ತೀರ್ಥದಲ್ಲಿ ತುಳಸಿಯ ಮಹತ್ವ ~ ಶ್ರೀವತ್ಸ ಬಲ್ಲಾಳ

ಹಿರಿಯರಿಂದ ಕೇಳಿದ ಒಂದು ಕಥೆ. ಧರ್ಮಸ್ಥಳ ಕ್ಷೇತ್ರ ಹಿಂದಿನಿಂದಲೂ ಜೈನರು ನಡೆಸಿಕೊಂಡು, ಪೂಜಿಸಿಕೊಂಡು ಬಂದಂಥ ಪುಣ್ಯಕ್ಷೇತ್ರ. ಇಂದಿಗೂ ಅಲ್ಲಿನ ಹೆಗ್ಗಡೆಯವರು ಜೈನ ಮತದವರು. ನಡೆಸುತ್ತಿರುವುದು ವೈದಿಕ ಸಂಪ್ರದಾಯ ದಂತೆ ವಾದಿರಾಜರಿಂದ ಪುನಃ ಪ್ರತಿಷ್ಠೆಗೊಳಪಟ್ಟು ಸ್ಥಾಪನೆಗೊಂಡ  ಮಂಜುನಾಥನ ದಿವ್ಯಕ್ಷೇತ್ರ. ಜಾತಿ-ಮತ-ಬೇಧ ವಿಲ್ಲದೇ ಧರ್ಮಾಚರಣೆಯನ್ನು ನಡೆಸಿಕೊಂಡು ಬರುತ್ತಿರುವ ಪುಣ್ಯಕ್ಷೇತ್ರಗಲ್ಲೊಂದು ಧರ್ಮಸ್ಥಳ.
ಅದು ಬ್ರಿಟಿಷರ ಕಾಲ, ಆಗಷ್ಟೇ ಮೈಕ್ರೋಸ್ಕೋಪ್ ಅನ್ವೇಷಣೆಯಾಗಿ ಕಣ್ಣಿಗೂ ಕಾಣದ ಸೂಕ್ಷಾತಿಸೂಕ್ಷ್ಮ ಜೀವಿಗಳನ್ನು ಮೈಕ್ರೋಸ್ಕೋಪಿನ ಮುಖಾಂತರ ನೋಡಬಹುದಾಗಿದ್ದಂಥ ಕಾಲಾವಧಿಯ ಆರಂಭ. ಜೈನ ಸಂಪ್ರದಾಯದಲ್ಲಿ ನೀರನ್ನು ಸೋಸಿಯೇ, ಅದೂ ಏಳು ಪದರ ಬಟ್ಟೆಯ ಮೂಲಕ ನೀರನ್ನು ಇಳಿಸಿ ಅದರಲ್ಲಿರುವ ಯಾವುದೇ ಜೀವಿಯ ಅಂಶ ಕುಡಿಯುವ ನೀರಿನಲ್ಲಿ ಇರದಂತೆ ಮಾಡಿ ಸೇವಿಸುವ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುತ್ತಿದ್ದ ಕಾಲ. ಇಂದಿಗೂ ಬಹುಶಃ ಅನೇಕ ಜೈನರು ಆ ಕ್ರಮವನ್ನನುಸರಿಸುತ್ತಿರಬಹುದು.

ಧರ್ಮಸ್ಥಳ ಸುಮಾರು ಹದಿನಾರನೇ ಶತಮಾನದಲ್ಲಿ ವಾದಿರಾಜರಿಂದ ಪುನಃ ಪ್ರತಿಷ್ಠೆಗೊಳಪಟ್ಟು ವೈದಿಕ ಸಂಪ್ರದಾಯ ದಂತೆ ಪೂಜೆಗೊಳಪಡುತ್ತಿದ್ದಾಗ ಅಂದಿನ ಹೆಗ್ಗಡೆಯವರ ಬಗ್ಗೆ  ಮಂಜುನಾಥನ ಅಭಿಷೇಕದ ತೀರ್ಥವನ್ನು ಸೋಸದೆ ನೇರವಾಗಿ ತೆಗೆದುಕೊಳ್ಳುವ ಮೂಲಕ ತಮ್ಮ ಸಂಪ್ರದಾಯವನ್ನು ಪಾಲಿಸುತ್ತಿಲ್ಲವೆಂದು ಕಟ್ಟಾ ಜೈನ ಸಂಪ್ರದಾಯ ವಾದಿಗಳು ಅಸಮಾಧಾನವನ್ನು ಹೊರಹಾಕಿದ್ದರು.

