“ಬಂಧ”ಗಳಿಲ್ಲದ “ಕರ್ಮ” ನಿರತ ‘ಶ್ರೀಕೃಷ್ಣ’~ ಕೆ.ಎಲ್ .ಕುಂಡಂತಾಯ

“ಕರ್ಮ”ವೇ ಪ್ರಧಾನವಾಗಿ ಅದೇ ಧರ್ಮವಾಗಿ ನಿರ್ವಹಿಸಲ್ಪಟ್ಟ ಅವತಾರ ಕೃಷ್ಣಾವತಾರ . ಸಾಮಾನ್ಯವಾಗಿ ಕರ್ಮವು ‘ಬಂಧ’ವಾಗಿ ವ್ಯಕ್ತವಾಗುವುದಿದೆ . ಯಾವುದೋ ಬಂಧಕ್ಕೆ ಬದ್ಧವಾಗಿ ಕರ್ಮ ಕರ್ತವ್ಯವಾಗುವುದನ್ನೇ ಕಾಣುತ್ತಿರುವಂತೆಯೇ ಬಂಧ ರಹಿತವಾದ ಕರ್ಮವೇ ಲಕ್ಷ್ಯವಾಗಿರುವ ಒಂದು ವ್ಯಕ್ತಿತ್ವ ದ್ವಾಪರಯುಗದಲ್ಲಿ ಗಮನ ಸೆಳೆಯುತ್ತದೆ ಅದೇ ‘ಕೃಷ್ಣ’ . ಸಮಗ್ರ ಕೃಷ್ಣಾವತಾರದಲ್ಲಿ ತಾನು ಸ್ವೀಕರಿಸಿದ , ತನಗೆ ಕರ್ತವ್ಯವಾಗಿರುವ ಕರ್ಮದ ಅನುಷ್ಠಾನವೇ ನಿಚ್ಚಳವಾಗುತ್ತದೆ .

ಕೃಷ್ಣ ಈ ಮನಃಸ್ಥಿತಿಯನ್ನು ಬಾಲ್ಯದಿಂದಲೇ ರೂಢಿಸಿಕೊಂಡು ಬಂದ . ದ್ವಾಪರಾಯುಗದಲ್ಲಿ ಸನ್ನಿಹಿತವಾದ ಕುರುಕ್ಷೇತ್ರ ಸಂಗ್ರಾಮದಲ್ಲಿ ಪ್ರತಿಪಾದಿಸಿದ . ‘ಬಂಧ’ ಎಂಬ ಕಟ್ಟನ್ನು ಕಿತ್ತೊಗೆಯಬಹುದು , ‘ಕರ್ಮದ’ ಮುಂದೆ ‘ನಿಯಮವನ್ನು’ ತಿರಸ್ಕರಿಸಿದರೆ ಪ್ರಮಾದವಲ್ಲವೇ ಅಲ್ಲ ಎಂಬುದು ಕೃಷ್ಣನ ನಿಲುವು ಆಗಿದ್ದಿರಬೇಕು. ಬಂಧ ರಹಿತ ವಾದ ಕರ್ಮವೇ ಧರ್ಮ . ಇದು ಕೃಷ್ಣ ಸಾಧಿಸಿದ ಪರಮ ಧರ್ಮ ,ಇದು ವಿಚಲಿತವಾಗದ ಮಾನವಧರ್ಮ .
ಬಾಲ್ಯಕ್ಕೆ ಪ್ರೀತಿಯ , ಬಾಂಧವ್ಯದ ಮಾಧುರ್ಯವನ್ನು ಒದಗಿಸಿದ ನಂದಗೋಕುಲ , ಗೋಪಾಲಕರು , ಗೋಪಿ ಯರು , ಗೋವುಗಳನ್ನು ಬಿಟ್ಟು ಮಧುರೆಗೆ ಹೊರಟ ಕೃಷ್ಣ ಮತ್ತೆ ಗೋಕುಲಕ್ಕೆ ಬರಲೇ ಇಲ್ಲ .ಕೊಳಲನ್ನು ನುಡಿಸಲೇ ಇಲ್ಲ .

ಆದರೆ ಕಿರೀಟದಲ್ಲಿ ಒಂದು ನವಿಲುಗರಿ ಮಾತ್ರ ಉಳಿಯುತ್ತದೆ . ಗೋಕುಲದಲ್ಲಿ ಏರ್ಪಟ್ಟ ಬಾಂಧವ್ಯದ ಬಂಧ ತಾತ್ಕಾಲಿಕವಾಗಿ ಮಾತ್ರ ಇರುತ್ತದೆ . ಲಕ್ಷ್ಯ ಪ್ರಧಾನವಾದಾಗ ಬಂಧದಿಂದ ಕಳಚಿಕೊಳ್ಳುವ ಕೃಷ್ಣನನ್ನು ಬಂಧ ವಿಮೋಚಕನೆಂದು ಹೊಗಳಲಾಯಿತೇ ಹೊರತು ನಿಷ್ಕರುಣಿ ಎಂದು ಗೋಪರು – ಗೋಪಾಲಕರು ಆಕ್ಷೇಪಿಸಲೇ ಇಲ್ಲ . ಬಂಧ ಮತ್ತ ಕರ್ಮಗಳ ನಡುವೆ ಅಂತರವೇ ಇಲ್ಲ ಎನ್ನುತ್ತಾ ಕೊನೆಗೆ ಈ ಅಂತರ ಸುದೀರ್ಘವಾಗಿದೆ ಎನ್ನುವುದನ್ನೂ ಪ್ರತಿಪಾದಿಸುತ್ತಾನೆ ಕೃಷ್ಣ .

ಕರ್ತವ್ಯದ ಮುಂದೆ “ಬಂಧ” ಗೌಣ ಎಂದು ಮುಂದೆ ಬದುಕಿನ ದೀರ್ಘ ಅವಧಿಯಲ್ಲಿ ಸಾಧಿಸುವುದನ್ನು ಗಮನಿಸ ಬಹುದು . ಮಾವ ಕಂಸನ ವಧೆ ಬಂಧ ರಹಿತವಾದ ಕರ್ಮವಲ್ಲದೆ ಮತ್ತೇನು . ಮಾವ ಎಂಬ ಬಾಂಧವ್ಯದ ಬಂಧಕ್ಕೆ ಒಳಗಾಗದೆ ಎಸಗಿದ ಕರ್ತವ್ಯ . ಕುಬ್ಜೆಯ ವಕ್ರತೆಯನ್ನು ತಿದ್ದಿದ್ದು ಕೇವಲ ‘ಕರ್ಮ’ ಮಾತ್ರ ,ಇಲ್ಲಿ ಯಾವುದೇ ಬಂಧುತ್ವದ ಬಂಧವಿಲ್ಲ .

ಕೃಷ್ಣನ ಮದುವೆಗಳೆಲ್ಲ ಸಂದರ್ಭದ ಅನಿವಾರ್ಯತೆಯೇ ಆಗಿದ್ದುವು . ನರಕಾಸುರನ ಬಂಧನದಲ್ಲಿದ್ದ ಸ್ತ್ರೀಯರನ್ನು ಬಿಡಿಸಿದ ಕೃಷ್ಣ ಅವರಿಗೆ ಬದುಕು ಕೊಡುತ್ತಾನೆ ,ಎಂದರೆ ಕೃಷ್ಣ ರಕ್ಷೆ ಕೊಡುತ್ತಾನೆ , ಜೀವನಕ್ಕೆ ಭದ್ರತೆಯನ್ನು ಕೊಡುತ್ತಾನೆ .ಇದು ಆತನ ಕರ್ತವ್ಯವಾಗಿತ್ತು .

