ಅಮೆರಿಕಾದಲ್ಲಿ ಆಚಾರ್ಯ ಮಧ್ವರ ಬೃಹತ್ ಮೂರ್ತಿ ಪ್ರತಿಷ್ಠಾಪನೆ~ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

ಬೆಂಗಳೂರು : ಅಮೆರಿಕಾದಲ್ಲಿ ಆಚಾರ್ಯ ಮಧ್ವರ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಬನ್ನಂಜೆ ಗೋವಿಂದಾಚಾರ್ಯ ಅಪೇಕ್ಷೆ ಈಡೇರಿಸಲು ​ಕ್ರಮ ​ತೆಗೆದುಕೊಳ್ಳಲಾಗುತ್ತಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಗೋವರ್ಧನಗಿರಿ ಪುತ್ತಿಗೆ ಮಠದಲ್ಲಿ ನಡೆದ ಬನ್ನಂಜೆ ಗೋವಿಂದಾಚಾರ್ಯ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಪಾದರು ಬನ್ನಂಜೆ ಅವರ ಒಡನಾಟ ಐದು ದಶಕಗಳಿಗೂ ಮೀರಿದ್ದು ಎಂದರು. ತಮ್ಮ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಮುಂದೆ ತಾವು ಪತ್ರಿಕೆಯಲ್ಲಿ ಪ್ರಕಟ ಪ್ರಕಟವಾಗುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯರ ಕಿಷ್ಕಿಂಧಾಕಾಂಡ ಅಂಕಣ ಬರಹವನ್ನು ಓದಿ ಅವರ ಪ್ರೌಢಿಮೆಗೆ ಬೆರಗಾಗಿದ್ದ ವಿಚಾರವನ್ನು ವಿವರಿಸಿದರು.

ಶ್ರೀ ವಿದ್ಯಾಮಾನ್ಯತೀರ್ಥರ ಅಪೇಕ್ಷೆಯಂತೆ ಸುಗುಣ ಮಾಲಾ ಮಾಸಪತ್ರಿಕೆಯನ್ನು ಆರಂಭಿಸಿ ಬನ್ನಂಜೆ ಗೋವಿಂದಾಚಾರ್ಯರನ್ನು ನಿರ್ದೇಶಕರನ್ನಾಗಿ ನಿಯುಕ್ತಿ ಮಾಡಿದ್ದಲ್ಲದೆ ಅವರಿಂದ ವೇದಗಳ ಸಂದೇಶ ಹಾಗೂ ಭಗವದ್ಗೀತಾ ಆಚಾರ್ಯತ್ರಯ ಭಾಷ್ಯ ಸಮೀಕ್ಷೆಯನ್ನು ನಿಯತವಾಗಿ ದಶಕಗಳ ಗಟ್ಟಲೆ ಪ್ರಕಟಿಸಲಾಯಿತು ಎಂದು ಶ್ರೀಪಾದರು ನೆನಪಿಸಿಕೊಂಡರು.

ಬನ್ನಂಜೆಯವರು ವೇದಾಂತದಲ್ಲಿ ಮಾಡಿದಷ್ಟೇ ಕೃಷಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಮಾಡಿದ್ದರು ಆದರೆ ರಾಜಕೀಯ ಮೇಲಾಟಗಳಿಂದ ಅವರಿಗೆ ​ದಕ್ಕ ಬೇಕಾಗಿದ್ದ ಪ್ರಶಸ್ತಿ-ಪುರಸ್ಕಾರಗಳು ದೂರ ಉಳಿಯಿತು ಎಂದು ಖ್ಯಾತ ಅಂಕಣ ಬರಹಗಾರ ರೋಹಿತ್ ಚಕ್ರತೀರ್ಥ ವಿಷಾದಿಸಿದರು.

ಬನ್ನಂಜೆಯವರು ಜ್ಞಾನಪೀಠ ಪುರಸ್ಕಾರಕ್ಕೆ ಅರ್ಹರಾಗಿದ್ದವರು ಎಂದ ರೋಹಿತ್, ಅವರು ಕನ್ನಡಭಾಷೆಗೆ ಬನ್ನಂಜೆ ಅವರು ತಮ್ಮ ಪ್ರವಚನಗಳ ಮತ್ತು ಬರಹಗಳ ಮೂಲಕ ನೀಡಿರುವ ಅನೇಕ ಹೊಸ ಪದಗಳನ್ನು ನಿಘಂಟಿನ ರೂಪದಲ್ಲಿ ಪ್ರಕಾಶಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ವಿದ್ವಾಂಸರಾದ ರಾಮಾಚಾರ್ಯ ಬಂಡಿ,  ಕಲಾವಿದ ಕೆ ಎಂ ಶೇಷಗಿರಿ ಬನ್ನಂಜೆ ಅವರ ಜೊತೆಗೆ ಇದ್ದ ತಮ್ಮ ಒಡನಾಟವನ್ನು ಹಂಚಿಕೊಂಡರು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಫಣಿರಾಮಚಂದ್ರ, ವಿದ್ವಾಂಸರಾದ ರಾಮ ವಿಠ್ಠಲ ಆಚಾರ್, ಕಡ್ಡಿ ಬದರಿ ಆಚಾರ್ಯ, ಕಲಾವಿದ ಕೆ ಎಂ ಶೇಷಗಿರಿ, ಬಂಡಿ ಶ್ಯಾಮಾಚಾರ್, ಅನಿಲಾ ಚಾರ್ಯ, ವಿವಿಧ ಬನ್ನಂಜೆ ಯವರೊಂದಿಗಿನ ಅನುಭವಗಳನ್ನು ಹಂಚಿಕೊಂಡರು.

ಶಿಷ್ಯ ವಿಜಯಸಿಂಹ ತೋಟಂತಿಲ್ಲಾಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬನ್ನಂಜೆಯವರ ಅಚಾರ್ಯತ್ರಯ ಭಾಷ್ಯ ಸಮೀಕ್ಷೆ ಭಗವದ್ಗೀತೆ 2ನೆ ಅಧ್ಯಾಯವನ್ನು ಪುತ್ತಿಗೆ ಶ್ರೀಗಳು ಬಿಡುಗಡೆ ಗೊಳಿಸಿದರು.

 
 
 
 
 
 
 
 
 
 
 

Leave a Reply