Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ನೆನೆ ಮನವೆ ವೀರ ಸಾವರ್ಕರ್ ರವರ~ಪೂರ್ಣಿಮಾ ಜನಾರ್ದನ್ ಕೊಡವೂರು 

ಇಂದು ಅಪ್ಪಟ ದೇಶಭಕ್ತ ವೀರ ಸಾವರ್ಕರ್ ರವರ(28.05) ಜನ್ಮ ದಿನ‌. ಅಗಲಿದ ಮಹಾನ್ ಚೇತನಕ್ಕೆ ಕೊಡವೂರ ಜನತೆ ಸಲ್ಲಿಸಿದ ನಮನ ಮಾತ್ರ ಅನುಕರಣೀಯ, ಆದರ್ಶ. ಇಂದು ಕೊಡವೂರಿನ ಹಲವು‌ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕ್ರಾಂತಿಕಾರಿ ವೀರ ಸಾವರ್ಕರ್ ರವರ ಹೆಸರು ಹೊತ್ತ ಪಥದ ಹಿಂದೆ ನಮ್ಮ ಯೋಚನಾ ಪಥ ಸಾಗಿತು.
ಜಾತಿ‌ಮತ ಬೇಧವಿಲ್ಲದೆ, ಬಡವ ಬಲ್ಲಿದನೆಂಬ ತಾರತಮ್ಯವಿಲ್ಲದೆ ನಾವೆಲ್ಲಾ ಒಂದು. ನಾವೆಲ್ಲಾ ಹಿಂದೂ ಎಂಬ ಪರಿಕಲ್ಪನೆಗೆ ಭಾವ ತುಂಬಿದವರು ವಿನಾಯಕ ದಾಮೋದರ ಸಾವರ್ಕರ್ ರವರು.
“ಯಾರು ಸಿಂಧೂ ನದಿಯಿಂದ ಸಾಗರದವರೆಗಿನ ಈ ಭರತ ವರ್ಷವನ್ನು ತನ್ನ ಪಿತೃಗಳ ದೇಶ ಎಂದೂ ಮತ್ತು ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದು ಪರಿಗಣಿಸುತ್ತಾರೋ ಅವರು ಹಿಂದೂಗಳು “ ಎಂದು‌ ಘೋಷಿಸಿದ ಅಪ್ಪಟ ದೇಶಭಕ್ತ ಅವರು. ಇಂದು ಭಾರತ ಮಾತೆಯ ಈ ಸುಪುತ್ರ ಸ್ವಾತಂತ್ರ್ಯ ವೀರನ‌ ಜನುಮದಿನ.
ಮಹಾರಾಷ್ಟ್ರ  ನಾಸಿಕ್ ನ ಭಗ್ರೂರ್ ನಲ್ಲಿ 1883,ಮೇ 28 ರಂದು ದಾಮೋದರ ಸಾವರ್ಕರ್ ಮತ್ತು‌ ಯಶೋದ ಸಾವರ್ಕರ್ ದಂಪತಿಗಳ ಪುತ್ರನಾಗಿ ಜನಿಸಿದ ಇವರ ಪತ್ನಿ ಯಮುನಾಬಾಯಿ ಮತ್ತು ಮಕ್ಕಳು ಪ್ರಭಾಕರ್ ಸಾವರ್ಕರ್ ,‌ ವಿಶ್ವಾಸ್ ಸಾವರ್ಕರ್ ಮತ್ತು ಮಗಳು ಪ್ರಭಾತ್ ಚಿಪ್ಲುನ್ಕರ್. ಲಂಡನ್ ಶಿಕ್ಷಣ ಕೇಂದ್ರವೊಂದರಿಂದ ಬ್ಯಾರಿಸ್ಟರ್ ಪದವಿ‌ ಪಡೆದ ಇವರುಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು.
ಇವರ ಜೀವನ ಕಥಾನಕವೇ ರೋಚಕ, ದೇಶ ಪ್ರೇಮಿಗಳಿಗೆ ಸ್ಪೂರ್ತಿ ದಾಯಕ. ವಿದ್ಯಾರ್ಥಿ ಜೀವನದಲ್ಲೇ ಸ್ವದೇಶೀ ‌ಆಂದೋಲನದಲ್ಲಿ‌ ಭಾಗಿಯಾಗಿದ್ದ ಇವರು , ಬಾಲ ಗಂಗಾಧರ ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡವರು. ವಿದೇಶದಲ್ಲಿ ಶಿಕ್ಷಣ ಪಡೆಯುವಾಗಲೂ ಸ್ವತಂತ್ರ ಭಾರತ ಸಮಾಜ( Free India Society) ಯನ್ನು ಸ್ಥಾಪಿಸಿ ಭಾರತೀಯ ಸಂಪ್ರದಾಯ, ಆಚಾರ ವಿಚಾರಗಳ ಮಹತ್ವವನ್ನು, ಸ್ವಾತಂತ್ರ್ಯದ ಅಗತ್ಯವನ್ನು ಸಾರಿದವರು. 
ದೇಶ ಭಕ್ತರನ್ನು ಒಗ್ಗೂಡಿಸುವ ಕಾಯಕದಲ್ಲಿರುವಾಗಲೇ ರಾಜಕೀಯ ಗೊಂದಲದಲ್ಲಿ ಸಿಲುಕಿದ ವೀರ ಸಾವರ್ಕರ್ ರವರನ್ನು ಕಲೆಕ್ಟರ್ ಒಬ್ಬನ ಕೊಲೆ ಆಪಾದನೆ ಮೇರೆಗೆ ಆಗಿನ ‌ಬ್ರಿಟಿಷ್ ಆಡಳಿತ 13 ನೇ ಮಾರ್ಚ್ 1910 ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ ಪ್ಯಾರಿಸ್ ನಲ್ಲಿ ಬಂಧಿಸಲಾಯಿತು. ಐವತ್ತು ವರುಷಗಳ ಜೀವಾವಧಿ ಶಿಕ್ಷೆ ವಿಧಿಸಿದ ಬ್ರಿಟಿಷ್ ಸರಕಾರ1911, ಜುಲೈ 4 ರಂದು ಅವರನ್ನು ಕುಪ್ರಸಿದ್ಧ ಅಂಡಮಾನ್ ಕಾರಾಗೃಹಕ್ಕೆ ಕಳುಹಿಸಿ ಅತ್ಯಂತ ಕಠಿಣ ಕಾಲಾಪಾನಿ ಶಿಕ್ಷೆ ವಿಧಿಸಲಾಯಿತು.
ತಮ್ಮ ಜೀವಿತಾವಧಿಯ ಅಮೂಲ್ಯ ಯೌವನದ ದಿನಗಳನ್ನು ಚಿತ್ರ ವಿಚಿತ್ರ ಘೋರ ನರಕಯಾತನೆ ಅನುಭವಿಸಿ ಕಳೆದ ಈ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರನ ಹಲವು ಕ್ಷಮಾ ಅರ್ಜಿಗಳ‌ ಬಳಿಕ, ಹಿರಿಯ ಧುರೀಣರ ಒತ್ತಾಯದ ಬಳಿಕ ಮೇ 12,1921 ರಂದು ರತ್ನಗಿರಿ‌ ಜೈಲಿಗೆ ಮತ್ತೆ ಅಲ್ಲಿಂದ ಯೆರವಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಂತೂ ಹಲವು ತೀವ್ರ ನಿಬಂಧನೆಗಳ ಬಳಿಕ ಮತ್ತೈದು ವರುಷ ರಾಜಕೀಯದಲ್ಲಿ ತೊಡಗಿಸಿಕೊಳ್ಳ ಬಾರದೆಂಬ  ಶರ್ತದೊಂದಿಗೆ ಜನವರಿ 6,1924 ರಂದು ಅವರ ಬಿಡುಗಡೆ ಆಯಿತು.
ಅಷ್ಟೊಂದು ನರಕ ಯಾತನೆ ಅನುಭವಿಸಿದರೂ ಅವರ ಧೀ ಶಕ್ತಿ ಎನಿತೂ ಕುಂದಿರಲಿಲ್ಲ. ಹತ್ತು ಹಲವು‌ ಕೃತಿಗಳ ಕರ್ತರಾದ ಅವರ ವಿಶೇಷ ಕೃತಿಗಳಾದ ಕಮಲಾ, ನನ್ನ ಜೀವಾವಧಿ ಶಿಕ್ಷೆ, 1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಕಾಳಾ ಪಾಣಿ, ಬಂಗಾರದ ಆರು ಪುಟಗಳು ಹಿಂದುತ್ವ, ಗಾಂಧಿ‌ ಗೊಂದಲ, ಮಾಪಿಳ್ಳೆಗಳ ಬಂದ್, ಹಿಂದೂ ಪದ ಪಾದ ಶಾಹಿ,  ಹೀಗೆ ಹತ್ತು ಹಲವು ಸ್ಪೂರ್ತಿ ದಾಯಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಜನಾನುರಾಗಿ, ಉತ್ತಮ‌ ವಾಗ್ಮಿ ಕೂಡಾ‌.
