ಚಂಪಾ ಷಷ್ಠಿ – ಸುಬ್ರಹ್ಮಣ್ಯ ಷಷ್ಠಿ

“ನಾಗ – ಸುಬ್ರಹ್ಮಣ್ಯ” ಸಮೀಕರಣ  ಒಂದು ವಿಶ್ಲೇಷಣೆ

ಆದಿಮ – ವೈದಿಕ ವಿಚಾರಧಾರೆಗಳು ಒಂದಕ್ಕೊಂದು ಪೂರಕವಾಗಿದ್ದುವುಗಳಾಗಿದ್ದುದರಿಂದಲೇ ಅಥವಾ ಆದಿಮದ ಮುಂದುವರಿದ ಭಾಗವಾಗಿ ವೈದಿಕವು ಪಡಿಮೂಡಿರುವುದರಿಂದಲೇ ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ದೈವಗಳು – ಕೋಟಿ ಸಂಖ್ಯೆಯ ದೇವತೆಗಳು – ದೇವರುಗಳಿದ್ದರೂ ಗೊಂದಲವಿಲ್ಲ.ಸರ್ವ ಆಶೋತ್ತರಗಳ ಈಡೇರಿಕೆಗೆ ಒಂದೇ ದೇವರಿಗೆ ಶರಣಾಗುವ ಜಾಯಮಾನ ನಮ್ಮದಲ್ಲ.ನಮ್ಮಲ್ಲಿ‌ ಒಂದೊಂದು ಅನುಗ್ರಹಕ್ಕೆ ಒಬ್ಬೊಬ್ಬ ದೇವರಂತೆ ಆರಾಧಿಸುತ್ತೇವೆ.

ಈ‌ದೇವರುಗಳ ಸಂದಣಿಯಲ್ಲಿ‌ ತಾಯಿಯಾಗಿ ರಕ್ಷಿಸುವ , ತಂದೆಯಾಗಿ ಕರುಣೆತೋರುವ, ಸಂಪತ್ತನ್ನು‌ಕೊಡುವ, ವಿಘ್ನಗಳನ್ನು‌ನಿವಾರಿಸಿ ಬದುಕನ್ನು ನಿರಾಳವಾಗಿಸುವ,ದುಷ್ಟಾರಿಷ್ಟಗಳನ್ನು ಪರಿಹರಿಸುವವರು ಇದ್ದಾರೆ.ಮಾನವ ಬದುಕಿನ‌ ಪರಮ ಲಕ್ಷ್ಯ ಸುಖ , ಸಮೃದ್ಧಿ ಹಾಗೂ ಭಾರತೀಯ ತತ್ತ್ವಜ್ಞಾನದಂತೆ ಸತ್ ಸಂತಾನ ಪ್ರಾಪ್ತಿ, ಮಕ್ಕಳಿಲ್ಲದವನ ಬದುಕು ಸಾರ್ಥಕವಾಗಲಾರದು‌. ಆದುದರಿಂದಲೇ ಈ ಅನುಗ್ರಹ ಶಕ್ತಿಯನ್ನು ಹೊಂದಿರುವ ದೇವರು ಬಹುಮಾನ್ಯನಾಗಿ ಜನಪ್ರಿಯ ನಾಗುವುದು ಸಹಜ.ಅದರೊಂದಿಗೆ ಅಕ್ಷಯ ಕೃಷಿಸಂಪತ್ತನ್ನು ನೀಡುವ ,ತೀವ್ರ ವ್ಯಾಧಿಗಳನ್ನು ಗುಣ‌ಪಡಿಸುವ‌ ಅನುಗ್ರಹ ವಿಶೇಷ ‌ಇರುವುದರಿಂದಲೇ ನಾಗ – ಸುಬ್ರಹ್ಮಣ್ಯ ಸಾನ್ನಿಧ್ಯಗಳು ಜನಪ್ರೀತಿ ಪಡೆದುವು.

