Janardhan Kodavoor/ Team KaravaliXpress
33 C
Udupi
Tuesday, December 1, 2020

ಎಲ್ಲರ ಚಿತ್ತ.. ಅತ್ತೂರು ಅಷ್ಟಮಂಗಲದತ್ತ ~ ಶ್ರೀಕಾಂತ್ ಶೆಟ್ಟಿ, ಕಾರ್ಕಳ 

ಓಲು ಅಜಿಲೆರ್ ಚೌಟ ಬಂಗೇರ್ ಪಟ್ಟ ಅರಮನೆ ಏರಿಯೆರೋ…ಅವ್ಲು ರಾತ್ರೆಡ್ ತೂಟೆ ಬೀಜುಂಡು ಗಗ್ಗರನೇ ಜನಜನಿಪುಂಡು

ಕಾರ್ಕಳದ ಪರ್ಪಲೆ ಗಿರಿಯ ತುತ್ತತುದಿಯಲ್ಲಿದ್ದ ಅಗೋಚರ ಶಕ್ತಿಗಳು ದೀರ್ಘ ಕಾಲದ ಜಡತನದಿಂದ ಮೈಕೊಡವಿ ಮೇಲೇಳುತ್ತಿವೆ. ಅರಸೊತ್ತಿಗೆಯ ಕಾಲದಲ್ಲಿ ಆ ಶಕ್ತಿಗಳು ವೈಭವದಿಂದ ಮೆರೆದ ಕುರುಹುಗಳು ಈಗ ಏನೂ ಉಳಿದಿಲ್ಲ ಆದರೆ ಒಂದು ಅವ್ಯಕ್ತ ಭಯ ಮಾತ್ರ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬಂದಿದೆ. ಆ ಗುಡ್ಡದ ಮೇಲೆ ಹೊತ್ತಲ್ಲದ ಹೊತ್ತಿಗೆ ಹೋಗಲು ಜನ ಹೆದರುತ್ತಿದ್ದರು.

ಸೊಪ್ಪು ಕಟ್ಟಿಗೆ ಮುಳಿ ಹುಲ್ಲು ಮೊದಲಾದ ಅರಣ್ಯ ಉತ್ಪತ್ತಿಗಳನ್ನು ತರಲು ಇದರ ತಪ್ಪಲಿನ ಜನರು ಗುಡ್ಡಕ್ಕೆ ಹೋಗುತ್ತಿದ್ದರೂ, ಸೂರ್ಯ ನಡು ನೆತ್ತಿಗೆ ಬರುವ ಮೊದಲೇ ಗುಡ್ಡ ಇಳಿಯುತ್ತಿದ್ದರು. ಅದಕ್ಕೆ ಕಾರಣ ಇಲ್ಲಿ ಕೆಲವರಿಗಾದ ವಿಚಿತ್ರ ಅನುಭವಗಳು. ರಾತ್ರಿಯ ಹೊತ್ತಲ್ಲಿ ಪರ್ಪಲೆಯ ಮೇಲೆ ಹತ್ತಾರು ದೊಂದಿಗಳು ದಗ್ಗನೇ ಉರಿದು ಸಾಗುವುದನ್ನು ಕಂಡವರಿದ್ದಾರೆ. ರಾತ್ರಿ ಗುಂಡು ಪಾರ್ಟಿ ಮಾಡಲು ಹೋಗಿ ದಾರಿ ತಪ್ಪಿ ಬೆಳಗ್ಗಿನ ವರೆಗೆ ಹುಚ್ಚರಂತೆ ಕಾಡಿನಲ್ಲಿ ಅಲೆದಾಡಿ ವಾಪಾಸಾದ ಅನುಭವಗಳಿವೆ.

