ಇತಿಹಾಸವನ್ನು ಸ್ಪಷ್ಟವಾಗಿ ದಾಖಲಿಸಿದ ಮಹಾಕಾವ್ಯ ಮಧ್ವವಿಜಯ~ಪುತ್ತಿಗೆ ಶ್ರೀ

ಶ್ರೀಮಧ್ವಾಚಾರ್ಯರ ಸುಂದರ ಜೀವನದ ಅನುಸಂಧಾನಕ್ಕೆ “ಮಧ್ವವಿಜಯ” ಅಧ್ಯಯನವು ಬಹಳ ಮುಖ್ಯವಾಗಿದೆ. ಲಿಕುಚ ವಂಶದ ಮಹಾ ಕವಿಗಳಾದ ಶ್ರೀನಾರಾಯಣ ಪಂಡಿತಾಚಾರ್ಯರು 16 ಸರ್ಗಗಳ ಕಾವ್ಯದ ಸಕಲ ಲಕ್ಷಣವನ್ನು ಹೊಂದಿದ ಮಧ್ವವಿಜಯ ಎಂಬ ಮಹಾಕಾವ್ಯವನ್ನು ರಚಿಸಿದರು.ಇದು ಕಾವ್ಯಮಾತ್ರವಾಗಿರದೆ ಮಹಾಗ್ರಂಥವೂ ಆಗಿದೆ. ಈ ಕಾವ್ಯದಲ್ಲಿ ಅನೇಕ ಅಪೂರ್ವ ಐತಿಹಾಸಿಕ ಘಟನೆಗಳನ್ನು ದಾಖಲಿಸಿದ್ದಾರೆ. ಇದರ ಅಧ್ಯಯನವು ವೇದಾಂತದ ಉನ್ನತ ವ್ಯಾಸಂಗಕ್ಕೆ ನಾಂದಿಯಾಗಿದೆ.

ಇಂಥಹ ಮಹಾ ಕಾವ್ಯವನ್ನು ಗುರುಗಳಾದ ಶ್ರೀವಿದ್ಯಾಮಾನ್ಯ ತೀರ್ಥರಲ್ಲಿ ಅಧ್ಯಯನವನ್ನು ಮಾಡುವ ಸುಯೋಗ ದೊರೆಯಿತು ಎಂದು ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ತಿಳಿಸಿದರು.

ಅವರು ಶ್ರೀಪುತ್ತಿಗೆ ಮೂಲ ಮಠದಲ್ಲಿ  ನಡೆದ ಶ್ರೀಪುತ್ತಿಗೆ ವಿದ್ಯಾಪೀಠದ  37ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣವನ್ನು ಮಾಡಿದರು. 9 ವರ್ಷಗಳ  ಕಾಲ ಈ ವಿದ್ಯಾಪೀಠದಲ್ಲಿ  ಸಂಸ್ಕೃತ, ವೇದ, ವೇದಾಂತ, ಆಗಮ,  ಜ್ಯೋತಿಷ್ಯ, ಹಾಗೂ ಪೌರೋಹಿತ್ಯ ಗಳ  ವಿಶೇಷ ಅಧ್ಯಯನವನ್ನು ನಡೆಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಪ್ರದಾನ ಮಾಡಿ ಶಾಲು ಹೊದಿಸಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ  ಪುತ್ತಿಗೆ ಮಠದ ಕಿರಿಯ ಪಟ್ಟದ  ಶ್ರೀ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಮಧ್ವ ವಿಜಯ ಅಧ್ಯಯನ ಪೂರ್ಣಗೊಳಿಸಿ ಮಂಗಳ ಅನುವಾದ ಮಾಡಿದರು. ಮಧ್ವವಿಜಯ ಪಾಠವನ್ನು ಮಾಡಿದ ವಿದ್ವಾನ್ ಮಧ್ವರಮಣ ಆಚಾರ್ಯರು ಮಧ್ವವಿಜಯ ಗ್ರಂಥದ ಮಹತ್ವವನ್ನು ವಿವರಿಸಿದರು.

ಸಭೆಯಲ್ಲಿ ವಿದ್ವಾಂಸರಾದ ಶ್ರೀಸಗ್ರಿ ರಾಘವೇಂದ್ರ ಉಪಾಧ್ಯಾಯ, ಶ್ರೀ ಪಂಜ ಭಾಸ್ಕರ ಭಟ್, ಶ್ರೀರಘೂತ್ತಮಾಚಾರ್ ಬಿದರಹಳ್ಳಿ, ಶ್ರೀಪಾಡಿಗಾರ್ ಶ್ರೀಪತಿ ಆಚಾರ್ಯ, ಶ್ರೀ ಜಯತೀರ್ಥ ನೀಲೋಗಲ್ ಮೊದಲಾದವರು ಉಪಸ್ಥಿತರಿದ್ದರು.

ಡಾ. ಬಿ. ಗೋಪಾಲಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯರಾದ ಸುನಿಲ್ ಆಚಾರ್ಯರು ವಂದನಾರ್ಪಣೆ ಮಾಡಿದರು

 
 
 
 
 
 
 
 
 

Leave a Reply