ಕರಂಬಳ್ಳಿ ವೆಂಕಟರಮಣನಲ್ಲಿಗೆ ರಾಜ್ಯದ ಮುಖ್ಯಮಂತ್ರಿ

ಉಡುಪಿ: ಪ್ರಾಚೀನ ದೇವಳಲ್ಲೊಂದಾಗಿರುವ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಗಮಿಸುವರು. ಸಂಜೆ 6.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಭಾಗವಹಿಸುವರು ಎಂದು ದೇವಳದ ಆಡಳಿತ ಮೊಕ್ತೇಸರ, ಶಾಸಕ ರಘುಪತಿ ಭಟ್ ತಿಳಿಸಿದರು.

ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ 2004 ಮತ್ತು 2010 ರಲ್ಲಿ ವಿವಿಧ ಜೀರ್ಣೋದ್ಧಾರ ಕಾರ್ಯಗಳೊಂದಿಗೆ ವೈಭವದ ಬ್ರಹ್ಮಕಲಶೋತ್ಸವ ನೆರವೇರಿಸ ಲಾಗಿತ್ತು. 2010ರಲ್ಲಿ ಬ್ರಹ್ಮಕಲಶೋತ್ಸವದೊಂದಿಗೆ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವ ಅಪೂರ್ವ ದಾಖಲೆಯಾಗಿತ್ತು.

ಈ ಬಾರಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ಪರಿವಾರ ದೇವರಾದ ಗಣಪತಿ, ಉಮಾ ಮಹೇಶ್ವರ, ಆಂಜನೇಯ ಗುಡಿ ಹಾಗೂ ಪರಿವಾರ ದೈವಗಳಾದ ರಕ್ತೇಶ್ವರಿ, ನಂದಿಗೋಣ, ಬೊಬ್ಬರ್ಯ, ಪಂಜುರ್ಲಿ, ಬೈಕಾಡ್ತಿ ಗುಡಿಗಳನ್ನು ನೂತನವಾಗಿ ನಿರ್ಮಿಸಲಾಗಿದೆ ಎಂದರು. ನಾಳೆ ಬೆಳಿಗ್ಗೆ 10.21ರ ಸುಮುಹೂರ್ತದಲ್ಲಿ ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸುವರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ. ಸಿ. ಪಾಟೀಲ್ ಮತ್ತು ಪ್ರಭು ಚವ್ಹಾಣ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸುವರು.

ರಾತ್ರಿ 9ರಿಂದ ಹನುಮಗಿರಿ ಮೇಳದ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಶ್ರೀನಿವಾಸ ಕಲ್ಯಾಣ- ಮಾಯಾ ಮಾರುತೇಯ ನಡೆಯಲಿದೆ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಕೀಲ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಕೆ. ಗೋಪಾಲ ಶೆಟ್ಟಿ, ಶೇಖರ ಜತ್ತನ್ನ, ಲಕ್ಷ್ಮಣ ಸೇರಿಗಾರ, ಲಕ್ಷ್ಮೀನಾರಾಯಣ ಆಚಾರ್ಯ, ಸುಂದರ ಅಮೀನ್ ಮತ್ತು ಶೈಲಶ್ರೀ ದಿವಾಕರ ಶೆಟ್ಟಿ ಇದ್ದರು. ಜಿ. ವಾಸುದೇವ ಭಟ್ ಸ್ವಾಗತಿಸಿ, ರಮೇಶ ಬಾರಿತ್ತಾಯ ವಂದಿಸಿದರು. 

 
 
 
 
 
 
 
 
 
 
 

Leave a Reply