ಎಲ್ಲಾ ರೀತಿಯ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ~ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಮೈಸೂರು: ಎಲ್ಲರ ರೀತಿಯ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಜೀವನ ಎದುರಿಸಿದರೆ ಸಾರ್ಥಕತೆ ಲಭ್ಯವಾಗುತ್ತದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು.
ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ ದ ೩ನೇ ದಿನ ಅವರು ವಿಶೇಷ ಆಶೀರ್ವಚನ ನೀಡಿದರು. ನಮಗೆ ಆಗಾಗ್ಗೆ ಎದುರಾಗುವ ದುಃಖ ಯಾವುದೇ ರೀತಿ ದೊಡ್ಡದಲ್ಲ. ಮನಸ್ಸು ದೃಢವಾಗಿ ನಿಂತರೆ ಎಲ್ಲವನ್ನೂ ಸಹನೆ ಮಾಡಿ ಬಾಳಬಹುದು ಎಂದು ಭಾಗವತವೇ ಹೇಳಿದೆ. ಸುಖ ಬಂದಾಗ ಅಹಂಕಾರ ಪಡದೇ, ದುಃಖ ಎದುರಾದಾಗ ಕುಗ್ಗದೇ ಮುಂದುವರಿಯಬೇಕು. ಉತ್ಸಾಹ, ಹುಮ್ಮಸ್ಸು, ಕ್ರಿಯಾಶೀಲತೆ ದೊರಕಬೇಕು ಎಂದರೆ ಮನವನ್ನು ಅಧ್ಯಾತ್ಮದತ್ತ ಹರಿಸಬೇಕು ಎಂದು ಸ್ವಾಮೀಜಿ ಹೇಳಿದರು.
ದೇವರ ಕಾರುಣ್ಯ ಬಹಳ ದೊಡ್ಡದು. ಆತ ಎಲ್ಲರನ್ನೂ ಸಲಹುತ್ತಾನೆ. ಇದಕ್ಕಾಗಿ ನಮ್ಮಲ್ಲಿ ವಿನಯ ಮತ್ತು ಭಕ್ತಿ ಇರಬೇಕು.  ಈ ಸತ್ಯ ಅರಿಯಲು ಶ್ರೀ ಆಚಾರ್ಯ ಮಧ್ವರು ರಚಿಸಿಕೊಟ್ಟ ಭಾಗವತ ತಾತ್ಪರ್ಯ ನಿರ್ಣಯ ಗ್ರಂಥ ಸಹಕಾರಿಯಾಗಿದೆ ಎಂದರು. ಬಹಳ ನೋವು ಮತ್ತು ಸಂಕಟಗಳು ಎದುರಾದಾಗ ನಮಗಿಂತ ಹೆಚ್ಚು ನೋವು ಅನುಭವಿಸುವ ರೋಗಿಗಳತ್ತ ನೋಡಬೇಕು.ಆಗ ನಾನು ಬಹಳ ಉತ್ತಮ ಸ್ಥಿತಿಯಲ್ಲಿ ಇದ್ದೇನೆ ಎನಿಸುತ್ತದೆ.
ಸಿರಿವಂತಿಕೆ ಬಂದಾಗ ನಮಗಿಂತಲೂ ಹೆಚ್ಚು ಸಿರಿವಂತರನ್ನು  ನೋಡಬೇಕು. ಆಗ ನಾನು ಗರ್ವ ತೋರಬಾರದು ಎನಿಸುತ್ತದೆ. ಒಟ್ಟಾರೆ ಅಸುರೀ ಪ್ರವೃತ್ತಿಯಿಂದ ಹೊರಬಂದು ದೈವಿಕ ಚಿಂತನೆ ರೂಢಿಸಿಕೊಂಡು ಬದುಕುವುದೇ ಜೀವನದ ಧ್ಯೇಯವಾಗಬೇಕು ಎಂದು ಶ್ರೀ ಸತ್ಯಾತ್ಮರು ಸಂದೇಶ ನೀಡಿದರು. ಭಕ್ತರಿಗೆ ತಪ್ತ ಮುದ್ರಾಧಾರಣೆ ನೀಡಿದ ಶ್ರೀಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಇದೇ ಸಂದರ್ಭ ಧನ್ವಂತರಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Leave a Reply