ಎಲ್ಲಕ್ಕಿಂತ ಮಿಗಿಲಾಗಿ ಈ ಮಣ್ಣಿನಲ್ಲಿ ನೂರಾರು ಪವಾಡಗಳನ್ನು ಸೃಷ್ಟಿಸಬಲ್ಲ ಪ್ರಚಂಡ ನಿಗ್ರಹಾನುಗ್ರಹ ಶಕ್ತಿ ಇದೆ. ಅದು ಯಾವುದು ಏನು ಎನ್ನುವ ಗೊಂದಲಕ್ಕೆ ಗುರಿಯಾಗದೆ ಏಕ ಮನಸ್ಸಿನಿಂದ ಪ್ರಾರ್ಥಿಸಿದರೆ ನಿಮ್ಮ ಮನೋ ಅಭೀಷ್ಟೆ ಗಳು ನೆರವೇರುವುದರಲ್ಲಿ ಎರಡು ಮಾತಿಲ್ಲ.

ಈಗ ಐವತ್ತರ ಅಸುಪಾಸಿನಲ್ಲಿರುವ ಹಿರಿಯ ದೈವ ನರ್ತಕ ಉಗ್ಗಪ್ಪ ಪರವ ಅವರ ಬಳಿ ಮಾತನಾಡುವಾಗ ಅವರು ತನ್ನ ಬಾಲ್ಯದ ನೆನಪಿನ ಬುತ್ತಿ ತೆರೆದರು. ಮೂಲತಃ ಕೆರ್ವಾಸೆಯವರಾದ ಉಗ್ಗಪ್ಪ ಅವರು ತನ್ನ ಮಾವಂದಿರ ಜೊತೆಗೆ ದೈವಗಳ ನೇಮೋತ್ಸವಕ್ಕೆ ಪಳ್ಳಿ ನಿಂಜೂರುವರೆಗೆ ನಡೆದುಕೊಂಡೆ ಹೋಗುತ್ತಿದ್ದರಂತೆ! ಆಗಿನ ಜನರಿಗೆ 30 40 ಮೈಲಿ ನಡೆಯುವುದೆಂದರೆ ದೊಡ್ಡ ಸಂಗತಿಯಾಗಿರಲಿಲ್ಲ.

ನೇಮ ಕಟ್ಟುವ ಪರಿಕರಗಳನ್ನು ಪೆಟಾರಿ ಯಲ್ಲಿ ತುಂಬಿಸಿ ತಲೆಯ ಮೇಲೆ ಹೊತ್ತುಕೊಂಡು ಕೆರ್ವಾಶೆ ಮುಂಡ್ಲಿ ದುರ್ಗಾ ತೆಳ್ಳಾರು ಅನಂತಶಯನ ದಾರಿಯಾಗಿ ಕಾರ್ಕಳ ಪೇಟೆಗೆ ಬರುತ್ತಿದ್ದರು. ಅಲ್ಲಿಯ ಉಡುಪಿ ಹೋಟೆಲಿನಲ್ಲಿ ಚಹಾ ಕುಡಿದು ಮುಂದೆ ಪಯಣ ಮಾಡುತ್ತಿದ್ದರು. ಆ ಕಾಲದಲ್ಲಿ ಹೋಟೆಲಿನ ಒಳಗಡೆ ದಲಿತರಿಗೆ ಪ್ರವೇಶವಿರಲಿಲ್ಲ ಇವರಿಗೆ ತೆಂಗಿನ ಗೆರಟೆಯಲ್ಲಿ ಚಹಾ ಕೊಡುತ್ತಿದ್ದರಂತೆ. ತಿಂಡಿಯನ್ನು ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದರಂತೆ ಆ ಹೋಟೆಲಿನ ಪಕ್ಕದ ಓಣಿಯಲ್ಲಿ ಸಾಲಾಗಿ ಕುಳಿತು ತಿಂಡಿ ತಿಂದು ಚಹಾ ಕುಡಿದು ಮುಂದೆ ಗಾಂಧಿ ಮೈದಾನದ ದಾರಿಯಾಗಿ ಸಾಗಿ ಪರ್ಪಲೆ ಗುಡ್ಡ ಹತ್ತುತ್ತಿದ್ದರು.

