ಖಡ್ಗಮಾಲಾ ರಹಸ್ಯ ಭಾಗ 2- ಶ್ರೀಕಾಂತ್ ಶೆಟ್ಟಿ 

 ಅಸ್ಸಾಮಿನ ಕಾಮಾಖ್ಯಾ ಕ್ಷೇತ್ರದ ದೇವಿಯ ಯೋನಿಪೀಠ ಶಾಕ್ತ ತಂತ್ರ ಸಾಧಕರನ್ನು ಜಗತ್ತಿನ ನಾನಾ ಮೂಲೆಗಳಿಂದ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅದೊಂದು ನಿಗೂಢ ಜಗತ್ತು. ಆದರೆ ಶ್ರೀವಿದ್ಯೆಯಲ್ಲಿ ಕಾಮಾಖ್ಯಾದಷ್ಟೇ ಶಕ್ತಿಶಾಲಿಯಾದ ಇನ್ನೊಂದು ಕ್ಷೇತ್ರ ನಮ್ಮ ಕೊಲ್ಲಾಗಿರಿ ಅಂದರೆ ಕೊಡಚ್ಚಾದ್ರಿ.

 ಕೊಲ್ಲೂರಿನ ಹೆಸರು ಜಗತ್ತಿನಾದ್ಯಂತ ಚಕ್ರ ಆರಾಧನೆ ಮಾಡುವ ಸಾಧಕರ ಬಾಯಲ್ಲಿ ಪ್ರತಿನಿತ್ಯವೂ ಬರುತ್ತದೆ. ಶ್ರೀ ವಿದ್ಯೆಯಲ್ಲಿ ಅತ್ಯಂತ ಮಹತ್ವ ಪಡೆದಿರುವುದು ಶ್ರೀ ಬಾಲಾ ಯಂತ್ರ. ಈ ಯಂತ್ರದಲ್ಲಿ ಬರುವ ಅಷ್ಟದಳ ಪದ್ಮದ ಒಂದೊಂದು ದಳದಲ್ಲಿ ಒಂದೊಂದು ಶಕ್ತಿಪೀಠ ಗಳನ್ನು ಋಷಿಗಳು ಸಂಕಲ್ಪಿಸಿದ್ದಾರೆ. ಕಾಮರೂಪ, ಮಲಯ ಕೊಲ್ಲಾಗಿರಿ, ಚೌಹಾರ, ಕುಲಾಂತಕ, ಜಾಲಂದರ, ಒಡ್ಡಿಯಾನ ಮತ್ತು ಕೊದ್ಧಾ ಇವಿಷ್ಟು ಅ ಪ್ರಧಾನ ಅಷ್ಟ ಶಕ್ತಿ ಪೀಠಗಳು. ಬೇತಾಳ ಅಗ್ನಿಜೀಹ್ವಾ ಕಾಲಂತಕ ಮೊದಲಾದ ಅಷ್ಟ ಭೈರವರು ಈ ಶಕ್ತಿ ಪೀಠಗಳನ್ನು ಕಾಯುತ್ತಾರೆ. ಈ ಪೀಠಗಳನ್ನು ಶ್ರೀ ಚಕ್ರ ಸಾಧಕರು ಪ್ರತಿದಿನವೂ ಸ್ತುತಿ ಮಾಡುತ್ತಾರೆ . ಅದರಲ್ಲಿ ಕೊಲ್ಲಾಗಿರಿಯೂ ಒಂದಾಗಿದೆ.

ಕೊಲ್ಲೂರಿನ ಬೆನ್ನಿಗೆ ಆತುಕೊಂಡಿರುವ ಕೊಡಚಾದ್ರಿಯ ಒಡಲೊಳಗೆ ನಡೆದು ಹೋದರೆ ಅಸಂಖ್ಯಾತ ಸಾಧಕರ ಅಸ್ಥಿಗಳು ನಮ್ಮ ಕಾಲಿಗಡರೀತು. ಅಲ್ಲಿನ ಅಂಬಾವನದೊಳಗೆ ಇಳಿದರೆ ಅಲ್ಲಿ ನಮ್ಮ ಕಲ್ಪನೆಗೂ ನಿಲುಕದ ರುದ್ರ ರಮಣೀಯ ಲೋಕವಿದೆ ಎನ್ನುತ್ತಾರೆ. ಆ ಜಗನ್ಮಾತೆ ತುದಿ ಇಲ್ಲದ ತೂಗುಯ್ಯಾಲೆಯಲ್ಲಿ ತೂಗಿದ ಕದಂಬವನ,ನೂರಾರು ವರ್ಷದಿಂದ ಘನಘೋರ ತಪಸ್ಸಿನಲ್ಲಿ ನಿರತರವಾಗಿರುವ ಪರಮ ಋಷಿಗಳ ಮಂಡಲ, ಹುತ್ತಗಟ್ಟಿದ ಸಿದ್ಧ ಸಾಧಕರ ತಪೋವನ. ನಿರ್ಭೀತವಾಗಿ ಓಡಾಡುವ ಖಗಮೃಗ ಸರಿಸ್ರಪಗಳು.ಚಂದ್ರನಿಂದಲೇ ತೊಟ್ಟಿಕ್ಕಿ ನಿರ್ಮಾಣವಾದಂತಿರುವ ಹೊಳೆವ ಸರೋವರ.ಕೆಂದಾವರೆಗಳ ಗಂಧ.ಹೀಗೆ ಸಾಗುತ್ತದೆ ಅಂಬಾ ವನದ ವರ್ಣನೆ. 

ಇಲ್ಲಿಂದಲೇ ಜಗದ್ಗುರು ಆದಿ ಶಂಕರಾಚಾರ್ಯರು ತಾಯಿ ಮೂಕಾಂಬಿಕೆಯನ್ನು ಕರೆತಂದು ಸೌಪರ್ಣಿಕಾ ತಟದಲ್ಲಿ ಪ್ರತಿಷ್ಠಾಪಿಸಿದ್ದು. ಅಲ್ಲಿಗೆ ಹೋದ ಒಬ್ಬೊಬ್ಬರದ್ದು ಒಂದೊಂದು ರೋಚಕ ಕಥೆ. ನಮ್ಮ ಆತ್ಮೀಯರೊಬ್ಬರು ಅವರ ಅರಿವಿಗೆ ಬಂದ ಒಬ್ಬ ಶ್ರೀವಿದ್ಯಾ ಸಾಧಕರ ಅನುಭವವನ್ನು ನನ್ನ ಜೊತೆ ಹಂಚಿಕೊಂಡಿದ್ದರು. ಅವರು ಶ್ರೀಚಕ್ರವನ್ನು ಇರಿಸಿ ಗೌಪ್ಯವಾಗಿ ಆರಾಧನೆ ಮಾಡುತ್ತಿದ್ದರಂತೆ , ಇನ್ನೂ ಪರಿಣಾಮಕಾರಿ ಫಲಿತಾಂಶ ಬೇಕು ಎಂಬ ಉದ್ದೇಶದಿಂದ ಕೊಲ್ಲೂರಿನ ಕೊಡಚಾದ್ರಿ ಪರ್ವತಕ್ಕೆ ಹೋಗಿ ಅಲ್ಲಿ ಆ ಶಕ್ತಿಯ ಉಪಾಸನೆ ಗೈದರು. ಆದರೆ ಅವರಿಗೆ ಸೂಕ್ತವಾದ ಗುರುವಿನ ಮಾರ್ಗದರ್ಶನವಿರಲಿಲ್ಲ. ನಮ್ಮೆಲ್ಲರನ್ನೂ ಪೊರೆಯುವ ಆ ಜಗನ್ಮಾತೆ ನಮ್ಮ ಹೆತ್ತ ತಾಯಿಯ ಹಾಗಲ್ಲ.

ಹೆತ್ತ ತಾಯಿ ತನ್ನ ಮಗುವಿನ ಸಾಮರ್ಥ್ಯವನ್ನು ಪರೀಕ್ಷಿಸದೆ ಆ ಮಗುವು ಕೇಳಿದ್ದನ್ನೆಲ್ಲ ಕೊಟ್ಟು ಮಗುವನ್ನು ಹಾಳು ಮಾಡುತ್ತಾಳೆ. ಆದರೆ ಆ ಜಗನ್ಮಾತೆ ಮಾತ್ರ ತನ್ನ ಮಗನನ್ನು ಬಾರಿ ಬಾರಿ ಪರೀಕ್ಷಿಸಿ ಆತನ ಸಾಮರ್ಥ್ಯವನ್ನು ಅಳೆದು ತೂಗಿ ಕೊನೆಗೆ ಆತನಿಗೆ ಸಿದ್ಧಿಗಳನ್ನು ಕರುಣಿಸುತ್ತಾಳೆ. ಖುದ್ದು ಶಂಕರಾಚಾರ್ಯರೇ ಅಪರಾಧ ಕ್ಷಮಾಪಣ ಸ್ತೋತ್ರ ದಲ್ಲಿ ಹೇಳಿದಂತೆ ನನಗೆ ನಿನ್ನ ಅರ್ಚನೆ ಆರಾಧನೆ ಯಾವುದೂ ತಿಳಿದಿಲ್ಲ. ಪುಟ್ಟ ಮಗುವೊಂದು ತಾಯಿಯ ಸೆರಗಿನಲ್ಲಿ ಜೋತು ಬಿದ್ದು ದಿನವಿಡೀ ರಚ್ಚೆ ಹಿಡಿಯುವಂತೆ ನಿನ್ನನ್ನು ಕಾಡುವುದನ್ನು ಮಾತ್ರ ಅರಿತಿರುವೆನು ಎನ್ನುತ್ತಾರೆ.

ಬದುಕಿನ ಸಮೃದ್ಧಿಗೆ ಬೇಕಾಗಿ ತಾಯಿಯಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಅಷ್ಟೇ ಸಾಕಾಗುತ್ತದೆ. ಆದರೆ ನೀವು ಆ ತಾಯಿಗೆ ಅಧಿಕಾರ ಪೂರ್ವಕವಾಗಿ ಅರ್ಜಿ ಗುಜರಾಯಿಸಿಸಲು ಹೊರಟರೆ ಒಂದು ಅಕ್ಷರ ವ್ಯತ್ಯಾಸವಾದರೂ ಅರ್ಜಿ ತಿರಸ್ಕರಿಸಲ್ಪಡುತ್ತದೆ. ಈ ತಂತ್ರ ವಿದ್ಯೆಗಳು ಕೂಡ ಒಂದು ತರ ಅಧಿಕಾರಯುತವಾಗಿ ವಿದ್ಯೆಗಳನ್ನು ವಶಪಡಿಸುವುದೇ ಆಗಿದೆ. ಆ ಪ್ರಯತ್ನಕ್ಕೆ ಯಶಸ್ಸು ಬೇಕಾದರೆ ಅದರಲ್ಲಿ ಪರಿಪಕ್ವತೆ ಇಂದ್ರಿಯ ನಿಗ್ರಹ,ಮನೋಬಲ ಮತ್ತು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಈ ವಿದ್ಯೆಯಲ್ಲಿ ಅರೆಬರೆ ಮನಸ್ಸು ಮಾಡಿ ಅರ್ಧಕ್ಕೆ ನಿಲ್ಲಿಸಿ ಹೆದರಿ ಹಿಂದೇಟು ಹಾಕಿದರೆ ಮುಂದೆ ಬದುಕು ಘೋರ ನರಕವಾಗುವ ಸಾಧ್ಯತೆ ಇದೆ. 

