ಬನ್ನಂಜೆ ಗೋವಿಂದಾಚಾರ್ಯರಿಂದ  ಪ್ರಾಚೀನ ಗ್ರಂಥಗಳ ಸಂಶೋಧನೆ ಮತ್ತು ಅಧ್ಯಯನಗಳಿಗೆ ಭದ್ರ ಬುನಾದಿ~  ಪಲಿಮಾರು ಶ್ರೀ

ಪ್ರಾಚೀನ ಗ್ರಂಥಗಳ ಸಂಶೋಧನೆ ಮತ್ತು ಅಧ್ಯಯನಗಳಿಗೆ ಅತ್ಯಂತ ವಿಹಿತವಾದ ಕ್ರಮದ ಬುನಾದಿಯನ್ನು ಹಾಕಿಕೊಟ್ಟು ಬನ್ನಂಜೆ ಗೋವಿಂದಾಚಾರ್ಯರು ಸಾರಸ್ವತ ಲೋಕಕ್ಕೆ ಮಹೋನ್ನತ ಕೊಡುಗೆ ಸಲ್ಲಿಸಿದ್ದಾರೆ ಎಂದು ಪಲಿಮಾರು ಶ್ರೀಗಳು ಹೇಳಿದ್ದಾರೆ

ಬನ್ನಂಜೆಯವರ ಮನೆಯಲ್ಲಿ ಆಚಾರ್ಯರ ಉತ್ತರಕ್ರಿಯಾನಂತರದ ಮಂಗಲ ಮಂತ್ರಾಕ್ಷತೆ ನೀಡುವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಬನ್ನಂಜೆ ಕುಟುಂಬಿಕರಿಗೆ ಮಂಗಲ ಮಂತ್ರಾಕ್ಷತೆ ನೀಡಿ ಅವರು ಸಂದೇಶ ನೀಡಿದರು .

ಆಚಾರ್ಯರು ದಶಕಗಳ ಕಾಲ ನಡೆಸಿದ ಮಥನ ಮಂಥನಗಳು ಮುಂದಿನ ಬಹುಪೀಳಿಗೆಗೆ ಮಾದರಿಯಾಗಿ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆಚಾರ್ಯರ ಈ ಪರಿಯ ವಿದ್ವತ್ತಿನ ಹಿಂದೆ ಕೇವಲ ಒಂದು ಜನ್ಮದ್ದಲ್ಲ ಜನ್ಮ ಜನ್ಮಾಂತರದ ಸಂಸ್ಕಾರದ ತಪಸ್ಸಿನ ಫಲವಿದೆ.
ದೇಶಕ್ಕೆ ಅವರ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೂ ದೊಡ್ಡ ಸಂಸ್ಕಾರ ಬೇಕು ಎಂದು ಶ್ರೀಗಳು ಬಣ್ಣಿಸಿದರು. ಇದೇ ಸಂದರ್ಭಶ್ರೀ ಪಲಿಮಾರು ಮಠದ ಮೂಲಯತಿ ಶ್ರೀ  ಹೃಷೀಕೇಶ ತೀರ್ಥರು ರಚಿಸಿದ ಸರ್ವಮೂಲ ಗ್ರಂಥದ ಯಥಾಪ್ರತಿಯನ್ನು ಅದೇ ಪರಂಪರೆಯ ಶ್ರೀ  ರಘುವರ್ಯ ತೀರ್ಥರು ಬರೆದಿಟ್ಟಿದ್ದ ಹಸ್ತಪ್ರತಿಯನ್ನು ಸಂಶೋಧನೆಗಾಗಿ ಪಲಿಮಾರು ಮಠದಿಂದ ಆಚಾರ್ಯರು ಪಡೆದಿದ್ದರು.
ಅದನ್ನು ಆಚಾರ್ಯರ ಪೌತ್ರ ಯಾಸ್ಕ ಆಚಾರ್ಯರು ಶ್ರೀಗಳಿಗೆ ಹಸ್ತಾಂತರಿಸಿದರು. ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥರು ಆಶೀರ್ವಚನಗೈದರು. ಶಾಸಕ ರಘುಪತಿ ಭಟ್,  ಉದ್ಯಮಿ ಬಾಲಾಜಿ ರಾಘವೇಂದ್ರಾಚಾರ್ಯ ಉಪಸ್ಥಿತರಿದ್ದರು. ಕೃಷ್ಣರಾಜ ಕುತ್ಪಾಡಿ ನಿರ್ವಹಿಸಿದರು.
ಆಚಾರ್ಯರ ಪುತ್ರ ವಿನಯ ಭೂಷಣ ಆಚಾರ್ಯ ಮತ್ತು ರಮಾ ಆಚಾರ್ಯ ದಂಪತಿಗಳು ಯತಿದ್ವಯರ ಪಾದಪೂಜೆ ನೆರವೇರಿಸಿದರು. ಪುತ್ರಿಯರಾದ ವೀಣಾ ಬನ್ನಂಜೆ ವಿದ್ಯಾಲತಾ ಶುಭಲತಾ ಸಹಕರಿಸಿದರು. ಮತ್ತೋರ್ವ ಪುತ್ರಿ  ಕವಿತಾ ಆಚಾರ್ಯರ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು. ವಾಸುದೇವ ಭಟ್ ಪೆರಂಪಳ್ಳಿ ವಂದನಾರ್ಪಣೆಗೈದರು.
 
 
 
 
 
 
 
 
 
 
 

Leave a Reply