ಆ ಕಾಲಕ್ಕೆ ಕಾರ್ಕಳದ ಪೇಟೆಗೆ ಪರ್ಪಲೆ ಒಂದು ಗಡಿಯಾಗಿತ್ತು. ದೈವಗಳ ನೇಮೋತ್ಸವ ದಲ್ಲಿ ಬಳಸಲಾಗುವ ಕೇಪುಳ ದಂಡೆ ಮತ್ತು ಅಣಿಯ ಅಲಂಕಾರಕ್ಕೆ ಬೇಕಾದ ಹೂಗಳನ್ನು ಈ ಬೆಟ್ಟ ದಿಂದಲೇ ಆಯ್ದುಕೊಂಡು ಹೋಗುತ್ತಿದ್ದರು. ಬೆಟ್ಟದ ತುದಿ ತಲುಪುವಾಗ ಅಲ್ಲೊಂದು ವಿಶಾಲವಾದ ಹಾಸು ಕಲ್ಲು ಇತ್ತಂತೆ. ಆ ದಾರಿಯಲ್ಲಿ ಸಾಗುವವರೆಲ್ಲರೂ ಅಲ್ಲಿ ಅರೆ ಗಳಿಗೆ ಕುಳಿತು ಆ ಕಲ್ಲಿನಲ್ಲಿದ್ದ ದೈವೀಶಕ್ತಿಗಳಿಗೆ ನಮಿಸಿ ಕೇಪುಳದ ಹೂ ಮತ್ತು ಬೆಣಚು ಕಲ್ಲನ್ನು ಹರಕೆಯ ರೂಪದಲ್ಲಿ ಹಾಕಿ ಮುಂದೆ ಪಯಣ ಬೆಳೆಸುತ್ತಿದ್ದರಂತೆ.

ಆ ಕಲ್ಲಿಗೆ ಅಯ್ಯೇರ್ ಸತ್ಯೋಲೆ ಪಡೆಗಲ್ಲು ಎಂದು ಕರೆಯುತ್ತಿದ್ದರು. ಈ ರೀತಿ ಕಲ್ಲನ್ನು ಹರಕೆ ರೂಪದಲ್ಲಿ ಅರ್ಪಿಸುವ ಪದ್ಧತಿ ಶಂಕರ ನಾರಾಯಣದ ಕಲ್ಕುಡ ದೈವಸ್ಥಾನದಲ್ಲೂ ಕಾಣಸಿಗುತ್ತದೆ.ಖ್ಯಾತ ದೈವ ಚಾಕಿರಿಯವರಾದ ಪಡ್ಡಮ ರವಿ ನಲ್ಕೆ ಅವರಲ್ಲಿ ಈ ಗುಡ್ಡದ ಬಗ್ಗೆ ಕೇಳಿದಾಗ ನಮ್ಮ ಮೌಖಿಕ ಜನಪದ ಸಾಹಿತ್ಯಗಳಲ್ಲಿ ಈ ಗುಡ್ಡದ ಬಗ್ಗೆ ಉಲ್ಲೇಖವಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾರ್ಕಳದ ಭೈರವರಸ ನ ಸೇನಾದಿಪತಿಯಾಗಿದ್ದ ಕುಪ್ಪೆ ಕೋಟಿ ಬೈದ್ಯ ಈ ಗುಡ್ಡದಮೇಲೆ ಸಾರ ಮಾನ್ಯ ದೈವಗಳ ಆರಾಧನೆ ಮಾಡಿದ ಬಗ್ಗೆ ಪಾಡ್ದನ ಗಳಿವೆ. ಕನ್ನಡ ಅರಸನ ದಂಡನ್ನು ಎದುರಿಸಲಾಗದೆ ಕಾರ್ಕಳದ ಭೈರವರಸ ಊರು ಬಿಡುತ್ತಾನೆ. ಈ ವೇಳೆ ಕುಪ್ಪೆ ಕೋಟಿ ಬೈದ್ಯನಿಗೂ ಕಾರ್ಕಳವನ್ನು ತೊರೆದು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಆತ ತನ್ನ ಆರಾಧನಾ ಶಕ್ತಿಗಳಿಗೆ ತಾತ್ಕಾಲಿಕ ಭೋಗ ನೀಡಿ ರಾಜ್ಯ ತೊರೆಯುತ್ತಾನೆ.