ಮೇಲೆ ಪ್ರಸ್ತಾಪಿಸಿದ ಸಾಧಕರ ಬದುಕಿನಲ್ಲಿಯೂ ಅಂತದ್ದೇ ಒಂದು ದುರಂತ ನಡೆದು ಹೋಯಿತು. ಆ ಸಾಧಕ ಕೊಡಚಾದ್ರಿ ಬೆಟ್ಟದಲ್ಲಿ ಕಠೋರವಾದ ವೃತವನ್ನು ಮಾಡಿ ತಿಂಗಳಾನುಗಟ್ಟಲೆ ಜಪ-ತಪ ಮಂತ್ರ ಪಾರಾಯಣ ನಡೆಸಿ ತಾಯಿಯ ಆ ದಿವ್ಯ ಮಂಗಳ ರೂಪವನ್ನು ಕಾಣಬೇಕೆಂದು ಸಾಧನಾ ನಿರತನಾಗಿದ್ದರು.ಒಂದು ದಿನ ಖಡ್ಗಮಾಲಾ ಸ್ತೋತ್ರವನ್ನು ಜಪಿಸುತ್ತಾ ಮಮ ಪಾದುಕಾ ಸಿದ್ಧ್ಯರ್ಥೇ ಎಂದು ಪ್ರಾರ್ಥಿಸಿ ಶ್ರೀ ಚಕ್ರದ ಮೇಲೆ ಹೂವನ್ನು ನೀಡುತ್ತಿದ್ದಂತೆ ಕೊಡಚಾದ್ರಿಯ ತುದಿಯ ಆಗಸವೆಲ್ಲಾ ಕಪ್ಪಡರಿ ಕೊಂಡಿತು. ಕಾರ್ಮೋಡಗಳ ಮಧ್ಯದಿಂದ ಗುಡುಗು ಸಿಡಿಲುಗಳ ಅಬ್ಬರಿಸಿದವು. ಬಾನಿನಲ್ಲಿ ಹೆಪ್ಪುಗಟ್ಟಿದ್ದ ಕಪ್ಪು ಮೋಡ ಗಳನ್ನೆಲ್ಲಾ ಸುಂಟರಗಾಳಿ ಕಡೆದಂತಾಗಿ ಅದರಿಂದ ಭಾರೀಗಾತ್ರದ ಕಪ್ಪು ಬಣ್ಣದ ಪಾದ ಇಡೀ ಬೆಟ್ಟವನ್ನೇ ಆವರಿಸಿಕೊಂಡಂತೆ ಕೆಳಗಿಳಿಯಿತು.

 ಬಗೆ ಬಗೆಯ ಆಭರಣ ಕಾಲ್ಗೆಜ್ಜೆ ಕಾಲುಂಗುರಗಳಿದ್ದ ಆ ಪಾದ ನಿಧಾನವಾಗಿ ಕೆಳಗಿಳಿಯುತ್ತಿದ್ದಂತೆ ಮೇಲ್ಭಾಗದಲ್ಲಿ ಸಹಸ್ರ ಸೂರ್ಯ ತೇಜಸ್ಸಿನ ಬೆಳಕು ಮೂಡಿತಂತೆ ಈ ರುದ್ರ ಭಯಾನಕ ದೃಶ್ಯವನ್ನು ನೋಡಿದ ಸಾಧಕನ ಬಾಯಿ ಸ್ತಬ್ಧವಾಯಿತು.ಮಂತ್ರಗಳು ನಿಂತು ಹೋದವು ನಾಲಗೆ ಮರಗಟ್ಟಿತ್ತು ಗಂಟಲಿನ ಪಸೆ ಆರಿತು. ಆತ ಹೆದರಿದ ಎದ್ದು ಬಿದ್ದು ಓಡಿ ಬಂದವನು ಹೇಗೋ ಮನೆ ಸೇರಿಕೊಂಡು ತನಗಾದ ಅನುಭವವನ್ನು ಮನೆಯವರೊಂದಿಗೆ ಹಂಚಿಕೊಂಡ. ಆವತ್ತೇ ಮೌನಕ್ಕೆ ಜಾರಿದ ಆ ವ್ಯಕ್ತಿ ಮತ್ತೆ ಈ ವಾಸ್ತವ ಜಗತ್ತಿಗೆ ಮರಳಲೇ ಇಲ್ಲ. ಕೆಲ ವರ್ಷಗಳ ಹಿಂದಷ್ಟೇ ಅವರು ತೀರಿಕೊಂಡರು. ಶ್ರೀ ವಿದ್ಯೆ ಎನ್ನುವುದು ನಮ್ಮ ಕಲ್ಪನೆ ಊಹೆಗಳಿಗೆ ಸಿಲುಕದ ಅಗಣಿತ ಶಕ್ತಿಯ ಖಜಾನೆ. ಖಜಾನೆಗೆ ಕಾವಲು ಕೂಡ ಭದ್ರವಾಗಿಯೇ ಇರುತ್ತದೆ.