ಈ ಗಂಭೀರವಾದ ವಿಷಯ ಚರ್ಚೆಗೊಳಪಡುತ್ತಾ ಏಳು ಪದರದಲ್ಲಿ ಸೋಸಿಲ್ಪಟ್ಟು ಹಿಡಿದಿಟ್ಟ ನೀರು ಮತ್ತು ಮಂಜು ನಾಥನಿಗೆ  ಅಭಿಷೇಕ ಮಾಡಿದ ತೀರ್ಥ (ನೇರ ಬಾವಿಯಿಂದ ತಂದು ಶಾಸ್ತ್ರೋಕ್ತವಾಗಿ ಅಭಿಷೇಕ ಮಾಡಿ ತೀರ್ಥವೆಂದು ತೆಗೆದಿಟ್ಟದ್ದು)  ಇವೆರಡನ್ನೂ ಆಗಷ್ಟೇ ಅನ್ವೇಷಣೆಗೊಂಡಿದ್ದ ಮೈಕ್ರೋಸ್ಕೋಪಿನ ಮೂಲಕ ಪರೀಕ್ಷೆ ಮಾಡುವುದೆಂದು ನಿರ್ಧರಿಸಲಾಯಿತು. ಹಾಗೆ ಮಾಡಿದ ಪರೀಕ್ಷೆಯ ಮೂಲಕ ತಿಳಿದು ಬಂದದ್ದೇನು? ಯಾವ ಸೋಸುವಿಕೆಯ ಪ್ರಕ್ರಿಯೆ ಏಳು ಸಲ ಪುನರಾವರ್ತಿಸಲ್ಪಟ್ಟು ಕುಡಿಯಲು ಯೋಗ್ಯ ಎಂದು ಭಾವಿಸಲಾಗಿತ್ತೋ ಆ ಪ್ರಕ್ರಿಯೆಯ ಕೊನೆಯಲ್ಲಿ ಮೈಕ್ರೋಸ್ಕೋಪ್ ಬರಿಯ ಕಣ್ಣಿಗೆ ಕಾಣಲಾರದ ಸೂಕ್ಷ್ಮ್ಮಾತಿಸೂಕ್ಷ್ಮ  ಜೀವಿಗಳ ಇರವನ್ನು ಬಯಲು ಮಾಡಿತ್ತು. ಆದರೆ ಅದೇ ತೀರ್ಥ ಮೈಕ್ರೋಸ್ಕೋಪಿನ ಪರೀಕ್ಷೆಯಲ್ಲಿ ಯಾವುದೇ ಕ್ರಿಮಿ, ಕೀಟ, ಕಣ್ಣಿಗೆ ಕಾಣದ ಸೂಕ್ಷ್ಮ್ಮಾತಿಸೂಕ್ಷ್ಮ ಜೀವಿಗಳ ಕುರುಹೇ ಇಲ್ಲವೆಂದು ತೋರಿಸಿಕೊಟ್ಟಿತ್ತು.
ಏನೋ ಹೆಚ್ಚುಕಡಿಮೆ ಆಗಿರಬೇಕು ನಡೆಸಿದ ಪ್ರಯೋಗದಲ್ಲಿ, ಪರೀಕ್ಷೆಯಲ್ಲಿ ಎಂದು ಸಂಶಯ ವ್ಯಕ್ತಪಡಿಸಿ ತೀರ್ಥದಲ್ಲಿದ್ದ ತುಳಸೀದಳವನ್ನು ಅದೇ ಮೈಕ್ರೋಸ್ಕೋಪ್ ಪರೀಕ್ಷೆಗೊಳಪಡಿಸಿದಾಗ ಕಂಡು ಬಂದದ್ದೇನೆಂದರೆ ತೀರ್ಥದಲ್ಲಿನ ತುಳಸೀ ದಳವು ಅಭಿಷೇಕಕ್ಕೆ ಉಪಯೋಗಿಸಿದ ಹಾಗೂ ಸೋಸದೇ ಹಿಡಿದಿಟ್ಟ ನೀರಿನಲ್ಲಿನ ಎಲ್ಲಾ ಸೂಕ್ಷ್ಮ್ಮಾತಿಸೂಕ್ಷ್ಮ ಜೀವಿಗಳನ್ನು ತನ್ನೆಡೆಗೆ ಸೆಳೆದುಕೊಂಡು ಭಕ್ತರು ಸೇವಿಸುವ ತೀರ್ಥದಲ್ಲಿ ಯಾವುದೇ ಕಲ್ಮಶ ಹಾಗೂ ಮಲಿನವಿಲ್ಲದಂತೆ ಮಾಡಿತ್ತು ಎಂದು.
ಅಲ್ಲಿಗೆ ಜೈನರ ಸಂಪ್ರದಾಯವನ್ನು ಹೆಗ್ಗಡೆಯವರು ಪಾಲಿಸುತ್ತಿಲ್ಲವೆಂಬ ಆಕ್ಷೇಪ  ನಿಂತು ಹೋದದ್ದೂ ಸಹಜವೇ. ಆದ್ದರಿಂದ ಇಂದಿಗೂ ತೀರ್ಥ ಸೇವಿಸುವಾಗ ಒಂದು ವೇಳೆ ತೀರ್ಥದೊಂದಿಗೆ ತುಳಸೀದಳ ಬಂದರೆ ಅದನ್ನು ಬದಿಗಿಟ್ಟು ಕೇವಲ ತೀರ್ಥವನ್ನು ಮಾತ್ರ ಸ್ವೀಕರಿಸುವ ಸಂಪ್ರದಾಯ ನಡೆದುಕೊಂಡೇ ಬಂದಿದೆ.

ತೀರ್ಥವನ್ನು ಸೇವಿಸುವಾಗ ಹೇಳುವ ಮಂತ್ರ
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ|
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ||

ಪ್ರಥಮಂ ಕಾಯ ಶುದ್ಧ್ಯರ್ಥಂ।
ದ್ವಿತೀಯಂ ಧರ್ಮ ಸಾಧನಂ।
ತೃತೀಯಂ ಮೋಕ್ಷ ಸಿದ್ಧ್ಯರ್ಥಂ।
ಏವಂ ತೀರ್ಥಂ ತ್ರಿಧಾ ಪಿಭೇತ್।।

 
 
 
 
 
 
 
 
 

Leave a Reply