ಜಗನ್ಮಾತೆಗೆ ಶರಣು… ಪೂರ್ಣಿಮಾ ಜನಾರ್ದನ್ ಕೊಡವೂರು

ಭಕುತರ ದುರಿತ ನಿವಾರಿಸಿ ಆರೋಗ್ಯಧಾರೆಯ ಹರಿಸಿ ನೆಮ್ಮದಿಯ ಭಾವ ಸ್ಫುರಿಸು ನೀ ದುರ್ಗಾ ಮಾತೆ …ಮನದ ಆಳಕ್ಕೆ ಇಳಿದು ಘಾಸಿ ಮಾಡುವ ಅಹಂಕಾರ, ಮಾತ್ಸರ್ಯವನು ತೊಲಗಿಸಿ ಹರಸು ನೀ‌ ಮೋಕ್ಷಪ್ರದಾತೆ ..
.
ಪರರ ನಿಂದನೆಗೆ ಬಗ್ಗದೆ ಅನ್ಯರ ಮುಖಸ್ತುತಿಗೆ ಹಿಗ್ಗದೆ ಸಮಚಿತ್ತವ ಕಾಯೋ ನೀ ಆನಂದದಾತೇ ..ಎಲ್ಲರಲ್ಲಿ ಒಳಿತನ್ನು ಕಾಣುತ್ತ ಸರ್ವರಿಗೆ ಮಂಗಲವ ಕರುಣಿಸೆಂಬ ಭಾವವ ಮನದಿ ಮೂಡಿಸು ನೀ ಅಭಯ ಸಂಹಿತೆ….

ಮನೆ ಮಂದಿಯೊಂದಿಗೆ ಊರ ಜನರ ಹಿತವ ಕಾಯುತ್ತಾ ಲೋಕದ ಸಮಸ್ತ ಜನತೆಗೆ ಸುಖವ ನೀಡು ನೀ ಲೋಕ ಪೂಜಿತೆ …

ಋಣಾತ್ಮಕ ಭಾವನೆಯ ಅಳಿಸಿ ಸಕಾರಾತ್ಮಕ ಭಾವನೆಗಳ ಅರಳಿಸಿ ಜೀವನಕ್ಕೆ ಸ್ಪೂರ್ತಿ ತುಂಬು ನೀ ಶಕ್ತಿಮಾತೆ…

ನಿನ್ನ ದರುಶನ ಮಾತ್ರದಿ ಸಕಲ ಪಾಪಗಳ ಪರಿಹರಿಸಿ ಇಷ್ಟಾರ್ಥಗಳ ನೀಡಿ ಬಾಳ ಬೆಳಗು ನೀ ಸರ್ವಾಲಂಕಾರ ಭೂಷಿತೆ…

ಮನವ ಕಾಡುವ ದುಷ್ಟ ಶಕ್ತಿಗಳ ದಮನಿಸಿ,ಜ್ಞಾನ ಜ್ಯೋತಿಯ ಬೆಳಗಿಸಿ ಸತ್ಕರ್ಮ ಪಥದಿ ನಡೆಸು ನೀ ಹರಿಹೃತ್ಕಮಲ ಶೋಭಿತೆ…

ಅಕ್ಷರ ಮಾಲೆ ಧರಿಸಿ,ಮನೆ ಮನಗಳಲ್ಲಿ ಅಕ್ಷರ ಧಾರೆ ಹನಿಸಿ, ಅಭಯ ನೀಡಿ ಅನುಗ್ರಹಿಸು ಅನವರತ ನೀ ಅಕ್ಷರ ಮಾತೆ

ಜಗತ್ತಿನ ಚರಾಚರಗಳಿಗೆ ನಿನ್ನ ಕರುಣಾಮೃತವ ಹರಿಸಿ, ತಪ್ಪುಗಳ ಕ್ಷಮಿಸಿ ಮಾತೃ ಪ್ರೇಮವ ಸುರಿಸಿ ನಿನ್ನ ಮಡಿಲಲ್ಲಿ ಒಪ್ಪಿಸಿಕೊ ನೀ ಜಗನ್ಮಾತೆ…

ಹೇ… ದುರ್ಗಾ ಮಾತೆ, ಮೋಕ್ಷ ಪ್ರದಾತೆ, ಆನಂದದಾತೆ, ಅಭಯ ಸಂಹಿತೆ, ಲೋಕ ಪೂಜಿತೆ, ಶಕ್ತಿದಾತೆ, ಸರ್ವಾಲಂಕಾರ ಭೂಷಿತೆ, ಹರಿ ಹೃತ್ಕಮಲಶೋಭಿತೆ, ಅಕ್ಷರ ಮಾತೆ, ತಾಯೇ ಜಗನ್ಮಾತೆ .,.ನಿನಗೆ ಶರಣು ಶರಣು…

ಪೂರ್ಣಿಮಾ ಜನಾರ್ದನ್ ಕೊಡವೂರು

 
 
 
 
 
 
 
 
 
 
 

Leave a Reply