ಸುಬ್ರಹ್ಮಣ್ಯ – ಆರು•  ಸುಬ್ರಹ್ಮಣ್ಯ ಪುರಾಣಗಳು ಹೇಳುವ ಕಥೆಗಳಲ್ಲಿ ಸುರಸೈನ್ಯನಾಥನಾಗಿ,ಪರಾಕ್ರಮಿಯಾಗಿ ,ಅಸುರ ಮರ್ದನನಾದ,ದೇವತೆಗಳನ್ನು ರಕ್ಷಿಸುವ ಮಹಾದೇವನ ಪುತ್ರನಾದ ಷಣ್ಮುಖ,ಇವನ ಜನನವೇ ತಾರಕನೆಂಬ ರಾಕ್ಷಸನ ವಧೆಗಾಗಿ ಸಂಭವಿಸಿತು.

• ಕೃತ್ತಿಕೆಯರು ಆರು ಮಂದಿಯಿಂದ ಪೋಷಿಸಲ್ಪಟ್ಟವ ಎಂಬ ಕಾರಣಕ್ಕೆ ಈತ ಕಾರ್ತಿಕೇಯನಂತೆ.ಹೀಗೆ ಆರು ಮುಖದಿಂದ ಪೂಜೆಗೊಳ್ಳುವ ಸುಬ್ರಹ್ಮಣ್ಯನಿಗೂ ‘ಆರು’ (ಷಟ್) ಅಂಕೆಗೂ ಒಂದು ಅವಿನಾಭಾವ ಸಂಬಂಧ.
• ದೇವಿ ಭಾಗವತ ವಿವರಿಸುವಂತೆ ‘ಷಷ್ಠೀ’ ಎಂಬಾಕೆ ಕುಮಾರ ಸ್ವಾಮಿಯ ಮಡದಿ,
‘ಷಷ್ಠೀ ಪ್ರಿಯ’ನೆಂಬುದು ಸುಬ್ರಹ್ಮಣ್ಯನಿಗಿರುವ ಅನ್ವರ್ಥನಾಮ.
• ದೇವತೆಗಳಲ್ಲಿ ಶ್ರೇಷ್ಠನೆನಿಸಿ ,ಇಂದ್ರನು ಸೂಚಿಸಿದಂತೆ ದಕ್ಷಬ್ರಹ್ಮನ ಮಗಳಾದ ದೇವಸೇನೆಯನ್ನು ಷಷ್ಠಿ ದಿನದಂದು‌ ಸುಬ್ರಹ್ಮಣ್ಯನು‌ ವರಿಸಿದ ಎಂಬುದು ಒಂದು ಕಥೆ.
• ಕಾರಣಾಂತರದಿಂದ ಬ್ರಹ್ಮಶಾಪಕ್ಕೆ ಒಳಗಾಗಿ ಘಟಸರ್ಪನಾದ ಸುಬ್ರಹ್ಮಣ್ಯ .ಈ ಶಾಪ‌ ನಿವೃತ್ತಿಗಾಗಿ ಸುಬ್ರಹ್ಮಣ್ಯನ ಮಾತೆ ಪಾರ್ವತಿ 108 ಷಷ್ಠಿ ದಿನಗಳಲ್ಲಿ ಉಪವಾಸ ವ್ರತವನ್ನು ಆಚರಿಸಲಾಗಿ ವ್ರತ ಉದ್ಯಾಪನೆಯಂದು ಮಹಾ ವಿಷ್ಣುವಿನ‌‌ ಸ್ಪರ್ಶ ಮಾತ್ರದಿಂದ ಸುಬ್ರಹ್ಮಣ್ಯನಿಗೆ‌ ತನ್ನ ಪೂರ್ವದ ಸುಕುಮಾರ ರೂಪ ಮರಳಿ‌ ಪ್ರಾಪ್ತಿಯಾಯಿತಂತೆ
ಪ್ರತೀ ಪಕ್ಷದ ಷಷ್ಠಿಯೇ ಪಾರ್ವತಿ ಆಚರಿಸಿದ ವ್ರತದ ದಿನವಾಗಿದ್ದು ಷಷ್ಠಿಗೂ ಸುಬ್ರಹ್ಮಣ್ಯನಿಗೂ‌ ಸಂಬಂಧವಿದೆ.
ವಿವಾಹದ ಶುಭ ಸಂದರ್ಭ, ದೇವತೆಗಳಿಗೆ ರಾಕ್ಷಸರ ವಿರುದ್ಧ ಯುದ್ಧದಲ್ಲಿ ವಿಜಯ ಪ್ರಾಪ್ತಿಯಾದ ದಿನ,ಶಾಪ ವಿಮೋಚನೆಯಂತಹ ನಿವೃತ್ತಿಯ ಪುಣ್ಯಕಾಲ,ಸ್ವತಃ ಕೃತ್ತಿಕ್ಕೆಯರಿಗೆ ಬೇಕಾಗಿ ಆರು ಮುಖ ಧರಿಸಿದ ಕುಮಾರನ ಬಾಲ್ಯ‌ಮುಂತಾದ ಸಂದರ್ಭಗಳು ಸುಬ್ರಹ್ಮಣ್ಯ ಷಷ್ಠಿಗಿರುವ ಸಂಬಂಧವನ್ನು ಬೆಸೆಯುತ್ತಾ ಸ್ಕಂದನ‌ ಆರಾಧನೆಗೆ ಷಷ್ಠಿ ಪ್ರಶಸ್ತ ದಿನವಾಗಿ ರೂಢಗೊಂಡಿರಬೇಕೆಂದು‌ ಭಾವಿಸಬಹುದು.