 ಕರಾವಳಿಯಲ್ಲಿ ಇದೇ ರೀತಿ ಇರುವ ಇನ್ನೊಂದು ಅತ್ಯಂತ ಶಕ್ತಿ ಪ್ರದಕ್ಷೇತ್ರ ಪೊಳಲಿ 

ನಮ್ಮ ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಒಂದು ಕಾಲದಲ್ಲಿ ಶಾಕ್ತ ಶೈವ ಮತ್ತು ಬೌದ್ಧ ತಾಂತ್ರಿಕರ ರಹಸ್ಯ ವಿದ್ಯೆಗಳಿಗೆ ವೇದಿಕೆಯಾಗಿತ್ತು. ಇಂದಿಗೂ ಕೂಡ ಎಷ್ಟೇ ಕಠಿಣ ಸಮಸ್ಯೆ ಇದ್ದರೂ ಪೊಳಲಿಯಲ್ಲಿ ಖಡ್ಗಮಾಲಾ ಸೇವೆ ಯ ಹರಕೆ ಹೊತ್ತರೆ ಅದು ಪವಾಡದ ರೂಪದಲ್ಲಿ ಪರಿಹಾರವಾಗುತ್ತದೆ. ಖಡ್ಗಮಾಲಾದಿಂದ ನಾನು ಶತ್ರು ನಾಶವಾಗುತ್ತದೆ ಎನ್ನಲಾರೆ ಆದರೆ ಶತ್ರುತ್ವವಂತೂ ನಾಶವಾಗುತ್ತದೆ. ನಮಗೆ ಯಾರು ಶತ್ರುವಾಗಿ ಕಾಡುತ್ತಿರುತ್ತಾನೆ ಅವನಲ್ಲೂ ಒಂದಷ್ಟು ಶಕ್ತಿ ಸಾಮರ್ಥ್ಯ ಇರುತ್ತದೆ. ಒಂದು ವೇಳೆ ಆ ಶತ್ರುವೇ ನಮ್ಮ ಮಿತ್ರನಾಗಿ ಬಿಟ್ಟರೆ ? ಅವನ ಸಾಮರ್ಥ್ಯಗಳೆಲ್ಲ ನಮಗೂ ಉಪಯೋಗವಾಗುತ್ತದೆ. ಖಡ್ಗಮಾಲಾ ದಿಂದ ಇದು ಸಾಧ್ಯ.ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿರುವ ಭದ್ರಕಾಳಿ ಮತ್ತು ಕ್ಷೇತ್ರಪಾಲ ಭೈರವನ ಜಾಗೃತ ಸಾನಿಧ್ಯ ಅನೇಕರ ಬದುಕನ್ನು ಬದಲಾಯಿಸಿದೆ.

 ಖಡ್ಗಮಾಲಾ ಸ್ತೋತ್ರದಲ್ಲಿ ಬರುವ ಪ್ರಾರ್ಥನಾ ಮಂತ್ರದ ವಿವರವನ್ನು ಮೊನ್ನೆ ತಿಳಿದಂತಾಯಿತು. ಮುಂದೆ ಮಂತ್ರವು ಅಸ್ಯ ಶ್ರೀ ಶುದ್ಧಶಕ್ತಿಮಾಲಾಮಹಾಮಂತ್ರಸ್ಯ, ಉಪಸ್ಥೇಂದ್ರಿಯಾಧಿಷ್ಠಾಯೀ ವರುಣಾದಿತ್ಯ ಋಷಯಃ ದೇವೀ ಗಾಯತ್ರೀ ಛಂದಃ ಸಾತ್ವಿಕ ಕಕಾರಭಟ್ಟಾರಕಪೀಠಸ್ಥಿತ ಕಾಮೇಶ್ವರಾಂಕನಿಲಯಾ ಮಹಾಕಾಮೇಶ್ವರೀ ಶ್ರೀ ಲಲಿತಾ ಭಟ್ಟಾರಿಕಾ ದೇವತಾ, ಐಂ ಬೀಜಂ ಕ್ಲೀಂ ಶಕ್ತಿಃ, ಸೌಃ ಕೀಲಕಂ ಮಮ ಖಡ್ಗಸಿದ್ಧ್ಯರ್ಥೇ ಜಪೇ ವಿನಿಯೋಗಃ, ಮೂಲಮಂತ್ರೇಣ ಷಡಂಗನ್ಯಾಸಂ ಕುರ್ಯಾತ್ । ಎಂದು ಆರಂಭವಾಗುತ್ತದೆ.

 ಈಗ ಶುದ್ಧ ಶಕ್ತಿ ಮಾಲಾ ಮಹಾಮಂತ್ರ ಆರಂಭವಾಗುತ್ತಿದೆ ಎನ್ನುವುದು ಇದರ ಅರ್ಥ. ಇದನ್ನು ಶುದ್ಧ ಶಕ್ತಿ ಮಾಲಾ ಎಂದು ಯಾಕೆ ಸಂಬೋಧಿಸಿದ್ದಾರೆ ? ಹಾಗಾದರೆ ಖಡ್ಗಮಾಲ ಉಪಾಸನೆಯಲ್ಲಿ ಇನ್ನೂ ಎಷ್ಟು ಮಾಲಾ ಮಹಾಮಂತ್ರ ಗಳಿವೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಶ್ರೀ ದೇವಿಯ ಅತ್ಯಂತ ರಹಸ್ಯ ಉಪಾಸನೆ ಆಗಿರುವ ಖಡ್ಗಮಾಲಾ ಸ್ತೋತ್ರ ದಲ್ಲಿ ಹುಟ್ಟು 15 ರೀತಿಯ ಮಂತ್ರಗಳಿವೆ. ಅಮಾವಾಸ್ಯೆಯ ಗೋರ ಅಂಧಕಾರದ ಬಳಿಕ ನಿಧಾನವಾಗಿ ಕಳೆ ತುಂಬಿಕೊಳ್ಳುವ ಚಂದ್ರ ಹುಣ್ಣಿಮೆಯ ದಿನ ಪೂರ್ಣ ಚಂದಿರ ಆಗುವವರೆಗೆ ಹದಿನೈದು ದಿನಗಳ ಕಾಲ ದಿನಕ್ಕೆ ಒಂದರಂತೆ ಉಪಾಸನೆ ನಡೆಯುತ್ತದೆ. ವಿಶೇಷವಾಗಿ ದಶಮಹಾವಿದ್ಯೆ ಗೆ ಸಂಬಂಧಪಟ್ಟ ಖಡ್ಗಮಾಲಾ ಸ್ತೋತ್ರ ಗಳು ಇನ್ನೂ ಹಲವಾರು ಇವೆ ಆದರೆ ಅವುಗಳನ್ನು ನಾನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಪ್ರಧಾನವಾಗಿರುವ 15 ರೀತಿಯ ಖಡ್ಗಮಾಲಾ ಮಂತ್ರಗಳು ಯಾವುದು ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

 15ದಿನಗಳ ಉಪಾಸನೆಯನ್ನು ನಾವು ಮೂರು ವಿಭಾಗ ಮಾಡಿಕೊಳ್ಳಬೇಕು ಮೊದಲ ಐದು ದಿನ ಶಕ್ತಿಯ ಉಪಾಸನೆ ನಡೆದರೆ ಆನಂತರದ ಐದು ದಿನ ಶಿವನ ಉಪಾಸನೆ ನಡೆಯುತ್ತದೆ. ಬಳಿಕ ಐದು ದಿನಗಳ ಕಾಲ ಶಿವ-ಶಕ್ತಿಯರ ಉಪಾಸನೆ ಜೊತೆಯಾಗಿ ನಡೆಯಬೇಕು.

 ಮೊದಲ ಐದು ದಿನದ ಶಕ್ತಿ ಉಪಾಸನೆಯಲ್ಲಿ ಒಂದನೆಯ ದಿನ ಶುದ್ಧ ಶಕ್ತಿ ಮಾಲಾ ಮಂತ್ರದ ಪಠಣ ನಡೆಯುತ್ತದೆ. ಈ ದಿನ ಸಾಧಕ ಮಮ ಖಡ್ಗಸಿದ್ಧ್ಯರ್ಥೇ ಎಂದು ತಾಯಿಯನ್ನು ಪ್ರಾರ್ಥಿಸುತ್ತಾನೆ. ಮೊದಲ ದಿನವೇ ಐಶ್ವರ್ಯ ಭಾಗ್ಯ ಎಲ್ಲವನ್ನು ಬಿಟ್ಟು ಕತ್ತಿಯನ್ನು ಯಾಕೆ ಕೇಳುತ್ತಿದ್ದಾನೆ ಎನ್ನುವ ಬಗ್ಗೆ ನಾವು ಯೋಚಿಸೋಣ.

 ಇದು ಸಾಮಾನ್ಯ ಕತ್ತಿಯಲ್ಲ. ಸಾಧಕನಿಗೆ ಇರುವ ಭಾವದ ಬಂಧನಗಳನ್ನು ತೊಡೆದುಹಾಕುವ ಕತ್ತಿ. ಶ್ರೀವಿದ್ಯಾ ಸಾಧಕ ಈ ಜಗತ್ತಿನ ವ್ಯವಹಾರಗಳಿಂದ ವಿಮುಖವಾಗಲು ಮೊದಲ ಕಾರಣ ಇದೆ ಆಗಿದೆ. ಈ ಕಡಗದ ಬಲದಿಂದಲೇ ಸಾಧಕ ತನ್ನ ಸೀಮಿತ ಪರಿಧಿಯನ್ನು ಕತ್ತರಿಸಿ ತನ್ನ ಶಕ್ತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಇಂದ್ರಿಯ ಸುಖ ಸಾಂಸಾರಿಕ ಬಂಧನಗಳಿಂದ ಮುಕ್ತನಾದ ಬಳಿಕವೇ ಸಾಧಕನಿಗೆ ಹಲವು ಚಿಕ್ಕವಾದ ಅನೇಕ ಶಕ್ತಿಗಳು ಲಭಿಸುವುದು. ಇದು ಆಗಬೇಕಿದ್ದರೆ ಮೊದಲು ಆತನಿಗೆ ಆ ಖಡ್ಗ ಸಿದ್ಧಿಸಬೇಕು.

