ಉಡುಪಿ: ವಿವಿಧಡೆ ಸಡಗರದ ಕ್ರಿಸ್ಮಸ್ ಹಬ್ಬ

ಉಡುಪಿ: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು. ಕಳೆದೆರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗ ಹಬ್ಬದ ಆಚರಣೆಯನ್ನು ಸರಳವಾಗಿ ಆಚರಿಸಿದ್ದ ಕ್ರೈಸ್ತ ಸಮುದಾಯ ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ಶನಿವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಯೇಸುವಿನ ಜನನದ ವೃತ್ತಾಂತವನ್ನು ಪರಿಚಯಿಸುವ ಗೀತ ಗಾಯನವನ್ನು ನಟನೆಯ ಮೂಲಕ ಪ್ರದರ್ಶಿಸ ಲಾಯಿತು.

ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಅಧಿಕೃತ ಚರ್ಚು ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರ ದಲ್ಲಿ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದರು.

ಗೌರವ, ಮಾನವೀಯತೆ ಮತ್ತು ಶಾಂತಿ. ಪ್ರತಿಯೊಬ್ಬರಿಗೂ ನಿಜವಾದ ಗೌರವ ಪ್ರಾಪ್ತಿಯಾದಾಗ, ಪ್ರತಿಯೊಬ್ಬನೂ ಮಾನವೀಯತೆಯ ಸದ್ಗುಣವನ್ನು ತನ್ನದಾಗಿಸಿಕೊಂಡಾಗ ಮತ್ತು ಶಾಂತಿಯಿಂದ ಜೀವಿಸಿ ಆ ಶಾಂತಿಯ ಕಂಪನ್ನು ಎಲ್ಲೆಡೆ ಪಸರಿಸಿದಾಗ, ಇಂದು ಈ ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ದುಷ್ಟತನವನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯ. ಈ ಮೂರು ಶ್ರೇಷ್ಟ ಕಾಣಿಕೆಗಳಿಗೆ ಈ ಭೂಲೋಕ ವನ್ನು ಸ್ವರ್ಗಲೋಕವನ್ನಾಗಿಸುವ ಶಕ್ತಿಯಿದೆ, ಆದರೆ ಇದನ್ನು ನಮ್ಮದಾಗಿಸಿ ಸದ್ಗುಣ ಸಂಪನ್ನರಾಗಲು ನಮ್ಮಲ್ಲಿ ಇಚ್ಛಾಶಕ್ತಿಯ ಅಗತ್ಯತೆಯಿದೆ.

ಯೇಸು ಜನಿಸಿದ ಗೋದಲಿಯೊಳಗೆ ಒಮ್ಮೆ ಇಣುಕಿ ನೋಡೋಣ. ಅಲ್ಲಿ ಒಂದು ಕುಟುಂಬವಿದೆ, ನವ ಸಮಾಜದ ನೈಜ ಚಿತ್ರಣವಿದೆ, ದೇವರು-ಮಾನವರ ನಡುವೆ ಸಂಧಾನವಿದೆ. ಗೋದಲಿಯಲ್ಲಿ ಪ್ರೀತಿ-ನೆಮ್ಮದಿಯಿದೆ, ಶಾಂತಿ-ಸಮಾಧಾನವಿದೆ; ಎಲ್ಲರ ನಡುವೆ ಸಹಬಾಳ್ವೆ ಇದೆ; ಪರಸ್ಪರ ಗಾಢವಾದ ಸಂಬಂಧವಿದೆ. ಅಲ್ಲಿ ದೂತರ ಗಣವಿದೆ, ಮಧುರ ಗಾನವಿದೆ. ಗೋದಲಿಯಲ್ಲಿ ಸರ್ವರ ಮಧ್ಯೆ ಐಕ್ಯತೆ ಇದೆ. ಅಲ್ಲಿ ಸರ್ವರಿಗೂ ಸ್ವಾಗತವಿದೆ, ಸರ್ವರಿಗೂ ಅವಕಾಶವಿದೆ. ಜುದೇಯಾದ ಕುರುಬರಂತೆ ಸಮಾಜದಲ್ಲಿ ಕಡೆಗಣಿಸಲ್ಪಟ್ಟವರಿಗೂ, ತುಳಿತಕ್ಕೊಳಗಾದವರಿಗೂ ಅಲ್ಲಿ ಸ್ಥಾನವಿದೆ. ಎಲ್ಲಕ್ಕೂ ಮಿಗಿಲಾಗಿ ಅಲ್ಲಿ ಕಂದ ಯೇಸುವಿನ ರೂಪದಲ್ಲಿ ದೇವರಿದ್ದಾರೆ.

ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಸ್ವಾರ್ಥ, ದುರಹಂಕಾರ, ವಿಭಜನೆ, ದ್ವೇಷ, ಅಸತ್ಯ, ಅಪ್ರಾಮಾಣಿಕತೆ, ಕಲಹ ದೂರವಾಗಿ ಶಾಂತಿ, ಪ್ರೀತಿ, ಸಮಾನತೆ, ಅನುಕಂಪ, ದಯೆ, ನೆಲೆಸಿದಾಗ, ಅಲ್ಲಿ ದೇವರು ನೆಲೆನಿಲ್ಲುತ್ತಾರೆ. ಅದೇ ನಿಜವಾದ ಕ್ರಿಸ್ತಜಯಂತಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್ ಅಂದ್ರಾದೆ, ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಡೀ ಜಿಲ್ಲೆಯ ಚರ್ಚುಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದವು.

ಶನಿವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಕ್ರೈಸ್ತ ಭಾಂಧವರು ಸ್ವಾಗತಿಸಿದರು.

ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ| ಲೆಸ್ಲಿ ಡಿಸೋಜಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಕುಂದಾಪುರ ಹೊಲಿ ರೋಸರಿ ಚರ್ಚಿನಲ್ಲಿ ವಂ |ಸ್ಟ್ಯಾನಿ ತಾವ್ರೊ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ ಆಲ್ಬನ್ ಡಿಸೋಜಾ, ತೊಟ್ಟಂ ಅನ್ನಮ್ಮ ದೇವಾಲಯದಲ್ಲಿ ವಂ|ಡೆನಿಸ್ ಡೆಸಾ, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನಲ್ಲಿ ವಂ|ಬ್ಯಾಪ್ಟಿಸ್ ಮಿನೇಸಜಸ್ ಇವರುಗಳ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆಯ ಬಲಿಪೂಜೆಗಳು ನಡೆದವು.

ಹಬ್ಬದ ಅಂಗವಾಗಿ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಕ್ರೈಸ್ತ ಭಾಂಧವರು ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು

 
 
 
 
 
 
 
 
 
 
 

Leave a Reply