ಮಕ್ಕಳಿಗೆ ಬಾಲ್ಯದ ಸಂಸ್ಕಾರ ಅತ್ಯಗತ್ಯ  –  ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು 

ಇಡೀ ವಿಶ್ವದಲ್ಲೇ ಕೌಟುಂಬಿಕ ಮೌಲ್ಯದ ವಿಚಾರದಲ್ಲಿ ಭಾರತವೇ ಅಗ್ರಮಾನ್ಯ ಸ್ಥಾನದಲ್ಲಿದೆ.  ಇಡಿ ವಿಶ್ವವೇ ಅಚ್ಚರಿ ಪಡುವಂತಹ ವಿಷಯ ಇದು. ಒಟ್ಟಿಗೆ ಸಹಬಾಳ್ವೆಯಲ್ಲಿ ಜೀವನವನ್ನು ನಡೆಸುವಂತಹ ಮೌಲ್ಯ ನಮ್ಮ ದೇಶದಲ್ಲಿ ಬಹಳ ಅಪರೂಪವಾದದ್ದು ಮತ್ತು ಶ್ರೇಷ್ಠವಾದದ್ದು.
 ಭಾರತೀಯ ಕೌಟುಂಬಿಕ ಮೌಲ್ಯಕ್ಕೂ ಮತ್ತು ಪಾಶ್ಚಾತ್ಯ ಕೌಟುಂಬಿಕ ಮೌಲ್ಯಕ್ಕೂ ಒಂದು ಮಹತ್ವವಾದ ವ್ಯತ್ಯಾಸವೆಂದರೆ, ಭಾರತೀಯ ಮೌಲ್ಯದಲ್ಲಿ ಮಾತೃದೇವೋಭವ ಪಿತೃದೇವೋಭವ ಆಚಾರ‍್ಯ ದೇವೋಭವ, ಅತಿಥಿ ದೇವೋಭವ ಅನ್ನುವ ಸಂಸ್ಕಾರವನ್ನು ನಾವು ಕಲಿತಿದ್ದೇವೆ. 
ನಮ್ಮ ಮೂಲತತ್ವ ಏನೆಂದರೆ ನಾವು ಎಲ್ಲರ ಸೇವಕರು, ಎಲ್ಲರನ್ನೂ ಗೌರವಿಸಬೇಕು ಎಲ್ಲರನ್ನು ಆದರಿಸಬೇಕು ಅನ್ನುವ ಭಾವ. ಅದಕ್ಕೆ ವಿರುದ್ಧವಾಗಿ ಪಾಶ್ಚಿಮಾತ್ಯರಲ್ಲಿ ನಾನೇ ಶ್ರೇಷ್ಠ ಭಾವನೆಗೆ ಜಾಸ್ತಿ ಒತ್ತು. ಮಕ್ಕಳಿಗೆ ನೀನೇ ಶ್ರೇಷ್ಠವೆಂಬ ಭಾವನೆಯನ್ನು ತಲೆಯಲ್ಲಿ ತುಂಬಿಸಿದಾಗ, ಆ ಮಗುವಿಗೆ ನಾನೇ ಸರ್ವಶ್ರೇಷ್ಠ ಅನ್ನುವ ಭಾವನೆ ತಲೆಯಲ್ಲಿ ಉಳಿದು, ಏನಾದರೂ ಸಾಧನೆ ಮಾಡಿದರೂ ಕೂಡ ಉಳಿದವರನ್ನು ತಿರಸ್ಕರಿಸುವ ಮನೋಭಾವ ಹೊಂದಿರುತ್ತಾರೆ ಎಂದು ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತರ‍್ಥ ಸ್ವಾಮೀಜಿಯವರು ನುಡಿದರು.
ಚಿಂತನ ಮಂಥನದ ಸಮಯದಲ್ಲಿ ಪುತ್ತಿಗೆ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥರಿಗೆ ಗೌರವಾರ್ಪಣೆ ಸಲ್ಲಿಸಿದ ಶಿವಳ್ಳಿ ಕುಟುಂಬದ ಹಿರಿಯ ಸಂಸ್ಥಾಪಕರಲ್ಲೊಬ್ಬರಾದ ನಗರಿ ಶ್ರೀರಂಗ ಆಚಾರ್ಯರು ಶ್ರೀಗಳಿಗೆ ಮಾಲಾರ್ಪಣೆ ಮಾಡಿದ ಸಂಧರ್ಭದಲ್ಲಿ. 
ಉತ್ತರ ಅಮೆರಿಕದ ಶಿವಳ್ಳಿ ಕುಟುಂಬ ಸಂಸ್ಥೆಯವರು ಆಯೋಜಿಸಿದ “ಕೌಟುಂಬಿಕ ಮೌಲ್ಯಗಳು ಮತ್ತು ಹೆತ್ತವರ ಜವಾಬ್ದಾರಿ” ಎಂಬ ವಿಷಯದಲ್ಲಿ ಅಂತರ್ಜಾಲ ಸಮಾವೇಶದಲ್ಲಿ ಶ್ರೀಗಳು ಮಾರ್ಗದರ್ಶನ ಮಾಡುತ್ತಾ, ಸಮಕಾಲೀನ ಜಗತ್ತಿನಲ್ಲಿ ಭೌತಿಕ ಸಿರಿ ಸಂಪತ್ತು ಹೆಚ್ಚಾಗುತ್ತಿದ್ದಂತೆಯೇ ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಖೇದ ವ್ಯಕ್ತ ಪಡಿಸಿದರು. ಹೆತ್ತವರು ಮಕ್ಕಳನ್ನು ಹೊಗಳಿ  ಹೊನ್ನ ಶೂಲಕ್ಕೆ ಏರಿಸುವ ಬದಲು, ಕಷ್ಟದ ಅನುಭವವನ್ನು ಕೊಡಬೇಕು ಎಂದು ಕಿವಿ ಮಾತು ಹೇಳಿದರು. 