ನಾಗ – ಸುಬ್ರಹ್ಮಣ್ಯ : ಉತ್ತರ ಭಾರತದಲ್ಲಿ ಸ್ಕಂದನಾಗಿ ಜನಪ್ರಿಯಗೊಂಡಿದ್ದು ,ತಮಿಳುನಾಡು‌ ಪರಿಸರದಲ್ಲಿ (ದಕ್ಷಿಣಭಾರತದಲ್ಲಿ) ಆದಿಮ‌ ಸಂಸ್ಕೃತಿಯೊಂದಿಗೆ ತನ್ನ ಅಸ್ತಿತ್ವವನ್ನು‌ ತೋರುತ್ತಾ ಕಂದ, ಕುಮಾರ, ಪರಾಕ್ರಮಿ, ಸುಂದರ ಮುಂತಾದ ನೆಗಳ್ತೆವೆತ್ತು‌ ರಸಿಕಾಗ್ರಣಿಯಾಗಿ‌ ,ಸಂತಾನ ಮತ್ತು ಸಮೃದ್ಧಿ ಹಾಗೂ ಸುಖ ದಾಂಪತ್ಯ, ಪ್ರೀತಿಸಿದ ವಧುವಿನೊಂದಿಗೆ ಅಥವಾ ವರನೊಂದಿಗೆ ವಿವಾಹ ಮುಂತಾದ ಅನುಗ್ರಹ ಶಕ್ತಿ ಎಂದೇ‌ ಪರಿಗ್ರಹಿಸಲ್ಪಟ್ಟ ಮೂಲತಃ ಮುರುಗನಾಗಿದ್ದು ಸುಬ್ರಹ್ಮಣ್ಯ ಎಂಬ ವೈದಿಕ ದೇವರ ಸ್ಥಾನಮಾನ ಪಡೆದ ಸ್ಕಂದನ ಮೂಲ‌ – ವಿಕಾಸ – ಪ್ರಸರಣದ ಕುರಿತಾದ ಅಧ್ಯಯನ ರೋಚಕ ವಿವರಗಳನ್ನು ತೆರೆದಿಡುತ್ತದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ನಾಗಾರಾಧನೆಗೆ ಪ್ರಸಿದ್ಧವಾದುದು.ಇಲ್ಲಿರುವಷ್ಟು ನಾಗ‌ ಉಪಾಸನಾ ವೈವಿಧ್ಯಗಳು ಬೇರೆಲ್ಲೂ ಕಾಣಸಿಗದು.ಭೂಮಿ – ಮರ – ನಾಗ ಸಂಬಂಧ ಪುರಾತನವಾದುದು.ಜಿಲ್ಲೆಯ ಸಂಸ್ಕೃತಿಯ ಆರಂಭದಿಂದಲೂ ನಾಗ ಶ್ರದ್ಧೆ – ಪೂಜೆ ವಿವಿಧ ರೋಚಕ ವಿಧಿವಿಧಾನಗಳಿಂದ ನಡೆಯುತ್ತಿರುವುದು ಸಂಶೋಧನೆಗಳಿಂದ ತಿಳಿದ ಸತ್ಯ.ಈ ನಾಗ ಆರಾಧನೆಯ ಮೂಲಕ‌ ಸಂತಾನ,ಕೃಷಿ ಸಮೃದ್ಧಿ,ಚರ್ಮವ್ಯಾಧಿಗಳಿಂದ ನಿವೃತ್ತಿಯಂತಹ ಅನುಗ್ರಹವನ್ನು ಪಡೆಯುತ್ತೇವೆ ಎಂಬುದು‌ ಪ್ರಾಕ್ತನ ನಂಬಿಕೆ.

