ಶ್ರೀ ಉತ್ತರಾದಿ ಮಠದಿಂದ ಶ್ರೀ ರಘುವರ್ಯ ತೀರ್ಥರ ಆರಾಧನೆ ಸಂಪನ್ನ

ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವಾದ ಶ್ರೀ ಉತ್ತರಾದಿ ಮಠದ ಪರಂಪರೆಯಲ್ಲಿ ಬಂದ ಶ್ರೀ ರಘುವರ್ಯ ತೀರ್ಥರ ಆರಾಧನೆಯನ್ನು ಅವರ ಮೂಲ ಬೃಂದಾವನ ಸ್ಥಳವಾದ ಆನೆಗೊಂದಿ ಸಮೀಪದ ನವ ಬೃಂದಾವನ ಗುಡ್ಡೆಯಲ್ಲಿ ಮಧ್ಯಾರಾಧನೆಯಾದ ಇಂದು ಅತ್ಯಂತ ವೈಭವದಿಂದ ಆಚರಿಸಲಾಯಿತು.

ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ ನಡೆದ ಆರಾಧನೆಯು ಶ್ರೀಮನ್ಯಾಯಸುಧಾದಿ ಗ್ರಂಥಗಳ ಪಾಠ ಪ್ರವಚನ ಪಂಚಾಮೃತ ಅಭಿಷೇಕ ಶ್ರೀ ಮೂಲ ರಾಮದೇವರ ಪೂಜೆ ಅಲಂಕಾರ ಬ್ರಾಹ್ಮಣ ಸಂತರ್ಪಣಾದಿಗಳು ಉತ್ತರಾದಿ ಮಠದ ಸಂಪ್ರದಾಯ ದಂತೆ ನಡೆಸಲಾಯಿತು.

ಮಂತ್ರಾಲಯ ಮಠದ ವತಿಯಿಂದ ಶ್ರೀ ರಘುವರ್ಯ ತೀರ್ಥರ ಆರಾಧನಾ ದಿನಗಳಂದೇ ಹಮ್ಮಿಕೊಂಡಿದ್ದ ಅನಾವಶ್ಯಕವಾಗಿ ವಿವಾದಕ್ಕೆ ಎಡೆಮಾಡಿಕೊಡುವ ಕಾರ್ಯಕ್ರಮವನ್ನು ಹೈಕೋರ್ಟ್ ರದ್ದು ಪಡಿಸಿ ಉತ್ತರಾದಿ ಮಠದ ಶ್ರೀ ರಘುವರ್ಯ ತೀರ್ಥರ ಆರಾಧನೆಯನ್ನು ಪ್ರತಿ ವರ್ಷದಂತೆ ಮೂಲ ಬೃಂದಾವನ ಸ್ಥಳವಾದ ನವ ಬೃಂದಾವನ ಗಡ್ಡೆಯಲ್ಲಿ ನಡೆಸಲು ಆದೇಶ ಹೊರಡಿಸಿದ್ದು ಈ ಬಾರಿಯ ಆರಾಧನೆಯ ವಿಶೇಷವಾಗಿತ್ತು.

ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಸಂಸ್ಥಾನದ ಶ್ರೀ ಶ್ರೀ ರಘುವಿಜಯ ತೀರ್ಥರು ಆರಾಧನೆಗೆ ದಯಮಾಡಿಸಿ ತಮ್ಮ ಆಶೀರ್ವಚನ ನೀಡುತ್ತಾ ಶ್ರೀ ಶ್ರೀ ರಘುವರ್ಯ ತೀರ್ಥರ ಮಹಿಮೆ ಅಪಾರ ಎಂದು ವರ್ಣಿಸಿದರು ಜೊತೆಗೆ ಶ್ರೀ ರಘುವರ್ಯ ತೀರ್ಥರ ಮೂಲ ಬೃಂದಾವನ ನವ ಬೃಂದಾವನ ದಲ್ಲಿಯೇ ಉಂಟು ಅನಾವಶ್ಯಕವಾಗಿ ಈ ವಿಷಯದಲ್ಲಿ ತಕರಾರು ಯಾರೂ ಮಾಡತಕ್ಕದ್ದಲ್ಲ ಎಂದು ತಿಳಿಸಿದರು.

