ಅತ್ತೂರು ಪರ್ಪಲೆ ಗಿರಿಯಲ್ಲಿ ನ. 26-28 ಅಷ್ಟಮಂಗಲ ಪ್ರಶ್ನಾ ಚಿಂತನ ಕಾರ್ಯಕ್ರಮ

ಕಾರ್ಕಳ: ಕಾರ್ಕಳದ ಅತ್ತೂರು ಗ್ರಾಮದಲ್ಲಿನ ಪರ್ಪಲೆ ಗುಡ್ಡದ ಮೇಲೆ ಅನೇಕ ಶತಮಾನಗಳಿಂದ ಸುಪ್ತಾವಸ್ಥೆಯಲ್ಲಿರುವ ದೈವ ಸಾನಿದ್ಯವಿದೆ.ಅದನ್ನು ಮತ್ತೆ ಜಾಗೃತ ಸ್ಥಿತಿಗೆ ತರುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಕಾರ್ಕಳ ಮತ್ತು ಶ್ರೀ ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಕಾರ್ಕಳ ಇವರ ನೇತೃತ್ವದಲ್ಲಿ ನವೆಂಬರ್ 26-28ರವರೆಗೆ ಮೂರುದಿನ ಕಾರ್ಕಳ ಪರ್ಪಲೆ ಗಿರಿಯಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದರು.

ಮಂಗಳವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ಕಳೆದ ಒಂದು ದಶಕದಿಂದ ಕರಾವಳಿ ಭಾಗದಲ್ಲಿ ದೇವಾಲಯದ ಜೀರ್ಣೋದ್ಧಾರದ ಸಂಕ್ರಮಣ ಕಾಲ ಪ್ರಾರಂಭವಾಗಿದೆ. ಆರಾಧನೆ ಅನುಷ್ಠಾನಗಳು ನಿಂತು ಹೋದ ಅನೇಕ ದೇವಸ್ಥಾನಗಳು ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ನಾವು ನೋಡಿದ್ದೇವೆ. ಕಾರ್ಕಳದ ಅತ್ತೂರು ಗ್ರಾಮದಲ್ಲಿರುವ ಪರ್ಪಲೆ ಗುಡ್ಡದಮೇಲೆ ಅನೇಕ ಶತಮಾನಗಳಿಂದ ಸುಪ್ತಾವಸ್ಥೆಯಲ್ಲಿರುವ ದೈವ ಸಾನಿದ್ಯವನ್ನು ಮತ್ತೆ ಜಾಗೃತ ಸ್ಥಿತಿಗೆ ತರಲು ಗ್ರಾಮಸ್ಥರು ಮುಂದೆ ಬಂದಿದ್ದಾರೆ.

ಕಾರ್ಕಳ ನಗರ ಮತ್ತು ಅತ್ತೂರು ಸುತ್ತಮುತ್ತ ಹಲವಾರು ಕಡೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾದಾಗ ಈ ಕ್ಷೇತ್ರದ ಜೀರ್ಣೋದ್ಧಾರವನ್ನು ಮೊದಲು ಮಾಡತಕ್ಕದ್ದು ಎಂದು ಅಷ್ಟಮಂಗಲ ಪ್ರಶ್ನೆಗಳಲ್ಲಿ ಕಂಡು ಬಂದಿರುತ್ತದೆ. ಇಲ್ಲಿ ದೈವೀಶಕ್ತಿ ಗಳು ಚರಾವಸ್ಥೆಯಲ್ಲಿ ಇರುವುದರಿಂದ ಗ್ರಾಮಸ್ಥರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾದ ಸಂದರ್ಭಗಳಿವೆ. ಸೂಕ್ತ ಮುಂದಾಳತ್ವ ಇಲ್ಲದ ಕಾರಣ ಈ ಜೀರ್ಣೋದ್ಧಾರ ಕಾರ್ಯಕ್ಕೆ ಯಾರೂ ಕೂಡ ಮುಂದಾಗಿರಲಿಲ್ಲ. ಈಗ ಈ ಭಗವತ್ ಕಾರ್ಯಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಳತ್ವ ವಹಿಸಿ ಕೊಂಡಿದ್ದು, ಜಿಲ್ಲೆಯ ಆಸ್ತಿಕ ಭಕ್ತರ ಸಂಪೂರ್ಣ ಬೆಂಬಲ ಇದಕ್ಕೆ ದೊರಕಿದೆ.

ಈ ಸಾನಿಧ್ಯ ಪುನರ್ನಿರ್ಮಾಣ ನಿಮಿತ್ತ ಅತ್ತೂರು ಪರ್ಪಲೆ ಗಿರಿಯಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಆಯೋಜಿಸಲಾಗಿದ್ದು, ಕೇರಳದ ಪಯ್ಯನ್ನೂರಿನ ಖ್ಯಾತ ದೈವಜ್ಞ ರಾದ ಶ್ರೀ ನಾರಾಯಣ ಪೊದುವಾಲ್ ಈ ಇದನ್ನು ನಡೆಸಿಕೊಡಲಿದ್ದಾರೆ. ಮೂರು ದಿನಗಳ ಪರ್ಯಂತ ನಡೆಯಲಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ನಾಡಿನ ವಿವಿಧ ಭಾಗಗಳಿಂದ ಗಣ್ಯರು ಆಗಮಿಸಲಿದ್ದು,ಈ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಾರ್ಕಳದ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಈ ಕಾರ್ಯಕ್ರಮ ಜನರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಇನ್ನು ಈ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಾರ್ಕಳ ಬಸ್ ನಿಲ್ದಾಣದಿಂದ ಉಚಿತ ಬಸ್ಸಿನ ವ್ಯವಸ್ಥೆಯೂ ಇರುತ್ತದೆ ಎಂದರು. ಶ್ರೀ ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಕಾರ್ಕಳದ ಅಧ್ಯಕ್ಷರಾದ ಪ್ರಶಾಂತ ನಾಯಕ್, ಗುರುಪ್ರಸಾದ್ ಶೆಟ್ಟಿ ನಾರಾವಿ, ಹಿಂದೂ ಜಾಗರಣ ವೇದಿಕೆ ಕಾರ್ಕಳದ ತಾಲೂಕು ಕಾರ್ಯದರ್ಶಿಗಳಾದ ಮಹೇಶ್ ಬೈಲೂರು, ದಿನೇಶ್ ಶೆಟ್ಟಿ ಹೆಬ್ರಿ, ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply