ದೇಶ ಸೇವೆಯೇ ಮಹದವಕಾಶ

                                            ಹೆಮ್ಮೆಯ ಯೋಧ

                                     ಜಗದೀಶ್ ಪ್ರಭು ಹಿರಿಯಡ್ಕ

ಯೋಧರು ಪ್ರಾತಃಸ್ಮರಣೀಯರು. ಯೋಧರ ತ್ಯಾಗ ವರ್ಣಿಸಲು ಅಸದಳ. ದೇಶದ ಒಳಿತಿಗಾಗಿ ತನ್ನ ಸರ್ವಸ್ವ ತ್ಯಾಗಮಾಡುವ ಭಾರತ ಮಾತೆಯ ಹೆಮ್ಮೆಯ ಸುಪುತ್ರರಲ್ಲಿ ಉಡುಪಿ ಜಿಲ್ಲೆಯ ಜಗದೀಶ್ ಪ್ರಭು ಹಿರಿಯಡ್ಕ ಅವರೂ ಓರ್ವರು.
ಅವರು ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಿದ ಬಗೆಯನ್ನು `ಕರಾವಳಿಎಕ್ಸ್ ಪ್ರೆಸ್’ನೊಂದಿಗೆ ಹೃದಯ ತುಂಬಿ ಮಾತನಾಡಿದರು. ಕಾರ್ಗಿಲ್ ವಿಜಯ ದಿವಸ್ ನ ಈ ದಿನದ ಕಾಣಿಕೆ ಇದು.
ಪ್ರಭು ಅವರಿಗೆ ಬಾಲ್ಯದಲ್ಲಿಯೇ ದೇಶಸೇವೆಯ ಬಯಕೆ ಮೊಳಕೆಯೊಡೆದಿತ್ತು. 10ನೇ ತರಗತಿಯಲ್ಲಿರುವಾಗಲೇ ಬೆಳಿಗ್ಗೆ 5 ಗಂಟೆಗೇ ಎದ್ದು ಓಟ, ನಡಿಗೆ ಇನ್ನಿತರ ವ್ಯಾಯಾಮವನ್ನು ಸ್ವಯಂ ಪ್ರೇರಣೆಯಿಂದ ನಡೆಸಲು ಆರಂಭಿಸಿದ್ದರು. ಸೈನ್ಯಕ್ಕೆ ಬೇಕಾದ ಪೂರ್ವಸಿದ್ಧತೆ ನಡೆಸಿ 1986ರಲ್ಲಿ ಸೈನ್ಯಕ್ಕೆ ಸೇರ್ಪಡೆಯಾದರು. ದೈಹಿಕ ಮತ್ತು ಮಾನಸಿಕವಾಗಿ ಸಿದ್ಧತೆಯನ್ನು ಆಸಕ್ತಿಯಿಂದಲೇ ನಡೆಸಿ ಸೈನ್ಯಕ್ಕೆ ಸೇರುವಲ್ಲಿ ಯಶಸ್ವಿಯೂ ಆದರು.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಉರಿ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜೋಧಪುರ್, ಬಬಿನಾ, ಫತೇಗಢ, ದೆಹಲಿ, ಝಾನ್ಸಿ, ಕೋಲ್ಕತ್ತ ಮತ್ತು ಪುಣೆಯಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಅವರು. ಅವುಗಳಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಉರಿ ಸೆಕ್ಟರ್ ನಲ್ಲಿ ಅವರು ಕಾರ್ಯನಿರ್ವಹಿಸಿದ ಪರಿ ಮತ್ತು ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಘಟನೆ ಇಂದಿಗೂ ನನ್ನ ಕಣ್ಣ ಮುಂದೆ ಸ್ಪಷ್ಟವಾಗಿ ಬರುತ್ತದೆ ಎಂದು ಅಂದಿನ ಘಟನೆಯನ್ನು ಸ್ಮರಿಸುವಾಗ ಅವರ ಬಗ್ಗೆ ಅಭಿಮಾನ ಉಕ್ಕುತ್ತದೆ.
ಕಾರ್ಗಿಲ್ ಯುದ್ಧದ ಸಮಯದಲ್ಲಿ ತನ್ನನ್ನು ಉರಿ ಸೆಕ್ಟರ್ ನಲ್ಲಿ ನಿಯೋಜನೆ ಮಾಡಲಾಗಿತ್ತು. ಉರಿ ಸೆಕ್ಟರ್ ಭೌಗೋಳಿಕವಾಗಿ ಹೆಚ್ಚು ಕಡಿಮೆ ಸಿಯಾಚಿನ್ ನಂತೆಯೇ ಇತ್ತು. ತೀವ್ರ ಹಿಮಪಾತ. ಆಪ್ರದೇಶದಲ್ಲಿ 3 ತಿಂಗಳು ಹಿಮಪಾತ ಇರುತ್ತದೆ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಭೀಕರ ಶೆಲ್ಲಿಂಗ್ ದಾಳಿ ಉಭಯ ಕಡೆಗಳಿಂದಲೂ ನಡೆಯುತ್ತಿತ್ತು. ನಮ್ಮ ಕಡೆಯಿಂದ ದಿನ ಕಳೆದಂತೆ ಪ್ರತಿರೋಧದ ತೀವ್ರತೆ ಹೆಚ್ಚತೊಡಗಿತು. ತಾನು 21 ದಿನಗಳ ಕಾಲ ಕೇವಲ ನೀರು ಮತ್ತು ಬ್ರೆಡ್ ಸೇವಿಸಿ ಬಂಕರ್ ನಲ್ಲಿ ಅವಿತುಕೊಂಡು ದಾಳಿಯನ್ನು ನಡೆಸುತ್ತಿದ್ದದೆ ಎಂದು ಹೆಮ್ಮೆಯಿಂದ ಹೇಳಿದರು.
ತನ್ನ ಸುತ್ತಮುತ್ತಲೂ ಶೆಲ್ ಗಳು ಹಾದುಹೋಗುತ್ತಿದ್ಧ ದೃಶ್ಯಗಳು ಕಣ್ಣಿಗೆ ಕಟ್ಟುತ್ತಿದೆ. ನಮ್ಮವರು ಗಾಯಗೊಂಡಾಗ, ಸಾವನ್ನಪ್ಪಿದ್ದಾಗ ಅವರನ್ನು ಹೆಲಿಕಾಪ್ಟರ್ ಮೂಲಕ ಸಾಗಿಸುವ ಕಾರ‍್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಎಲ್ಲಿಯ ವರೆಗೆ ಅಂದರೆ ಶೆಲ್ಲಿಂಗ್ ನಿಂತಿದೆ ಎಂದು ಸಂದೇಶ ಬಂದಾಗ ವಯಕ್ತಿಕ ಕೆಲಸಗಳನ್ನು ನಿರ್ವಹಿಸಲು ಹೋಗುತ್ತಿದ್ದೆ. ನಿದ್ದೆ ಮಾಡಲೂ ಅಸಾಧ್ಯವಾದ ಪರಿಸ್ಥಿತಿ ಅಲ್ಲಿ ಉದ್ಭವಿಸಿತ್ತು. ಕಣ್ಣಿನಲ್ಲಿ ಕಣ್ಣಿಟ್ಟಂತೆ ದಿನದ 24 ಗಂಟೆಯೂ ಅಲೆರ್ಟ್ ಆಗಿ ಗಡಿ ಕಾಯಲು ನಿಂತಿದ್ದೆ. ಕಾರ್ಗಿಲ್ ಯುದ್ಧ ಗೆದ್ದ ದಿನ ನಮ್ಮ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅಂದು ಉರಿ ಸೆಕ್ಟರ್ ನಲ್ಲಿ ನಾವು ಕುಣಿದು ಕುಪ್ಪಳಿಸಿದ ನೆನಪು ಇನ್ನೂ ಅಳಿಸಿಹೋಗಿಲ್ಲ, ಹೋಗುವುದೂ ಇಲ್ಲ ಎಂದು ಯುದ್ಧ ಗೆದ್ದ ಹರ್ಷದಲ್ಲಿ ನುಡಿದಾಗ ಮೈ ಜುಮ್ಮೆನ್ನುತ್ತಿತ್ತು.