ದ್ವಾರಕೆಯ ನಿರ್ಮಾಣ ಕಾರ್ಯವು ಯದುಗಳಿಗೆ ರಾಜತ್ವ ಇಲ್ಲ ಎಂಬ ಶಾಪ ವಾಕ್ಯದ ಮುಂದುವರಿಕೆಗೆ ಒಡ್ಡಿದ ತಡೆ .ಐವತ್ತೇಳನೇಯ ರಾಜ್ಯವಾಗಿ ಮೂಡಿದ ರಾಜ್ಯದಲ್ಲಿ ಅಣ್ಣ ಬಲರಾಮನಿಗೆ ಪಟ್ಟಕಟ್ಟುತ್ತಾನೆ ,ತಾನು ಹೆಸರಿಗೆ ಯುವರಾಜನಾಗಿ ಜವಾಬ್ದಾರಿಯೇ ಇಲ್ಲದವನಂತೆ ವರ್ತಿಸುತ್ತಾ ನಿರ್ಲಿಪ್ತತೆ ಮೆರೆಯುತ್ತಾನೆ. ಅಸಾಧ್ಯವನ್ನು ಸಾಧ್ಯವೆಂದು ಮಾಡಿ ತೋರಿಸುವ ಕೃಷ್ಣ ಅಘಟಿತ ಘಟನಾ ಪಟುವಾಗಿ ತೋರುತ್ತಾನೆ .

ಈ ಸಂದರ್ಭದಲ್ಲಿ ಬಂಧವನ್ನು ಉಳಿಸಿಕೊಳ್ಳುವುದೇ ಇಲ್ಲ .ತನ್ನ ಪಾಲಿನ ಕರ್ಮ ಎಂದು ನಿರ್ವಹಿಸುತ್ತಾನೆ .
ಹಾಗೆಯೇ ಬದುಕುತ್ತಾನೆ .ತನ್ನನ್ನು ಬಂಧುವೆಂದು ಭಾವಿಸಿದವರಿಗೂ ದಂಡನೆಯನ್ನು ಕೊಟ್ಟೇಕೊಟ್ಟ .ದ್ರೌಪದಿಗೆ ಅಕ್ಷಯಾಂಬರ ಕೊಡುವುದು ಕೃಷ್ಣನಿಗೆ ಧರ್ಮವಾಗುತ್ತದೆ, ಆದರೆ ಎಂತಹ ಪರೀಕ್ಷೆಯನ್ನು ಒಡ್ಡಿದ (ಬಾಲ್ಯದಲ್ಲಿ ಗೋಪಿಕೆಯರ ಸೀರೆ ಕದ್ದ ದೋಷಕ್ಕೆ ಅಕ್ಷಯಾಂಬರ ಪ್ರಧಾನ ಪ್ರಾಯಶ್ಚಿತ್ತ ಎಂಬ ವಿಶ್ಲೇಷಣೆಯೂ ಇದೆ).

ಪಾಂಡವ ಪಕ್ಷಪಾತಿಯೇ ಹೊರತು ಪಾಂಡವರೊಂದಿಗೆ ಬಾಂಧವ್ಯದ ನಂಟು ಬೆಳೆಸಿಕೊಳ್ಳುವುದಿಲ್ಲ .ಲೌಕಿಕ ಬಾಂಧವ್ಯದ ಹೊರತಾದ ಸ್ನೇಹ ಮಾತ್ರ ಸ್ಪಷ್ಟ . ಧರ್ಮಾತ್ಮರಾದ ಪಾಂಡವರಿಗೂ ಬೇಕಾದುದು ಧರ್ಮ ಸಮ್ಮತವಾದ ರಾಜ್ಯ ಮಾತ್ರ .ಹಾಗಾಗಿ ಕೃಷ್ಣ , ಧರ್ಮದ ಪಕ್ಷವಹಿಸಿದ . ಯಾಕೆಂದರೆ ಕೃಷ್ಣನದ್ದು ಧರ್ಮ ಸಂಸ್ಥಾಪನೆಗಾಗಿ ಎತ್ತಿದ ಅವತಾರ ತಾನೆ .

ಪಾಂಡವರ ಪ್ರತಿನಿಧಿಯಾಗಿ ಆ ಕಾಲದ ಚಕ್ರವರ್ತಿ ಪೀಠದ ಮುಂದೆ ಅದೇ ಮನೆತನದ ದಾಯಾದ್ಯ ಕಲಹದ ನಿವೃತ್ತಿಗೆ ಸಂಧಾನಕಾರನಾಗಿ ಕೃಷ್ಣ ಬರುತ್ತಾನೆ . ಸಾಮಾನ್ಯ ಗೋಪಾಲಕನೊಬ್ಬ ಎಂತಹ ಪಾತ್ರನಿರ್ವಹಿ ಸುತ್ತಾನೆ ನೋಡಿ . ಇದಕ್ಕೆ ಕೃಷ್ಣನ ಬಂಧ ರಹಿತವಾದ ‘ಕರ್ಮ’ ಪ್ರಧಾನವಾದ ಜೀವನ ಶೈಲಿ ಕಾರಣ . ಒಂದು ಕಡೆ ಯುದ್ಧ ಅನಿವಾರ್ಯ ,ಏಕೆಂದರೆ ಪ್ರತಿಜ್ಞೆಗಳು ನೆರವೇರಬೇಕು . ಆದರೂ ಕೃಷ್ಣ ಸಂಧಿಗಾಗಿಯೇ ಪ್ರಯತ್ನಿ ಸುತ್ತಾನೆ . ಅರ್ಧ ರಾಜ್ಯಕ್ಕೆ ಬದಲಾಗಿ ಐದು ಗ್ರಾಮಗಳಾದರೂ ಸಾಕು ಎಂಬಲ್ಲಿಯವರೆಗೆ ವಿನೀತನಾಗಿ ಸಾರಿ ಹೇಳುವಂತೆ ಸಂಧಿಗಾಗಿ ಯತ್ನಿಸುತ್ತಾನೆ .

ಫಲಿಸದೇ ಹೋದಾಗ ಧುರವೀಳ್ಯಪಡೆಯುತ್ತಾನೆ. ಪಾಂಡವ ಪ್ರತಿನಿಧಿಯಾದರೂ ಕೌರವನಿಗೆ ಬುದ್ಧಿಹೇಳುತ್ತಾನೆ . ಪಾಂಡವರೆಂಬ ಬಾಂಧವ್ಯದ ಭಾವನೆಗಳಿದ್ದರೆ ಈ ಕ್ರಮದಲ್ಲಿ ವರ್ತಿಸಲಾರ . ಇಂತಹ ನಿರ್ಣಾಯಕ ವೇಳೆಯಲ್ಲೂ ಕೃಷ್ಣ ಕರ್ಮ – ಕರ್ತವ್ಯವನ್ನು ಮಾತ್ರ ಮಾಡುತ್ತಾನೆ .ಬಂಧಗಳಿಲ್ಲದಂತೆ ಕಾರ್ಯವೆಸಗುತ್ತಾನೆ . ಕುರುಕ್ಷೇತ್ರದಲ್ಲಿ ಗೀತಾಚಾರ್ಯನಾದಾಗ ಧರ್ಮ ಯಾವುದು ,ಕರ್ಮ ಯಾವುದು ಎಂಬ ವಿವರದ ಆಧಾರದಲ್ಲಿ ಜೀವನ ಧರ್ಮವನ್ನು ಬೋಧಿಸುತ್ತಾನೆ .

ಇದು ಯುದ್ಧಕ್ಕೆ ಅರ್ಜುನನ್ನು ಸಜ್ಜುಗೊಳಿಸುವುದು, ಸ್ವಧರ್ಮ ಮರೆತವನನ್ನು ಎಚ್ಚರಿಸುವುದು, ನಿಯಾಮಕ ಪ್ರತ್ಯೇಕ ಇದ್ದಾನೆ ನೀನು ನಿಮಿತ್ತಮಾತ್ರ ಎಂದು ಅರ್ಜುನನಿಗೆ ತಿಳಿಹೇಳುತ್ತಾ “ವಿರಾಡ್ – ದರ್ಶನ” ತೋರಿಸುತ್ತಾನೆ . ತಾನು ಪ್ರತಿಜ್ಞಾಬದ್ಧನಿದ್ದರೂ ಚಕ್ರ ಧರಿಸುತ್ತಾನೆ . ಭೀಷ್ಮನ ಪ್ರತಿಜ್ಞೆ ನೆರವೇರುವಂತೆ ಮಾಡುತ್ತಾನೆ . ಇದು ಕರ್ಮಾಧ್ಯಕ್ಷನ ಕೆಲಸವಾಗಿ ಕಾಣುವುದಿಲ್ಲವೇ.

ಅಭಿಮನ್ಯು ಸಹಿತ ಆತ್ಮೀಯ ಬಂಧುಗಳು ಅಸುನೀಗಿದಾಗ ನಿರ್ಲಿಪ್ತನಂತೆ ವರ್ತಿಸುತ್ತಾನೆ . ಇದೆಲ್ಲ ಕರ್ಮವೇ ಪ್ರಧಾನವಾಗಿ ಸ್ವೀಕರಿಸಲ್ಪಟ್ಟ , ಬಂಧಗಳಿಲ್ಲದ‌ ವ್ಯಕ್ತಿತ್ವಕ್ಕೆ ಮಾತ್ರ ಸಾಧ್ಯವಾದುದು . ಇಂತಹ ನೂರಾರು ಘಟನೆಗಳು ಕೃಷ್ಣನ ಬದುಕಿನಲ್ಲಿದೆ . ಪ್ರತಿ ವಿಷಯದಲ್ಲೂ ಕೃಷ್ಣ ಕರ್ಮಬಂಧಿಯಾಗುವುದಿಲ್ಲ ನಿಷ್ಕಾಮ ‘ಕರ್ಮ’ ನಿರತನಾಗಿ ಅನಾವರಣಗೊಳ್ಳುತ್ತಾನೆ . ಭೀಷ್ಮರಿಗೆ ಅದನ್ನೆ ತಿಳಿಹೇಳುತ್ತಾನೆ ” ನಿಮ್ಮ ಕರ್ಮ , ಬಂಧ ಲಕ್ಷ್ಯವಾಗಿರುವಂತಹದ್ದು .

” ನನ್ನದು “ಕರ್ಮಮಾತ್ರ” ಬಂಧ ರಹಿತವಾಗಿರುವಂತಹದ್ದು ಎಂದು .ಹೀಗೆ ಕೃಷ್ಣ ಎಂಬ ವ್ಯಕ್ತಿತ್ವವನ್ನು ಪ್ರವೇಶಿಸಿದಷ್ಟು ದರ್ಶನ ಕೊಡುತ್ತಲೇ ಇರುತ್ತದೆ .ಅರ್ಜುನ ಕಂಡ “ವಿರಾಡ್ – ದರ್ಶನ” ದ ಹರವು ಎಷ್ಟು ವಿಸ್ತಾರವಾಗಿಲ್ಲ ! ಗೀತೆಯ ಅನನ್ಯತೆ ಎಷ್ಟು ಗಾಢವಾಗಿಲ್ಲ..? (ಆಧಾರ : ಓದಿದ್ದು ,ಕೇಳಿದ್ದು ,ಬರೆದದ್ದು)
~~~~~

| ಅಟ್ಟೆಮಿ – ಪೇರರ್ಘ್ಯೆ| ಅಷ್ಟಮಿ ಪರ್ವದಿನದಂದು ಹಗಲು ಉಪವಾಸವಿದ್ದು ರಾತ್ರಿ ‘ತಿಂಗೊಲು ಮೂಡ್ನಗ’ ( ಚಂದ್ರೋದಯವಾಗುವ ವೇಳೆ) ಸ್ನಾನಮಾಡಿ ಮನೆಯ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಬಿಲ್ವಪತ್ರೆ ಅರ್ಪಿಸಿ ಹಾಲು ಎರೆಯುವ ( ಪೇರರ್ಘ್ಯೆ ಬುಡ್ಪುನಿ ) ಸರಳ – ಮುಗ್ಧ ಆಚರಣೆ ನಮ್ಮಲ್ಲಿ ಇದೆ.

ಚಂದ್ರೋದಯದ ವರೆಗೆ ಸಮಯ ಕಳೆಯಲು ” ಎಕ್ಕಡಿ ” ಆಡುವುದು ವಾಡಿಕೆಯಾಗಿತ್ತು . ಪೇರರ್ಘ್ಯೆಗೆ ” ಅಡಿಗೆ ಬುಡ್ಪುನಿ ” ಎಂದೂ ಹೇಳುವುದಿದೆ . ‘ಅಷ್ಟಮಿ ಉಡಾರಿಗೆ’ ಎಂಬುದು ವಿಶೇಷ ತಿಂಡಿ . ಇದನ್ನು ಅಷ್ಟಮಿ ಸಂದರ್ಭದಲ್ಲಿ ಮಾಡುವುದು . ಅಕ್ಕಿಯ ಹಿಟ್ಟನ್ನು ಬುಟ್ಟಿಯಲ್ಲಿ ಸುರಿದು ಪಾತ್ರೆಯಲ್ಲಿರಿಸಿ (ತೊಂದುರು) ಬೇಯಿಸುವುದು . ಇದು ‘ಉಡಾರಿಗೆ’ .

| ಅರ್ಘ್ಯ ಪ್ರದಾನ | ಶ್ರೀ ಕೃಷ್ಣ ಜನ್ಮಾಷ್ಟಮಿ / ಶ್ರೀ ಕೃಷ್ಣ ಜಯಂತಿಯಂದು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯದ ವೇಳೆ ವಿವಿಧ ಭಕ್ಷ್ಯ , ಉಂಡೆ – ಚಕ್ಕುಲಿಗಳನ್ನು ಸಮರ್ಪಿಸಿ ಕೃಷ್ಣನಿಗೆ ಪೂಜೆ ಸಲ್ಲಿಸುವುದು ವಾಡಿಕೆ .ಇದರೊಂದಿಗೆ ‘ ಅರ್ಘ್ಯ ಪ್ರದಾನ ‘ ಅಷ್ಟಮಿ ಪರ್ವದ ವಿಶೇಷ.

ಮನೆ ದೇವರ ಮುಂಭಾಗದಲ್ಲಿ ಭಕ್ಷ್ಯಗಳನ್ನಿಟ್ಟು ಸಮರ್ಪಣೆ ಮಾಡಿ ಆರತಿ ಎತ್ತುವುದು . ಬಳಿಕ ದೇವರ ಸಂಪುಷ್ಟ ವನ್ನಿರಿಸಿ ಕೃಷ್ಣ , ಬಲರಾಮ , ವಸುದೇವ , ದೇವಕಿ , ನಂದಗೋಪ , ಯಶೋದಾ , ಸುಭದ್ರೆಯರನ್ನು ಸ್ಮರಿಸಿ ಕೊಂಡು ಬಿಲ್ವಪತ್ರೆಯನ್ನು ಅರ್ಪಿಸಿ ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡುವುದು .

ಪನಃ ತುಳಸಿಕಟ್ಟೆಯ ಮುಂಭಾಗದಲ್ಲಿ ಪೂಜೆಮಾಡಿ ಒಡೆದ ತೆಂಗಿನಕಾಯಿಯನ್ನು ಇರಿಸಿ ( ತೆಂಗಿನಕಾಯಿ ಒಡೆ ದಾಗ ಕಣ್ಣುಳ್ಳ ಭಾಗವನ್ನು ‘ಹೆಣ್ಣು’ ಎಂದು , ಉಳಿದ ಭಾಗವನ್ನು ‘ಗಂಡು’ ಎಂದು ಗುರುತಿಸುವುದು ವಾಡಿಕೆ . ಇದರಲ್ಲಿ ಗಂಡು ಭಾಗವನ್ನು ಮಾತ್ರ ಅರ್ಘ್ಯ ಪ್ರದಾನಕ್ಕೆ ಬಳಸುವ ಸಂಪ್ರದಾಯವೂ ಇದೆ .

ಕೃಷ್ಣ ಗಂಡು ಮಗುವಲ್ಲವೆ , ಸಾಂಕೇತಿಕವಾಗಿ ಗಂಡು ಭಾಗವನ್ನು ಅರ್ಘ್ಯ ಪ್ರದಾನಕ್ಕೆ ಉಪಯೋಗಿಸಿ ಕೊಳ್ಳು ವುದು.) ಬಿಲ್ವಪತ್ರೆಯನ್ನು ಅರ್ಪಿಸಿ , ಶಂಖದಲ್ಲಿ ಹಾಲು ತುಂಬಿ ಮಂತ್ರಹೇಳುತ್ತಾ ಚಂದ್ರನಿಗೆ ಅರ್ಘ್ಯ ಅರ್ಪಿಸು ವುದು ವೈದಿಕ ಕ್ರಮ . ಕೆಲವೆಡೆ ನೀರಿನಲ್ಲೆ ಅರ್ಘ್ಯ ಪ್ರದಾನ ಮಾಡುವ ಸಂಪ್ರದಾಯವಿದೆ .

||ವಿಟ್ಲಪಿಂಡಿ|| ವಿಠಲನ ಪಿಂಡಿ “ವಿಟ್ಲಪಿಂಡಿ” . ಪಿಂಡಿ ಎಂದರೆ ಗಂಟು . ವಿಠಲನಲ್ಲಿ ಇದ್ದದ್ದು , ವಿಠಲನಲ್ಲಿಗೆ ತಂದದ್ದು ಉಂಡೆ – ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು.ಈ ಗಂಟನ್ನು ಇಟ್ಟು ಕೊಂಡು ,ಅದನ್ನು ಪಡೆಯಲು ಬೇಕಾಗಿ ಆಡಿದ್ದ ಆಟವೇ ಪಿಂಡಿಯೇ ಮುಖ್ಯವಾದ ಆಟವಾಯಿತು, ಅದು ‘ವಿಟ್ಲ ಪಿಂಡಿ’ಯಾಯಿತು.

ವಿಠಲನಾದ ಕೃಷ್ಣನು ಗೋಪಾಲರೊಂದಿಗೆ – ಗೋಪಿಯರೊಂದಿಗೆ ಆಡಿದ ಆಟಗಳೇ ಕೃಷ್ಷ ಲೀಲೆ . ಇದನ್ನು ಉತ್ಸವ ಎಂಬ ನೆನಪಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ . ಗೋಪಿಯರ ಕಣ್ಣು ತಪ್ಪಿಸಿ ಗೋಪರ ಮನೆಗೆ ಹೊಕ್ಕು ಹಾಲು ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಬಿದ್ದ ಮಡಕೆಗಳು‌ ಪುಡಿ ಯಾದಾಗ “ಮೊಸರು ಕುಡಿಕೆ” ಯಾಗುತ್ತದೆ.

ಎತ್ತರದಲ್ಲಿ ತೂಗಿಸಿಡುವ ಹಾಲು – ಮೊಸರು ತುಂಬಿದ ಮಡಕೆ – ಕುಡಿಕೆಗಳಿಗೆ ಕಲ್ಲು ಎಸೆದು ಅಥವಾ ಕೋಲಿನಿಂದ ರಂಧ್ರಮಾಡಿ ಕೆಳಗೆ ನಿಂತು ಹಾಲಿನ ಧಾರೆಗೆ ಬಾಯಿಕೊಟ್ಟು ಕುಡಿಯುವ ಚೇಷ್ಠೆ ಕೃಷ್ಣನಾಡಿದ “ಮೊಸರು ಕುಡಿಕೆ”ಯ ಅಣಕನ್ನು‌ ಅಥವಾ ಪ್ರತಿಕೃತಿಯನ್ನು‌ ನಾವಿಂದು ಕಾಣುತ್ತೇವೆ .

 

 
 
 
 
 
 
 
 
 
 
 

Leave a Reply