ನಮಸ್ಕಾರ ಯಾವಾಗ ಮಾಡಬಾರದು- ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್

ನಮಸ್ಕಾರ ಹೇಗೆ ಮಾಡಬೇಕು ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು. ಆದರೆ ನಮಸ್ಕಾರ ಯಾರಿಗೆ, ಯಾವ ಸಮಯದಲ್ಲಿ ಮಾಡಬಾರದು ಎಂಬುದನ್ನು ಈಗ ತಿಳಿಯೋಣ.

 

ಕೆಲವೊಂದು ಸಂದರ್ಭದಲ್ಲಿ ವಿಪ್ರರಿಗಾಗಲಿ, ಗುರು ಹಿರಿಯರಿಗಾಗಲೀ ನಮಸ್ಕಾರ ಮಾಡುವಂತಿಲ್ಲ. ಯಾವ ಸಮಯದಲ್ಲಿ ಎಂದರೆ,

ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |

ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ ||

ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |

ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

ಅಂದರೆ ವಿಪ್ರನು ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರುತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪದಿಂದಿರುವಾಗ ನಮಸ್ಕರಿಸಬಾರದು. ಅದರಲ್ಲೂ ಕೋಪದಿಂದಿರುವಾಗ ಮಾತ್ರ ನಮಸ್ಕರಿಸಲೇಬಾರದು. ಏಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲ ದೊರಕುವ ಸಾಧ್ಯತೆಯೇ ಹೆಚ್ಚು. 

 ಇದಲ್ಲದೇ

ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |

ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

ಪಂಡಿತರು ಹಾಗೂ ಜ್ಞಾನಿಗಳು ಇರುವ ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಮ್ಮ ಗುರುಗಳಿಗೆ ಮಾತ್ರ ನಮಸ್ಕಾರ ಮಾಡಬಾರದು. ಇಂತಹ ವೇಳೆ ನಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಜ್ಞಾನಿಗಳನ್ನು ತಿರಸ್ಕರಿಸಿ ಅಪಮಾನ ಮಾಡಿದಂತಾಗುತ್ತದೆ. ಆಗ ನಮ್ಮ ಗುರುಗಳಿಗೆ ನಮಸ್ಕರಿಸುವ ರಭಸದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು.

 ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ. 

ಹಾಗೆಯೇ,

ಶನಿ ದೇವರ ದೇವಸ್ಥಾನಕ್ಕೆ ಹೋದಾಗ ಪುರುಷರು ಸಾಷ್ಟಾಂಗ ಕ್ರಮದಿಂದ ಹಾಗೂ ಸ್ತ್ರೀಯರು ಪಂಚ ಅಂಗ ಕ್ರಮದಿಂದ(ಮಂಡಿಯೂರಿ, ತಲೆ ನೆಲದ ಮೇಲಿಟ್ಟು) ನಮಸ್ಕರಿಸಬಾರದು. ಅಲ್ಲಿ ನಿಂತುಕೊಂಡೇ ನಮಸ್ಕರಿಸಬೇಕು. ಏಕೆಂದರೆ ಶನಿದೇವನು ವಕ್ರದೃಷ್ಟಿಯುಳ್ಳವನಾದ್ದರಿಂದ ಅವನ ದೃಷ್ಟಿಯು ಯಾವಾಗಲೂ ನೇರವಾಗಿ ಇರದೇ ಭೂಮಿಯ ಕಡೆಗೆ ಇರುತ್ತದೆ. ನಾವು ಒಂದು ವೇಳೆ ಸಾಷ್ಟಾಂಗ, ಪಂಚಾಂಗ ಕ್ರಮದಿಂದ ನಮಸ್ಕರಿಸಿದರೆ ಶನಿದೇವನ ವಕ್ರದೃಷ್ಟಿ ನಮ್ಮ ಮೇಲೆ ಬೀಳುವುದು. ಶನಿದೇವನ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅಲ್ಲಿ ನಿಂತುಕೊಂಡೇ ನಮಸ್ಕರಿಸಬೇಕು.

 

 

 
 
 
 
 
 
 
 
 
 
 

Leave a Reply