ಅಂತಹ ಮಹಾನ್ ವ್ಯಕ್ತಿ ತಮ್ಮ ಜೀವಿತದ ಸುಮಾರು 27 ವರುಷಗಳನ್ನು‌ ಬ್ರಿಟಿಷರ ಕಪಿ‌ಮುಷ್ಟಿ ಯಲ್ಲಿ ಕಳೆದರೂ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಯುವ ಜನತೆಯಲ್ಲಿ ಹಚ್ಚಿದವರು. ಅವರು ಕಳೆದ ಅಂಡಮಾನ್ ನ ಕಾರಾಗೃಹ ದ ಕೋಣೆ ಅಂದರೆ  ಭಾರತೀಯರಿಗೆ ಭಾವನಾತ್ಮಕ ನಂಟು. ಅದರ ನೆನಪಾದಾಗೆಲ್ಲ ಸಾವರ್ಕರ್ ನೆನಪಲ್ಲಿ ಆರ್ದವಾಗುವ ದೇಶಭಕ್ತರ ಮನಸ್ಸು. 
ತನ್ನ ದೇಶ ಸ್ವತಂತ್ರವಾಯಿತು,  ತನ್ನ ಹಂಬಲ ಈಡೇರಿತು, ತನ್ನ ಕರ್ತವ್ಯ ಮುಗಿಯಿತೆಂಬ ಸಂತಸದಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ 1966 ರಲ್ಲಿ  ದೇಹತ್ಯಾಗ ಮಾಡುವ ನಿರ್ಧಾರ ಮಾಡಿ ಅನ್ನ ಆಹಾರಾದಿಗಳನ್ನು‌ ತ್ಯಜಿಸಿ  ಆತ್ಮಾರ್ಪಣೆ ಮಾಡಿಕೊಂಡ ಮಹಾನ್ ಚೇತನ‌ವನ್ನು ಇಂದು ಮಾತ್ರವಲ್ಲ ದಿನ ದಿನವೂ ನೆನೆಯೋಣ. ಅವರ ಜೀವನದ ಆದರ್ಶ, ಅವರ ಜೀವನದ ಉದ್ದೇಶ , ಅವರ ಜೀವನ ಪ್ರೀತಿ , ಅವರ ಧೈರ್ಯ, ಅವರ ಸ್ಥೈರ್ಯ ಅನುಕರಣೀಯ. ಮತ್ತೊಮ್ಮೆ ಆ ಮಹಾನ್ ಚೇತನಕ್ಕೆ ನಮನ.
@:- ನಮ್ಮ ಮಕ್ಕಳಿಗೆ ನಮ್ಮ ಚರಿತ್ರೆಯಲ್ಲಿ ಬಂದು ಹೋದ ದೇಶ ಭಕ್ತರ, ಮಹಾನ್ ‌ವ್ಯಕ್ತಿಗಳ ಪರಿಚಯವಾಗಬೇಕು, ಹಿರಿಯರ ಆದರ್ಶ ಕಿರಿಯರಿಗೆ ಮಾರ್ಗದರ್ಶಕವಾಗಬೇಕೆಂಬ ಉದ್ದೇಶ ದಿಂದ ಇಂದು ಉದ್ಘಾಟನೆಗೊಂಡ ಈ ಮಾರ್ಗಕ್ಕೆ ನಾಡು ಕಂಡ ಅಪ್ಪಟ ದೇಶಭಕ್ತ , ವೀರ ಸಾವರ್ಕರ್ ರವರ ಹೆಸರು ಇರಿಸಿದ್ದೇವೆ. ಕೊಡವೂರಿನಲ್ಲಿ ಹೀಗೆ ಹತ್ತು ಹಲವು‌ ಮನೆಗಳಿಗೆ ರಸ್ತೆಯ ಸಮಸ್ಯೆ ಇದ್ದು ಒಂದೊಂದಾಗಿ ಸ್ಥಳೀಯರ ಸಹಕಾರದಿಂದ ಹೊಸ ಹೊಸ ಮಾರ್ಗ ಗಳನ್ನು ಶ್ರಮದಾನದ ಮೂಲಕ ಮಾಡಿಕೊಂಡು ಬರುತ್ತಲಿದ್ದೇವೆ.
ದೇಶಭಕ್ತರ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯೊಂದಿಗೆ, ನಿತ್ಯ ನೋಡಿ ನೆನಪು ಮಾಡಿಕೊಳ್ಳಲು ಒಂದೊಂದು ರಸ್ತೆಗೆ ಮಹಾನ್ ವ್ಯಕ್ತಿಗಳ ಹೆಸರಿಸುತ್ತಿ ದ್ದೇವೆ. ಅವರ ಜೀವನದ ಪಥದಲ್ಲಿ ಕಿರಿಯರು ನಡೆದು ಜೀವನವನ್ನು ಸಾರ್ಥಕ ಪಡಿಸಿಕೊಳ್ಳ ಬೇಕೆಂಬ ಅಭಿಲಾಷೆ ನಮ್ಮದು
ವಿಜಯ ಕೊಡವೂರು, ನಗರಸಭಾ ಸದಸ್ಯರು, ಕೊಡವೂರು 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!