 ಎರಡನೆಯ ದಿನ ಸಾಧಕ ಸ್ತೋತ್ರದ ಉದ್ದಕ್ಕೂ ಬರುವ ದೇವಿಯ ಹೆಸರಿನ ಮುಂದೆ ನಮಃ ಎಂದು ಸೇರಿಸಿ ಉಪಾಸನೆ ಮಾಡುತ್ತಾನೆ. ಉದಾಹರಣೆಗೆ ಹೃದಯದೇವೀ ನಮಃ , ಶಿರೋದೇವೀ ನಮಃ, ಶಿಖಾದೇವೀ ನಮಃ ಕವಚದೇವೀ ನಮಃ ನೇತ್ರದೇವೀ ನಮಃ ಅಸ್ತ್ರದೇವೀ ನಮಃ ಹೀಗೆ..

ಈ ಬಾರಿ ಮಾತ್ರ ಒಂದು ಸಣ್ಣ ಬದಲಾವಣೆ ಇದೆ. ಮಂತ್ರದ ಮುಂದುವರಿದ ಭಾಗದಲ್ಲಿ ಬರುವ ಕಕಾರಭಟ್ಟಾರಕಪೀಠಸ್ಥಿತ ಎಂಬ ವಾಕ್ಯವನ್ನು ” ಎ”ಕಾರಭಟ್ಟಾರಕಪೀಠಸ್ಥಿತ ಎಂದು ಬದಲಾಯಿಸಿಕೊಳ್ಳಬೇಕು. ಈ ಎ ಕಾರ ಎಲ್ಲಿಂದ ಬಂತು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. 15 ದಿನದ ಉಪಾಸನೆಯಲ್ಲಿ 15 ರೀತಿಯ ಬೀಜ ಮಂತ್ರ ಗಳನ್ನು ಇಲ್ಲಿ ಬಳಸಬೇಕು. ಈ ಹದಿನೈದು ರೀತಿಯ ಬೀಜಮಂತ್ರಗಳನ್ನು ನಾವು ಲಲಿತಾ ತ್ರಿಪುರ ಸುಂದರಿಯ ಅತ್ಯಂತ ಶಕ್ತಿಶಾಲಿಯಾದ ಪಂಚದಶೀ ಬೀಜ ಮಂತ್ರಗಳಿಂದ ಪಡೆಯಬೇಕು. ಆ ಮಂತ್ರಗಳು ಈ ರೀತಿ ಇವೆ.ಕ‍-ಎ-ಈ‍-ಲ-ಹ್ರೀಂ ಹ-ಸ-ಕ-ಹ-ಲ-ಹ್ರೀಂ ಸ-ಕ-ಲ-ಹ್ರೀಂ ಲಲಿತಾ ತ್ರಿಪುರ ಸುಂದರಿ ಮಹಾಮಾತೆಯ ದೇಹವನ್ನು ಈ ಹದಿನೈದು ಬೀಜಮಂತ್ರಗಳು ಪ್ರತಿನಿಧಿಸುತ್ತವೆ. 

ಮೊದಲ 5 ಬೀಜಾಕ್ಷರ ಗಳನ್ನು ಸೇರಿಸಿ ರಚಿಸಲಾದ ವಾಗ್ಭವ ಕೂಟವು ತಾಯಿಯ ಶಿರೋ ಭಾಗವನ್ನು ಸಂಕೇತಿಸಿದರೆ, ಆನಂತರದ ಆರು ಬೀಜಾಕ್ಷರ ಗಳನ್ನು ಹೊಂದಿರುವ ಮಧ್ಯ ಕೂಟವು ದೇವಿಯ ಕತ್ತಿನಿಂದ ಸೊಂಟದವರೆಗಿನ ಭಾಗವನ್ನು ಸೂಚಿಸುತ್ತದೆ. ಕೊನೆಯ ನಾಲ್ಕು ಬೀಜಾಕ್ಷರ ಗಳನ್ನು ಶಕ್ತಿ ಕೂಟ ಎಂದು ಗುರುತಿಸಿ ಅದನ್ನು ತಾಯಿಯ ಸೊಂಟದಿಂದ ಕಾಲಿನವರೆಗಿನ ಭಾಗ ಎಂದು ಋಷಿಗಳು ಗುರುತಿಸಿದ್ದಾರೆ. ಸೌಂದರ್ಯ ಲಹರಿಯ ೩೨ನೇ ಸ್ತೋತ್ರದಲ್ಲಿ ಶಂಕರಭಗವತ್ಪಾದರು ಪಂಚದಶೀ ಮಂತ್ರದ ರಹಸ್ಯವನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ. ಅತ್ಯಂತ ಗೌಪ್ಯ ವಾಗಿರುವ ಈ ರಹಸ್ಯ ಮಂತ್ರಗಳು ಪರಮೇಶ್ವರನ ಡಕ್ಕಾ ನಿನಾದದಿಂದ ಹೊರಹೊಮ್ಮಿದೆ ಎನ್ನುವುದು ಪ್ರಾಜ್ಞರ ಅಭಿಪ್ರಾಯ. ಈ ಬೀಜಾಕ್ಷರ ಗಳ ಮಹತ್ವವನ್ನು ಸಾರುವ ತಂತ್ರಗಳನ್ನು ಸೃಜಿಸಿದವನು ಕೂಡ ಅವನೇ ತಾನೇ?