ಬಾಲ್ಯದಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು, ಜೊತೆಗೆ  ಸೇವಾಭಾವ ವಿನಯತೆ ಮಕ್ಕಳಿಗೆ ಕಲಿಸದಿದ್ದರೆ, ಮುಂದೆ ಸಂಪತ್ತು ಬಂದಾಗ ಮಕ್ಕಳು ಕೆಟ್ಟ ದಾರಿ ಹಿಡಿಯುವ ಸಾಧ್ಯತೆಯಿದೆ.  ಮಕ್ಕಳಿಗೆ ಸಾಮಾನ್ಯ ಸರಳ ಜೀವನ ನಡೆಸಲು ತರಬೇತಿ ಕೊಡಬೇಕು.

ಮಕ್ಕಳ ಮೇಲೆ ಪ್ರೀತಿ ಮುಖ್ಯ. ಆದರೆ ಅದು ಮೋಹ ಎನಿಸಬಾರದು.  ಇನ್ನೊಂದು ಮುಖ್ಯವಾದ ವಿಚಾರವೆಂದರೆ ತಂದೆ-ತಾಯಂದಿರು ಮಕ್ಕಳ ಎದುರಿನಲ್ಲಿ ಜಗಳವಾಡಬಾರದು. ಪರಸ್ಪರ ಅನ್ಯೋನ್ಯತೆಯಿಂದ ಇರಬೇಕು. ಆಗ ಮಕ್ಕಳಿಗೂ ಕೂಡ ತಂದೆ-ತಾಯಿಯರ ಮೇಲೆ ಗೌರವ ಹೆಚ್ಚುತ್ತದೆ. ಭಿನ್ನಮತವಿದ್ದರೂ ಕೂಡ ಮಕ್ಕಳ ಎದುರಿಗೆ ತೋರಿಸಬಾರದು ಎಂದು ಶ್ರೀಗಳು ನೆನಪಿಸಿದರು.
 
ಆರಂಭದಲ್ಲಿ ಶಿವಳ್ಳಿ ಕುಟುಂಬದ ಸದಸ್ಯರಿಂದ ಸಂಸ್ಕೃತ, ತುಳು, ಕನ್ನಡ, ಆಂಗ್ಲ ಮತ್ತು ಸಂಗೀತ ಭಾಷೆಗಳಲ್ಲಿ ಶ್ರೀಗಳನ್ನು ಸ್ವಾಗತಿಸಲಾಯಿತು. ಪ್ರಸ್ತುತ ಶ್ರೀ ಪುತ್ತಿಗೆ ಸ್ವಾಮೀಜಿಯವರು ಅಮೆರಿಕಾದ, ನ್ಯೂಜೆರ್ಸಿ ಪ್ರಾಂತದ ಎಡಿಸನ್ ನಲ್ಲಿ ಚಾತುರ್ಮಾಸ ದೀಕ್ಷೆಯಲ್ಲಿದ್ದು, ಶಿವಳ್ಳಿ ಕುಟುಂಬದ ಅಧ್ಯಕ್ಷ  ಶ್ರೀ ಪ್ರಶಾಂತ್ ಮಟ್ಟು ಮತ್ತು ಶ್ರೀ ವತ್ಸ ಬಲ್ಲಾಳ್ ಅವರು  ಮುಖತಃ: ಶ್ರೀಗಳನ್ನು ಭೇಟಿಯಾಗಿ ಗೌರವಿಸಿದರು. ಕೊನೆಯಲ್ಲಿ ಶ್ರೀ ಅರುಣ್ ರಾವ್ ಆರೂರ್ ಅವರು ವಂದಿಸಿದರು. 
ವರದಿ:  ಎ. ಕೇಶವರಾಜ್, ಇಂಡಿಯಾನಾ, ಅಮೇರಿಕಾ
 
 
 
 
 
 
 
 
 
 
 

Leave a Reply