ವೈದಿಕ ವಿಧಾನಗಳು ಧಾರ್ಮಿಕ ಕ್ಷೇತ್ರದಲ್ಲಿ‌ ಪರಿಣಾಮ ಬೀರುತ್ತಾ ಪರಸ್ಪರ ಸಂಲಗ್ನಗೊಳ್ಳುವ ಸಂದರ್ಭದಲ್ಲಿ ಸಮಾನ ಆಶಯ ಹಾಗೂ ಅನುಗ್ರಹ ವಿಶೇಷಗಳುಳ್ಳ ಸುಬ್ರಹ್ಮಣ್ಯ – ನಾಗ ಉಪಾಸನೆ – ಶ್ರದ್ಧೆಗಳು ಸಮೀಕರಣಗೊಂಡುವು ಎಂಬುದು ಉಡುಪಿ – ದಕ್ಷಿಣಕನ್ನಡ ಜಿಲ್ಲೆಗಳ ಸುಬ್ರಹ್ಮಣ್ಯ ಕ್ಷೇತ್ರಗಳ ಸೂಕ್ಷ್ಮ ಅಧ್ಯಯನದಿಂದ ತಿಳಿಯಲಾಗುತ್ತದೆ.ನಾಗ – ಸುಬ್ರಹ್ಮಣ್ಯ ಅಭೇದ ಕಲ್ಪನೆಯಿಂದ ನಾಗನೇ ಸುಬ್ರಹ್ಮಣ್ಯನಾಗಿ ,ಸುಬ್ರಹ್ಮಣ್ಯನೇ ನಾಗನಾಗಿ ಪೂಜೆಗೊಳ್ಳುವುದು ಸಾಮಾನ್ಯ.

ಸುಬ್ರಹ್ಮಣ್ಯ, ಷಣ್ಮುಖ ಸುಬ್ರಹ್ಮಣ್ಯ, ವಾಸುಕೀ ಸುಬ್ರಹ್ಮಣ್ಯ , ವಾಸುಕಿ ಅನಂತ ಪದ್ಮನಾಭ, ಶಂಖಪಾಲ ಸುಬ್ರಹ್ಮಣ್ಯ, ಸುಬ್ರಾಯ, ಕಾರ್ತಿಕೇಯ ಸುಬ್ರಹ್ಮಣ್ಯಗಳೆಂದು ನಾಗ – ಸುಬ್ರಹ್ಮಣ್ಯ ದೇವಾಲಯಗಳು ಹೆಸರಿಸಲ್ಪಡುತ್ತವೆ. ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ‌ ಕ್ರಿ.ಶ.7- 8ನೇ ಶತಮಾನದ ವೇಳೆ ಸ್ಕಂದ – ಸುಬ್ರಹ್ಮಣ್ಯ ಆರಾಧನೆ ಆರಂಭವಾಗಿರಬೇಕೆಂದು ಇತಿಹಾಸ ವಿವರಿಸುತ್ತದೆ.

ಕೆಲವೆಡೆ ಸುಬ್ರಹ್ಮಣ್ಯ ಪ್ರತಿಮೆಗಳೇ ಮೂಲಸ್ಥಾನ ಮೂರ್ತಿಯಾಗಿ ದೇವಾಲಯಗಳಲ್ಲಿ ಪೂಜೆಗೊಂಡರೆ ಕೆಲವೆಡೆ ನಾಗಪ್ರತೀಕಗಳನ್ನೇ ( ಐದು ಹೆಡೆಯ ಸುಂದರ ಮೂರ್ತಿಯನ್ನು ಪಾಣಿಪೀಠದಲ್ಲಿ‌ ನೆಲೆಗೊಳಿಸಿರುವ) ಪ್ರತಿಷ್ಠಾಪಿಸ ಲಾಗಿದೆ.ಇನ್ನೂ ಹಲವೆಡೆ ವಲ್ಮೀಕವೇ( ಹುತ್ತ) ಮೂಲಸ್ಥಾನ ಸಾನ್ನಿಧ್ಯವಾಗಿ ಸುಬ್ರಹ್ಮಣ್ಯ ಮೂರ್ತಿ ಅಥವಾ ಲೋಹದ ನಾಗ – ಸುಬ್ರಹ್ಮಣ್ಯ ಪ್ರತೀಕಗಳು‌ ಪೂಜೆಗೊಳ್ಳುತ್ತವೆ‌.ಈ ವಿಶ್ಲೇಷಣೆಯಿಂದ ನಾಗ – ಸುಬ್ರಹ್ಮಣ್ಯ ಅಭೇದ ಚಿಂತನೆಯನ್ನು ಮತ್ತೊಮ್ಮೆ ದೃಢೀಕರಿಸಬಹುದು.

