ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ‘ಸಪ್ತಪದಿ’ ತುಳಿದು ಸತಿಪತಿಗಳಾದ ನಾಲ್ಕು ಜೋಡಿಗಳು 

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕನಸಿನ ಯೋಜನೆಯಾದ ಉಚಿತ ಸಾಮೂಹಿಕ ಮದುವೆ ‘ಸಪ್ತಪದಿ’ ಕಾರ್ಯಕ್ರಮವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ರಂಗ ಮಂದಿರದಲ್ಲಿ ಕೋವಿಡ್ ನಿಯಮಾವಳಿಯಂತೆ ಸರಳವಾಗಿ ಬುಧವಾರ ನಡೆಯಿತು.        

ಸತಿಪತಿಗಳಾದರಿವರು:  
ಬೈಂದೂರು ಕೆರ್ಗಾಲಿನ ಶ್ರೀಧರ್ ಪೂಜಾರಿ- ಉಡುಪಿಯ ಮಣಿಪ್ರಭ ಶೆಟ್ಟಿ, ಕುಂದಾಪುರ ಜಪ್ತಿಯ ಪ್ರಶಾಂತ್ ಪೂಜಾರಿ ಸೌಕೂರು ನಂದಿನಿ ದೇವಾಡಿಗ, ಗುಜರಾತಿನ ಶ್ರೀಪಾದ ಪಾಲಂಕರ್ ಅಂಕೋಲದ ಪಲ್ಲವಿ, ಉತ್ತರ ಕನ್ನಡ ಯಾಣದ ಗಜಾನನ ಕುಮಟಾದ ಶಾರದಾ ​ಇಂದು ಸಪ್ತಪದಿ ತುಳಿದರು. ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿಯವರು ವಿವಾಹ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿ, ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದಲ್ಲಿ ಮದುವೆಯಾಗುವುದೇ ​ಒಂದು ​ಯೋಗವಾಗಿದ್ದು ಇಲ್ಲಿ ಮದುವೆಯಾಗಲು ಭಾಗ್ಯ ಬೇಕು. ಸರಕಾರದ ಸಪ್ತಪದಿ ಕಾರ್ಯಕ್ರಮವನ್ನು ಜನರು ಸದುಪಯೋಗ​ ​ಪಡಿಸಿಕೊಳ್ಳಬೇಕು. ಮದುವೆಯಾಗಲು ಲಕ್ಷಾಂತರ ರೂಪಾಯಿ ​ಖರ್ಚು  ಮಾಡುವ ಬದಲು ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಮದುವೆ ಮಾಡಿಕೊಳ್ಳುವುದು ಸೂಕ್ತ. ಕೊರೋನಾ‌ ಸಂಬಂಧ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಸಜ್ಜನಿ ಕೆಯ ಮದುವೆ ದೇವಸ್ಥಾನದಲ್ಲಿ ವಿಧಿವತ್ತಾಗಿ ನಡೆದರೆ ಅದಕ್ಕೊಂದು ಮಹತ್ವ ಸಿಗಲಿದೆ. ದೇವಸ್ಥಾನದಲ್ಲಿ ಮದುವೆ ಮಾಡುವ ಕಾರ್ಯ ಹೆಚ್ಚೆಚ್ಚು ನಡೆದರೆ ಇಡೀ ದೇಶವೇ ಸುಭಿಕ್ಷೆಯಾಗಲಿದೆ ಎಂದರು.​ಸರಕಾರದಿಂದ ನೂತನ ದಂಪತಿಗಳಿಗೆ ಬಂಪರ್ ಗಿಫ್ಟ್ : 
ವರನಿಗೆ ಹೂಹಾರ, ಪಂಚೆ, ಶರ್ಟ್, ಶಲ್ಯಕ್ಕಾಗಿ 5 ಸಾವಿರ ಹಾಗೂ ವಧುವಿಗೆ ಚಿನ್ನದ ತಾಳಿ, 8 ಗ್ರಾಂ ತೂಕದ 2 ಚಿನ್ನದ ಗುಂಡು, ಹೂವಿನ ಹಾರ, ಧಾರೆ ಸೀರೆ, ರವಿಕೆ ಖರೀದಿಗೆ 10 ಸಾವಿರ ಪ್ರೋತ್ಸಾಹಧನವನ್ನು ಸರಕಾರ ನೀಡುತ್ತದೆ.

ಇಂದು ಗಜಾನನ ಜೋಯಿಷರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ನಾಲ್ವರು ಜೋಡಿ ಹಸೆಮಣೆ ಏರಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ನವಜೋಡಿಗೆ ಆಶೀರ್ವದಿಸಿದರು. ದೇವಳದ ವತಿಯಿಂದ ದಂಪತಿಗಳನ್ನು ಗೌರವಿಸಲಾಯಿತು.​ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಾಹಣಾಧಿಕಾರಿ ಎಸ್.ಪಿ.ಬಿ. ಮಹೇಶ್, ಆಡಳಿತ ಮಂಡಳಿ ಸದಸ್ಯ ರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ಶೆಟ್ಟಿ, ಸಂಧ್ಯಾ ರಮೇಶ್,​ ​ರತ್ನಾ, ಕೆ.ಪಿ ಶೇಖರ್, ಕ್ಷೇತ್ರ ಅರ್ಚಕ ಶ್ರೀಧರ್ ಅಡಿಗ ಮೊದಲಾದವರಿದ್ದರು.

 
 
 
 
 
 
 
 
 

Leave a Reply