ಇರಲಿ 15 ದಿನಗಳ ಉಪಾಸನೆಗೆ 15 ಬೀಜಮಂತ್ರ ಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎನ್ನುವುದನ್ನು ತಿಳಿದಂತಾಯಿತು. ಮೊದಲ ದಿನ ಶುದ್ಧ ಮಾಲಾ ಪಠನೆ ಈ ದಿನ ಎಲ್ಲಾ ದೇವಿ ಹೆಸರುಗಳನ್ನು ಯಥಾವತ್ತಾಗಿ ಹೇಳಬೇಕು. ಎರಡನೆಯ ದಿನ ನಮಂತ ಮಾಲಾ. ಈ ದಿನ ದೇವಿಯ ಹೆಸರಿನ ಕೊನೆಯಲ್ಲಿ ನಮಃ ಎಂದು ಸೇರಿಸಬೇಕು , ಮೂರನೆಯದಿನ ಸ್ವಾಹಂತ ಮಾಲಾ. ದೇವಿಯ ಹೆಸರಿನ ಕೊನೆಯಲ್ಲಿ ಸ್ವಾಹಾ ಎಂದು ಸೇರಿಸಿ ಪಠಿಸಬೇಕು , ನಾಲ್ಕನೇ ತರ್ಪಣಂತ ಮಾಲ , ಐದನೆಯ ದಿನ ಜಯಂತ ಮಾಲಾ.. ಈ ದಿನ ಮಂತ್ರದ ಕೊನೆಯಲ್ಲಿ ಜಯ ಜಯಾ ಎಂದು ದೇವಿಯನ್ನು ಕೊಂಡಾಡುತ್ತಾರೆ.ಈ ರೀತಿ ಮೊದಲ ಐದು ದಿನ ಉಪಾಸನೆ ಸಾಗುತ್ತದೆ.

ಆರನೆಯ ದಿನ ಶಕ್ತಿಯ ಬದಲು ಶಿವನ ಉಪಾಸನೆ ಆರಂಭವಾಗುತ್ತದೆ. ಮೊದಲ ದಿನ ಶುದ್ಧ ಶಿವ ಮಾಲಾ. ಇದರಲ್ಲಿ ಎಲ್ಲೆಲ್ಲಿ ದೇವಿ ಎಂದು ಇದೆಯೋ ಅದನ್ನು ದೇವಾ ಎಂದು ಸ್ತುತಿ ಮಾಡಲಾಗುತ್ತದೆ.ಹನ್ನೊಂದನೇ ದಿನ ಶಿವಶಕ್ತಿ ಇಬ್ಬರನ್ನೂ ಜೊತೆ ಮಾಡಿ ಸ್ತೋತ್ರ ಮಾಡಲಾಗುತ್ತದೆ. 15ನೇ ದಿನ ಇದು ಮುಕ್ತಾಯವಾಗುವಾಗ ಈ ಮಂತ್ರದ ಶಕ್ತಿ ಏನು ಎನ್ನುವುದು ಸಾಧಕನಿಗೆ ಅರಿವಾಗಿರುತ್ತದೆ.

 ಜಗತ್ತಿನ ಎಲ್ಲಾ ಸಿದ್ಧಿಗಳನ್ನು ಕರುಣಿಸುವಳು ಆ ಮಹಾಮಾತೆ. ಈ 15 ದಿನಗಳಲ್ಲಿ ಮೊದಲ ದಿನ ಖಡ್ಗವನ್ನು ಕರುಣಿಸುವಂತೆ ತಾಯಿಯಲ್ಲಿ ಪ್ರಾರ್ಥಿಸಿದರೆ, ಎರಡನೆಯ ದಿನ ಪಾದುಕ ಸಿದ್ಧಿಗಾಗಿ ಸಾಧಕ ಪ್ರಾರ್ಥಿಸುತ್ತಾನೆ. ಮೂರನೆಯ ದಿನದ ಶಕ್ತಿ ಸ್ವಾಹಾಂತ ಮಾಲಾ ಜಪ ಸಾಧಕನು ಅಂಜನ ಸಿದ್ಧಿಯನ್ನು ಕೇಳಿಕೊಳ್ಳಬೇಕು.ಅಂಜನದ ಬಗ್ಗೆ ಸಾಕಷ್ಟು ಕತೆಗಳನ್ನು ನಾವು ಕೇಳಿದ್ದೇವೆ. ಅಂಜನವನ್ನು ಕಣ್ಣಿಗೆ ಬಳಿದುಕೊಂಡರೆ ಸಾಕು ಎಲ್ಲೆಲ್ಲಿಯದ್ದೋ ದೃಶ್ಯಗಳನ್ನು ನಾವು ಕುಳಿತಲ್ಲೇ ಕಾಣಬಹುದಂತೆ! ಪ್ರಾಚೀನ ಕಾಲದಲ್ಲಿ ನಿಧಿ ಶೋಧನೆಗೆ ಅಂಜನವನ್ನು ಬಳಸುತ್ತಿದ್ದರು. ಕಳ್ಳರನ್ನು ಪತ್ತೆ ಹಚ್ಚಲು ಅಂಜನ ವಿದ್ಯೆ ಬಳಸುತ್ತಿದ್ದರು.

