ಯುವ ಜನತೆಯಲ್ಲಿ ಸಸ್ಯಗಳ ಅರಿವಿನ ಕೊರತೆ: ಪೇಜಾವರ ಶ್ರೀ ವಿಷಾದ

ಉಡುಪಿ: ಜೀವವಾಯು ನೀಡುವ ಮೂಲಕ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾದ ಸಸ್ಯಗಳ ಬಗ್ಗೆ ಇಂದಿನ ಯುವಜನತೆ ಅನಾಸಕ್ತಿ ವಹಿಸಿರುವುದು ಖೇದಕರ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಷಾದಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಎಂಜಿಎಂ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಹಿರಿಯ ಸಸ್ಯಶಾಸ್ತ್ರಜ್ಞ ಡಾ. ಕೆ. ಗೋಪಾಲಕೃಷ್ಣ ಭಟ್ ಅವರ ಬದುಕು- ಸಾಧನೆ ಕುರಿತ ಪುಸ್ತಕ ‘ಟ್ಯಾಕ್ಸೊನೊಮಿ ಭಟ್ಟರ ಯಾನ’ ಅನಾವರಣ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಭೂಮಿಯ ಮೇಲೆ ಸಸ್ಯಗಳು, ಪರ್ವತಗಳು, ನದಿ ತೊರೆಗಳು ಇರುವಷ್ಟು ಕಾಲ ಮಾನವ ಬದುಕಿರುತ್ತಾನೆ.‌ ಅವುಗಳ ವಿನಾಃ ಮನುಷ್ಯನ ಬದುಕಿಲ್ಲ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಆಧುನಿಕ ಕಾಲದಲ್ಲಿ ತಮ್ಮ ಐಷಾರಾಮಿ ಜೀವನಕ್ಕೋಸ್ಕರ ಬಹೂಪಯೋಗಿಯಾದ ಸಸ್ಯಗಳ ಹರಣ ನಡೆಯುತ್ತಿರುವುದು ಖಂಡನೀಯ ಎಂದರು.

ಖ್ಯಾತ ಸಸ್ಯ ವರ್ಗೀಕರಣಶಾಸ್ತ್ರಜ್ಞ ಡಾ. ಗೋಪಾಲಕೃಷ್ಣ ಭಟ್ ತಮ್ಮ ಜೀವನವನ್ನೇ ಸಸ್ಯಗಳ ಅಧ್ಯಯನಕ್ಕಾಗಿ ಮೀಸಲಿಟ್ಟ ನಮ್ಮ ನಡುವಿನ ಋಷಿ ಎಂದರು. ಉಡುಪಿ ಪರಿಸರದ ಕೆಲವು ಸಸ್ಯಗಳು ಗೋಪಾಲಕೃಷ್ಣ ಭಟ್ಟರಿಂದ ಗುರುತಿಸಲ್ಪಟ್ಟಿವೆ ಎಂಬುದು ಹೆಮ್ಮೆ ಎಂದರು. ಈ ಸಂದರ್ಭದಲ್ಲಿ ಶ್ರೀಪಾದರು ಗೋಪಾಲಕೃಷ್ಣ ಭಟ್ ದಂಪತಿಯನ್ನು ಸನ್ಮಾನಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸಿ. ಆರ್. ನಾಗೇಂದ್ರನ್ ಪುಸ್ತಕ ಬಿಡುಗಡೆಗೊಳಿಸಿದರು. ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಶುಭ ಹಾರೈಸಿದರು. ಅಭ್ಯಾಗತರಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪಿ.ಕೆ. ರಾಜಗೋಪಾಲ್ ಮತ್ತು ಡಾ. ಎನ್. ಎ. ಮಧ್ಯಸ್ಥ ಆಗಮಿಸಿದ್ದರು.

ಡಾ. ಗೋಪಾಲಕೃಷ್ಣ ಭಟ್ ಮತ್ತು ಭಾರತಿ ಗೋಪಾಲಕೃಷ್ಣ ಭಟ್ ಇದ್ದರು. ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply