ಆಟಿ ಅಮಾವಾಸ್ಯೆ : ‘ಆಟಿದ ಮರ್ದ್”~ ‌‌‌ • ಕೆ.ಎಲ್.ಕುಂಡಂತಾಯ

ಆಟಿ ತಿಂಗಳ(ಕರ್ಕಾಟಕ ಮಾಸ) ಅಮಾವಾಸ್ಯೆಯಂದು “ಆಟಿದ ಮರ್ದ್’
(ಹಾಳೆ ಮರದ ಕೆತ್ತೆಯಿಂದ ತಯಾರಿಸಿದ ಕಷಾಯ ಕುಡಿಯುವ – ಮೆತ್ತೆ ಗಂಜಿ ಊಟಮಾಡುವ) ಕುಡಿಯುವ ಸಂಪ್ರದಾಯ ಇವತ್ತಿಗೂ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಉತ್ಸಾಹಿ ಸಂಘಟನೆಗಳು , ಆಚರಣೆ – ಸಂಸ್ಕೃತಿ ಪ್ರೀತಿಯ ಮಂದಿ ‘ಕಷಾಯ’ ತಯಾರಿಸಿ ಮನೆ,ಮನೆಗಳಿಗೆ ಹಂಚುವ , ಆಮೂಲಕ ‘ಆಟಿಯ ಮದ್ದು’ ಕುಡಿಯುವ ಸಂಪ್ರದಾಯವೊಂದನ್ನು ನೆನಪಿಸುತ್ತಾ , ಆಚರಿಸುವಂತೆ  ಪ್ರೇರೇಪಿಸುವ ಕೆಲಸ ನಡೆಯುತ್ತಿದೆ ,ಇದು ಸಂತೋಷದ ಸಂಗತಿ.

ಯಾವ ಮರದ ಕೆತ್ತೆ , ಯಾವ ಕ್ರಮದಲ್ಲಿ ಯಾವ ವೇಳೆಯಲ್ಲಿ ತೆಗೆಯಬೇಕು ಮತ್ತು ಕಷಾಯ ತಯಾರಿಯ ಕ್ರಮ ,ಕಷಾಯ ಕುಡಿಯುವವರಿಗೆ ತಿಳಿದರೆ ಈ ಸಂಪ್ರದಾಯ ಉಳಿಯಬಹುದು . ಮುಂದೊಂದು ದಿನ ಮೆಡಿಕಲ್ ಶಾಪ್ ಗಳಲ್ಲಿ’ ಸಿದ್ಧ ಕಷಾಯ’  ದೊರೆಯುವ ದಿನವೂ ಬಂದೀತು. ಆಗ ಮಾತ್ರ ಈ ಸಂದರ್ಭದ ಆಚರಣೆಯಲ್ಲಿ ಪಾವಿತ್ರ್ಯ ಇಲ್ಲವಾಗಬಹುದು ಅಲ್ಲವೇ ?ಗದ್ದೆಗಳಲ್ಲಿ ಬೆಳೆಯುತ್ತಿರುವ ಬೆಳೆಯರಕ್ಷಣೆಗೆ ಕಾಸರ್ಕದ ಮರದ ಗೆಲ್ಲುಗಳನ್ನು ಕಡಿದು ಹಾಕುವ ಕ್ರಮವೂ ಇತ್ತು ಎಂಬುದು ಮರೆಯಾಗುತ್ತಿರುವ ವಿಷಯ.ಬೇಸಾಯ ಜೀವನಾಧಾರವಾಗಿದ್ದರೆ ಮಾತ್ರ ‌ ನಮ್ಮ ಆರೋಗ್ಯದೊಂದಿಗೆ ನಮ್ಮ ಬೆಳೆಯ ರಕ್ಷಣೆಯ ಕಾಳಜಿತಾನೇ ?  

|ಬಲಿಯೇಂದ್ರೆ ಸಂದಿ| “ಆಟಿದ ಅಮಾಸೆಗ್ ಆಳ್ ಕಡಪುಡುದು ಪಿನ್ಲ . ಸೋಣ ಸಂಕ್ರಾಂದಿಗ್ ಅಪ್ಪೆನ್ ಕಡಪುಡ್ದು ಕೊರ್ಲ . ಬೊಂತೆಲ್ದ  ಅಮಾಸೆಗ್ ಆಜಿ ದಿನತ ಬಲಿ , ಮೂಜಿ ದಿನತ  ಪೊಲಿ , ದೀಪೊಲಿದ ಪರ್ಬೊಗು ಈ ಬತ್ತ್ ದ್ ನಿನ್ನ ರಾಜ್ಯ ಬುಲೆ ಸಲೆ , ಬದ್ ಕ್ ಬಾಗ್ಯೊಲೆನ್ ತೂದು ಪೋಲಂದೆರ್ ಗೆ ನಾಲ್ ಕಯಿತ ನಾರಾಯಿಣ ದೇವೆರ್ ಗೆ.”

ಇದು ಪೊಳಲಿ ಶೀನಪ್ಪ ಹೆಗ್ಗಡೆ ಅವರು ಸಂಪಾದಿಸಿರುವ ‘ ತುಳುವಾಲ ಬಲಿಯೇಂದ್ರೆ’ ಸಂಧಿಯ ಒಂದು ಒಂದು ಸನ್ನಿವೇಶ.     ‘ಬಲಿಯೇಂದ್ರೆ’ ದೀಪಾವಳಿ (ಪರ್ಬ , ಕೊಡಿ ಪರ್ಬ , ತುಡರ ಪರ್ಬ) ಯ ಸಂದರ್ಭಕ್ಕೆ ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ, ಒಂದುಕಾಲದ ಪ್ರಜಾವತ್ಸಲನಾದ ಜನಪ್ರಿಯ ಅರಸ . ಪ್ರತಿವರ್ಷ ಆಗಮಿಸಿ ತನ್ನ ರಾಜ್ಯದ ” ಬುಲೆ ಸಲೆ ಬದ್ಕ್ ಬಾಗ್ಯೊಲೆನ್ ” (ಬೆಳೆಯ ಸಮೃದ್ದಿ , ಬದುಕು – ಭಾಗ್ಯ) ನೋಡಿ ಹೋಗುವ ಅವಕಾಶವನ್ನು ನಾಲ್ಕು ಕೈಯ ನಾರಾಯಣ ದೇವರಿಂದ ವರವಾಗಿ ಪಡೆದಿರುತ್ತಾನೆ.     

ಸಂದಿ ಹೇಳುವಂತೆ ಬಲಿಯೇಂದ್ರೆ ನೇರವಾಗಿ ‘ಬೊಂತೆಲ್'(ತುಲಾ ಮಾಸ) ತಿಂಗಳ ಅಮಾವಾಸ್ಯೆಯಂದು ಬರುವುದಲ್ಲ , ಬದಲಿಗೆ ಆಟಿ (ಕರ್ಕಾಟಕ ಮಾಸ) ಅಮಾವಾಸ್ಯೆಯಂದು ತನ್ನ ಆಳುಗಳನ್ನು ಕಳುಹಿಸಿ ತನ್ನ ರಾಜ್ಯದಲ್ಲಿ ಕೃಷಿ ಚಟುವಟಿಕೆ ಹೇಗೆ ಆರಂಭವಾಗಿದೆ ಎಂದು ತಿಳಿದುಕೊಳ್ಳುತ್ತಾನೆ (ಪಿನ್ಲ – ಪಿನ್ನೊನ್ಲ). ಆಟಿ ತಿಂಗಳ ಈ ಅಮಾವಾಸ್ಯೆಯಂದು ನಾವು ‘ಆಟಿ ಮದ್ದು’  ಕುಡಿಯುತ್ತೇವೆ , ಬೆಳೆ ರಕ್ಷಣೆಗೂ ಕ್ರಮಕೈಗೊಳ್ಳುತ್ತೇವೆ.  

“ಆಟಿ ಆಡೊಂದು ಪೋಪುಂಡು
ಸೋಣ ಸೋಡೋಣ್ತ್ ಪೋಪುಂಡು”
ಇದೊಂದು ಜನಪದರಲ್ಲಿರುವ ಗಾದೆ. ಈ ತಿಳಿವಳಿಕೆ ಸಹಜವಾಗಿತ್ತು ,  ಆದರೆ ಈಗ ಮರೆತು ಹೋಗಿದೆ. ಕಾಲ ಬದಲಾಗಿದೆ . ಪ್ರಕೃತಿಯೊಂದಿಗಿನ ಸಹಬಾಳ್ವೆ ಅರ್ಥ ಕಳಕೊಂಡಿದೆ. ಮಳೆ ಆಧರಿಸಿ ಸಿದ್ದಗೊಂಡು ಲಾಗಾಯ್ತಿನಿಂದ ರೂಢಿಯಲ್ಲಿದ್ದ “ಕೃಷಿ ಸಂವಿಧಾನ”ಮರೆತು ಹೋಗಿದೆ , ಈ ಸಂಬಂಧದ ಸಾಂಸ್ಕೃತಿಕ ಆವರಣವೊಂದು  ಕಳಚಿ ಕೊಂಡಿದೆ .

ಕೃಷಿ ಅವಲಂಬಿತ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಕೃಷಿ – ಬೇಸಾಯದ ಅವಗಣನೆ , ಕೃಷಿ ಭೂಮಿಯ ಪರಿವರ್ತನೆ , ಕೃಷಿ ಲಾಭದಾಯಕವಾಗದೆ ಇರುವುದು , ಕೃಷಿ – ಬೇಸಾಯದಿಂದಲೇ ಸರ್ವ ಸಮೃದ್ದಿ ಎಂಬ ಚೆಂತನೆ – ಸ್ವೀಕಾರದ ನಂಬಿಕೆ ಹುಸಿಯಾಯಿತು .

ಕೃಷಿ – ಬೇಸಾಯ ಅಪ್ರಸ್ತುತವಾಗುತ್ತಾ ಕೃಷಿ ಪ್ರಧಾನವಾಗಿ ರೂಪುಗೊಂಡ ಸಾಂಸ್ಕೃತಿಕ ಜೀವನಶೈಲಿ ಬದಲಾಯಿತು , ನಮ್ಮದ್ದಲ್ಲದ ಎಷ್ಟೋ ಆಚಾರ – ವಿಚಾರಗಳನ್ನು ಒಪ್ಪುವಂತಾಗುತ್ತದೆ.ಈ ಕಾರಣಗಳಿಂದ ಕೃಷಿ ಸಂಸ್ಕೃತಿಯಿಂದ ಪಡಿಮೂಡಿದ್ದ ಆಚರಣೆಗಳು ಅವಗಣಿಸಲ್ಪಟ್ಟುವು , ಒಂದು ಹಂತಕ್ಕೆ ಮರೆತೇ ಹೋಯಿತು . ಇಂತಹ ಸಾಂಸ್ಕೃತಿಕ ಮರೆವುಗೆ ಆಟಿ (ಕರ್ಕಾಟಕ ಮಾಸ), ಸೋಣ (ಸಿಂಹಮಾಸ) ತಿಂಗಳುಗಳ ಆಚರಣೆಗಳೂ ಸೇರಿಹೋದುವು. ಜಾಣ ಮರೆವು ?    
‌‌
‌‌‌ • ಕೆ.ಎಲ್.ಕುಂಡಂತಾಯ

 
 
 
 
 
 
 
 
 

Leave a Reply