ಕೃಷ್ಣಾಪುರ ಮಠದ ಹಿತ್ತಿಲಲ್ಲಿ ಬಾಳೆ ಗಿಡ, ತುಳಸಿ ಮತ್ತು ಕಬ್ಬಿನ ಗಿಡಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ

ಶ್ರೀಕೃಷ್ಣಮಠದಲ್ಲಿ 2022 ಜ.18ರಿಂದ ಮುಂದಿನ 2 ವರ್ಷಗಳ ಕಾಲ ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ ಪೂಜಾ ಕೈಂಕರ್ಯವನ್ನು ನಡೆಸಲಿರುವ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿ ಸಿದ್ಧತೆಗಳು ಪ್ರಾರಂಭ ವಾಗಿವೆ. ಇಂದು ಬಾಳೆ ಮುಹೂರ್ತ ಸಂಪನ್ನಗೊಂಡಿತು.
ಬೆಳಗ್ಗೆ ಧನುರ್ಲಗ್ನ ಸುಮುಹೂರ್ತದಲ್ಲಿ ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಅವರು ಮಠದ ಹಿತ್ತಿಲಲ್ಲಿ ಬಾಳೆ ಗಿಡ, ತುಳಸಿ ಮತ್ತು ಕಬ್ಬಿನ ಗಿಡಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ ನಡೆಯಿತು.
ಇದಕ್ಕೆ ಮೊದಲು ಕೃಷ್ಣಾಪುರ ಮಠದಲ್ಲಿ ನವಗ್ರಹ ಹೋಮ, ಸಾಮೂಹಿಕ ಪ್ರಾರ್ಥನೆ, ರಥಬೀದಿಯ ಶ್ರೀ ಅನಂತೇಶ್ವರ ಮತ್ತು ಶ್ರೀಚಂದ್ರವೌಳೀಶ್ವರ ದೇವಾಲಯಗಳಲ್ಲಿ ಪೂಜೆ, ಕೃಷ್ಣ ಮಠ, ಮುಖ್ಯಪ್ರಾಣ ಸನ್ನಿಧಿ, ಭೋಜನಶಾಲೆ ಮುಖ್ಯಪ್ರಾಣ ದೇವರು, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಬಾಳೆಗಿಡಗಳನ್ನು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಬಳಿಕ ಕೃಷ್ಣಾಪುರ ಮಠದ ಹಿಂಭಾಗದ ಹಿತ್ತಿಲಲ್ಲಿ ಮೊದಲೇ ಸಿದ್ಧಪಡಿಸಿ ಇಟ್ಟಿದ್ದ ಸ್ಥಳದಲ್ಲಿ ಬಾಳೆ ಗಿಡ ಸಹಿತ ಸಸ್ಯ ಸಂಪತ್ತಿಗೆ ಪೂಜೆ ನೆರವೇರಿಸಲಾಯಿತು. ಕೃಷ್ಣಾಪುರ ಮಠಾಧೀಶರು ಸ್ಥಳದಲ್ಲಿ ಉಡುಪಿಯ ಅಷ್ಟ ಮಠಗಳು ಸಹಿತ ರಥಬೀದಿಯಲ್ಲಿರುವ ಇತರೆ ಮಾಧ್ವ ಮಠಗಳು ಮತ್ತು ಅನಂತೇಶ್ವರ ಚಂದ್ರವೌಳೀಶ್ವರ ದೇವಸ್ಥಾನಗಳ ಪ್ರತಿನಿಧಿಗಳಿಗೆ ನವಧಾನ್ಯ ದಾನ ಮಾಡಿದರು.
ಬಳಿಕ ಪ್ರಾರ್ಥನಾ ಪೂರ್ವಕವಾಗಿ ಬಾಳೆ ಗಿಡ, ತುಳಸಿ, ಕಬ್ಬಿನ ಸಸಿಗಳನ್ನು ನೆಟ್ಟರು. ಮಠದ ಅಂಬಲಪಾಡಿ ಪುರೋಹಿತರಾದ ಶ್ರೀನಿವಾಸ ಉಪಾಧ್ಯ ಅವರು ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಕಾಣಿಯೂರು ಮಠದ ದಿವಾನ ರಘುಪತಿ ಆಚಾರ್ಯ, ಗಣ್ಯರಾದ ಯು.ಕೆ. ರಾಘವೇಂದ್ರ ರಾವ್, ಪ್ರದೀಪ್ ಕಲ್ಕೂರ, ನ್ಯಾಯವಾದಿ ಪ್ರದೀಪ್ ಕುಮಾರ್, ಯಶಪಾಲ್ ಸುವರ್ಣ, ರಾಘವೇಂದ್ರ ಆಚಾರ್ಯ,  ಮೊದಲಾದವರಿದ್ದರು.
 
 
 
 
 
 
 
 
 

Leave a Reply