ಷಷ್ಠಿ ಸಂಭ್ರಮ: ಬಹುತೇಕ ಸುಬ್ರಹ್ಮಣ್ಯ ( ನಾಗ ಸಹಿತ) ದೇವಳಗಳಲ್ಲಿ ಷಷ್ಠಿ ಪರ್ವದಿನದಂದೇ ವಾರ್ಷಿಕ‌ ಉತ್ಸವ ನಡೆಯುತ್ತವೆ . ಆದರೆ ಕೆಲವೆಡೆ ಮಾತ್ರ ಪ್ರತ್ಯೇಕ ದಿನಗಳಲ್ಲಿ ವಾರ್ಷಿಕ‌ ಉತ್ಸವ ನಡೆಯುತ್ತದೆ. ಆದರೆ ಷಷ್ಠಿ ವಿಶೇಷ ಪರ್ವದಿನವಾಗಿ ಆಚರಿಸಲ್ಪಡುತ್ತದೆ. ವಿವಿಧ ಹರಕೆ, ಎಡೆ ಸ್ನಾನ, ಉರುಳು ಸೇವೆ ಹಾಗೂ ವಿವಿಧ ಅಭಿಷೇಕ, ಅರ್ಚನೆ, ಬೆಳ್ಳಿಯ ನಾಗ ಪ್ರತಿಮೆ ಅರ್ಪಣೆ , ಉಪ್ಪು ಸಹಿತ ಕೆಲವೊಂದು‌ ಧಾನ್ಯಗಳನ್ನು ,ತೊಗರಿಬೇಳೆಯನ್ನು ಹರಕೆಯಾಗಿ‌ ಸಲ್ಲಿಸಲಾಗುತ್ತದೆ .ಶರೀರ ಸಂಬಂಧಿಯಾದ ರೋಗಗಳ ನಿವಾರಣೆಗೆ ನರ, ಕಣ್ಣು, ಕೈ ,ಕಾಲು,  ಮುಂತಾದ ದೇಹದ ಅವಯವಗಳ‌‌ ಬೆಳ್ಳಿಯ‌ ಪ್ರತಿಕೃತಿಗಳನ್ನು ದೇವರಿಗೆ ಸಮರ್ಪಿಸುವ ಪರಿಪಾಠವು ರೂಢಿಯಲ್ಲಿವೆ.

‌‌ ತಿಥಿ ಸಂಬಂಧಿಯಾದ ಷಷ್ಠೀ‌ ಉತ್ಸವದ ಆಚರಣೆ ಚಾಂದ್ರಮಾನ ಪದ್ಧತಿಯಿಂದ ಬಂದಿರಬೇಕೆಂದು‌‌ ಪರಿಭಾವಿಸ ಬಹುದಾಗಿದೆ.ನಾಗರ ಪಂಚಮಿ‌ ಎಂಬುದು ಇದಕ್ಕೆ ಪೂರಕವಾಗಿದೆ.ನಾಗನಿಗೆ ಪಂಚಮಿಯಾದರೆ ಸುಬ್ರಹ್ಮಣ್ಯನಿಗೆ ಷಷ್ಠಿ.ಹೇಗಿದೆ ನಮ್ಮ ಪೂರ್ವಸೂರಿಗಳ ಶ್ರದ್ಧೆಯ ಪರಿಕಲ್ಪನೆ.

ಕೆ.ಎಲ್.ಕುಂಡಂತಾಯ

 
 
 
 
 
 
 

Leave a Reply