ಪರ್ಪಲೆಡ್ ಐವ ದಂಡ್ ಭೂತೊಲೆಗ್ ಪೊರಿ ಪೊದ್ದೋಳು ಪಾರಾಯೆರ್… ಚರು ಬಲಸಿಯೆರ್ ಕೋಲು ನಿನೆ ಊರಿಯೆರ್… ಏನ್ ರಾಜ್ಯ ವೊಂಜಾ ಬುಡುವೆನಾ ಪಂಡೆರ್… ಇಲ್ಲಿ ಬರುವ ಐವ ದಂಡ್ ಭೂತಗಳು.. ಕುಪ್ಪೆ ಕೋಟಿ ಬೈದ್ಯನಿಗೆ ಯುದ್ಧರಂಗದಲ್ಲಿ ನೆರವಾಗುತ್ತಿದ್ದ ರಣಶಕ್ತಿಗಳು ಎನ್ನುವುದು ಸ್ಪಷ್ಟ. ತಾಂತ್ರಿಕ ವಿಧಿಗಳು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದ ಆ ಕಾಲದಲ್ಲಿ ಎಲ್ಲಾ ಅರಸರು ದಂಡನಾಯಕರು ಕೆಲವು ದೈವಿಶಕ್ತಿಗಳನ್ನು ಉಪಾಸನೆ ಮಾಡುತ್ತಿದ್ದರು.

ಜೈನರಸರು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕಾರ್ಕಳದ ಬದುಕನ್ನು ಶ್ರೀಮಂತ ಗೊಳಿಸಿದ ಭೈರವರಸರು ಜೈನರಾಗಿದ್ದರೂ ದೈವಗಳ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ನೇಮಿನಾಥ ಬಸದಿಗೆ ಸಂಬಂಧಿಸಿದ ಹಲವಾರು ದೈವ ಸಾನಿಧ್ಯಗಳು ಪರ್ಪಲೆಯ ತಪ್ಪಲಲ್ಲೇ ಇವೆ. ಈ ಗುಡ್ಡದ ರಹಸ್ಯ ಭೇಧಿಸಲು ನಮಗಿರುವುದು ಎರಡು ಮಾರ್ಗಗಳು ಒಂದು ಐತಿಹಾಸಿಕ ದಾಖಲೆಗಳ ಮತ್ತು ಶಾಸನಗಳ ಪರಿಶೀಲನೆ.

ಇನ್ನೊಂದು ದೈವಿಕ ಚಿಂತನೆ. ಭಾರತೀಯ ತತ್ವಶಾಸ್ತ್ರಗಳು ಉಪನಿಷತ್ತು ಜ್ಯೋತಿಷ್ಯಶಾಸ್ತ್ರಗಳು ಸೃಷ್ಟಿಯ ಪರಿಪೂರ್ಣ ಚಲನೆ ವೃತ್ತಾಕಾರಕ್ಕೆ ಇದೆ ಎಂದು ಹೇಳುತ್ತವೆ. ಯುಗ ಕಲ್ಪ ಮನ್ವಂತರಗಳು ಮತ್ತೆ ಮತ್ತೆ ತಿರುಗಿ ಬರುತ್ತವೆ. ಇಲ್ಲಿ ಆಗುವ ಎಲ್ಲಾ ಘಟನೆಗಳಿಗೂ ಲಗ್ನ-ರಾಶಿ, ಗ್ರಹಬಲ ಮತ್ತು ನಿಮಿತ್ತಗಳ ಆಧಾರವಿದೆ ಎಂದು ಶಾಸ್ತ್ರ ಗ್ರಂಥಗಳು ಸೂಚಿಸುತ್ತವೆ. ಹೀಗಾಗಿ ಇಲ್ಲಿ ಭೂತ ಭವಿಷ್ಯ ವರ್ತಮಾನ ಎಲ್ಲವೂ ಪೂರ್ವನಿಯೋಜಿತ.

