ್ತ್ರಚಿಕಿತ್ಸಾಪೂರ್ವದಲ್ಲಿ  ಹಾಗೂ ಶಸ್ತ್ರಚಿಕಿತ್ಸಾ ಸಂದರ್ಭದಲ್ಲಿ ಡಾ ರವಿ ನೀಡುವ ಪರಿಣತ ಸಲಹೆ​​ ಅತ್ಯಂತ ನಿರ್ಣಾಯಕವೆನಿಸಿದೆ.
 
ಕ್ಯಾನ್ಸರ್ ರೋಗಿಗಳ ರಕ್ತ ಪರಿಚಲನೆ ಸುಧಾರಣೆ, ನಿರ್ವಹಣೆ, ರಕ್ತ ಕೊರತೆ ಎದುರಿಸುವ ರೋಗಿಗಳ ನಿರ್ವಹಣೆಯಲ್ಲಿ ಇವರು ಸಿದ್ಧಹಸ್ತರು. ಕಳೆದ ೧೬ ವರ್ಷಗಳಿಂದ ಲಂಡನ್‌ನಲ್ಲಿ ಅರಿವಳಿಕೆ ತಜ್ಞರ  ಸಂಘಟನೆಯ ಪ್ರಮುಖ ರೂವಾರಿಯಾಗಿ ರಕ್ತ ಸ್ರಾವ,​ ​ರಕ್ತ ಹೆಪ್ಪುಗಟ್ಟುವಿಕೆ ಸಂಬಂಧದ ನಿರ್ವಹಣೆಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಗೋಷ್ಟಿ ಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ಡಾ ರವಿ,ಬೈಕಾಡಿ ಹಲವು ಮಹತ್ವದ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. 
 
ಡಾ ರವಿ ಅವರ ಬೋಧನ ನೈಪುಣ್ಯ, ತಜ್ಞತೆ, ಆವಿಷ್ಕಾರ ಪ್ರವೃತ್ತಿ, ಯುವಸಂಶೋಧಕರಿಗೆ ನೀಡುವ ಮೌಲಿಕ ಪ್ರೇರಣೆ ಹಾಗೂ ಅರಿವಳಿಕೆ ಕ್ಷೇತ್ರದಲ್ಲಿನ ಅಪಾರ ಜ್ಞಾನ ಮತ್ತು ಪರಿಶ್ರಮವನ್ನು ಗುರುತಿಸಿದ  ಲಂಡನ್‌ನ ಅರಿವಳಿಕೆ ತಜ್ಞರ ಸಂಘಟನೆ ಇದೇ ಜನವರಿ ತಿಂಗಳಲ್ಲಿ ಅವರಿಗೆ ಪ್ರಶಸ್ತಿ ನೀಡಿ ಸಂಮಾನಿಸಿದೆ. 
 
ರವಿಶಂಕರ್ ರಾವ್ ಬೈಕಾಡಿ ಹಿರಿಯ ಪ್ರಾಥಮಿಕ ಶಾಲೆ,​ ​ಬ್ರಹ್ಮಾವರದ ಎಸ್ಎಂಎಸ್ ಪದವಿ ಪೂರ್ವ ಕಾಲೇಜು, ಬೆಂಗಳೂರು ಮೆಡಿಕಲ್ ಕಾಲೇಜ್, ಮುಂಬಯಿನ ಕೆಇಎಂ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡಿದರು.​ ​ಲಂಡನ್‌ನ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ತರಬೇತಿ ಪಡೆದು ಎಫ್ ಆರ್ ಸಿ ಎ ಪದವಿ ಗಳಿಸಿದರು.​ ​ಸ್ವಲ್ಪ ಕಾಲ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು.
ಇವರು ಕರ್ಣಾಟಕ ​ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ  ಬೈಕಾಡಿ ಶ್ರೀನಿವಾಸ ರಾವ್ ಮತ್ತು ಶ್ರೀಮತಿ ಶಾರದಾ  ಅವರ ಪುತ್ರ​.
 
 
 
 
 
 
 
 
 
 
 

Leave a Reply