ಹೆಚ್ಚಿನವರು ಮಧ್ಯದಲ್ಲಿ ಸೇನೆ ಬಿಟ್ಟು ವಾಪಾಸಾಗುತ್ತಾರೆ. ಆದರೆ, ನಾನು ಸುದೀರ್ಘ ಅವಧಿಯನ್ನು ಸೈನ್ಯದಲ್ಲಿ ಕಳೆದ ಕಾರಣ ನನಗೆ ‘ಲಾಂಗ್ ಸರ್ವಿಸ್ ಮೆಡಲ್’ ಸಿಕ್ಕಿದೆ. ಅದರ ಜೊತೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದಕ್ಕಾಗಿ ‘ಆಪರೇಶನ್ ವಿಜಯ್ ಮೆಡಲ್’ ಮತ್ತು ‘ಜಮ್ಮು ಕಾಶ್ಮೀರ್ ಮೆಡಲ್’ ಲಭಿಸಿದೆ. ಈ ಪದಕಗಳಿಗಿಂತ ದೇಶಸೇವೆ ಮಾಡಲು ಅವಕಾಶ ಲಭಿಸಿರುವುದೇ ತನ್ನ ಪಾಲಿಗೆ ದೊಡ್ಡ ಪದಕ ಎಂದು ಹೆಮ್ಮೆಯಿಂದ ಹೇಳಿದರು ಜಗದೀಶ ಪ್ರಭು.
ಯುವಜನತೆ ದೇಶದ ದೊಡ್ಡ ಆಸ್ತಿ. ಅವರು ತಮ್ಮ ಜೀವನದಲ್ಲಿ ವಿಜಯ ಸಾಧಿಸಬೇಕು. ದೇಶಸೇವೆ ಮಾಡುವ ದೃಢಸಂಕಲ್ಪ ಮಾಡುವ ಮೂಲಕ ದೇಶಕ್ಕಾಗಿ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಸೈನ್ಯಕ್ಕೆ ಸೇರಲು ಗಟ್ಟಿ ಮನಸ್ಸು ಮಾಡಿ ಅದಕ್ಕೆ ಬೇಕಾದ ಪೂರ್ವತಯಾರಿ ನಡೆಸಬೇಕು. ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸಲು ಮುನ್ನುಡಿ ಬರೆಯಬೇಕು ಎಂದು ಇಂದಿನ ಯುವಜನತೆಗೆ ಕಿವಿಮಾತು ಹೇಳಿದರು.
ವಿದೇಶೀಯರೂ ಭಾರತದ ಬಗ್ಗೆ ಅತೀವ ಗೌರವ ಹೊಂದಿದ್ದಾರೆ. ಹಾಗಿರುವಾಗ ಇಲ್ಲಿಯೇ ಜನಿಸಿ ಜೀವಿಸುವವರಿಗೆ ನಮ್ಮ ದೇಶದ ಬಗ್ಗೆ ಎಷ್ಟು ಗೌರವ ಇರಬೇಕು? ತಾಯಿ ವಿರುದ್ಧವೇ ಘೋಷಣೆ ಕೂಗುವ ಹೀನ, ನಪುಂಸಕರಿಗೆ ಆಜೀವ ಪರ್ಯಂತ ಕಾರಾಗೃಹದಲ್ಲಿಟ್ಟು ಇತರರಿಗೂ ಸ್ಪಷ್ಟ ಸಂದೇಶವನ್ನು ರವಾನಿಸುವ ಅಗತ್ಯತೆ ಇದೆ ಎಂದು ಪ್ರಭು ಗುಡುಗಿದರು

 

 

Leave a Reply