 ಹೀಗೆ ಬಗೆಬಗೆಯ ಕಥೆಗಳಿವೆ. ಅದು ಆಗಿರಲೂಬಹುದು. ಆದರೆ ನನಗೆ ತಿಳಿದಂತೆ ಅಂಜನಸಿದ್ದಿಯಾದವರಿಗೆ ತನ್ನ ಆಸುಪಾಸಿನಲ್ಲಿದ್ದ ಅವರ ಕಷ್ಟ ಸುಖ ದುಃಖಗಳು ಅರಿವಾಗುತ್ತವೆ. ಅವರ ನೋವಿಗೆ ಸಾಂತ್ವನ ಹೇಳುವ ಶಕ್ತಿ ದೊರೆಯುತ್ತದೆ. ಜಗತ್ತಿನ ಎಲ್ಲಾ ಆತ್ಮಗಳು ಆ ವಿಶ್ವಪ್ರಜ್ಞೆಯ ಜೊತೆ ಸಂಪರ್ಕ ಹೊಂದಿರುವುದರಿಂದ ಒಬ್ಬನ ಮನಸ್ಸನ್ನು ಇನ್ನೊಬ್ಬ ಅರಿತುಕೊಳ್ಳುವುದು ದೊಡ್ಡ ಸಂಗತಿಯೇನಲ್ಲ. ಇದೇ ಅಂಜನಸಿದ್ದಿ.

 ನಾಲ್ಕನೆಯ ದಿನ ನಡೆಸುವ ತರ್ಪಣ ಮಾಲಾ ನಮಗೆ ಅತೀವ ಮನೋಬಲವನ್ನು ನೀಡುತ್ತದೆ. ಜಗತ್ತಿನಲ್ಲಿ ಮನೋಬಲವನ್ನು ಕಳೆದುಕೊಂಡ ಮನುಷ್ಯ ಹೆಚ್ಚುಕಾಲ ಬಾಳಲಾರ. ಮನೋಬಲವೊಂದಿದ್ದರೆ ಎಂಥ ಕಠಿಣ ಸವಾಲುಗಳನ್ನಾದರೂ ಎದುರಿಸಿ ಗೆದ್ದು ಬರುವುದು ಸಾಧ್ಯವಿದೆ. 5ನೇ ದಿನ ಜಪಿಸಲಾಗುವ ಜಯಾಂತ ಮಾಲಾದಲ್ಲಿ ಸಾಧಕನು ವಾಕ್ ಸಿದ್ದಿ ಸಿಗಲೆಂದು ಸಂಕಲ್ಪಿಸಬೇಕು.. ಅನೇಕ ಹಿರಿಯ ಶ್ರೀಚಕ್ರ ಆರಾಧಕರ ಬಾಯಿಯಿಂದ ಒಂದು ಆಶೀರ್ವಾದದ ನುಡಿ ಬಂತೆಂದರೆ ಸಾಕು ಅದು ಜೀವನದಲ್ಲಿ ಘಟಿಸಿಯೇ ಬಿಡುತ್ತಿತ್ತು. ಅವರು ಹೇಳಿದ ಹಾಗೆಯೇ ನಡೆಯುತ್ತದೆ ಎನ್ನುವುದು ಈ ವಾಕ್ ಸಿದ್ಧಿಯ ಮರ್ಮ.

 ಆರನೆಯ ದಿನ ಜಪಿಸಲು ಆಗುವ ಶುದ್ಧ ಶಿವ ಮಾಲಾದಿಂದ ಸಾಧಕನಿಗೆ ದೇಹಶುದ್ದಿ ಲಭಿಸುತ್ತದೆ. ಏಳನೆಯ ದಿನ ಶಿವ ನಮೊಂತ ಮಾಲಾದಿಂದ ಲೋಹ ಸಿದ್ಧಿ ಸಿಗುತ್ತದೆ. ಅನೇಕ ಊರುಗಳಲ್ಲಿ ರಸ ಬಾವಿಗಳಿವೆ. ಈ ರಸ ವಿದ್ಯೆಯನ್ನು ಸಿದ್ಧಿಸುವುದು ಶ್ರೀಚಕ್ರದ ಮೂಲಕವೇ. ಅರಸ ವಿದ್ಯೆಯಲ್ಲಿ ಪರಿಣಿತಿ ಪಡೆದವನು ಕಬ್ಬಿಣವನ್ನು ಬಂಗಾರವಾಗಿಸಬಲ್ಲ ಎನ್ನುವ ದಂತಕಥೆಗಳಿವೆ. ಈ ವಿದ್ಯೆಯ ಬೆನ್ನುಬಿದ್ದು ಹೋದವರು ಜೀವ ಕಳಕೊಂಡ ಕಥೆಗಳು ನೂರಾರು ಸಿಗುತ್ತವೆ. ಶಿವರಾಮ ಕಾರಂತರ ಹಿರಿಯ ತಲೆಮಾರಿನವರು ಈ ರಸವಿದ್ಯೆಯ ಹುಚ್ಚಿನಲ್ಲಿ ಇದ್ದ ಅಪಾರ ಆಸ್ತಿಯನ್ನ ಹೊಳೆಯಲ್ಲಿ ಹುಣಸೆ ಹುಳಿ ತೊಳೆದಂತೆ ಕಳೆದು ಕೊಂಡು ಬಿಟ್ಟರಂತೆ..ಕೆಲ ಸಮಯದ ಹಿಂದೆ ನಾನು ಕಾರ್ಕಳದ ಪರ್ಪಲೆ ಗಿರಿಯ ಸ್ಪರುಷ ಮಣಿ ಬಗ್ಗೆ ಒಂದು ಲೇಖನ ಬರೆದಿದ್ದೆ. ಅಲ್ಲೂ ಕೂಡ ರಸಬಾವಿ ಇದ್ದ ಬಗ್ಗೆ ಕತೆಗಳಿವೆ.

 
 
 
 
 
 
 
 
 

Leave a Reply