ಹಾಗಾಗಿ ಜ್ಯೋತಿಷ್ಯ ಶಾಸ್ತ್ರಜ್ಞರು ಸಹಸ್ರಾರು ವರ್ಷದ ಅನುಭವದ ಮೂಸೆಯಿಂದ ಪ್ರಶ್ನಾ ಮಾರ್ಗ ಎಂಬ ಸಿದ್ಧ ಸೂತ್ರ ನಿರೂಪಿಸಿದ್ದಾರೆ. ಇದರ ಅಡಿಪಾಯದಲ್ಲಿ ಅಷ್ಟಮಂಗಲ ಪ್ರಶ್ನೆ ಎಂಬ ಪ್ರಬುದ್ಧ ದೈವಿಕ ಚಿಂತನಾ ವಿಧಾನ ಬೆಳೆದು ಬಂದಿದೆ. ದೂತ ಲಕ್ಷಣ, ತಾಂಬೂಲ ಲಕ್ಷಣದಿಂದ ಆರಂಭಿಸಿ ಬೆಳಗುವ ದೀಪಕ್ಕೆ ಬೀಸುವ ಗಾಳಿಯ ದಿಕ್ಕು ಯಾವುದು ಎನ್ನುವವರೆಗೆ ಇಲ್ಲಿ ಎಲ್ಲವೂ ಸತ್ಯದ ಸಾಕ್ಷಾತ್ಕಾರಕ್ಕೆ ದಿಕ್ಸೂಚಿಗಳು.

ಇಂಥ ಅದ್ಭುತ ಅಷ್ಟಮಂಗಳ ಪ್ರಶ್ನಾ ಚಿಂತನ ಕಾರ್ಯಕ್ರಮ ಪರ್ಪಲೆ ಮೇಲೆ ಕವಿದಿರುವ ನಿಗೂಢತೆಯ ಕಾರ್ಮೋಡವನ್ನು ಕರಗಿಸಿ, ಕಾರಣಿಕದ ಕ್ಷೇತ್ರವೊಂದರ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ. ಜೈ ಮಹಾಕಾಲ್

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಬೋಟ್ ದುರಂತ,6ಮಂದಿ ನಾಪತ್ತೆ

ಮಂಗಳೂರು: ಡಿ 1 : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿ ಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೋಳಾರದ ಶ್ರೀ ರಕ್ಷಾ ಎಂಬ ಮೀನುಗಾರಿಕಾ ಬೋಟ್...

}ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ~ಕಸಾಪ

ಉಡುಪಿ, ಡಿ.1: ಉಡುಪಿ ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ...

ಹಣತೆ ದೀಪದೊಂದಿಗೆ ಕಲಾತ್ಮಕ ಛಾಯಾಗ್ರಹಣ ನಡೆಸಿದ ಕರಂದಾಡಿ ಶ್ರೀಧರ್ ಶೆಟ್ಟಿಗಾರ್… 

​​ಕಾಪು ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ರವಿವಾರ ನಡೆಯಿತು. ದೀಪೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ,ತುಳಸಿ ಪೂಜೆ, ತುಳಸಿ ಸಂಕೀರ್ತಣೆ...

ಗ್ರಾ.ಪಂ. ಚುನಾವಣೆ ಘೋಷಣೆ: ಕಾಂಗ್ರೆಸ್ ರಾಜಕೀಯ ದೊಂಬರಾಟ ಪ್ರಾರಂಭ–ಪೆರ್ಣಂಕಿಲ ಶ್ರೀಶ ನಾಯಕ್ ಲೇವಡಿ

ಉಡುಪಿ: ಕೊರೋನಾದ ಸಂಕಷ್ಟದ ಕಾಲದಲ್ಲಿ ನಿದ್ದೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ನಾಯಕರು ಇದೀಗ ಗ್ರಾಮ ಪಂಚಾಯತ್ ಚುನಾವಣೆಯ ಘೋಷಣೆಯಿಂದ ಎದ್ದು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ...

ಮಣಿಪಾಲ: ಯುವಕರ ಸಮಯ ಪ್ರಜ್ಞೆಯಿಂದ ಭಾರಿ​ ಬೆಂಕಿ​ ಅನಾಹುತದಿಂದ ಪಾರು

ಮಣಿಪಾಲ : ಸಮೀಪದ ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು​ ​ಯುವಕರ ಸಮಯ​ ​ಪ್ರಜ್ಞೆಯಿಂದ ಬಹಳಷ್ಟು ಜೀವ ಹಾನಿ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ.​ ಇಂದು ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಮಣಿಪಾಲ...
error: Content is protected !!