ಬೆಂಗಳೂರಿನ ಶ್ರೀ ಜಯತೀರ್ಥರ ವಿದ್ಯಾಪೀಠದ , ಮುಂಬೈ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಅನೇಕ ವಿದ್ವಾಂಸರು ಮತ್ತು ವಿಶ್ವಮಧ್ವ ಮಹಾ ಪರಿಷತ್ತಿನ ಬೆಂಗಳೂರು ಶಾಖೆಯ ಎಲ್ಲ ಸಂಶೋಧಕರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಮ್ಮ ಅನುಗ್ರಹ ಸಂದೇಶದಲ್ಲಿ ಶ್ರೀ ರಘುವರ್ಯ ತೀರ್ಥರ ಮಹಾ ಮಹಿಮೆ ಗಳನ್ನು ವರ್ಣಿಸಿ ತಿಳಿಸಿದ್ದಲ್ಲದೆ ಶ್ರೀ ರಘುವರ್ಯ ತೀರ್ಥರಿಂದ ರಚಿತವಾದ ಶ್ರೀ ಮಧ್ವಾಷ್ಟಕ ಕೃತಿಯ ಅರ್ಥ ವಿಶೇಷಗಳನ್ನು ವಿವರಿಸಿದರು.

ಶ್ರೀ ಮಠದ ಮುಖ್ಯಾಧಿಕಾರಿಗಳಾದ ಪಂ ವಿದ್ಯಾಧೀಶಾಚಾರ್ಯ ಗುತ್ತಲ ಅವರು ಗುರುಗಳ ಮಹಿಮೆಯ ಬಗ್ಗೆ ಉಪನ್ಯಾಸ ನೀಡಿದರು. ಪಂ ವಾದಿರಾಜಾಚಾರ್ಯ ಕರ್ಣಂ, ಪಂ ಶ್ರೀನಿವಾಸಾಚಾರ್ಯ, ಪಂ ಚಿಕ್ಕೇರೂರು ಮುಕ್ಕುಂದಿ ಶ್ರೀಕಾಂತಾಚಾರ್ಯ ಮುಂತಾದವರು ನವ ಬೃಂದಾವನ ಗುಡ್ಡೆಯಲ್ಲಿರುವ ಶ್ರೀ ರಘುವರ್ಯ ತೀರ್ಥರ ಬೃಂದಾವನ ಮಾಹಿತಿ ಮತ್ತು ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಸುಮಾರು ಆರುನೂರು ವರ್ಷಗಳಿಂದ ನವ ಬೃಂದಾವನ ದಲ್ಲಿ ಉತ್ತರಾದಿ ಮಠದ ವತಿಯಿಂದ ನಡೆದುಕೊಂಡು ಬಂದ ಶ್ರೀ ರಘುವರ್ಯ ತೀರ್ಥರ ಆರಾಧನೆ ಬಗ್ಗೆ ಅನೇಕ ಮಾಹಿತಿಗಳನ್ನು ಪಂಡಿತರು ತಮ್ಮ ಉಪನ್ಯಾಸದಲ್ಲಿ ನೀಡಿದ್ದು ವಿಶೇಷವಾಗಿತ್ತು.

ನಾಳೆಯೂ ಉತ್ತರಾರಾಧನೆಯಲ್ಲಿ ಮುದ್ರಾಧಾರಣೆ ಪಾಠ ಪ್ರವಚನ ಪಂಚಾಮೃತ ಅಭಿಷೇಕ ಶ್ರೀ ಮೂಲ ರಾಮನ ಪೂಜೆ ಅಲಂಕಾರಾದಿಗಳು ನೆರವೇರುತ್ತವೆ ಎಂದು ಶ್ರೀ ಮಠದ ದಿವಾನರಾದ ಪಂಡಿತ ಶಶಿ ಆಚಾರ್ಯ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply