ಧಾರ್ಮಿಕ ಕ್ಷೇತ್ರದೊಂದಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅದಮಾರು ಮಠ ಗಣನೀಯ ಕೊಡುಗೆ~ಬಿ. ಎಸ್. ಯಡಿಯೂರಪ್ಪ

ಶ್ರೀಕೃಷ್ಣ ಮಠ ನಡೆಸುವ ಧರ್ಮ ಸಂರಕ್ಷಣೆಯ ಕಾರ್ಯಕ್ಕೆ  ಸರಕಾರದ ಬೆಂಬಲ ಸದಾ ಇದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ  ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮ ಹಾಗು ಶ್ರೀಕೃಷ್ಣ ದರ್ಶನ ಮಾರ್ಗ ‘ವಿಶ್ವಪಥ’ ಹಾಗೂ ಸಾವಯವ ಮಳಿಗೆಗೆ ಚಾಲನೆ ನೀಡಿ, ಮಾತನಾಡಿದ  ಅವರು  ಸಮಾಜಕ್ಕೆ ಉಡುಪಿ ಕೃಷ್ಣಮಠ ಹಾಗೂ ಅಷ್ಟ ಮಠಗಳ ಕೊಡುಗೆ ಶ್ಲಾಘನೀಯ ಎಂದರು 
ಧಾರ್ಮಿಕ ಕ್ಷೇತ್ರದೊಂದಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅದಮಾರು ಮಠ ಗಣನೀಯ ಕೊಡುಗೆ ನೀಡಿದ್ದು, ಗ್ರಾಮ ಭಾರತ ನಿರ್ಮಾಣದಲ್ಲಿಯೂ ಆಸಕ್ತಿ ಹಿಸಿರುವುದರೊಂದಿಗೆ ಗ್ರಾಮೀಣ ಕರಕುಶಲ ಕಲೆಗೆ ಪ್ರೋತ್ಸಾಹ ನೀಡುವ ಜೊತೆಗೆ ನೇಕಾರರು, ಕುಂಬಾರಿಕೆಗೂ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಅಯೋಧ್ಯೆ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶ್ವಸ್ಥರಾಗಿರುವುದು ಉಡುಪಿ ಕೃಷ್ಣಮಠದ ಘನತೆಗೆ ಸಾಕ್ಷಿ ಎಂದ ಸಿಎಂ, ಅಯೋಧ್ಯೆಯ ಬಾಲಾಲಯದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಢಾಪಿಸಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರೊಂದಿಗೆ ತಾನೂ ಭಾಗವಹಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದರು.
ಶ್ರೀ ವಿಶ್ವೇಶತೀರ್ಥರ ಆಶಯದ ರಾಮಮಂದಿರ ನಿರ್ಮಾಣ ಕಾರ್ಯವನ್ನು ಸ್ವತಃ ಪ್ರಧಾನಿ ಮೋದಿ ಮುಂದೆ ನಿಂತು ನಡೆಸುತ್ತಿರುವುದು ಸ್ವಾಗತಾರ್ಹ ಸಂಗತಿ. ಗಾಂಧಿ ಕನಸಿನ ರಾಮ ರಾಜ್ಯ, ಗ್ರಾಮ ರಾಜ್ಯದ ಕನಸು ನನಸಾಗುತ್ತಿರುವ ಈ ದಿನಗಳಲ್ಲಿ  ಗೋಹತ್ಯಾ ನಿಷೇಧ ಜಾರಿ ಗೊಳಿಸಲಾಗಿದೆ ಎಂದರು. 
ರಾಜ್ಯದ ಅಭಿವೃದ್ಧಿಗೆ ಸರಕಾರ ಬದ್ಧ. ಕೊರೊನಾದ ಈ ದಿನಗಳಲ್ಲೂ ಅಗತ್ಯ ಅನುದಾನ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಜನತೆ ನೆಮ್ಮದಿಯ ಜೀವನ ನಡೆಸುವಂತಾಗ ಬೇಕು ಎಂಬುದು ಸರ್ಕಾರದ ಆಶಯ ಎಂದರು.
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್ , ಲಾಲಾಜಿ ಮೆಂಡನ್, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಜೀವರಾಜ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಸಿಎಂಡಿ ರಾಜಕಿರಣ್ ರೈ , ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ನಗರ ಸಭಾಧ್ಯಕ್ಷೆ ಸುಮಿತ್ರಾ ನಾಯಕ್.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಂಘ, ಪಾಕತಜ್ಞ ಅಚ್ಯುತ ಭಟ್, ಕಟೀಲು ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಉದ್ಯಮಿ ಭುವನೇಂದ್ರ ಕಿದಿಯೂರು, ಬ್ರಾಹ್ಮಣ ಯುವಕ ವೃಂದ ಪಡುಬಿದ್ರಿ, ಯುವ ವಾಹಿನಿ ಉಡುಪಿ ಘಟಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಾಜಿ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಮೊದಲಾದವರನ್ನು ಸನ್ಮಾನಿಸಲಾಯಿತು. ಗೋವಿಂದರಾಜ್ ಸ್ವಾಗತಿಸಿದರು.  
 
 
 
 
 
 
 
 
 
 
 

Leave a Reply